ಸೋಮೇಶ್ವರಶತಕ22
ಸೋಮೇಶ್ವರ ಶತಕ ಅಂತಿಮ ದಿನ
ಕಳೆದ 22 ದಿನಗಳಿಂದ ಸೋಮೇಶ್ವರ ಶತಕವನ್ನು ಪರಿಚಯಿಸಿದ್ದೇವೆ. ಇದು ಸಾಧ್ಯವಾಗಿದ್ದು ಶ್ರೀಮತಿ. ಸುಬ್ಬುಲಕ್ಷ್ಕಿ Lrphks Kolar ಅವರು ಸಮಸ್ತ ಸೋಮೇಶ್ವರ ಶತಕವನ್ನು ಒಂದೆಡೆ ತಂದು ಅದಕ್ಕೆ ಸುಲಭವಾಗಿ ಅರ್ಥವಾಗುವಂತೆ ಸಾರಾಂಶವನ್ನು ನೀಡಿದ್ದರಿಂದ.
ಸೋಮೇಶ್ವರ ಶತಕ ಒಂದು ಕಾಲದ ವಾಸ್ತವ ಸಾಮಾಜಿಕ ಚಿತ್ರಣ ನೀಡಿದ್ದರ ಜೊತೆಗೆ, ನೀತಿಬೋಧೆಗಳನ್ನು ಹೇಳಿರುವಂತದ್ದು. ನೀತಿಬೋಧೆಗಳು ಕೆಲವೊಂದು ನಂಬಿಕೆಗಳನ್ನು ಆಧರಿಸಿರುತ್ತದೆ. ಅಂತಹ ನಂಬಿಕೆಗಳಲ್ಲಿ ಕೆಲವು ಮಾನವೀಯತೆಯ ಕಲ್ಪನೆಗಳಿಗೆ, ವಿಶೇಷವಾಗಿ ಸಮಾಜಮುಖಿಯಾದ ಇಂದಿನ ಚಿಂತನೆಗಳಿಗೆ ಸಾಧುವೆನಿಸಿರುವಂತೆ ಇರುವುದಿಲ್ಲ. ಅಂತಹದ್ದು ನನ್ನ ಗಮನಕ್ಕೆ ಬಂದ ಸಂದರ್ಭದಲ್ಲಿ ಕೆಲವೆಡೆ ಆ ಅಭಿಪ್ರಾಯದ ಟಿಪ್ಪಣಿ ಸೇರಿಸಿರುವೆ. ಅದಕ್ಕೆ ಹೊರತು ಪಡಿಸಿದಂತೆ ಒಂದು ಕಾವ್ಯರೂಪಕವಾಗಿ ಮತ್ತು ಹಲವಾರು ಮೌಲ್ಯಗಳ ಮಂಡನೆಯ ನಿಟ್ಟಿನಲ್ಲಿ ಸೋಮೇಶ್ವರ ಶತಕ ಆಪ್ತವಾಗುವಂತದ್ದು. ಇಂತಹ ಪ್ರಸ್ತುತಿ ನಮಗೆ ಸಾಧ್ಯವಾಗಿದ್ದಕ್ಕೆ ಸಂತೋಷಿಸುವೆ. ತಮಗೆಲ್ಲರಿಗೂ ಈ ಕೆಲಸವನ್ನು ಪ್ತೋತ್ಸಾಹಿಸಿದ್ದಕ್ಕೆ ವಂದನೆ. ಮತ್ರೊಂದು ಮಹತ್ವದ ಕಾರ್ಯಸಾಧಿಸಿದ ಸುಬ್ಬುಲಕ್ಷ್ಮಿಅವರಿಗೆ ನಮನ.
ಸುಬ್ಬುಲಕ್ಷ್ಮಿ ಅವರು ತಮ್ಮ ಮಾತು ಕೆಳಗೆ ಹೇಳಿದ್ದಾರೆ. ಅವರ ಸವಿನಯ ಸಹೃದಯ ಅಕ್ಕರೆಗಳಿಗೆ ನಮಿಸುವೆ 🌷🙏🌷
ಪದ್ಯ 106
*ಪ್ರಚುರಂ ಪತ್ತೊಳಗಾಗೆ ರಂಧ್ರದೊಳಗೊಲ್ದಾ ಎಂಟನೀಗೇಳ ಬಿ, ಟ್ಟುಚಿತಂ ತಾನೆನಿಪಾರಕಟ್ಟೆಯಿದಕ್ಕೀಡಾಗದೇ ನಾಲ್ಕರಂ, ರಚನಂಗೆಯ್ಯದೆ ಮೂರ ತೋರುವೆರಡಂ ಬಿಟ್ಟೊಂದರೊಲ್ನಿಲ್ಲದೆ, ವಚನ ಬ್ರಹ್ಮದಿ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ದಶೇಂದ್ರಿಯಗಳನ್ನು ( ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ, ವಾಕ್ ( ಮಾತು ), ಪಾಣಿ ( ಕೈ ) , ಪಾದ ( ಕಾಲು ), ಪಾಯು ( ಗುದ ) ಮತ್ತು ಉಪಸ್ಥ ( ಜನನಾಂಗ ) ) ಚೆನ್ನಾಗಿ ಇಟ್ಟುಕೊಳ್ಳದೇ, ನವರಂಧ್ರಗಳಾದ ( 2 ಕಣ್ಣುಗಳು,2 ಕಿವಿಗಳು, 2 ಮೂಗಿನ ಹೊಳ್ಳೆಗಳು, ಬಾಯಿ, ಗುದ ಮತ್ತು ಜನನಾಂಗ ) ಹತೋಟಿಯಲ್ಲಿ ಇಟ್ಟುಕೊಳ್ಳದೆ, ಅಷ್ಟಮದಗಳಿಗೆ ಒಳಗಾಗದೆ ( ರೂಪ, ಕುಲ, ಛಲ, ಧನ, ವಿದ್ಯಾ, ರಾಜ್ಯ ಮತ್ತು ತಪೋಮದ ), ಸಪ್ತ ವ್ಯಸನಗಳಿಗೆ ಈಡಾಗದೆ ( ಸ್ತ್ರೀ, ದ್ಯೂತ, ಬೇಟೆ, ಮದ್ಯಪಾನ, ಕಠಿಣವಾದ ಮಾತು , ಕಠಿಣವಾದ ಶಿಕ್ಷೆ ಮತ್ತು ಅರ್ಥದೂಷಣೆ ), ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳಿಗೆ ಒಳಗಾಗದೇ, ಕಾಮನ ಪಂಚಬಾಣಗಳಿಗೆ ವಶನಾಗದೇ ( ಅರವಿಂದ, ಅಶೋಕ, ಆಮ್ರ, ನವಮಲ್ಲಿಕಾ ಮತ್ತು ನೀಲೋತ್ಪಲಗಳೆಂಬ ಹೂಬಾಣಗಳು ), ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಸಾಧಿಸದೇ, ಸತಿ, ಸುತ ದ್ರವ್ಯಗಳೆಂಬ ಮೂರು ಈಷಣಾತ್ರಯಗಳನ್ನು ಕಳಚದೇ ಇದ್ದರೆ, ಸುಖ ಮತ್ತು ದುಃಖಗಳನ್ನು ಸಮನಾಗಿ ಕಂಡು ಏಕಾಕ್ಷರರೂಪನಾದ ಬ್ರಹ್ಮನಲ್ಲಿ ಮನಸ್ಸನ್ನು ಇಟ್ಟಲ್ಲದೆ ಮುಕ್ತಿಯೆಂಬುವುದು ಸಿಗುವುದೆ? ದೊರೆಯುವುದಿಲ್ಲ. ಇಲ್ಲಿ ಸಂಖ್ಯೆಗಳು ಚಮತ್ಕಾರದಿಂದ ಕೂಡಿದ್ದು ಅರ್ಥವತ್ತಾಗಿವೆ.
ಪದ್ಯ 107
*ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ, ನೀತಿಯಾ , ಯತಮಂ ನಿಶ್ಚಲ ಚಿತ್ತಮಂ ನೃಪವರಾಸ್ಥಾನೋಚಿತಾರ್ಥಂಗಳಂ , ಅತಿ ಮಾಧುರ್ಯ ಸುಭಾಷಿತಂಗಳ ಮಹಾಸತ್ಕೀರ್ತಿಯಂ ವಾರ್ತೆಯಂ , ಶತಕಾರ್ಥಂ ಕೊಡದಿರ್ಪುದೇ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*
ಒಳ್ಳೆಯ ಬುದ್ಧಿಯನ್ನು, ಜಾಣತನವನ್ನು, ಗಮಕಕಲೆಯನ್ನು, ಗಂಭೀರತೆಯನ್ನು, ನೀತಿಯನ್ನು, ಸ್ಥಿರವಾದ ಮನಸ್ಸನ್ನು, ರಾಜರ ಆಸ್ಥಾನಕ್ಕೆ ಯೋಗ್ಯವಾದ ವಿಚಾರಗಳನ್ನು, ಅತ್ಯಂತ ಸವಿಯಾದ ಸುಭಾಷಿತಗಳನ್ನು, ಮಹಾ ಕೀರ್ತಿಯನ್ನು ವಿಚಾರಗಳನ್ನು ಈ ಶತಕದ ಅರ್ಥವು ಕೊಡದಿರುವುದೇ ? ಈ ಶತಕದಿಂದ ಇವೆಲ್ಲವೂ ದೊರೆಯುತ್ತವೆ.
______________ಶುಭಂ______________
ನಮಸ್ಕಾರ.
ಇಂದಿಗೆ ಸೋಮೇಶ್ವರ ಶತಕ ಸಂಪೂರ್ಣಗೊಳ್ಳುತ್ತಿದೆ. ತಿರು ಶ್ರೀಧರರ ಪ್ರೇರಣೆಯ ಮಾತುಗಳಿಂದ ಸಂಕ್ಷಿಪ್ತ ರೂಪ ಬರೆಯಲು ಹೊರಟಾಗ ಅದರ ಕ್ಲಿಷ್ಟತೆ ಅರಿವಾಯಿತು. ಪದಶಃ ಅರ್ಥ, ಅನ್ವಯ ಬಿಟ್ಟು ಸರಳವಾಗಿ ಸಾರಾಂಶವನ್ನು ಮಾತ್ರ ಬರೆಯಬೇಕು ಎಂದುಕೊಂಡು ಆರಂಭಿಸಿದೆ.
ಕೆಲವೊಂದು ಪದ್ಯಗಳಲ್ಲಿ ಬರುವ ಪುರಾಣದ ಪ್ರಸಂಗಗಳು, ಪೌರಾಣಿಕ ವ್ಯಕ್ತಿಗಳ ಬಗ್ಗೆ ತಿಳಿಯಲು ಸಾಕಷ್ಟು ಪ್ರಯತ್ನ ಬೇಕಾಯಿತು. ಪುರಾಣನಾಮ ಚೂಡಾಮಣಿ, ಶಬ್ದಕೋಶ, ರಾಮಾಯಣ, ಮಹಾಭಾರತದ ಪ್ರಸಂಗಗಳು ನೆರವಾದವು. ಕೆಲವೊಂದನ್ನು ಬಲ್ಲವರೊಡನೆ ಚರ್ಚಿಸಿ ತೀರ್ಮಾನಕ್ಕೆ ಬರಲಾಯಿತು. ಇಲ್ಲಿ ನನಗೆ ಸಹಕರಿಸಿದವರೆಲ್ಲರಿಗೂ ಧನ್ಯವಾದಗಳು. ಪ್ರತಿದಿನ ಇದನ್ನು ಸೂಕ್ತ ಚಿತ್ರಗಳೊಂದಿಗೆ ಪ್ರಕಟಿಸುತ್ತ ಬಂದ ಶ್ರೀಧರಣ್ಣನಿಗೆ ಕೃತಜ್ಞತೆ ಗಳು. ಅವರ ಚಿತ್ರಗಳನ್ನು ನೋಡಲು ಕಾಯುವಂತಾಗುತ್ತಿತ್ತು. ಸಾಕಷ್ಟು ಜನರ ಪ್ರತಿಕ್ರಿಯೆಗಳು, ಸಲಹೆಗಳು ದೊರೆತು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ಮುಂದಿನ ಕೆಲಸಗಳಿಗೆ ನೆರವಾಗಲಿವೆ. ಎಲ್ಲ ಸಹೃದಯರಿಗೂ ನಮನಗಳು. ಶಾಲಾ ದಿನಗಳಲ್ಲಿ ಕಲಿತ ಏಳೆಂಟು ಪದ್ಯಗಳಷ್ಟೇ ಗೊತ್ತಿದ್ದ ನನಗೆ ಈ ಕೆಲಸ ಕೈಗೆತ್ತಿಕೊಂಡಾಗಷ್ಟೇ ಇದರ ಅಗಾಧತೆಯ ಅರಿವಾದದ್ದು. ಇಲ್ಲಿ ನೀತಿ ಮಾತುಗಳಿವೆ. ಸಮಾಜದ ರೀತಿನೀತಿಗಳು ಬಂದಿವೆ. ಶಕುನಗಳು, ಕನಸುಗಳು, ರಾಜನೀತಿ, ವಿವಿಧ ವೃತ್ತಿಗಳ ಸ್ವರೂಪಗಳು, ಪ್ರಕೃತಿಯ ಚಿತ್ರಗಳು, ಪೌರಾಣಿಕ ಕಥೆಗಳು ಸಾಂಸಾರಿಕ ಸಲಹೆಗಳು ಎಲ್ಲವೂ ಇವೆ. ಅರ್ಥ ಮಾಡಿಕೊಂಡರೆ ಎಲ್ಲರಿಗೂ ಒಳಿತಾಗುವುದು. ಇದನ್ನು ಈ ರೂಪದಲ್ಲಿ ತರಲು ಕಾರಣರಾದ ಅಣ್ಣನಿಗೆ ಮತ್ತೊಮ್ಮೆ ನಮನಗಳು.
ವಿವರಣೆ: ಸುಬ್ಬುಲಕ್ಷ್ಮಿ
ಇಲ್ಲಿಗೆ ಮುಕ್ತಾಯ

ಕಾಮೆಂಟ್‌ಗಳು