ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯದುಗಿರಿಯ ಮೌನವಿಕಾಸ


ಯದುಗಿರಿಯ ಮೌನ ವಿಕಾಸ

ರವಿ ಮುಳುಗಲು ಹೊನ್ನೀಲಿಯ ಸಂಜೆಯ ಹೊಗರ್ತೋರೆ
ಸುಖ ಸ್ಪರ್ಶದ ಗಿರಿಮಾರುತ ಉಲ್ಲಸವನು ಬೀರೆ
ಖಗ ಸಂಕುಲ ಹಾರುತ್ತಿದೆ ಕರಿ ಮೋಡದ ತೆರದಿ
ಚೆಲುವುಕ್ಕಿದೆ ಮುದ ಮೂಡಿದೆ ಯಾದವಗಿರಿ ನಭದೆ || 

ಬಾನ್ಸರಸಿಯೊಳುಡುಗೊಂಚಲ ಬಿಳಿ ನೈದಿಲೆ ಮಾಲೆ
ಶಶಿಯಂಚೆಯು ಮಲರಡವಿಯೊಳೀಜಾಡುವ ಲೀಲೆ
ಕಲ್ತೊಟ್ಟಿಲ ತೊರೆಹಾಡುವ ಮೃದು ಮಂಜುಳ ಗಾನ
ನೋಡಾಲಿಸು ಕೂಡಿವೆರೆಯೆ ಹೃದಯದ ಸುಮ್ಮಾನ ||

ಋಷಿಮಂಡಲ ಮೃಗಶಿರಗಳು ಗುಡಿಗೋಪುರ ಮುಟ್ಟಿ
ನರಸಿಂಹನ ಶಿರಮುಕುಟಕೆ ಮಣಿಹಾರವ ಕಟ್ಟಿ
ತಮ್ಮೊಲುಮೆಯ ಕಾಣಿಕೆಯನು ಸಲಿಸುತ್ತಿವೆ ನುತಿಸಿ
ಗುಡಿಗಳಶವ ಶಶಿಯಡರಲು ಹರಜೂಟವ ಸ್ಮರಿಸಿ ||

ಅಗೋ ದೂರದಿ ಗಿರಿಪಂಕ್ತಿಯು ಸಾಗರದಲೆಯಂತೆ
ಕಾಣುತ್ತಿದೆ ಮಬ್ಬೆಳಕೊಳು ಸ್ಥಿರತೆಯ ತಳೆದಂತೆ
ಬಾನ್ ಭೂಮಿಯನೊಂದು ಮಾಡುವ ಶಿಶುಚಂದ್ರನ ಕಾಂತಿ
ನಿಶ್ಯಬ್ದತೆ ಮತಿಗೀವುದು ಭೂ ವಿಲಯದ ಭ್ರಾಂತಿ ||

ಏನ್ ಶಾಂತಿಯು ಸೌಂದರ್ಯವು ಯಾದವಗಿರಿ ನಭದಿ
ಏನ್ ಮೌನವು ನೀರವತೆಯು ಮಲೆತುದಿ ದೇಗುಲದಿ
ಆ ಶಾಂತಿಯನೊಂದು ಮಾಡುವ ಉಡುಲೋಕದ ಗಾನ
ಸಮ ಶೃತಿ ಲಯ ಹೊಂದಿರುವೀ ತನು ಮುಟ್ಟಿದ ಗಾನ ||

ಸಾಹಿತ್ಯ: ಪು.ತಿ. ನರಸಿಂಹಾಚಾರ್

ಹುಡುಕಿಕೊಟ್ಟವರು:. Lrphks Kolar

Photo: At Melukote in December 2012


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ