ಸೋಮೇಶ್ವರಶತಕ20
ಸೋಮೇಶ್ವರ ಶತಕ 20ನೇ ದಿನ
ಪದ್ಯ 96
*ಪರರಾಯರ್ಕಳ ಸೇನೆಯಂ ಗೆಲಿದು ಮತ್ತೇಭಂಗಳಂ ಸೀಳ್ದು ತ , ನ್ನರಿಯೆಂದೆಂಬರನೊಕ್ಕಲಿಕ್ಕುವ ಭಟರ್ಗಂಗಂಜಿ ಕೀಳ್ನಾಯಿಗಂ, ನಿರುತಂ ಭೋಜ್ಯ ವಿಶೇಷವಿತ್ತು ಪೊರೆವರ್ಮಾನಂಗಳೆಲ್ಲಿರ್ಪುವೈ, ಪರಪೋಷ್ಯರ್ಕಡುಕಷ್ಟರೈ, ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಪರರಾಜರುಗಳ ಸೇನೆಯೊಂದಿಗೆ ಹೋರಾಡಿ, ಮದ್ದಾನೆಗಳೊಂದಿಗೆ ಕಾದಾಡಿ ಅವುಗಳನ್ನು ಸೀಳಿ ತನ್ನ ಒಡೆಯನಿಗೆ ಜಯವನ್ನು ತರುವ ಭಟರುಗಳಿಗೆ ಗಂಜಿಯೂಟವನ್ನೂ, ತನ್ನ ಬಳಿಯಿರುವ ಕೀಳುನಾಯಿಗಳಿಗೆ ನಿತ್ಯವೂ ಮೃಷ್ಟಾನ್ನ ಭೋಜನವನ್ನೂ ನೀಡುವ ರಾಜರುಗಳಿರುವರು. ಪರರ ಪೋಷಣೆಯಲ್ಲಿರುವುದು ಬಹಳ ಕಷ್ಟ.
ಪದ್ಯ 97
*ಹರಿಯೊಳ್ ನಾರದ ಮಂದಿವಾಳದೆ ಮಹಾಶಾಪಂಗಳಂ ತಾಳನೇ , ಸುರವೆಣ್ಣಿಂದಲಿ ಪುಷ್ಪದಂತ ವನದೊಳ್ ತಾಂ ಕ್ರೋಢ ರೂಪಾಗನೇ ? , ವಿರಸಂ ಬರ್ಪುದು ಬೇಡೆನಲ್ ದ್ರುಪದೆಯಂ ಭೀಮಾರಿ ತಾಂ ಮಾಣ್ದನೇ ? , ಸರಸಂ ವೆಗ್ಗಳವಲ್ಲವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ನಾರದನು ಹರಿಯಲ್ಲಿ ಒಮ್ಮೆ ತುಂಬಾ ಸಲಿಗೆಯಿಂದ ವರ್ತಿಸಿದುದಕ್ಕಾಗಿ ಮಹಾ ಶಾಪಕ್ಕೆ ಒಳಗಾದನು. ಪುಷ್ಪದಂತನೆಂಬ ಶಿವನ ಭಕ್ತನು ಸುರಕನ್ನಿಕೆಯನ್ನು ಕೆಣಕಿ ತಡೆದುದರಿಂದ ಕಾಡಿನಲ್ಲಿ ಹಂದಿಯ ರೂಪವನ್ನು ತಳೆಯಬೇಕಾಯಿತು. ದ್ರೌಪದಿಯಲ್ಲಿ ಸರಸ ತೋರಿದುದರಿಂದ ಕೀಚಕನು ಮರಣ ಹೊಂದಿದನು ಯಾರಲ್ಲಿಯೂ ಅತಿಯಾದ ಸರಸ, ಸಲಿಗೆ ಒಳ್ಳೆಯದಲ್ಲ. ಒಂದು ಮಿತಿ ಇದ್ದರೇ ಒಳ್ಳೆಯದು.
ಪದ್ಯ 98
*ಮಹಿಯೊಳ್ ಭೂಸುರವೇಷದಿಂದ ಕಲಿಯಲ್ ಕರ್ಣಂ ಧನುರ್ವೇದಮಂ , ರಹಿಗೆಟ್ಟಂ ಬಹುನೊಂದರಿಲ್ಪಲಮಹಾ ವಾತಾಪಿಗಳ್ ಶಕ್ರನಿಂ, ದಹಿರಾಜಾತ್ಮಜೆ ಮಂತ್ರ ತಂತ್ರವರಿದಾಳ್ದಂ ಪೋಗೆ ತಾ ತಂದಳೇಂ ?, ಬಹು ವಿದ್ವಾಂಸನು ಭ್ರಾಂತನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸುಳ್ಳನ್ನು ಹೇಳಿ ಪರಶುರಾಮರಲ್ಲಿ ವಿದ್ಯೆ ಕಲಿತ ಕರ್ಣನು ಶಾಪಕ್ಕೊಳಗಾದನು. ಶುಕ್ರಾಚಾರ್ಯರು ಇಲ್ವಲ ಮತ್ತು ವಾತಾಪಿಗಳಿಗೆ ವಿದ್ಯೆಯನ್ನು ಕಲಿಸಿದರೂ ಪ್ರಯೋಜನವಾಗಲಿಲ್ಲ. ಕರ್ಕೋಟಕನ ಮಗಳಾದ ಜರತ್ಕಾರುವು ಮಂತ್ರ ತಂತ್ರವಿದ್ಯೆಗಳನ್ನು ಕಲಿತರೂ ತನ್ನ ಗಂಡನನ್ನು ಮರಳಿ ಕರೆತರಲು ಆಗಲಿಲ್ಲ. ಬಹಳ ವಿದ್ಯೆ ಕಲಿತಿದ್ದರೂ ಕೆಲವೊಮ್ಮೆ ಭ್ರಾಂತರಾಗಬೇಕಾಗುತ್ತದೆ.
ಪದ್ಯ 99
*ಸುರಚಾಪಾಯುಧಮಿಂದ್ರಜಾಲದ ಬಲಂ, ಮೇಘಂಗಳಾಕಾರ, ಬಾ , ಲರು ಕಚ್ಚ್ಯಾಡುವ ಕಟ್ಟೆ, ಸ್ವಪ್ನದ ಧನಂ, ನೀರ್ಗುಳ್ಳಿ, ಘಾಳೀಸೊಡ , ರ್ಪರಿಯುತ್ತಿಪ್ಪ ಮರೀಚಿಕಾ ಜಲ, ಜಲವರ್ತಾಕ್ಷರಂ, ತೋರುವೆ ಇಂತಿವಂ, ಸಿರಿಪುಲ್ಲಾಗ್ರದ ತಂತುರೈ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಕಾಮನಬಿಲ್ಲು, ಇಂದ್ರಜಾಲದ ಬಲ, ಮೇಘಗಳ ವಿವಿಧ ರೂಪಗಳು, ಮಕ್ಕಳು ಆಟಕ್ಕೆಂದು ಕಟ್ಟುವ ಕಟ್ಟೆ, ಕನಸಿನಲ್ಲಿನ ಧನ, ನೀರಮೇಲಿನ ಗುಳ್ಳೆ, ಗಾಳಿಗೆದುರಾದ ದೀಪ, ನೀರು ಹರಿಯುವಂತೆ ಕಾಣುವ ಮರೀಚಿಕೆ, ನೀರ ಮೇಲಿನ ಅಕ್ಷರ, ಹುಲ್ಲಿನ ತುದಿಯಲ್ಲಿನ ಇಬ್ಬನಿ ಇವೆಲ್ಲವೂ ಕ್ಷಣಿಕವಾದವುಗಳು.
ಪದ್ಯ 100
*ಹೊಳೆಯಲಿಕ್ಕಿದ ಜೇನು ಶೂದ್ರ ಬೆಳದಾಕಾರಂಗಳಂ ಮಾಡಿದಾ, ಬಲು ಸಣ್ಣಾಗ್ರದ ಭತ್ತ ಸರ್ಪ ಧನಮಂ ಕಾದಿರ್ಪುದಾ ದೀನರಾ , ಹೊಲೆಪಾಟಂದಲಿ ಕೂಡಲಿಕ್ಕಿ ಪರರಿಂಗೀಡಾಗಿ ತಾ ಮಾಳ್ಪರೈ , ಘಳಿಸೇನುಣ್ಣದೆ ಪೋಪರೈ, ಹರಹರಾ ಶ್ರೀ ಚೆನ್ನಸೋಮೇಶ್ವರಾ.
ನೀರಿನಲ್ಲಿಟ್ಟ ಜೇನು, ಅಪಾತ್ರರು ಕಲಿತ ವಿವಿಧ ವಿದ್ಯೆ, ಸಣ್ಣಕ್ಕಿಯಿಂದ ಮಾಡಿದ್ದರೂ ಎಂಜಲಾದ ಮೃಷ್ಟಾನ್ನ, ಸರ್ಪವು ಕಾದಿಟ್ಟ ಧನ, ದೀನರನ್ನು ಕಾಡಿಸಿ ಸಂಪಾದಿಸಿ ಜಿಪುಣತನದಿಂದ ಕೂಡಿಟ್ಟ ಹಣವು ಪರರ ಪಾಲಾಗುವುದು. ಅನುಭವಿಸದಿದ್ದ ಮೇಲೆ ಸುಮ್ಮನೆ ಗಳಿಸಿ ಏನು ಫಲ?
ವಿವರಣೆ: ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...
ಕಾಮೆಂಟ್‌ಗಳು