ಸೋಮೇಶ್ವರಶತಕ19
ಸೋಮೇಶ್ವರ ಶತಕ 19ನೇ ದಿನ
ಪದ್ಯ 91
*ಮದನಂಗಂಜುವ ಯೋಗಿಯೇ? ಮನೆಯ ಪೆಣ್ಣಿಂಗಂಜುವಂ ಗಂಡಸೇ?, ಮದಕಕಂಜೋಡುವುದಾನೆಯೇ? ದುರುಳರೊಳ್ ಕೂಡಿರ್ಪವಂ ಮಾನ್ಯನೇಂ?, ಬುಧನೇ ತರ್ಕದೊಳಂಜುವಂ? ಬೆದರಿಗಾಯಕ್ಕಂಜೆ ದಿವ್ಯಾಶ್ವವೇ? ಕದನಕ್ಕಂಜುವ ವೀರನೇ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಮದನನಿಗೆ ಹೆದರುವವನು ಯೋಗಿ ಹೇಗಾಗುವನು? ಮನೆಯ ಹೆಣ್ಣಿಗೆ ಹೆದರುವವನು ಗಂಡಸಲ್ಲ. ಮದೋದಕಕ್ಕೆ ಹೆದರಿ ಆನೆ ಓಡುವುದೇ? ಕೆಟ್ಟವರ ಸಹವಾಸದಲ್ಲಿರುವವನು ಮಾನ್ಯ ಹೇಗಾದಾನು? ಪಂಡಿತನು ತರ್ಕಗಳಿಗಂಜುವನೇ? ಸಣ್ಣ ಗಾಯಕ್ಕೆ ಹೆದರಿದರೆ ಅದು ದಿವ್ಯಾಶ್ವ ಹೇಗಾದೀತು? ಕದನಕ್ಕೆ ಅಂಜುವುದಾದರೆ ಅವನು ವೀರನಲ್ಲ.
ಪದ್ಯ 92
*ಇರಿಯಲ್ಬಲ್ಲರೆ ವೀರನಾಗು; ಧರೆಯೊಳ್ನಾನಾ ಚಮತ್ಕಾರಮಂ , ಅರಿಯಲ್ಬಲ್ಲರೆ ಮಂತ್ರಿಯಾಗು; ಪ್ರಭುವಾಗಾರಂದಡಂ ಕೋಪಮಂ, ತೊರೆಯಲ್ಬಲ್ಲರೆ; ಯೋಗಿಯಾಗುಮರಿಷಡ್ವರ್ಗಂಗಳ ಬಾಧಿಸು _, ತ್ತಿರಬಲ್ಲರ್ಪೊಣೆಯಪ್ಪುರೈ ! ಹರಹರಾ ಶ್ರೀ ಚೆನ್ನಸೋಮೇಶ್ವರಾ*
ಕಾದಾಟವನ್ನು ಚೆನ್ನಾಗಿ ಬಲ್ಲವನೇ ಯೋಧನಾಗಬೇಕು. ನಾನಾ ರೀತಿಯ ಚಮತ್ಕಾರಗಳನ್ನೂ ಚತುರೋಪಾಯಗಳನ್ನು ಬಲ್ಲವನೇ ಮಂತ್ರಿಯಾಗಬೇಕು. ಯಾರು ಏನಂದರೂ ಕೋಪಿಸದೆ ಸಹಿಸುವ ಗುಣವುಳ್ಳವನು ರಾಜನಾಗಬೇಕು. ಅರಿಷಡ್ವರ್ಗಗಳನ್ನು ಗೆದ್ದವನೇ ಯೋಗಿಯಾಗಲು ಅರ್ಹನು. ಬೇರೆಯವರ ಸಾಲವನ್ನು ತಾನು ತೀರಿಸಬಲ್ಲಷ್ಟು ಯೋಗ್ಯತೆ ಇರುವವನು ಮಾತ್ರ ಇತರರ ಸಾಲಕ್ಕೆ ಹೊಣೆಯಾಗಬೇಕು.
ಪದ್ಯ 93
*ಅರೆಯಂ ಸೀಳುವೊಡಾನೆ ಮೆಟ್ಟಲಹುದೇ ? ಚಾಣಂಗಳಿಂದಲ್ಲದೇ? , ಕಿರಿದಾರ್ಗಿದಡೇನುಪಾಯ ಪರನೋರ್ವಂ ಕೋಟಿಗೀಡಕ್ಕು ; ಹೆ, ಮ್ಮರನಿರ್ದೇನದರಿಂದಲೆತ್ತಲಹುದೇ ಬಲ್ಭಾರಮಂ; ಸನ್ನೆ ಸಾ, ವಿರ ಕಾಲಾಳಿನ ಸತ್ವವೈ; ಹರಹರಾ ಶ್ರೀ ಚೆನ್ನಸೋಮೇಶ್ವರಾ*
ಬಂಡೆಯನ್ನು ಸೀಳುವುದಕ್ಕೆ ಚಿಕ್ಕ ಚಾಣವೆಂಬ ಸಾಧನವನ್ನು ಬಳಸುವರು. ಅದು ಬಿಟ್ಟು ಆನೆಗಳಿಂದ ತುಳಿಸಿದರೆ ಸಾಧ್ಯವಾಗದು. ಕಿರಿದಾಗಿದ್ದರೂ ಉಪಾಯವಂತನಾಗಿದ್ದರೆ ಅವನು ಕೋಟಿಜನರಿಗೆ ಸಮ. ಹಿರಿದಾದ ಮರವಿದ್ದ ಮಾತ್ರಕ್ಕೆ ಅದರಿಂದ ಭಾರವನ್ನೆತ್ತಲು ಆಗದು. ಅದಕ್ಕೆ ಉಪಯೋಗಿಸುವ ಸನ್ನೆಕೋಲು ಸಾವಿರ ಕಾಲಾಳಿಗೆ ಸಮನಾಗುತ್ತದೆ. ಕೆಲಸ ಆಗುವುದು ಮುಖ್ಯ. ಚಿಕ್ಕದೆಂದು ಉದಾಸೀನ ಸಲ್ಲದು.
ಪದ್ಯ 94
*ಅನುಮಾನಂ ಬಿಡ ರಾಮನುರ್ವಿಜೆ ಬೃಹದ್ಭಾನಲ್ಲಿ ಪೊರ್ಕೈತರಲ್ , ವನದೊಳ್ನೇರಿಲೆಪಣ್ಣನಗ್ನಿಜೆ ಮಹಾ ವಿಖ್ಯಾತಿಯಿಂ ಪತ್ತಿಸಲ್, ದನುಜಾರಾತಿ ಸ್ಯಮಂತರತ್ನವ ನೃಪಂಗೀಯಲ್ ಮನಂ ಮೆಚ್ಚಿತೇ? , ಜನರಂ ಮೆಚ್ಚಿಸಲಾಗದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸೀತೆಯು ರಾವಣನ ಬಳಿ ಬಹುಕಾಲ ಇದ್ದಳೆಂದು ರಾಮನು ಅನುಮಾನಪಡಲು ಅವಳು ಅಗ್ನಿಯನ್ನು ಹೊಕ್ಕು ಶುದ್ಧಳೆನಿಸಿಕೊಂಡಳು. ದ್ರೌಪದಿಯು ತನ್ನ ಸತ್ಯನಿಷ್ಠೆಯಿಂದ ನೇರಿಲೆಯ ಹಣ್ಣನ್ನು ಮರದ ತುದಿಗೆ ಏರಿಸಿ ಪತಿವ್ರತೆಯೆನಿಸಿಕೊಂಡಳು. ಶ್ಯಮಂತಕ ಮಣಿಯನ್ನು ಕೃಷ್ಣನು ಸತ್ರಾಜಿತನಿಗೆ ಕೊಟ್ಟನು. ಆದರೂ ಇವರುಗಳ ಮೇಲೆ ಅಪವಾದಗಳು ಬರುವುದು ತಪ್ಪಲಿಲ್ಲ. ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ.
ಪದ್ಯ 95
*ಹರತಾಂ ಕುಂಟಿಣಿಯಾಗೆ ನಂಬಿಯೊರೆದಂ ಚಂದ್ರಾವತೀ ದೇವಿಗಂ, ಕರಕಷ್ಟಗಳಂ ಮಾಡಿದಂ ದ್ವಿಜ, ವಿರಾಟಂ ಧರ್ಮ ಭೂಪಾಲನಾ, ಶಿರಮಂ ಚಿಟ್ಟೆಯೊಳಿಟ್ಟ, ದ್ರೌಪದಿಗೆ ಬಂದಾಪತ್ತನೇನೆಂಬೆ ನಾಂ , ಪರರಂ ಸೇವಿಸೆ ಕಷ್ಟವೈ, ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ತನ್ನ ಭಕ್ತ ನಂದಿಗಾಗಿ ಈಶ್ವರ ತಲೆಹಿಡುಕನಾಗಬೇಕಾಯಿತು. ಹರಿಶ್ಚಂದ್ರನ ರಾಣಿ ಇನ್ನೊಬ್ಬರ ಮನೆಯಲ್ಲಿ ಆಳಾಗಿ ಕಷ್ಟಪಡಬೇಕಾಯಿತು. ವಿರಾಟನ ಸೇವೆಯಲ್ಲಿದ್ದ ಧರ್ಮಜನ ತಲೆಗೆ ವಿರಾಟ ದಾಳಗಳಿಂದ ಹೊಡೆದನು. ದ್ರೌಪದಿ ಅನುಭವಿಸಿದ ಕಷ್ಟಗಳನ್ನು ಏನೆಂದು ಹೇಳುವುದು ? ಪರರ ಸೇವೆಯೆಂಬುದು ಬಹಳ ಕಷ್ಟಕರವಾದುದು.
ವಿವರಣೆ: ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...

ಕಾಮೆಂಟ್‌ಗಳು