ದೀಪಶ್ರೀ ಪ್ರಣವ್
ದೀಪಶ್ರೀ ಪ್ರಣವ್
ದೀಪಶ್ರೀ ಪ್ರಣವ್ ಅವರು ಗಾಯಕಿಯಾಗಿ ಮತ್ತು ಧ್ವನಿ ಕಲಾವಿದೆಯಾಗಿ ಸಾಧನೆ ಮಾಡುತ್ತಿರುವ ಅಪರಿಮಿತ ಉತ್ಸಾಹಿ ಪ್ರತಿಭೆ.
ಡಿಸೆಂಬರ್ 13 ದೀಪಶ್ರೀ ಅವರ ಜನ್ಮದಿನ.
ಅವರು ಜನಿಸಿದ್ದು ಮಡಿಕೇರಿಯಲ್ಲಿ. ಬೆಳೆದದ್ದು ಮೈಸೂರಿನಲ್ಲಿ. ಹೈಸ್ಕೂಲು ಅಧ್ಯಾಪಕರಾಗಿದ್ದ ತಂದೆ ಶ್ರೀಧರ ಅವರು, ಕವಿ ಮತ್ತು ತಬಲ ವಾದಕರಾಗಿಯೂ ಹೆಸರಾದವರು. ತಾಯಿ ಸುಧಾ ಅವರು ಸಹ ಶಾಲಾ ಶಿಕ್ಷಕಿಯಾಗಿದ್ದರಲ್ಲದೆ, ಗಾಯಕಿ ಮತ್ತು ಸಂಗೀತ ಶಿಕ್ಷಕಿಯಾಗಿದ್ದರು.
ದೀಪಶ್ರೀ ಅವರು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಓದಿದ್ದು, ಸಂಗೀತದಲ್ಲೂ ಸಾಧನೆ ಮಾಡಿದ್ದಾರೆ. ವಿದುಷಿ ಆರ್. ಕೆ. ಚಂದ್ರಿಕಾ, ವಿದ್ವಾನ್ ಚಿತ್ರವೀಣಾ ಗಣೇಶ್ ಅವರಲ್ಲಿ ಸಂಗೀತ ಕಲಿತ ದೀಪಶ್ರೀ ಸುಗಮ ಸಂಗೀತದ ಮಹಾನ್ ತಾರೆ ಎಚ್. ಆರ್. ಲೀಲಾವತಿ ಅವರಲ್ಲಿಯೂ ಗಾಯನ ಮಾರ್ಗದರ್ಶನ ಗಳಿಸಿದ್ದಾರೆ. ಭಕ್ತಿಗೀತೆ, ಭಾವಗೀತೆ ಮತ್ತು ಜಾನಪದ ಗೀತೆಗಳ ಗಾಯನದಲ್ಲಿ ದೀಪಶ್ರೀ ಪ್ರಬುದ್ಧತೆ ಮೆರೆದಿದ್ದಾರೆ. ದೀಪಶ್ರೀ ಅವರ ಗಾಯನ ಕಾರ್ಯಕ್ರಮಗಳು ನಾಡಿನ ಪ್ರಸಿದ್ಧ ವೇದಿಕೆಗಳಲ್ಲಿ ಜರುಗಿವೆ.
ದೀಪಶ್ರೀ ಅವರು ದಕ್ಷಿಣ ಶೇಷಾದ್ರಿ, ಸುಕೃತಿ, ಮಂದಿರದ ಬಯಲಿನಲಿ, ಸಿರಿಪಾದ, ಎಂ.ಎಸ್.ಐ.ಎಲ್. ವಚನ ಸಂಗ್ರಹ, ಬಾಹುಬಲಿ ಕುರಿತ ಡ್ಯಾನ್ಸ್ ಬ್ಯಾಲೆ ಮುಂತಾದ ಆಲ್ಬಂಗಳಲ್ಲಿ ಹಾಡಿದ್ದಾರೆ. ಅವರು Zee ಕನ್ನಡದ ಸರಿಗಮಪ ಜ್ಯೂರಿಯ ಪ್ಯಾನೆಲ್ ಸದಸ್ಯರಾಗಿ ಸಹಾ ಕಾರ್ಯನಿರ್ವಹಿಸಿದ್ದಾರೆ. ಧ್ವನಿ ಕಲಾವಿದರಾಗಿ ಸಹಾ ಬೇಡಿಕೆ ಹೊಂದಿರುವ ದೀಪಶ್ರೀ ಅನೇಕ ಅನಿಮೇಷನ್ ಯೋಜನೆಗಳು, ಸಾಕ್ಷ್ಯಚಿತ್ರಗಳು, ಆಡಿಯೋ ಪುಸ್ತಕಗಳು, ಇ-ಕಲಿಕಾ ಯೋಜನೆಗಳು, ಜಾಹಿರಾತು ಮತ್ತು ಜಿಂಗಲ್ಗಳು ಮುಂತಾದವುಗಳಿಗೆ ಧ್ವನಿ ನೀಡಿದ್ದಾರೆ.
ದೀಪಶ್ರೀ ಅವರು ತಮ್ಮ ಪತಿ ಪ್ರಣವ್ ಅವರ ಜೊತೆಗೂಡಿ ಬೆಂಗಳೂರಿನಲ್ಲಿ ಉನ್ನತ ದರ್ಜೆಯ ಪ್ರಣವ್ ಸ್ಟುಡಿಯೋ ಎಂಬ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋ ನಿರ್ವಹಿಸುತ್ತಿದ್ದಾರೆ. ಅವರದೇ ಯೂಟ್ಯೂಬ್ ವಾಹಿನಿ ಸಹ ಇದೆ.
ಆತ್ಮೀಯರಾದ ಪ್ರತಿಭಾನ್ವಿತ ಸಾಧಕಿ ದೀಪಶ್ರೀ ಪ್ರಣವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy Birthday Deepashree Pranav 🌷🌷🌷
ಕಾಮೆಂಟ್ಗಳು