ಚಂದ್ರಕಾಂತ್ ಆಚಾರ್ಯ
ಕೆ. ವಿ. ಚಂದ್ರಕಾಂತ್ ಆಚಾರ್ಯ
ವೃತ್ತಿಯಲ್ಲಿ ವಿಜ್ಞಾನಿಗಳಾದ ಚಂದ್ರಕಾಂತ್ ಆಚಾರ್ಯ ಅವರು 300ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಅಪೂರ್ವ ಉತ್ಸಾಹಿ ಹೃದಯವಂತರು.
ಚಂದ್ರಕಾಂತ್ ಆಚಾರ್ಯ ಅವರು 1966ರ ಮಾರ್ಚ್ 13ರಂದು ಜನಿಸಿದರು. ಶಿವಮೊಗ್ಗದಲ್ಲಿ ಶಾಲಾ ವಿದ್ಯಾಭ್ಯಾಸದ ನಂತರ ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವ್ಯಾಸಂಗ ನಡೆಸಿದರು.
ಚಂದ್ರಕಾಂತ್ ಆಚಾರ್ಯ ಅವರು 1995 ವರ್ಷದಿಂದ ಮೊದಲ್ಗೊಂಡು ಭಾರತೀಯ ರಕ್ಷಣಾ ಇಲಾಖೆಯ ರಾಡಾರ್ ಸಂಶೋಧನಾ ವಿಭಾಗದ ಹಲವು ಶಾಖೆಗಳಲ್ಲಿ ಕಾರ್ಯನಿರ್ವಹಿಸಿ, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ CQUAR ನಲ್ಲಿ ವೃತ್ತಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಪರಿಸರ, ಛಾಯಾಗ್ರಹಣ, ಪ್ರವಾಸ, ಸಾಹಿತ್ಯ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಪ್ರೇಮಿಗಳಾದ ಚಂದ್ರಕಾಂತ್ ಆಚಾರ್ಯ ಅವರು ಇದುವರೆವಿಗೂ 309 ಬಾರಿ ರಕ್ತದಾನ ಮಾಡಿರುವ ಉತ್ಸಾಹಿ ಹೃದಯವಂತರು.
ಮಹಾನ್ ರೇಖಾಚಿತ್ರ ಕಲಾವಿದರಾದ ನಂಜುಂಡ ಸ್ವಾಮಿ ಅವರು ತಮ್ಮ ಶಾಲಾ ಸಹಪಾಠಿಯಾಗಿದ್ದ ಚಂದ್ರಕಾಂತ್ ಆಚಾರ್ಯರ ಕುರಿತ ತಮ್ಮ ರೇಖಾಚಿತ್ರದೊಂದಿಗೆ ಹೇಳಿರುವ ಈ ಮಾತುಗಳು ಮನನೀಯ : "ಒಟ್ಟು 309 ಬಾರಿ ರಕ್ತದಾನಮಾಡಿರುವ ನಿಮ್ಮನ್ನು ಅಭಿನಂದುಸುವುದಾರು ಹೇಗೆ? ನಿಮ್ಮಂತಹ ದಾನಿಗಳಿರುವವರೆಗೆ ‘ನೀರಿಗೆ ಬರ ಬಂದರೂ ರಕ್ತಕ್ಕೆ ಬರವಿಲ್ಲ'. ನಿನ್ನಂಥ ಗೆಳೆಯ ನನಗುಂಟು ನಿನಗಿಲ್ಲ. ರಕ್ತದಾನ ಶ್ರೇಷ್ಠ ದಾನ".
ಚಂದ್ರಕಾಂತ್ ಆಚಾರ್ಯ ಅವರ ರಕ್ತದ ಗುಂಪು O+ve. ಜನ ತಮ್ಮ ಪ್ರೀತಿಪಾತ್ರರಿಗಾಗಿ ರಕ್ತಹೊಂದಿಸಲು ಪಡುವ ಪರಿಶ್ರಮ ಇವರನ್ನು ಅಷ್ಟೊಂದು ಬಾರಿ ರಕ್ತದಾನ ನೀಡಲು ಪ್ರೇರೇಪಿಸಿದೆ. ಪೂರ್ಣ ರಕ್ತದಾನವನ್ನು ಮೂರು ತಿಂಗಳ ಅವಧಿಗೊಮ್ಮೆ ಮಾತ್ರಾ ಮಾಡಬಹುದು. ಆದರೆ ರಕ್ತದ ಅಂಶಗಳನ್ನು (components of blood ಅನ್ನು) ಎರಡು ವಾರಕ್ಕೊಮ್ಮೆ ವರ್ಷಕ್ಕೆ 24 ಬಾರಿಗೆ ಮೀರದಂತೆ ಮಾಡಬಹುದು. ಚಂದ್ರಕಾಂತ್ ಆಚಾರ್ಯ ಅವರು ಅವಶ್ಯಕತೆ ಬಂದಾಗಲೆಲ್ಲ ರಕ್ತ ನೀಡಿದ್ದಾರೆ.
"ರಕ್ತದಾನದ ಕುರಿತು ಬಹಳ ಜನರಿಗೆ ತಿಳುವಳಿಕೆ ಕಡಿಮೆ. ರಕ್ತದಾನ ಜನರ ಪ್ರಾಣ ಉಳಿಸುವುದಲ್ಲದೆ ದಾನಿಗೂ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ. ರಕ್ತದಾನ ಮಾಡುವುದರಿಂದ ದೇಹದಲ್ಲಿನ ಹಾರ್ಮೋನುಗಳು ಸಮರ್ಪಕವಾಗಿ ಬಿಡುಗಡೆಗೊಂಡು, ನಿತ್ಯ ಮನೋಲ್ಲಾಸವೂ ಸೇರಿದಂತೆ ಅನೇಕ ಲಾಭಗಳಿವೆ" ಎಂಬುದು ಚಂದ್ರಕಾಂತ್ ಅವರ ಅನುಭವದ ಮಾತು.
ಆತ್ಮೀಯ ಚಂದ್ರಕಾಂತ್ ಆಚಾರ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to Great Blood Donor and Scientist Chandrakant Acharya Sir 🌷🙏🌷
ಕಾಮೆಂಟ್‌ಗಳು