ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚೆನ್ನಮ್ಮ ಹಳ್ಳಿಕೇರಿ

 

ಚೆನ್ನಮ್ಮ ಹಳ್ಳಿಕೇರಿ


ಮಹಾನ್ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಆಚಾರ್ಯ ವಿನೋಬಾ ಭಾವೆ ಅವರೊಂದಿಗೆ ಸಕ್ರಿಯರಾಗಿದ್ದ ಚೆನ್ನಮ್ಮ ಹಳ್ಳಿಕೇರಿ ಅವರು ನಿಧನರಾಗಿದ್ದಾರೆ.

ರಾಷ್ಟ್ರಧ್ವಜ ಹಿಡಿದು ಜಯಕಾರ ಹಾಕಿದ ಚೆನ್ನಮ್ಮ ಅವರ ತಂದೆ ಹಾಗೂ ತಾಯಿಯನ್ನು ಪೊಲೀಸರು ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಹಾಕಿದರು. ಆಗ ಮಗು ಚೆನ್ನಮ್ಮನಿಗೆ ಇನ್ನೂ ಎರಡು ವರ್ಷ. ಕೂಸಿಗೆ ಪ್ರವೇಶವಿಲ್ಲ ಎಂದಾಗ ಅಲ್ಲಿ ಕೋಲಾಹಲವೇ ಉಂಟಾಗಿತ್ತು. ಹೀಗೆ 1930ರಲ್ಲಿ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮ ಅವರು ಎರಡು ವರ್ಷದವರಿದ್ದಾಗಲೇ ತಂದೆ-ತಾಯಿ ಜೊತೆಗೆ ಜೈಲು ಪ್ರವೇಶ ಮಾಡುವ ಮೂಲಕ ದೇಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಜೈಲಿನಲ್ಲಿ ವಿನೋಬಾ ಭಾವೆ ಸಹ ಇದ್ದು, ಕೈದಿಗಳಿಗೆ ಪ್ರವಚನ ಹಾಗೂ ನೀಡಿದ ಸಂಸ್ಕಾರ ಇವರ  ಮೇಲೂ ಪ್ರಭಾವ ಬೀರಿತು. 

ಜೈಲಿನ ನಂತರ ಮನೆಗೆ ಬಂದಾಗ ಚೆನಮ್ಮನವರು ಹುಟ್ಟಿದ ಹೊಸರಿತ್ತಿಯ ಇವರ  ಕುಟುಂಬದ ಸ್ಥಿತಿ ತೀರಾ ಕಠೋರವಾಗಿತ್ತು. ತಂದೆ-ತಾಯಿ ಜೊತೆಗೆ ಇವರೂ ತೀರಾ ಸಂಕಷ್ಟದ ಜೀವನ ನಡೆಸಿದರು. ಓದು-ಬರಹ ಸಹ ಇವರ ಅದೃಷ್ಟಕ್ಕೆ ದೊರೆಯಲಿಲ್ಲ. 12ನೇ ವಯಸ್ಸಿನಲ್ಲಿ ಕೂಲಿ, ದನ ಕಾಯೋ ಕೆಲಸವನ್ನು ಮಾಡಿದರು. "ಊರಿನ ದೇವಿ ಮುಂದೆ ಇಟ್ಟಿದ್ದ ಬೆಣ್ಣೆ ತಿಂದು ಜೀವ ಗಟ್ಟಿಮಾಡಿಕೊಂಡಿದ್ದೇನೆ" ಎಂದು ನೆನಪಿಸಿಕೊಳ್ಳುತ್ತಿದ್ದರು.

"ಗಂಡು ಮಗು ಇದ್ದಿದ್ದರೆ ಮನೆ ಉದ್ಧಾರ ಆಗುತ್ತಿತ್ತು" ಎಂಬ ತಂದೆ ಹೇಳಿದ ಮಾತು ಚೆನ್ನಮ್ಮನ ಮನಸ್ಸಿಗೆ ತುಂಬ ನೋವು ತಂದಿತು. ಆಗಲೇ ಮನಸ್ಸು ಬದಲಿಸಿ ಮನೆ ಬಿಡುವ ಸಂಕಲ್ಪ ಮಾಡಿದರು. ದೇಶದ ಮೇಲಿನ ಅಭಿಮಾನವು ಬ್ರಹ್ಮಚರ್ಯೆ ಸಂಕಲ್ಪಕ್ಕೂ ನಾಂದಿಯಾಯಯಿತು. 16ನೇ ವಯಸ್ಸಿನಲ್ಲಿ ಮನೆ ತೊರೆದರು . ಕಸ್ತೂರಿ ಬಾ ಗ್ರಾಮ ಸೇವಾ ಕೇಂದ್ರಗಳಲ್ಲಿ ತರಬೇತಿ ಪಡೆದು ಇಡೀ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಾದಯಾತ್ರೆ ಮೂಲಕ ಸ್ವಚ್ಛತೆ, ಮಕ್ಕಳಿಗೆ ಶಿಕ್ಷ ಣ, ಪ್ರಾರ್ಥನೆ ಮೂಲಕ ರಾಜ್ಯದ ಜನರ ಮನ ಗೆದ್ದರು.

ಪ್ರಗತಿಶೀಲ ಚಳವಳಿಗಳಲ್ಲಿ ಭಾಗಿಯಾಗಿದ್ದ ಚೆನ್ನಮ್ಮ ಅವರು ವಿನೋಬಾ ಭಾವೆಯವರ ಅನುಯಾಯಿಯಾಗಿ ಭೂದಾನ ಚಳವಳಿಯಲ್ಲಿ ಭಾಗಿಯಾದರು. ಚೆನ್ನಮ್ಮ 1959ರಲ್ಲಿ ವಿನೋಬಾ ಭಾವೆ ಅವರು ಮಹಾರಾಷ್ಟ್ರದಲ್ಲಿ ಆರಂಭಿಸಿದ ಪೌನಾರ್ ಆಶ್ರಮದಲ್ಲಿ ವಾಸ ಆರಂಭಿಸಿದರು. ಓದು-ಬರಹ ಕಲಿಯಲಿದ್ದರೂ ತಮ್ಮ ಸೇವೆಯಿಂದಾಗಿ ಇಂಗ್ಲೆಂಡ್‌ ಅಲ್ಲದೇ 16 ರಾಷ್ಟ್ರಗಳನ್ನು ಕಂಡು ಅಲ್ಲೆಲ್ಲ ಭಾಷಣ ಮಾಡಿದ್ದಾರೆ. ಒಟ್ಟಾರೆ ಸಾಮೂಹಿಕ ಶ್ರಮ, ಸ್ವಾವಲಂಬನೆಯ ಜೀವನ ಇವರದಾಗಿತ್ತು. ಇದನ್ನೇ ಇತರರಿಗೂ ಕಲಿಸಿದ್ದರು. 

ಚೆನ್ನಮ್ಮ ಹಳ್ಳಿಕೇರಿ ಅವರಿಗೆ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಚೆನ್ನಮ್ಮ ಹಳ್ಳಿಕೇರಿ ಅವರು 2023ರ ಡಿಸೆಂಬರ್ 20ರಂದು ತಮ್ಮ 93ನೇ ವಯಸ್ಸಿನಲ್ಲಿ ಈ ಲೋಕವನ್ನು ಅಗಲಿದ್ದಾರೆ.


Respects to departed soul Great Gandhian Chennama Hallikeri



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ