ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತ್ಯಾಗರಾಜ ಭಾಗವತರ್


 ತ್ಯಾಗರಾಜ ಭಾಗವತರ್


ಮಾಯಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ಕಳೆದ ಶತಮಾನದ  ಪ್ರಸಿದ್ಧ ನಟ, ನಿರ್ಮಾಪಕ ಮತ್ತು ಕರ್ನಾಟಕ ಸಂಗೀತದ ಹೆಸರಾಂತ ಗಾಯಕರಾಗಿದ್ದರು@. ಅವರನ್ನು ತಮಿಳು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎಂದು ಪರಿಗಣಿಸಲಾಗಿದೆ.

ತ್ಯಾಗರಾಜ ಭಾಗವತರು 1910ರ ಮಾರ್ಚ್ 1 ರಂದು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ತಂಜಾವೂರ್ ಜಿಲ್ಲೆಯ ಮೈಲಾಡುತುರೈ ಪಟ್ಟಣದಲ್ಲಿ ಜನಿಸಿದರು. 

ತ್ಯಾಗರಾಜ ಭಾಗವತರು 1920 ರ ದಶಕದ ಉತ್ತರಾರ್ಧದಲ್ಲಿ ಶಾಸ್ತ್ರೀಯ ಸಂಗೀತ ಗಾಯಕರಾಗಿ ಮತ್ತು ರಂಗ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1934 ರಲ್ಲಿ, ಅವರು ಪಾವಲಕ್ಕೋಡಿ ಚಿತ್ರದ ಮೂಲಕ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು, ಅದು ಯಶಸ್ವಿಯಾಯಿತು.

1934 ರಿಂದ 1959 ರವರೆಗೆ, ಭಾಗವತರ್ 14 ಚಿತ್ರಗಳಲ್ಲಿ ನಟಿಸಿದರು, ಅದರಲ್ಲಿ 10 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡವು. ಒಟ್ಟಾರೆಯಾಗಿ, ಅವರು 14 ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರ ಬಹುತೇಕ ಚಿತ್ರಗಳು ದಾಖಲೆ ನಿರ್ಮಿಸಿದವು. ತಿರುನೀಲಕಂದರ್, ಅಂಬಿಕಾಪತಿ, ಚಿಂತಾಮಣಿ ಮೊದಲ ಅತ್ಯಂತ ಯಶಸ್ವಿ ತಮಿಳು ಚಲನಚಿತ್ರಗಳು ಇವುಗಳಲ್ಲಿ ಸೇರಿವೆ. 1944 ರಲ್ಲಿ ಬಿಡುಗಡೆಯಾದ ಹರಿದಾಸ್, ಚೆನ್ನೈ ಬ್ರಾಡ್ವೇ ಥಿಯೇಟರ್ನಲ್ಲಿ ಮೂರು ವರ್ಷಗಳ ಕಾಲ ನಿರಂತರವಾಗಿ ಓಡಿತು. ಇದು 1944, 1945 ಮತ್ತು 1946 ರ ಮೂರು ದೀಪಾವಳಿ ಹಬ್ಬಗಳಿಗೆ ಸಾಕ್ಷಿಯಾಯಿತು. 1934 ಮತ್ತು 1944 ರ ನಡುವೆ, ಭಾಗವತರ್ ಪಾವಲಕೋಡಿ, ಸಾರಂಗದರ (1935), ಸತ್ಯಶೀಲನ್ (1936), ಚಿಂತಾಮಣಿ, ಅಂಬಿಕಾಪತಿ (1937), ತಿರುನೀಲಕಂಠರ್ (1939), ಅಶೋಕ್ ಕುಮಾರ್ (1941), ಶಿವಕವಿ (1941) ಮತ್ತು ಹರಿದಾಸ್ ಎಂಬ 9 ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು. 

ತ್ಯಾಗರಾಜ ಭಾಗವತರ್ ಅವರನ್ನು 1944 ರಲ್ಲಿ ಲಕ್ಷ್ಮೀಕಾಂತನ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿ ಬಂಧಿಸಲಾಯಿತು.  1947 ರಲ್ಲಿ ಪ್ರಿವಿ ಕೌನ್ಸಿಲ್ನ ನ್ಯಾಯಾಂಗ ಸಮಿತಿಯ ತೀರ್ಪು ಅವರ ಪರವಾಗಿ ಬಂದು ಬಿಡುಗಡೆಯಾಗುವ ಮೊದಲು,  ಮೂರು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. ಬಂಧನದ ನಂತರ ಭಾಗವತರ ವೃತ್ತಿಜೀವನ ಕುಸಿಯಿತು. ಜೈಲಿನಿಂದ ಬಿಡುಗಡೆಯಾದ ನಂತರ ಅವರು ತಮಿಳು ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರೂ, ಅಮರಕವಿ ಮತ್ತು ಶ್ಯಾಮಲ ಹೊರತಾಗಿ ಅವರ ಬೇರ್ಯಾವ ಚಿತ್ರವೂ ಗೆಲುವು ಕಾಣಲಿಲ್ಲ. 

ತ್ಯಾಗರಾಜ ಭಾಗವತರು ತಮ್ಮ ಎತ್ತರದ ಸ್ವರಗಳನ್ನು ಸಂವೇದಿಸುವ ಶಕ್ತಿಯುತ ಧ್ವನಿ ಮತ್ತು ಸುಮಧುರ ಕಂಠಕ್ಕೆ  ಮೆಚ್ಚುಗೆ ಪಡೆದಿದ್ದರು. ವಿಮರ್ಶಕರು ಮತ್ತು ಚಲನಚಿತ್ರ ಇತಿಹಾಸಕಾರರು ತ್ಯಾಗರಾಜ ಭಾಗವತರನ್ನು ತಮಿಳು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ಎಂದು ಪರಿಗಣಿಸುತ್ತಾರೆ.

ತ್ಯಾಗರಾಜ ಭಾಗವತರು ಮಧುಮೇಹದಿಂದ ತಮ್ಮ 49 ನೇ ವಯಸ್ಸಿನಲ್ಲಿ 1959 ನವೆಂಬರ್ 1ರಂದು ನಿಧನರಾದರು.

On the Birth Anniversary of great actor and musician M. K. Thyagaraja Bhagavatar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ