ಸೋಮೇಶ್ವರಶತಕ21
ಸೋಮೇಶ್ವರ ಶತಕ 21ನೇ ದಿನ
ಪದ್ಯ 101
*ಕುರುಡಂ ಕನ್ನಡಿಯಂ ಕವೀಂದ್ರರ ಮಹಾದುರ್ಮಾರ್ಗಿಗಳ್ ತ್ಯಾಗಿಯಂ, ಬರಡಂ ಬಾಲರ ಮುಗ್ಧ ಬಂಜೆ, ಕುಲಟಾ ಪೂರ್ಣೇಂದುವಂ, ಕಾವ್ಯದಾ, ಪರಿಯಂಗಾಂಪರು ಪಾಪಿಗಳ್ ಸುಜನರಂ ಮಾಣಿಕ್ಯಮಂ ಮರ್ಕಟಂ , ಜರೆಯಲ್ ಸಿಂಗಕೆ ಗ್ರಾಮಸಿಂಹ ಎಣೆಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಕಾಣಲಾಗದವನು ಕನ್ನಡಿಯನ್ನೂ, ದುರ್ಮಾರ್ಗಿಗಳು ಕವಿಗಳನ್ನೂ, ಜಿಪುಣರು ತ್ಯಾಗಿಗಳನ್ನೂ, ಸಿಡುಕರು ಮಕ್ಕಳ ಮುದ್ದನ್ನೂ, ಕಳ್ಳರು ಚಂದ್ರನನ್ನೂ, ಗಾಂಪರು ಕಾವ್ಯದ ಸೊಗಸನ್ನೂ, ಪಾಪಿಗಳು ಸುಜನರನ್ನೂ, ಕೋತಿಯು ಮಾಣಿಕ್ಯವನ್ನೂ ನಿಂದಿಸಿದರೆ ಆಯಾ ವಸ್ತುಗಳ, ವ್ಯಕ್ತಿಗಳ ಘನತೆಗೆ ಏನೂ ಕುಂದು ಉಂಟಾಗುವುದಿಲ್ಲ.
ಪದ್ಯ 102
*ದಿವಿಜಾಧೀಶ್ವರಗಕ್ಷಿ ದೇಹವನಿತುಂ ನೋಡಲ್ಕೆ ಶುಭ್ರಾಂಶುವಾ , ಶಿವನೇತ್ರಂ ಹರಿಗಬ್ಜಮುಂ ನಯನವಾ ವೈಶ್ವಾನರಂ ರಾತ್ರಿಗಂ , ರವಿಲೋಕತ್ರಯಕೆಲ್ಲ ಲೋಚನ ಬುಧವ್ರಾತಕ್ಕೆ ಶಾಸ್ತ್ರಾಂಬಕಂ , ಕವಿಯೇ ರಾಜರ ಕಣ್ಣೆಲೈ, ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಇಂದ್ರನಿಗೆ ತನ್ನ ದೇಹದಲ್ಲೆಲ್ಲಾ ಕಣ್ಣುಗಳು. ಶಿವನಿಗೆ ಹಣೆಯಲ್ಲೂ ಕಣ್ಣು. ಹರಿಗೆ ಕಮಲವೇ ಕಣ್ಣಾದರೆ ರಾತ್ರಿಗೆ ಕಣ್ಣು ಅಗ್ನಿ. ರವಿಯು ಲೋಕಕ್ಕೆಲ್ಲ ಕಣ್ಣಾಗಿರುವನು. ಪಂಡಿತರಿಗೆ ಶಾಸ್ತ್ರಗಳೇ ಕಣ್ಣುಗಳು. ಕವಿಯು ರಾಜರ ಕಣ್ಣಾಗಿರುವನು. ಶ್ರೇಷ್ಠತೆಯನ್ನು ಪಡೆದಿರುವನು. ಸರ್ವೇಂದ್ರಿಯಗಳಲ್ಲಿ ಕಣ್ಣೇ ಪ್ರಧಾನವಾದುದು ಹೇಗೋ, ಇಲ್ಲಿ ಅದರ ಪ್ರಧಾನತೆಯನ್ನು ಉದಾಹರಿಸಲಾಗಿದೆ.
ಪದ್ಯ 103
*ಪಶುಗಳ್ ಕ್ರೂರ ಮೃಗಂಗಳಂ ಅಂಗನೆಯರುಂ ಸರ್ಪಂಗಳುಂ ಕಣ್ಗೆ ಕಾ, ಣಿಸದ ಅತ್ಯುಗ್ರಗ್ರಹಂಗಳುಂ ಪಟುಭಟರ್ ವಿದ್ವಜ್ಜನಂ ಮಂತ್ರಿಗಳ್, ಋಷಿಗಳ್ ಮಿತ್ರರು ಬಂಧುಗಳ್ ಪ್ರಜೆಗಳುಂ ತಾವೆಲ್ಲರುಂ ತಮ್ಮಯಾ, ಶಿಶುವಂ ಪಾಲಿಸುತ್ತಿರ್ಪರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಪಶು ಪಕ್ಷಿ ಪ್ರಾಣಿಗಳು, ಅಂಗನೆಯರು, ಸರ್ಪಗಳು, ಕಣ್ಣಿಗೆ ಕಾಣಿಸದ ಉಗ್ರವಾದ ಗ್ರಹಗಳು, ಪಟುಭಟರು, ವಿದ್ವಜ್ಜನರು, ಮಂತ್ರಿಗಳು, ಋಷಿಗಳು, ಬಂಧು ಮಿತ್ರರು, ಸಕಲ ಪ್ರಜೆಗಳು ಹೀಗೆ ಎಲ್ಲರೂ ಅವರವರ ಶಿಶುಗಳನ್ನು ಪಾಲಿಸುತ್ತಿರುವರು. ಯಾರೂ ಹಿಂದೆ ಸರಿಯುವುದಿಲ್ಲ.
ಪದ್ಯ 104
*ಪೃಥುರೋಮೇಶ ತಿಮಿಂಗಲಂ ತಿಮಿಯನೂಕಲ್ ಸಿಂಧು ತಾನುಕ್ಕದೇ ? ಶಿಥಿಲತ್ವಂ ಪಡೆದಿರ್ಪ ವಂಶ ಮಥಿಸಲ್ ಕಿಚ್ಚೇಳದೇ? ಮಂದರಂ , ಮಥಿಸಲ್ ಕ್ಷೀರ ಸಮುದ್ರದೊಳ್ ಬಹುವಿಷಂ ತಾಂ ಪುಟ್ಟದೇ ? ಮರ್ತ್ಯರೊಳ್, ಮಥನಂ ವೆಗ್ಗಳ ಹೊಲ್ಲದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಸಾಗರದಲ್ಲಿ ದೊಡ್ಡ ತಿಮಿಂಗಿಲವು ಚಿಕ್ಕ ತಿಮಿಂಗಿಲಗಳ ಮೇಲೆ ಬೀಳಲು ಸಮುದ್ರದಲ್ಲಿ ಅಲೆಗಳೆದ್ದು ಉಕ್ಕುತ್ತದೆ. ಶಾಂತವಾಗಿದ್ದ ಬಿದಿರು ಕಂಬಗಳು ಒಂದಕ್ಕೊಂದು ತಿಕ್ಕಿದಾಗ ಘರ್ಷಣೆಯಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಮಂದರ ಪರ್ವತದಿಂದ ಮಥಿಸಿದಾಗ ಕ್ಷೀರ ಸಮುದ್ರದಲ್ಲಿ ಹಾಲಾಹಲ ಹುಟ್ಟಿತಲ್ಲವೆ? ಆದುದರಿಂದ ಯಾರೊಡನೆಯೂ ಹೆಚ್ಚಿನ ತಿಕ್ಕಾಟ ಸಲ್ಲದು. ಒಳ್ಳೆಯದಲ್ಲ. ( ವಂಶ= ಬಿದಿರು )
ಪದ್ಯ 105
*ಸುಚರಿತ್ರರ್ ಸಲೆ ಕೀರ್ತಿಗೋಸುಗ ಮಹಾಕಷ್ಟಂಗಳಂ ತಾಳಿಸೂ , ರಿಚಯಕ್ಕೆಂದು ಶರೀರಮಾನಗಳನಿತ್ತಾ ಚಂದ್ರಾರ್ಕತಾರಾರ್ಕವಾ , ಗಚಲಖ್ಯಾತಿಯ ತಾಳ್ದರೀಗಲಿಳೆಯೊಳ್ ತಾವೀಯರೈ ಪೋಗಲಾ , ವಚನಕ್ಕೇನು ದರಿದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಹಿಂದೆ ಸಚ್ಚಾರಿತ್ರ್ಯವುಳ್ಳವರು ತಮ್ಮ ಕೀರ್ತಿಗಾಗಿ ಮಹಾ ಕಷ್ಟಗಳನ್ನು ತಾಳಿ ವಿಪ್ರರಿಗೆ ದಾನಗಳನ್ನಿತ್ತು ಸೂರ್ಯ ಚಂದ್ರ ನಕ್ಷತ್ರಗಳಿರುವತನಕ ಅಚಲವಾದ ಖ್ಯಾತಿಯನ್ನು ಹೊಂದಿದರು. ಈಗಲಾದರೋ ಕೊಡುವುದಿರಲಿ ಮಾತನ್ನೂ ಆಡುವುದಿಲ್ಲ. ಮಾತಿಗೂ ಬಡತನವೇ?
ವಿವರಣೆ: ಸುಬ್ಬುಲಕ್ಷ್ಮಿ Lrphks Kolar
ನಾಳೆ ಮುಂದುವರೆಯುವುದು...

ಕಾಮೆಂಟ್‌ಗಳು