ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಶ್ಮಿ ಗೋಖಲೆ


 ರಶ್ಮಿ ಗೋಖಲೆ


ಆತ್ಮೀಯರಾದ ರಶ್ಮಿ ಗೋಖಲೆ ಅವರು ಬಹುಮುಖಿ ಪ್ರತಿಭೆ. ಇವರು ನಡೆಸುವ ಯೋಗ ಶಿಬಿರಗಳು ಪ್ರಸಿದ್ಧವಾಗಿವೆ.  ಯೋಗದ ಕುರಿತಾಗಿ ಹಾಗೂ ಸಾತ್ವಿಕ ಆಹಾರದ ಕುರಿತಾಗಿ ಇವರು ನೂರಾರು ಬಾರಿ ವಿವಿಧ ಕಿರುತೆರೆಯ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಸಾಹಿತ್ಯ ಆರಾಧಕರಾದ ಇವರು ಹವ್ಯಾಸಿ ಬರಹಗಾರ್ತಿಯೂ ಆಗಿದ್ದಾರೆ.

ನವೆಂಬರ್ 26, ರಶ್ಮಿ ಅವರ ಹುಟ್ಟು ಹಬ್ಬ.
ಇವರು ಹುಟ್ಟಿ ಬೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಎಂಬ ಕುಗ್ರಾಮದಲ್ಲಿ. ತಮ್ಮ ಊರಿನ ಬಗ್ಗೆ ಇವರಿಗೆ ಅಪಾರ ಪ್ರೀತಿ. ಕುಗ್ರಾಮವಾಗಿದ್ದರೂ ಕೂಡ ಪ್ರಕೃತಿ ಸೌಂದರ್ಯಕ್ಕೆ ಕೊರತೆಯಿಲ್ಲದ ಊರು ಇದು. ಇವರ ತೋಟಕ್ಕಂಟಿಕೊಂಡೇ ಜಲಪಾತ ಇದೆ. ಆ ಜಲಪಾತದ ನೀರು ಇವರ ಬಳಕೆಗೆ ಮಾತ್ರವಲ್ಲದೆ ಕೆಳಗಡೆ ಇರುವ ಸುಮಾರು 10-15 ಮನೆಗಳಿಗೂ ಆಸರೆ ಆಗಿದೆ. ಈ ಊರನ್ನು ಬಂಗಾಡಿ ಅಂತಲೂ ಕರೆಯುತ್ತಾರೆ. ಸುಮಾರು 800 ವರ್ಷಗಳ ಹಿಂದೆ ಬಂಗರಸರು ಆಳುತ್ತಿದ್ದ ಇವರ ಊರು ಬಂಗ್ವಾಡಿಯಾಗಿ ಈಗ ಬಂಗಾಡಿಯಾಗಿದೆ.  ಇವರ ಮನೆಯಿಂದ ಒಂದು ದಿಕ್ಕಿಗೆ ಜಲಪಾತ, ಇನ್ನೊಂದು ದಿಕ್ಕಿಗೆ ದಟ್ಟ ಕಾಡು.  ರಶ್ಮಿ ಅವರು ಮನಸ್ಸು ಬಂದಾಗ ಎದ್ದು ಕಾಡಿಗೆ ನಡೆಯುತ್ತಿದ್ದರು. ಅಂತಹ ಸ್ವಚ್ಛಂದ ಪರಿಸರದಲ್ಲಿ ಬೆಳೆದ ಇವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ನೆಲೆಯೂರಿದ್ದಾರೆ. ಇಲ್ಲಿನ ಪ್ರಸಿದ್ಧ ಕಾಡು ಮಲ್ಲೇಶ್ವರ ದೇವಾಲಯ ಹತ್ತಿರವಿರುವ ಕಾರಣ ಇಲ್ಲೂ ಒಂದು ಕಾಡು ಇದೆ ಎಂದು ಸಮಾಧಾನ ಪಡುತ್ತಾರೆ. 

ರಶ್ಮಿ ಅವರ ತಂದೆ ವೆಂಕಟೇಶ ಗೋಖಲೆ
ತಾಯಿ ಪದ್ಮಾ ಗೋಖಲೆ. ಇವರದು ಕೃಷಿ ಕುಟುಂಬ. ರಶ್ಮಿ ಅವರ ಅಣ್ಣ ಸುನೀಲ್ ಗೋಖಲೆ, ಪ್ರಸ್ತುತ ಬಹಳ ದೊಡ್ಡ ಬಾಣಸಿಗರು. ರಶ್ಮಿ ಅವರು ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಯೋಗ ವಿಜ್ಞಾನ ಹಾಗೂ ಮಾನವ ಪ್ರಜ್ಞೆ ಎಂಬ ವಿಷಯದಲ್ಲಿ 2004ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು.  ಇವರು ಹಲವಾರು ಯೋಗ ಶಿಬಿರಗಳನ್ನು ನಡೆಸುತ್ತಿದ್ದಾರೆ. ಸಾತ್ವಿಕ ಆಹಾರದ ಕುರಿತಾದಂತೆ ಸುಮಾರು 100 ಕ್ಕೂ ಹೆಚ್ಚು ಅಡುಗೆ ಕಾರ್ಯಕ್ರಮಗಳನ್ನು ಕನ್ನಡದ ವಿವಿಧ ಟಿವಿ ವಾಹಿನಿಗಳಿಗೆ ಕೊಟ್ಟಿದ್ದಾರೆ. ಯೋಗದ ಕುರಿತ ಹಲವು ಕಾರ್ಯಕ್ರಮಗಳನ್ನು ಟಿವಿ ಹಾಗೂ ಆಕಾಶವಾಣಿಗೂ ಕೊಟ್ಟಿದ್ದಾರೆ.

ರಶ್ಮಿ ಅವರು ಆಗಾಗ ಬರೆಯುವ ಅಭ್ಯಾಸವನ್ನೂ  ಇಟ್ಟುಕೊಂಡಿದ್ದಾರೆ.  ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.  ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರಿಗೆ ವಿಶೇಷವಾಗಿ ಭೈರಪ್ಪನವರ ಕೃತಿಗಳು ಹೆಚ್ಚು ಇಷ್ಟ. ಶತವಧಾನಿ ಅರ್.ಗಣೇಶ್ ಹಾಗೂ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಪುಸ್ತಕ ಹಾಗೂ ಲೇಖನಗಳನ್ನು ಆಪ್ತವಾಗಿ ಓದುತ್ತಾರೆ.

ರಶ್ಮಿ ಅವರ ಪತಿ ಕಿಶೋರ್ ಪಟವರ್ಧನ್‍.  ಈ ದಂಪತಿಗಳ ಪುತ್ರಿ ಆಪ್ತಿ ಪಟವರ್ಧನ್ ಬರಹಗಾರ್ತಿಯಾಗಿ, ಕಿರುಚಿತ್ರ ನಿರ್ದೇಶಕಿಯಾಗಿ, ಕಥಕ್ ನೃತ್ಯಕಲಾವಿದೆಯಾಗಿ, ರಂಗಭೂಮಿ, ಕಿರುತೆರೆ, ಚಲನಚಿತ್ರಗಳಲ್ಲಿನ ಕಲಾವಿದೆಯಾಗಿ, ಹೀಗೆ ಬಹುಮುಖಿ ಪ್ರತಿಭೆಯಾಗಿ ಕಂಗೊಳಿಸುತ್ತಿದ್ದಾಳೆ.

ಬಹುಮುಖಿ ಪ್ರತಿಭಾನ್ವಿತರಾದ ಪಟವರ್ಧನ್ ಕುಟುಂಬಕ್ಕೆ ಶುಭಹಾರೈಸುತ್ತ ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ರಶ್ಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.

Happy birthday Rashmi Patwardhan 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ