ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಈಶ್ವರ ಸಣಕಲ್ಲ


ಈಶ್ವರ ಸಣಕಲ್ಲ


“ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?" 

ಹೀಗೆ ಹೃದಯಂತರಾಳದಿಂದ ಹಾಡಿದವರು ಕವಿ ಈಶ್ವರ ಸಣಕಲ್ಲ ಅವರು.  

ಈಶ್ವರ ಸಣಕಲ್ಲ ಅವರು 1906ರ ಡಿಸೆಂಬರ್ 20ರಂದು ಗೋಕಾಕ ತಾಲ್ಲೂಕಿನ ರಬಕವಿಯಲ್ಲಿ ಜನಿಸಿದರು. ಅವರ ತಂದೆ ಮಹಾರುದ್ರಪ್ಪ ಅವರು ಮತ್ತು  ತಾಯಿ ನೀಲಮ್ಮ ಅವರು. ಈಶ್ವರ ಸಣಕಲ್ಲ ಅವರ ಪ್ರಾರಂಭಿಕ ವಿದ್ಯಾಭ್ಯಾಸ ತಾಯಿಯ ತೌರೂರಾದ ಯಾದವಾಡ ಮತ್ತು ರಬಕವಿಯಲ್ಲಿ ನಡೆಯಿತು. ಪ್ರೌಢಶಿಕ್ಷಣವನ್ನು ಬೆಳಗಾವಿಯ ಜಿ.ಎ. ಹೈಸ್ಕೂಲಿನಲ್ಲಿ ಪೂರೈಸಿದರು. 

ಸಣಕಲ್ಲರಿಗೆ ಬಾಲ್ಯದಿಂದಲೇ ಸಾಹಿತ್ಯದಲ್ಲಿ  ಆಸಕ್ತಿ ಮೂಡಿತ್ತು. ಹೈಸ್ಕೂಲಿನಲ್ಲಿದ್ದಾಗಲೇ ಹಲವಾರು ಕವನಗಳನ್ನು ಬರೆದಿದ್ದರು.  ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಶಿವಾನಂದ ಸ್ವಾಮಿಗಳವರ 'ಬ್ರಹ್ಮಚರ‍್ಯವೇ ಜೀವನ, ವೀರ‍್ಯನಾಶವೇ ಮೃತ್ಯು' ಗ್ರಂಥದ ಕನ್ನಡಾನುವಾದ ಮಾಡಿದರು.

1929ರಲ್ಲಿ  ಮೆಟ್ರಿಕ್ ಹಾಗೂ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಈಶ್ವರ ಸಣಕಲ್ಲ ಅವರು ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರಿದರು. ಹಣಕಾಸಿನ ತೊಂದರೆಯಿಂದ ಕಾಲೇಜು ಶಿಕ್ಷಣಕ್ಕೆ ಸಂಚಕಾರ ಒದಗಿ ಉದ್ಯೋಗಕ್ಕೆ ಸೇರಿದ್ದು ರಬಕವಿಯಲ್ಲಿ. ಮಿತ್ರ ಸಮೂಹ, ಖಾದಿ ಭಂಡಾರ, ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ‘ಶಿವಾನುಭವ’ ಮತ್ತು ನವಕರ್ನಾಟಕದ ಪತ್ರಿಕೆಗಳಲ್ಲಿ ಪ್ರಕಟಣಾ ಸಹಾಯಕರಾಗಿ ಕೆಲಸ ಮಾಡಿದರು. ನಂತರ ಹರ್ಡೇಕರ್ ಮಂಜಪ್ಪನವರ ಆಲಮಟ್ಟಿ ಆಶ್ರಮದಲ್ಲಿ ಕೆಲಕಾಲ ಕೆಲಸ ಮಾಡಿದರು. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ ನಿರ್ವಹಿಸಿದರು.  ಬೆಳಗಾವಿಯ ಗ್ರಾಮಸೇವಕ ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ಮಾಡಿದರು.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಆರ್.ಸಿ. ಹಿರೇಮಠರಿಂದ ಬಂದ ಕರೆಯ ಮೇರೆಗೆ ಅಲ್ಲಿನ ಸಂಶೋಧನೆ ಶಾಖೆಯಲ್ಲಿ 1962ರಿಂದ ಮೊದಲುಗೊಂಡು ಒಂದು ದಶಕದ ಕಾಲ ದುಡಿದರು.  ಎಷ್ಟೇ ದುಡಿದರೂ ಕುಟುಂಬದ ನಿರ್ವಹಣೆ ಮಾಡಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಈಶ್ವರ ಸಣಕಲ್ಲ ಅವರ ಮೊದಲ ಕವನ ಸಂಕಲನವಾದ ‘ಕೋರಿಕೆ’ 1934ರಲ್ಲಿ ಪ್ರಕಟಗೊಂಡಿತು.  ಬಟ್ಟೆ, ಹುಲ್ಕಲ್ಗೆ ಕಿಡಿ ಅವರ ಇತರ ಕಾವ್ಯಸಂಕಲನಗಳು.  ಗ್ರಾಮೋದ್ಧಾರ ಅವರ ಅನುವಾದ.  ಸಂಸಾರ ಸಮರ ಅವರ ಕಾದಂಬರಿ.  ಬ್ಯಾಂಕುಗಳು ಅವುಗಳ ವ್ಯವಹಾರ, ನೆದರ್ಲೆಂಡಿನ ಸಹಕಾರದ ನಸುನೋಟ ಅವರ ವಿಶಿಷ್ಟ ಕೃತಿಗಳು.  ಕರ್ನಾಟಕದ ಒಕ್ಕಲುತನ, ಸಹಕಾರಿ ಬ್ಯಾಂಕಿನ ಬೆಳ್ಳಿಹಬ್ಬ ಅವರ ಸಂಪಾದನೆಗಳು. ಸೊನ್ನಲಾಪುರ ಶ್ರೀ ನಾಲ್ವತ್ವಾಡ ಶರಣ ಚರಿತ್ರೆ, ಶ್ರೀ ಮಡಿವಾಳ ಶಿವಯೋಗಿ ಮುಂತಾದವು ವ್ಯಕ್ತಿ ಚಿತ್ರಗಳು.  ಹೀಗೆ ಅವರ ಸುಮಾರು 20 ಕೃತಿಗಳು ಪ್ರಕಟಗೊಂಡಿವೆ. 

ಈಶ್ವರ ಸಣಕಲ್ಲ ಅವರ 'ಬಟ್ಟೆ’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಥಮ ಬಹುಮಾನ ಸಂದಿತ್ತು. 1980ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.  ರಬಕವಿಯ ಲಯನ್ಸ್ ಕ್ಲಬ್ಬಿನಿಂದ ಅದ್ದೂರಿ ಸನ್ಮಾನ ಸಂದಿತು.

ಈಶ್ವರ ಸಣಕಲ್ಲ ಅವರು 1984ರ ಡಿಸೆಂಬರ್ 3 ರಂದು ಈ ಲೋಕವನ್ನಗಲಿದರು.

ಅವರ ಕೋರಿಕೆ ಕವಿತೆ ಮನದಾಳವನ್ನು ಮುಟ್ಟುವ ಪರಿ ಅನನ್ಯ. 

ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?

ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?

ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?

ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’, ಎನಲೆನ್ನನವನೆ ಕಾವಂ!

ಈ ಮಹಾನ್ ಚೇತನಕ್ಕೆ ನಮನ ನಮನ. ಇಂತಹ ಚೇತನದ  ಮನನ ಸ್ಮರಣ ನಮ್ಮ ಕಾಯುತಿರಲಿ

Photo courtesy: Kamat.com

On the birth anniversary of great poet Eshwara Sanakal 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ