ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧನಂಜಯ ಕುಲಕರ್ಣಿ


 ಧನಂಜಯ ಕುಲಕರ್ಣಿ 


ಧನಂಜಯ ಕುಲಕರ್ಣಿ ಹೆಸರಾಂತ ರಂಗಕರ್ಮಿ.  

ಫೆಬ್ರುವರಿ 22, ಧನಂಜಯ ಕುಲಕರ್ಣಿ ಅವರ ಜನ್ಮದಿನ.  ಮೂಲತಃ ಬೆಳಗಾವಿಯವರಾದ ಇವರ ವಿದ್ಯಾಭ್ಯಾಸ ಧಾರವಾಡದಲ್ಲಿ ನಡೆಯಿತು. ಇವರು ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಪ್ರತಿಷ್ಟಿತ ಬಹುರಾಷ್ಟ್ರೀಯ ಉದ್ಯಮದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ 
ಕಾರ್ಯನಿರ್ವಹಿಸುತ್ತಿದ್ದಾರೆ.

ಧನಂಜಯ ಕುಲಕರ್ಣಿ ಅವರು ಬಾಲ್ಯದಿಂದಲೇ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡು ಧಾರವಾಡದ ಸಮುದಾಯ ಹಾಗೂ ಇಫ್ಟಾ ಸಂಸ್ಥೆಯೊಂದಿಗೆ ನಂಟನ್ನಿಸಿರಿಸಿಕೊಂಡು ಸಾಕ್ಷರತೆ, ಪಾನ ನಿರೋಧ, ವರದಕ್ಷಿಣೆ ಹಾಗೂ ಜ್ಞಾನವಿಜ್ಞಾನ ಜಾಥಾ ಮುಂತಾದ ಸಮಾಜಮುಖಿ ರಂಗಪ್ರಯೋಗಗಳಲ್ಲಿ ಭಾಗವಹಿಸಿದವರು. 

ಜಿ. ಎನ್. ಮೋಹನ್ Gn Mohan  ಅವರು ಧನಂಜಯ ಕುಲಕರ್ಣಿ ಅವರ ಬ್ಲಾಗುಗಳ ಬರಹ ‘ನೆನಪುಗಳ ರಾವೀ ನದಿಯ ದಂಡೆ.... ' ಸಂಕಲನದ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ: “ಧನಂಜಯ ಹೇಳಿ ಕೇಳಿ ನಾಟಕವೆಂಬ ಗುಂಗೀ ಹುಳುವಿನ ಬೆನ್ನತ್ತಿದಾತ. ಹಾಗಾಗಿಯೇ ಇಂದು ಇಲ್ಲಿ, ನಾಳೆ ಅಲ್ಲಿ, ಇಂದು ಈ ಬಣ್ಣ, ನಾಳೆ ಯಾವ ಬಣ್ಣವಾದರೂ ಸೈ, ಇಂದು ಈ ಪೋಷಾಕು, ನಾಳೆ ಇನ್ನೇನೋ.. ಎನ್ನುವಂತೆ ಆ ಗುಂಗೀ ಹುಳದ ಬೆನ್ನತ್ತಿ ನಡೆದಿದ್ದಾರೆ. ಆ ಬೆನ್ನತ್ತಿ ನಡೆದವನ ಒಳಗೆ ಒಬ್ಬ ಪತ್ರಕರ್ತನಿದ್ದಾನೆ, ರಂಗಕರ್ಮಿಯಿದ್ದಾನೆ, ಅಸಡ್ದಾಳ ತುಂಟನೊಬ್ಬನಿದ್ದಾನೆ, ಕಾಡುವ ಕಾಲೇಜು ಹುಡುಗನಿದ್ದಾನೆ..ಹಾಗೇ ಕಾಳಜಿ ಮಾಡುವ ಧನಂಜಯನೂ ಇದ್ದಾನೆ. ಧನಂಜಯರಿಗೆ ಮತ್ತೆ ಮತ್ತೆ ನೆನಪುಗಳ ಲೋಕಕ್ಕೆ ಜಿಗಿಯುವ ಹುಚ್ಚಿದೆ. ಬೆಳಕನ್ನು ಕಂಡ ತಕ್ಷಣ ತಾನೇ ಹಾರಿ ಹೋಗಿ ಡಿಕ್ಕಿ ಹೊಡೆದು ರೆಕ್ಕೆ ಸುಟ್ಟುಕೊಳ್ಳುವ ಪತಂಗದಂತೆ.. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವನ್ನು ಹಚ್ಚಿಕೊಂಡು ಇವರೇ ಹಳೆಯ ನೆನಪುಗಳ ಬೆನ್ನಟ್ಟಿ ಹೋಗುತ್ತಾರೆ. ಇವರು ನೆನಪುಗಳ ಬೆನ್ನತ್ತುವ ತೀವ್ರತೆ ಕಂಡು ಅಚ್ಚರಿಯಿಂದ ನಿಂತಿದ್ದೇನೆ. ಧನಂಜಯ ತಾವೇ ಬಣ್ಣಿಸಿಕೊಳ್ಳುವಂತೆ ಒಬ್ಬ 'ಮಧುಗಿರಿ ಪಟ್ಟಣಕೆ ಹೋದ ಸಿದ್ಧಯ್ಯನೆಂಬ ಅಗಸ'. ಸಿದ್ಧಲಿಂಗಯ್ಯ ಅವರ 'ಕತ್ತೆ ಮತ್ತು ಧರ್ಮ' ಕವಿತೆಯಲ್ಲಿ ಸಿದ್ಧಯ್ಯ ಮತ್ತು ಅವನ ಕತ್ತೆಯ ಕಥೆ ಬರುತ್ತದೆ. ಕತ್ತೆಯನ್ನು ಮಣ್ಣು ಮಾಡಿದ ಜಾಗದಲ್ಲಿ ದೇಗುಲವೇ ಎದ್ದು ನಿಲ್ಲುವುದನ್ನು ಕಂಡ ಸಿದ್ಧಯ್ಯ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಾನೆ. ಹಾಗೆ ಧನಂಜಯ ಮತ್ತೆ ಮತ್ತೆ ತಮ್ಮ ಹಳೆಯ ನೆನಪುಗಳಿಗೆ ಮಾತ್ರವಲ್ಲ, ತಮ್ಮ ಹಳೆಯ ನೆನಪುಗಳ ಜಾಗಕ್ಕೂ ಹೋಗಿ ನಿಲ್ಲುತ್ತಾರೆ. ಹಿಂದೆ ತಾನೊಮ್ಮೆ ರಾತ್ರಿ ಮಲಗಬೇಕಾಗಿ ಬಂದ ಹೊಸಪೇಟೆ ಬಸ್ ನಿಲ್ದಾಣದ ಸೀಟು, ಹದಿನಾರು ವರ್ಷಗಳ ನಂತರ ಸಿಕ್ಕ ಗೆಳೆಯ ಪ್ರಮೋದ ತುರುವಿಹಾಳ, ಶಾಲೆಯಲ್ಲಿ ಟೀಚರ್ ಆಗಿದ್ದ ಲೋಕುರ್ ಮೇಡಂ, ದ ರಾ ಬೇಂದ್ರೆ ಕೈನಿಂದ ಪಡೆದ ಆ ಬಹುಮಾನ, ಬೆಂಗಳೂರಿನ ಮೈದಾನದಲ್ಲಿ ಹಾರಿಸಿದ ಗಾಳಿಪಟ, ವಿಮಾನ ನಿಲ್ದಾಣದಲ್ಲಿ ಕಂಡ ಗುಬ್ಬಚ್ಚಿ, ಹಂಪಿಯ ಲೋಟಸ್ ಮಹಲ್, ಅದೇ ಮಧು ದೇಸಾಯಿ ಕನಸುಗಳು, ನರಸಿಂಹನ ತರಲೆ, ಬಂಡು ಕುಲಕರ್ಣಿಯ ಅಮಾಯಕತೆ, ಅದೇ ರವಿ ಕುಲಕರ್ಣಿ, ದಿಲಾವರ್, ಸುರೇಶ. ತಾವೇ ಹುಟ್ಟುಹಾಕಿದ ಕಾಲ್ಪನಿಕ ಪಂಕಜಾ, ಶಾಯರಿಗಳ ತೇಲಿ ಬಿಡುವ ಇಟಗಿ ಈರಣ್ಣ, ತಮ್ಮನೆಂದು ತಬ್ಬಿಕೊಂಡ ಜಿ ಎಚ್ ರಾಘವೇಂದ್ರ, ಆ 'ಹಲ್ಲಾ ಬೋಲ್', ಆ ಸಫ್ದರ್ ಹಶ್ಮಿ, ಹೀಗೆ ಧನಂಜಯರ ನೆನಪಿನ ಬುತ್ತಿ ದ್ರೌಪದಿಯ ಕೈನಲ್ಲಿದ್ದ ಅಕ್ಷಯ ಪಾತ್ರೆಯಂತೆ. ಎಷ್ಟು ಮಂದಿ ಎಷ್ಟು ದಿನ ತಿಂದು ಮುಗಿಸಿದರೂ ಬೆಳೆಯುತ್ತಲೇ ಹೋಗುವ ಭಂಡಾರ."

ಧನಂಜಯ ಕುಲಕರ್ಣಿ ಅವರು ಅಭಿನಯ, ನಿರ್ದೇಶನ, ಬೆಳಕು ಹೊಂದಾಣಿಕೆ, ಸಂಗೀತ, ಪ್ರಸಾಧನ ಕಲೆ ಹೀಗೆ ರಂಗಭೂಮಿಯ ಎಲ್ಲ ವಿಭಾಗಗಳಲ್ಲೂ ಪಾಲ್ಗೊಂಡಿದ್ದಾರೆ.  ರಾವೀ ನದಿಯ ದಂಡೆಯಲ್ಲಿ, ಧಫನ್, ಸ್ಪಾರ್ಟಕಸ್, ರಾಕ್ಷಸ, ನಾಯೀಕಥೆ, ಜೋಕುಮಾರಸ್ವಾಮಿ, ಕೃಷ್ಣ ಪಾರಿಜಾತ, ಬೇಲಿ ಮತ್ತು ಹೊಲ, ಒಂದು ಬೀದಿಯ ಕಥೆಯಲ್ಲಿ, ತಬರನ ಕಥೆ, ‌ಹುಚ್ಚೆರ ಸಂತೆ, ಜತೆಗಿರುವನು ಚಂದಿರ ಮುಂತಾದ ಅನೇಕ ಪ್ರಸಿದ್ಧ ನಾಟಕಗಳು ಅವರ ಪಾಲ್ಗೊಳ್ಳುವಿಕೆಯಲ್ಲಿ ಪ್ರಕಾಶಿಸಿವೆ. ಅವರು ಉತ್ತಮ ಮಾತುಗಾರಿಕೆ, ಗಾಯನ ಮತ್ತು ಬರಹಗಳಿಗೂ ಪ್ರಸಿದ್ಧಿ. 

ಧನಂಜಯ ಕುಲಕರ್ಣಿ ಮುಂಬೈನ ಪ್ರತಿಷ್ಠಿತ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಮೂರು ಬಾರಿ ಶ್ರೇಷ್ಠ ಬಹುಮಾನ ಗೆದ್ದು ಹ್ಯಾಟ್ರಿಕ್ ಸಾಧಿಸಿದ ಕೀರ್ತಿವಂತರು. ಧನಂಜಯ ಕುಲಕರ್ಣಿ ಅವರಿಗೆ ಅನೇಕ ಪ್ರಸಿದ್ಧ ರಂಗಸಂಘಟನೆಗಳಿಂದ ಪ್ರಶಸ್ತಿ ಗೌರವಗಳು ಸಂದಿವೆ.

ಧನಂಜಯ ಕುಲಕರ್ಣಿ ಅವರು ರಂಗಕಲೆ, ಸಾಹಿತ್ಯಲೋಕ ಮತ್ತು ಸಾಮಾಜಿಕ ಕಾಳಜಿಗಳ ಕುರಿತಾಗಿ  ದಿಟ್ಟ ನೇರ ನ್ಯಾಯಯುತ ಮಾತಿಗೆ ಹೆಸರಾದವರು.   ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Happy birthday Dhananjaya Kulkarni Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ