ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರ್ಷಲ್


 

ಸ್ವರ್ಗದ ಬೋಲ್ಟ್ಗಳನ್ನು ಮುರಿದ 'ಯುರೇನಸ್' ಅನ್ವೇಷಕ ಹರ್ಷಲ್


‘ಯುರೇನಸ್’ ಸೌರವ್ಯೂಹ ಗ್ರಹಗಳ ಪೈಕಿ ಒಂದು. ಸೂರ್ಯನಿಂದ ಆರೋಹೀ ದೂರಕ್ರಮದಲ್ಲಿ ಏಳನೆಯದು. ಇದು 18ನೆಯ ಶತಮಾನದಲ್ಲಿ ದೂರದರ್ಶಕದ ಸಹಾಯದಿಂದ ಆವಿಷ್ಕಾರಗೊಂಡ(1781) ಮೊತ್ತಮೊದಲ ಗ್ರಹ. ಅನಿಲದಿಂದ ಒಡಗೂಡಿದ, ಅನಿಲದೈತ್ಯ ಎಂದೆನಿಸುವ ನಾಲ್ಕು ಗ್ರಹಗಳ ಪೈಕಿ ಮೂರನೆಯ ದೊಡ್ಡ ಗಾತ್ರದ ಗ್ರಹ ಇದು. ಭೂಮಿಯ ತೂಕಕ್ಕಿಂತ 14 ಪಟ್ಟು ಹೆಚ್ಚು ತೂಕವುಳ್ಳದ್ದು.

ಬ್ರಿಟಿಷ್ ಖಗೋಳ ವಿಜ್ಞಾನಿ ಫ್ರೆಡರಿಕ್ ವಿಲಿಯಮ್ ಹರ್ಷಲ್ (1738-1822) ಯುರೇನಸ್ ಗ್ರಹವನ್ನು ಆವಿಷ್ಕಾರ ಮಾಡಿದ ಖ್ಯಾತಿಗೆ ಭಾಜನನಾದ. ಆತ ದೂರದರ್ಶಕವನ್ನು ನಿರ್ಮಿಸಿ ತನ್ಮೂಲಕ ಖಗೋಳಾಕಾಶದ ವೀಕ್ಷಣೆ ಮಾಡುತ್ತಿದ್ದ. 

ವಿಲಿಯಂ ಹರ್ಷಲ್‍ಗೆ ಮೊದಲು, ಯುರೇನಸ್ನ ಎಲ್ಲಾ ವೀಕ್ಷಕರು ಅದನ್ನು ನಕ್ಷತ್ರವಾಗಿ ತೆಗೆದುಕೊಂಡರು. ಜಾನ್ ಫ್ಲಮ್‍ಸ್ಟೀಡ್ 1690ರಲ್ಲಿ ತನ್ನ ಅವಕಾಶವನ್ನು ತಪ್ಪಿಸಿಕೊಂಡನು. 1750 ಮತ್ತು 1769ರ ನಡುವೆ ಪಿಯರೆ ಲೆಮೊನಿಯರ್ ಯುರೇನಸ್ ಅನ್ನು ಕನಿಷ್ಠ 12 ಬಾರಿ ನೋಡಿದ್ದನಂತೆ. 

ಹರ್ಷಲ್ 1781ರ ಮಾರ್ಚ್ 13 ರಂದು ಎಂದಿನಂತೆ ತನ್ನ 6 ಇಂಚು ವ್ಯಾಸದ 7 ಅಡಿ ನಾಭೀದೂರದ ದೂರದರ್ಶಕದ ಮೂಲಕ ಆಕಾಶದ ತಾರಾಗುಚ್ಛಗಳ ವೀಕ್ಷಣೆ ನಡೆಸಿದ್ದ. ಮಿಥುನ ರಾಶಿಯ ಬಳಿಯ ಒಂದು ನಕ್ಷತ್ರದತ್ತ ಅವನ ಗಮನ ಹರಿಯಿತು. ನೇತ್ರಮಸೂರದ ಪ್ರವರ್ಧನೆಯನ್ನು 227ರಿಂದ 460ಕ್ಕೆ ಹೆಚ್ಚಿಸಿದಾಗ ಆ ನಕ್ಷತ್ರ ದುಂಡುಬಿಲ್ಲೆಯ ಆಕಾರದಲ್ಲಿದ್ದುದು ಗೋಚರಿಸಿತು. ಅಲ್ಲದೆ ಆ ನಕ್ಷತ್ರ ತನ್ನಿತರ ನೆರೆನಕ್ಷತ್ರಗಳಿಗೆ ಸಾಪೇಕ್ಷವಾಗಿ ಚಲಿಸುವುದೂ ಕಂಡುಬಂದಿತು. ಗ್ರಹವೇ ಅಥವಾ ಕ್ಷುದ್ರಗ್ರಹವೇ ಎಂಬ ಅನುಮಾನ ಅವನಿಗೆ. ಅದೊಂದು ಗ್ರಹವೇ ಎಂಬುದು ಹಠಾತ್ತನೆ ತಿಳಿಸಲು ಹರ್ಷಲ್ ದುಡುಕಲಿಲ್ಲವಾದರೂ ತಲೆಯಾಗಲಿ ಬಾಲವಾಗಲಿ ಇಲ್ಲದಿರುವ ಧೂಮಕೇತು ಅದು ಎಂಬ ವಿವರಣೆ ನೀಡಿದ. ಅಕೌಂಟ್ ಆಫ್ ಎ ಕಾಮೆಟೆ ಎಂಬ ಶೀರ್ಷಿಕೆಯನ್ನೇ ತನ್ನ ಪ್ರಬಂಧಕ್ಕೆ ನೀಡಿ ಅದನ್ನು ರಾಯಲ್ ಸಭೆಯ ವಿದ್ವತ್ಸಭೆಯಲ್ಲಿ 1781 ಏಪ್ರಿಲ್ 26ರಂದು ಮಂಡಿಸಿದ. ಫಿನ್ನಿಷ್ ಗಣಿತವಿದ ಜಿ. ಲೆಕ್ಸೆಲ್ ಎಂಬ ಮತ್ತೊಬ್ಬ ಖಗೋಳವಿಜ್ಞಾನಿ ಈ ಕಾಯದ ಕಕ್ಷಾಗಣನೆ ಮಾಡಿ ಅದರ ಕಕ್ಷೆ ಶನಿಗ್ರಹದ ಆಚೆಗೆ ಇರುವುದೆಂದೂ ಮೊದಲು ಪರಿಗಣಿಸಿದಂತೆ ಅದು ಧೂಮಕೇತು ಅಲ್ಲವೆಂದು ತಿಳಿಸಿದ. ಗ್ರಹಗಳು ಸೂರ್ಯನಿಂದ ಇರುವ ಸ್ಥಾನಗಳನ್ನು ಕುರಿತಂತೆ ಜರ್ಮನಿಯ ಯೊಹಾನ್ ಬೋಡ್ (1747-1826) ಎಂಬ ಖಗೋಳ ವಿಜ್ಞಾನಿಯ ನಿಯಮಾನುಸಾರವೇ ಈ ಕಾಯದ ಸ್ಥಾನ ಇರುವುದನ್ನು ಲೆಕ್ಸೆಲ್ ಲೆಕ್ಕಹಾಕಿದ. ಸೌರವ್ಯೂಹದ ಸೀಮಾಗ್ರಹವೆಂದು ಆ ತನಕವೂ ತಿಳಿಯಲಾಗಿದ್ದ ಶನಿಗ್ರಹವನ್ನು ಬಿಟ್ಟು, ಆ ಸೀಮೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಆಗಿನ ಕಾಲಕ್ಕೆ ಬೌದ್ಧಿಕ ಧೈರ್ಯ ಅನಿವಾರ್ಯವೇ ಆಯಿತು. ಹೊಸ ಆಕಾಶಕಾಯಗಳಿಗೆ ಆಗಿನ ಕಾಲದ ದೊರೆಗಳ ಗೌರವಾರ್ಥ ಆ ದೊರೆಗಳ ಹೆಸರನ್ನೇ ಇಡುವುದು ಸಂಪ್ರದಾಯವಾಗಿದ್ದ ಕಾರಣ ಹರ್ಷಲ್ ತನ್ನ ಹೊಸ ಕಾಯಕ್ಕೆ ಜಾರ್ಜಿಯಮ್ ಸೈಡಸ್ ಎಂದೇ ನಾಮಕರಣ ಮಾಡಿದ. ಹರ್ಷಲ್‍ನಿಗೆ ರಾಜಾಶ್ರಯವೂ ರಾಜಸ್ಥಾನದ ವೇತನವೂ ದೊರೆತವು. ಪೌರಾಣಿಕ ಸಂಪ್ರದಾಯಕ್ಕೆ ಕಟ್ಟುಬಿದ್ದಿದ್ದ ಕೆಲವರು ಇದನ್ನು ನೆಪ್ಚೂನ್ ಎಂದೂ, ಮತ್ತೆ ಕೆಲವರು ಎಲ್ಲ ದೇವತೆಗಳಿಗಿಂತಲೂ ಬಲು ಪ್ರಾಚೀನದ್ದೂ ಶನಿಯ ತಂದೆಯೂ ಆದ ಯುರೇನಸ್‍ನ ಹೆಸರು ಇದಕ್ಕೆ ಇಡಬೇಕು ಎಂದೂ ವಾದಮಾಡಿದರು. ಕಾಯದ ಆವಿಷ್ಕಾರ ಮಾಡಿದವನ ಗೌರವಾರ್ಥ ಅದನ್ನು ಹರ್ಷಲ್ ಎಂದೇ ಕರೆಯಬೇಕೆಂದು ಲ್ಯಾಲೆಂಡ್ ಸೂಚಿಸಿದ. ಯುರೇನಸ್ ಎಂಬ ಹೆಸರನ್ನು ಜಾನ್ ಕೌಚ್ ಆಡಮ್ಸ್ ಎಂಬವ ಸೂಚಿಸಿದ. ಬಹಳ ಕಾಲದ ತನಕವೂ ಈ ಕಾಯಕ್ಕೆ ಹರ್ಷಲ್ ಎಂಬ ಹೆಸರೇ ಇತ್ತು. ಫ್ರಾನ್ಸಿನಲ್ಲೂ ಹಾಗೇ ಕರೆಯುತ್ತಿದ್ದರು. ಅಂತಿಮವಾಗಿ ಯುರೇನಸ್ ಎಂಬ ಹೆಸರೇ ಸ್ಥಿರವಾಯಿತು.

ಯುರೇನಸ್ ಗ್ರಹವನ್ನು ಮಿಲಿಯಮ್ ಹರ್ಷಲ್ ಆವಿಷ್ಕಾರ ಮಾಡಿದಾಗಿನಿಂದ (1781) ಇಲ್ಲಿಯ ತನಕ ಅದು ಸುಮಾರು ಎರಡೂ ಮುಕ್ಕಾಲು ಸಲ ಸೂರ್ಯನನ್ನು ಪ್ರದಕ್ಷಿಣೆ ಹಾಕಿದೆ. ಮೂರನೆಯ ಪ್ರದಕ್ಷಿಣೆ ಮುಗಿಯುವ 2033 ವೇಳೆಗೆ ಅದು ಹಿಂದೆ (1781,1865,1949) ಇದ್ದಂತೆಯೇ ಮಿಥುನದಲ್ಲೇ ಗೋಚರಿಸುತ್ತದಂತೆ.


ವಿಲಿಯಂ ಹರ್ಷಲ್ 1738ರ ನವೆಂಬರ್ 15ರಂದು ಜರ್ಮನಿಯ ಹ್ಯಾನೋವರ‍್ನಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ. ಮನೆ ಶಿಕ್ಷಣವನ್ನು ಪಡೆದ ನಂತರ ತನ್ನ ತಂದೆಯಂತೆ ಸಂಗೀತಗಾರನಾಗಿದ್ದು ಮಿಲಿಟರಿ ಬ್ಯಾಂಡ್‍ಗೆ ಓಬೊಯಿಸ್ಟ್ ಆಗಿ ಪ್ರವೇಶಿಸಿದ.  ಆತ ರೆಜಿಮೆಂಟ್‍ನ ಭಾಗವಾಗಿ ಇಂಗ್ಲೆಂಡ್‍ಗೆ ಕಳುಹಿಸಲ್ಪಟ್ಟ. ನಂತರ ಮಿಲಿಟರಿ ಸೇವೆಯನ್ನು ತೊರೆದು ಸ್ವಲ್ಪ ಸಮಯದವರೆಗೆ ಸಂಗೀತವನ್ನು ಕಲಿಸಿದ. 24 ಸ್ವರಮೇಳಗಳನ್ನು ಬರೆದಿದ್ದ..

ವಿಲಿಯಂ ಹರ್ಷಲನ ತಂಗಿ ಕರೊಲಿನ್ ಹರ್ಷಲ್ ಸಹಾ ಖಗೋಳ ವಿಜ್ಞಾನದಲ್ಲಿ ಮಹಾನ್ ಹೆಸರಾಗಿದ್ದು ತನ್ನ ಅಣ್ಣನ ಕೆಲಸದಲ್ಲಿ ಸುದೀರ್ಘ ಅವಧಿಯವರೆಗೆ ಸಹಕಾರ ಮತ್ತು ಕೊಡುಗೆ ನೀಡಿದವಳು. 

ವಿಲಿಯಂ ಹರ್ಷಲ್ 1789 ರಲ್ಲಿ ಅವರು ಸೇಂಟ್ ಪೀಟರ್ಸ್ಬರ್ಗ್ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಗೌರವ ಸದಸ್ಯನಾಗಿ ಆಯ್ಕೆಯಾದ. ಅತ 1822ರ ಆಗಸ್ಟ್ 23ರಂದು ನಿಧನನಾದ. ಆತನ ಸಮಾಧಿಯ ಮೇಲೆ ಹೀಗೆ ಬರೆಯಲಾಗಿದೆ: "ಅವನು ಸ್ವರ್ಗದ ಬೋಲ್ಟ್ಗಳನ್ನು ಮುರಿದನು. "He broke through the barriers of the heavens"

On Remembrance Day of great astronomer Frederick William Herschel


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ