ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್ ಎಂಬ ಅಧಾರ ಸ್ತಂಭ
ಇಂದು, ಭಾರತದ ವಿಶ್ವಕಪ್ ತಂಡದ ಸಾಧನೆಗೆ ರಾಹುಲ್ ದ್ರಾವಿಡ್ ಕೊಡುಗೆಯ ಬಗ್ಗೆ ಬಿಬಿಸಿ ಮತ್ತು ಇಎಸ್‍ಪಿಎನ್ ವಾಹಿನಿಗಳಲ್ಲಿ ಉತ್ತಮ ಲೇಖನಗಳು ಬಂದಿವೆ.
ಎಷ್ಟೇ ನಿಃಸ್ವಾರ್ಥ ಕೆಲಸ ಮಾಡಿದರೂ, ವ್ಯಾವಹಾರಿಕ ವಿಶ್ವದಲ್ಲಿನ ಸೋಲು ಗೆಲುವುಗಳ ಲೆಕ್ಕದಲ್ಲಿ, ಈ ಲೋಕ ಒಳ್ಳೆಯ ವ್ಯಕ್ತಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ. ಆತನ ಅಟದಲ್ಲಿ ಭಾರತ ತಂಡ ಬಹಳಷ್ಟು ಸಾಧಿಸಿತು. ಅನೇಕ ದಾಖಲೆಗಳನ್ನು ಮಾಡಿತು. ದೋನಿಯಂತ ಮಹತ್ವದ ಆಟಗಾರ, ನಾಯಕ ಮೂಡಿದ. 2007ರ ವಿಶ್ವಕಪ್ನಲ್ಲಿ ತಂಡ ಪ್ರಾರಂಭಿಕ ಹಂತದಲ್ಲೆ ಸೋತಾಗ, ನಾಯಕತ್ವ ವಹಿಸಿದ್ದ ರಾಹುಲ್ ದ್ರಾವಿಡ್ ಮಾಡಿದ್ದ ಸಾಧನೆಗಳನ್ನೆಲ್ಲ ಜನ ಮರೆತು, ಅವನನ್ನು ಅಲ್ಪನಂತೆ ಕಂಡರು.
ಎಲ್ಲವನ್ನೂ ರಾಹುಲ್ ದ್ರಾವಿಡ್ ಮೌನವಾಗಿ ಸಹಿಸಿದರು. ಶ್ರೇಷ್ಠ ಬ್ಯಾಟಿಂಗ್ ಫಾರ್ಮ್ ಇರುವಾಗಲೇ ನಿವೃತ್ತಿ ಘೋಷಿಸಿದರು. ಐಪಿಎಲ್‍ನಲ್ಲಿ ಸಾಧಾರಣ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಮರ್ಥವಾಗಿ ನಡೆಸಿ ಅದ್ಭುತ ಆಟಗಾರರು ಬೆಳಕಿಗೆ ಬರುವಂತೆ ಮಾಡಿದರು. ಹತ್ತೊಂಬತ್ತು ವಯಸ್ಸಿಗಿಂತ ಕಿರಿಯರ ತಂಡ, ಇಂಡಿಯಾ ಎ ತಂಡಗಳನ್ನು ವಿಶ್ವಮಟ್ಟದಲ್ಲಿ ಶ್ರೇಷ್ಠ ಸಾಧನೆಗೆ ಕೊಂಡೊಯ್ದಿದ್ದಲ್ಲದೆ, ಭಾರತದ ಭವಿಷ್ಯಕ್ಕೆ ನಿರಂತರ ಭವ್ಯ ಪ್ರತಿಭೆಗಳನ್ನು ನೀಡಿದರು. ಕ್ರಿಕೆಟ್ ಅಕಾಡೆಮಿಯಲ್ಲಿ ಹೊಸ ಅಟಗಾರರನ್ನು ಮೂಡಿಸುವುದರ ಜೊತೆಗೆ ಹಳೆಯ ಅಟಗಾರರು ಪುನಃ ತಮ್ಮ ಮೊನಚು ಕಂಡುಕೊಳ್ಳುವಂತೆ ಮಾಡಿದರು.
ಗಂಗೂಲಿ ಬಲವಂತದ ಮೇರೆಗೆ ಕ್ಲಿಷ್ಟಕರವಾದ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ಹೊತ್ತ ರಾಹುಲ್ ದ್ರಾವಿಡ್ ಅವರನ್ನು, ಅವನ್ಯಾಕಿಲ್ಲ, ಇವನಿಗೇಕೆ ಮಣೆ ಇತ್ಯಾದಿ ದಿನ ನಿತ್ಯ ಟೀಕಿಸಲಾಗುತ್ತಿತ್ತು. ರಾಹುಲ್ ದ್ರಾವಿಡ್ ಅಯ್ದ ಕೆಲವರು ಪೆಟ್ಟು ತಿಂದು ಕುಳಿತಿದ್ದರು. ವಿರಾಟ್ ಕೊಹ್ಲಿ ಮಾನಸಿಕ ಆಘಾತದಲ್ಲಿದ್ದು, ಅತ ಮೇಲೆ ಬರುವುದೇ ಇಲ್ಲ ಎಂದು ಕ್ರಿಕೆಟ್ ಪಂಡಿತರು ನಿರ್ಣಯಿಸಿಬಿಟ್ಟರು. ರೋಹಿತ್ ಶರ್ಮ ರನ್ ಮಾಡುವುದನ್ನು ಮರತ ಕ್ಯಾಪ್ಟನ್, ಹೀಗೆ ಆದ್ರೆ ಏನು ಪ್ರಯೋಜನ, ಕೋಚ್ ಸರಿಯಿಲ್ಲ ಎಂದರು.
ರಾಹುಲ್ ದ್ರಾವಿಡ್ ಚಿಂತನೆಯಿಂದ ಹಿಂದೆಂದೂ ದೇಶ ಕಂಡಿಲ್ಲದ ಹಾಗೆ ಚೆನ್ನಾಗಿ ಆಡುವ ಆಟಗಾರರಿಗೂ ರೆಸ್ಟ್ ನೀಡಿ ಹೊಸ ಹುಡುಗರಿಗೆ ಅವಕಾಶ ನೀಡಲಾಯಿತು. ರೆಸ್ಟ್ ಪಡೆದವರು ಹೊಸ ಉತ್ಸಾಹದಿಂದ ಬಂದರು. ಪೆಟ್ಟು ತಿಂದಿದ್ದವರು ತಮಗೇನೂ ಆಗೇ ಇಲ್ಲ ಎನ್ನುವಂತೆ ಪುನಃ ಹೊಸ ಹುಡುಗರಂತೆ ಅರಳಿ ನಿಂತರು.
ಪರಿಣಾಮ ಇದೋ ಇಲ್ಲಿದೆ. ಭಾರತ ತಂಡ ಮೂರೂ ಬಗೆಯ ಕ್ರಿಕೆಟ್ನಲ್ಲಿ ನಂಬರ್ ಒನ್. ಈ ವಿಶ್ವಕಪ್ನಲ್ಲಿ ಇದುವರೆಗೆ ಆಡಿರುವ ಹತ್ತೂ ಪಂದ್ಯಗಳಲ್ಲಿ ತಂಡ ಗೆದ್ದಿದೆ. ಭಾರತದ ತಂಡ, ಇಷ್ಟು ವರ್ಷಗಳಲ್ಲಿ ಎಂದಾದರೂ ಇಷ್ಟೊಂದು ಬಲಾಢ್ಯವಾಗಿತ್ತೆ ಎಂದು ಎಲ್ಲರೂ ಕೇಳುತ್ತಿದ್ದಾರೆ.
ಇದೋ ಸಾತ್ವಿಕ ಶಕ್ತಿಗೂ ಬಲವಿದೆ ಎಂದು ನಿರೂಪಿಸಿದ್ದಾರೆ, ನಮ್ಮ ಯುಗದ ಕ್ರಿಕೆಟ್ನ ಜಂಟಲ್‍ಮ್ಯಾನ್ one and only Rahul Dravid.
Rahul Dravid the man behind India’s dream run in 2023 World Cup Cricket
ಕಾಮೆಂಟ್‌ಗಳು