ಜಯರಾಮ ರಾವ್
ಎಂ. ಎ. ಜಯರಾಮ ರಾವ್ 🌷🙏🌷
ವಿದ್ವಾನ್ ಎಂ. ಎ. ಜಯರಾಮ ರಾವ್ ಅವರು ಮಹಾನ್ ಗಮಕಿಗಳೂ, ಪತ್ರಿಕಾ ಕ್ಷೇತ್ರದ ಪ್ರಸಿದ್ಧರೂ ಆಗಿ ಹೆಸರಾಗಿದ್ದವರು.
ಎಂ.ಎ.ಜಯರಾಮ ರಾವ್ ಅವರು ಹುಟ್ಟಿದ್ದು ಮಡಿಕೇರಿಯಲ್ಲಿ. ಇವರು ಲಕ್ಷ್ಮಿದೇವಮ್ಮ ಹಾಗೂ ಅನಂತಪದ್ಮನಾಭರಾಯರ ದ್ವಿತೀಯ ಪುತ್ರ. ತುಳಸಿ ಕಾರ್ತೀಕ, ಅಂದ್ರೆ ಉತ್ಥಾನ ದ್ವಾದಸಿಯಂದು ಅನಂತಪದ್ಮನಾಭರಾಯರು
ತುಳಸೀ ರಾಮಾಯಣದ ಅಂತಿಮ ಭಾಗದ ವಾಚನ, ವ್ಯಾಖ್ಯಾನ ಮುಗಿಸಿ, ಮಂಗಳ ಹಾಡುವಾಗ, ಮಗ ಜನಿಸಿದ ಸುದ್ದಿ ಬಂದಿತಂತೆ. ಆಗಲೇ ಅವರು, ಮಗುವಿನ ಹೆಸರು ಜಯರಾಮ ಅಂತ ತೀರ್ಮಾನಿಸಿ ಬಿಟ್ಟರಂತೆ. ಅನಂತಪದ್ಮನಾಭರಾಯರು ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದರೂ ಅವರಿಗೆ ಸಂಗೀತದಲ್ಲಿ ಅತೀವ ಆಸಕ್ತಿ. ಕೃಷ್ಣಗಿರಿರಾಯರ ಗಮಕ ವಾಚನವನ್ನು ಆಲಿಸಿ, ಅದರಿಂದ ಪ್ರೇರಿತರಾದ ಇವರು, ಆ ಕಲೆಯಲ್ಲಿಯೇ ಆಸಕ್ತಿ ಬೆಳೆಸಿಕೊಂಡು ಹೆಚ್ಚಿನ ಕೃಷಿ ಮಾಡಿ ಮಡಿಕೇರಿ ಪ್ರಾಂತ್ಯದಲ್ಲಿ ಗಮಕ ವಿದ್ವಾಂಸರೆಂದು ಹೆಸರು ಮಾಡಿದರು. ಇಂಥಾ ತಂದೆಯ ಮಗನಾಗಿ ತೊಟ್ಟಿಲಲ್ಲೇ ಗಮಕ ವಾಚನ ಕೇಳಿ ಬೆಳೆದ ಜಯರಾಮ ರಾವ್ ಅವರಿಗೆ ಅದೇ ಕಲೆಯಲ್ಲಿ ಅತೀವ ಆಸಕ್ತಿ ಮೂಡಿತು. ಮಡಿಕೇರಿಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಕನ್ನಡ ಸಾಹಿತ್ಯ ದಿಗ್ಗಜರೆಲ್ಲಾ ಬಂದಾಗ, ಅವರು ಇಳಿದುಕೊಳ್ಳುತ್ತಿದ್ದುದೇ ಅನಂತಪದ್ಮನಾಭರಾಯರ ಮನೆಯಲ್ಲಿ. ಬೆಟಗೇರಿ ಕೃಷ್ಣಶರ್ಮ, ಅ.ನ.ಕೃಷ್ಣರಾಯರು, ಬಿ. ಎಂ. ಶ್ರೀಕಂಠಯ್ಯನವರು, ಗೋವಿಂದ ಪೈಗಳು, ತೀ ನಂ ಶ್ರೀ, ಡಿವಿಜಿ, ಮಾಸ್ತಿ... ಹೀಗೆ ಇಂತಹವರ ಒಡನಾಟದಲ್ಲಿ ಜಯರಾಮ ರಾವ್ ಬೆಳೆದರು. ಹೀಗೆ ಜಯರಾಮ ರಾಯರು ಸಂಗೀತ ಮತ್ತು ಸಾಹಿತ್ಯದಲ್ಲಿ ಉನ್ನತ ಕೃಷಿ ಮಾಡಲು ಪ್ರೇರಣೆ ಬಾಲ್ಯದಲ್ಲೇ ಮೂಡಿತ್ತು.
ಚಿಕ್ಕವರಿದ್ದಾಗ ಜಯರಾಮ ರಾವ್ ಅವರನ್ನು ಊರಿನವರೆಲ್ಲಾ ಸುದ್ದಿರಾಮ ಅಂತ ಕರೆಯುತ್ತಿದ್ದರಂತೆ. ಊರಿನಲ್ಲಿ ಎಲ್ಲಿ ಏನೇ ನಡೆದರೂ ಅದನ್ನ ಸುಂದರವಾಗಿ ವರ್ಣಿಸುವ ಕಲೆ ಜಯರಾಮ ರಾವ್ ಅವರಿಗೆ ಇತ್ತಂತೆ. ಬಹುಶಃ ಆ ಕಲೆಯೇ ಅವರಿಗೆ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗೋಕೆ ದಾರಿ ಮಾಡಿಕೊಟ್ಟಿತೋ ಏನೋ! ಮಡಿಕೇರಿಯಿಂದ ಶಿವಮೊಗ್ಗ, ಅಲ್ಲಿಂದ ಮೈಸೂರು...ಹೀಗೆ ತಮ್ಮ ತಂದೆಯವರಿಗೆ ವರ್ಗವಾದಂತೆ...ಶಾಲೆಯ ವಿದ್ಯಾಭ್ಯಾಸಕ್ಕೂ ತೊಡರುಗಳು ಕಾಣಿಸಿಕೊಂಡಿದ್ದು ಜಯರಾಮ ರಾವ್ ಅವರಿಗೆ ಒಂದು ರೀತಿ ವರವೇ ಆಯಿತು. ಜಯರಾಮ ರಾವ್ ಅವರಿಗೆ ಸಂಗೀತ, ಗಮಕದ ಜೊತೆ ಇನ್ನೊಂದು ಹುಚ್ಚಿತ್ತು. ಅವರಿಗೆ, ಮುಂಬೈನಲ್ಲಿದ್ದ ತಮ್ಮ ಸೋದರಮಾವನ ಬೆಂಬಲವಿತ್ತು. ಅವರ ಸಹಾಯದಿಂದಲೇ ಬಾಂಬೆಯ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ಸ್ ಕರೆ ನೀಡಿದ್ದ ಕೆಲವೊಂದಕ್ಕೆ ಅರ್ಜಿ ಹಾಕಿ, ಯಾರಿಗೂ ಹೇಳದೇ ಮನೆ ಬಿಟ್ಟು ಬಾಂಬೆಗೆ ಓಡಿ ಬಂದರು. ಅದೇನೋ ಅದೃಷ್ಟ...ಕೆಲಸ ಅವರಿಗೇ ದೊರೆಯಿತು. ಸೋದರಮಾವನ ಜೊತೆ ವಾಸ. ಬಾಂಬೆಯ ಸಹವಾಸ ಜಯರಾಮ ರಾವ್ ಅವರ ನಾಟಕದ ಆಸೆಗಳಿಗೆ ಒತ್ತಾಸೆಯಾಯ್ತು. ಅಲ್ಲಿನ ಕನ್ನಡ ಸಂಘದ ಸಕ್ರಿಯ ಸದಸ್ಯರಾದರು. ಬಲ್ಲಾಳ ದಂಪತಿಯರು ಆಗಲೇ ನಾಟಕಗಳಲ್ಲಿ ಅಪಾರ ಹೆಸರು ಮಾಡಿದವರು. ಅಂತಹವರ ಸಹಾಯದಿಂದ ಜಯರಾಮ ರಾವ್ ಅವರೂ ಅನೇಕ ನಾಟಕಗಳಲ್ಲಿ ನಟಿಸುತ್ತಾ...ಆಗಾಗ ತಮ್ಮ ಗಮಕ ಕಲೆಯನ್ನು ಪ್ರದರ್ಶಿಸುತ್ತಾ ಬಾಂಬೆಯಲ್ಲೇ ಲೀನವಾಗಿ ಹೋದರು. ಮುಂದೆ ರುಕ್ಮಿಣಿ ಅವರೊಂದಿಗೆ ಮದುವೆ ಆಗಿ ಅಹಮದಾಬಾದಿನಲ್ಲಿ ಸಂಸಾರ ಹೂಡಿ, ನಂತರ 2 ವರ್ಷದಲ್ಲಿ ಬೆಂಗಳೂರಿಗೆ ವರ್ಗವಾಗಿ ಬಂದು 30 ವರ್ಷಗಳ ಕಾಲ ಆಗಿನ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಮತ್ತು ಕನ್ನಡ ಪ್ರಭದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಸಂಗೀತ-ಗಮಕ ಸೇವೆಯಲ್ಲಿ ತಮ್ಮನ್ನು
ತೊಡಗಿಸಿಕೊಂಡಿದ್ದರು.
ಅವರ ಬಗೆಗಿನ ಸವಿವರ ಪರಿಚಯ ಇಲ್ಲಿದೆ. * ಹೆಸರು: ಮಡಿಕೇರಿ ಅನಂತಪದ್ಮನಾಭ ರಾವ್ ಜಯರಾಮ್ ರಾವ್ * ಜನ್ಮ ದಿನಾಂಕ, ಸ್ಥಳ: 03.11.1935, ಕೊಡಗು ಜಿಲ್ಲೆ, ಮಡಿಕೇರಿ * ತಂದೆ, ತಾಯಿ: ಹೆಸರಾಂತ ಕವಿ, ಸಾಹಿತಿ, ಗಮಕಿ ಮೈ.ಶೇ.ಅನಂತಪದ್ಮನಾಭ ರಾವ್ ಮತ್ತು ಲಕ್ಷ್ಮಿದೇವಿ * ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ., ಅನಂತರ ಗೌರವ ಎಂ.ಎ. ಪದವಿ. ಸಂಗೀತದಲ್ಲಿ ಸೀನಿಯರ್ ಗ್ರೇಡ್ (1958) * ಗುರು ಪರಂಪರೆ: ಗಮಕ ಕಲೆಗೆ ತಂದೆಯೇ ಗುರುಗಳು. ಸಂಗೀತದಲ್ಲಿ 'ಚಕ್ರಕೋಡಿ ನಾರಾಯಣ ಶಾಸ್ತ್ರಿ ಹಾಗೂ ವೈ.ಎನ್. ಶ್ರೀನಿವಾಸ ಮೂರ್ತಿ. ಸುಗಮ ಸಂಗೀತ-ಬಿ.ಎಸ್.ರಾಮಾಚಾರ್ ಹಾಗೂ ಡಾ|| ಹೆಚ್.ಕೆ. ರಂಗನಾಥ್ * ವೃತ್ತಿ-ಪ್ರವೃತ್ತಿ: ವೃತ್ತಿಯಲ್ಲಿ ಪತ್ರಕರ್ತರು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಸಮೂಹದಲ್ಲಿ ಮುಂಬೈ, ಅಹಮದಾಬಾದ್ ಮತ್ತು ಬೆಂಗಳೂರು ಆವೃತ್ತಿಗಳಲ್ಲಿ ವಿವಿಧ ಹಂತಗಳಲ್ಲಿ 35 ವರ್ಷಗಳ ನಿರಂತರ ಸೇವೆ. 1993 ರಲ್ಲಿ ನಿವೃತ್ತಿ. ತದನಂತರ ಕೆಲವು ಕಾಲ ಸ್ವತಂತ್ರವಾಗಿ ಕಾರ್ಯ ನಿರ್ವಹಣೆ. ಮುಂದೆ ಗಮಕಿಯಾಗಿ ಕಲಾ ಪೋಷಣೆ. * ಹವ್ಯಾಸ: ಗಮಕ, ನಾಟಕ, ಸಂಗೀತ. ಈಜು, ಕ್ರಿಕೆಟ್ ನಲ್ಲಿ ಕ್ರೀಡಾ ಸಾಧನೆ.
ಜಯರಾಮ ರಾವ್ ಅವರು ಲೇಖಕರಾಗಿ ಪತ್ರಿಕೆಗಳಲ್ಲಿ ಸಂಗೀತಮ ನೃತ್ಯಕಲೆಗಳ ವಿಮರ್ಶಾತ್ಮಕ ಲೇಖನಗಳು, ಸಂದರ್ಶನಗಳು, ನಿಯತಕಾಲಿಕೆಗಳಲ್ಲಿ ಗಮಕ, ಸಂಗೀತನಕ್ಕೆ ಸಂಬಂಧಿಸಿದ ವ್ಯಕ್ತಿಗಳ ಕುರಿತ ನೂರಾರು ಲೇಖನಗಳನ್ನು ಮೂಡಿಸಿದ್ದರು. ಬೆಂಗಳೂರು ದರ್ಶನ, ಕರ್ನಾಟಕ ಕಲಾದರ್ಶನ ಮುಂತಾದ ಉದ್ಗ್ರಂಥಗಳಲ್ಲಿ ಶಾಸ್ರ್ತೀಯ ಸಂಗೀತ, ಗಮಕ, ಕಥಾಕೀರ್ತನಗಳ ಬಗ್ಗೆ ಸುದೀರ್ಘ ಲೇಖನಗಳನ್ನು ಮೂಡಿಸಿದ್ದರು. 2004 ರಲ್ಲಿ ಅಮೆರಿಕಾದ ಫ್ಲೊರಿಡಾದಲ್ಲಿ ನಡೆದ "ಅಕ್ಕ" ಸಮ್ಮೇಳನದ ಅಂಗವಾಗಿ ಹೊರತಂದ 'ವಿಕಾಸ' ಸ್ಮರಣಸಂಚಿಕೆಯಲ್ಲಿ 'ಗಮಕ ಕಲೆ' ಕುರಿತ ವಿಚಾರಾತ್ಮಕ ಲೇಖನ ಬರೆದರು. ಇವರು ಬರೆದ ಗ್ರಂಥಗಳು: "ಗಮಕ ದಿಗ್ಗಜರು", ಕರ್ನಾಟಕ ಕಲಾವಿದರು ಮಾಲಿಕೆಯಲ್ಲಿನ ಕಥಾಕೀರ್ತನ, ಹಿಂದೂಸ್ತಾನೀ ಸಂಗೀತ ಕಲಾವಿದರ ಕುರಿತು ಪುಸ್ತಕಗಳು, ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗಮಕ, ಕಥಾಕೀರ್ತನ, ಸುಗಮ ಸಂಗೀತ ಕಲಾವಿದರ ಪರಿಚಯ, ತೊರವೆ ನರಹರಿ ಕವಿಯ ರಾಮಾಯಣ ಸಂಗ್ರಹ ವ್ಯಾಖ್ಯಾನ ಸಹಿತ, ಪಂಪ ಮತ್ತು ಕುಮಾರವ್ಯಾಸರ ದೃಷ್ಟಿಯಲ್ಲಿ ಮಹಾಭಾರತದ ಕರ್ಣ ಗ್ರಂಥ, ನರಹರಿ ಪ್ರಶಸ್ತಿ ಗ್ರಂಥದಲ್ಲಿ ತೌಲನಿಕ ಅಧ್ಯಯನ ಕುರಿತ ಪ್ರಬಂಧಗಳು. ಶ್ರೀಮತಿ "ವಿಮಲಾ ರಂಗಾಚಾರ್" ಕುರಿತ ಪುಸ್ತಕ, "ಬೆಂಗಳೂರು ನಾಗರತ್ನಮ್ಮ", "ಹಾಂಕಾಂಗ್ ಪ್ರವಾಸ ಕಥನ", "ಜೀವನ-ಭಾವನ"-ಮಡಿಕೇರಿ ನಾಗೇಂದ್ರ ಕುರಿತ ಯಶೋಗಾಥೆ(ಹಸ್ತಪ್ರತಿ), ರನ್ನ ಮಹಾಕವಿಯ 'ಗದಾಯದ್ಧಂ' ಕುರಿತ ವಿಶ್ಲೇಷಣೆ.
ತೊರವೆ ರಾಮಾಯಣ ಸಂಗ್ರಹ ಧ್ವನಿ ಅಡಕಗಳ ನಿರ್ಮಾಣ, ಕುಮಾರವ್ಯಾಸ ಭಾರತದ ನಾಂದೀ ಪದ್ಯಗಳ ಧ್ವನಿ ಅಡಕ (CD), ಕುವೆಂಪು ಪ್ರತಿಷ್ಠಾನದ ವತಿಯಿಂದ ಪ್ರೊ.ಅ.ರಾ.ಮಿತ್ರ ಅವರ ವ್ಯಾಖ್ಯಾನದೊಂದಿಗೆ ಕುವೆಂಪು "ರಾಮಾಯಣ ದರ್ಶನಂ'-ಸಾಗರೋಲ್ಲಂಘನಂ - ವಾಚನದ ಧ್ವನಿಚಕ್ರ, ಇತ್ಯಾದಿ. * ಸಾಧನೆ: ಹಿರಿಯಣ್ಣ 'ಎಂ.ಎ. ಶೇಷಗಿರಿ ರಾವ್' ಜೊತೆಯಾಗಿ ಸಂಗೀತ ಕ್ಷೇತ್ರದಲ್ಲಿ "ಮಡಿಕೇರಿ ಸಹೋದರರು" ಎಂದೇ ಪ್ರಸಿದ್ಧರಾಗಿದ್ದರು. 1949 ರಲ್ಲಿ ಉಡುಪಿಯಲ್ಲಿ ಆಗಿನ ಫಲಿಮಾರು ಪೇಜಾವರ ಮಠದ ಶ್ರೀಗಳ ಸಮ್ಮುಖದಲ್ಲಿ ಪ್ರಥಮ ಗಮಕ ವಾಚನ. ಅಂದಿನಿಂದ ಸರಿಸುಮಾರು 4000 ಕ್ಕೂ ಹೆಚ್ಚು ರಾಜ್ಯವ್ಯಾಪಿ ಮತ್ತು ಹೊರ ರಾಜ್ಯಗಳಲ್ಲಿ ನಿರಂತರ ಕಾರ್ಯಕ್ರಮಗಳು. ಹಾಂಕಾಂಗ್ನಲ್ಲೂ ಗಮಕ ದುಂದುಭಿ. ಆಕಾಶವಾಣಿಯ ಅನೇಕ ಕೇಂದ್ರಗಳಲ್ಲಿ, ದೂರದರ್ಶನದಲ್ಲಿ ಕಾರ್ಯಕ್ರಮ ಪ್ರಸಾರ. ವಾಚನ-ವ್ಯಾಖ್ಯಾನ ನಿರ್ವಹಿಸುವ ಕೆಲವೇ ಗಮಕಿಗಳಲ್ಲಿ ಅಗ್ರರಾಗಿದ್ದರು. ಶಿವಮೊಗ್ಗ, ಸೂರತ್ ಹಾಗೂ ಮುಂಬೈನಲ್ಲಿ ಗಮಕ ಶಿಬಿರ ನಿರ್ವಹಣೆ.
"ಪ್ರಪ್ರಥಮ ಅಖಿಲ ಭಾರತ ಗಮಕ ಸಮ್ಮೇಳನದ ಅಧ್ಯಕ್ಷ"ರಾಗಿದ್ದು ಜಯರಾಮ ರಾವ್ ಅವರ ಜೀವಮಾನ ಸಾಧನೆ. ಮುಂಬೈ ಕನ್ನಡ ಸಂಘದ ಉಪಕಾರ್ಯದರ್ಶಿಯಾಗಿ, ಕೊಡಗು ಕರ್ನಾಟಕ ಸಂಘದ ಸಹ ಕಾರ್ಯದರ್ಶಿಯಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ತಿರುಮಲ-ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಯೋಜನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಗಾನಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪುರಂದರದಾಸರ ಆರಾಧನಾ ಸಮಿತಿ ಉಪಾಧ್ಯಕ್ಷರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯರಾಗಿ, ಆಕಾಶವಾಣಿ ಕೇಂದ್ರದ ಸ್ಥಳೀಯ ಧ್ವನಿಗ್ರಹಣ(LAB) ಮಂಡಳಿ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಅಧ್ಯಯನ ಮಂಡಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
* ಕುಟುಂಬ: ಪತ್ನಿ-ಶ್ರೀಮತಿ ರುಕ್ಮಿಣಿ ಜಯರಾಮ್ ರಾವ್, ಮಕ್ಕಳು-ಕುಮುದವಲ್ಲಿ ಅರುಣ್ ಮೂರ್ತಿ, ಭಾರತಿ ಪ್ರಕಾಶ್ ಮತ್ತು ಕೃಷ್ಣಸ್ವಾಮಿ. ಇವರ ಕಿರಿಯ ಸಹೋದರ "ಮಡಿಕೇರಿ ನಾಗೇಂದ್ರ" ಹೆಸರಾಂತ ಸುಗಮ ಸಂಗೀತ ಕಲಾವಿದರಾಗಿದ್ದರು.
* ಪ್ರಶಸ್ತಿ-ಗೌರವ-ಸನ್ಮಾನಗಳು: 1996 ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ "ಕರ್ನಾಟಕ ಕಲಾಶ್ರೀ" ಪ್ರಶಸ್ತಿ ಪ್ರದಾನ. ಮುಂಬೈನಲ್ಲಿ 2011 ರಲ್ಲಿ ಜರುಗಿದ ಅಖಿಲ ಭಾರತ ಪ್ರಪ್ರಥಮ ಗಮಕ ಕಲಾ ಸಮ್ಮೇಳನಾಧ್ಯಕ್ಷರಾಗಿ ಗೌರವ ಜೊತೆಗೆ "ಗಮಕ ಕಲಾರತ್ನ" ಪ್ರಶಸ್ತಿ ಪ್ರದಾನ. ಗಮಕ ಕಲಾ ಪ್ರವೀಣ, ಗಮಕ ಕಲಾ ವಿದ್ವನ್ಮಣಿ, ಗಮಕ ಕಲಾ ಕೇಸರಿ, ಗಮಕ ಕಲಾವತಂಸ, ಗಮಕ ಕಲಾಭೂಷಣ, ನಾದ ಚಿಂತಾಮಣಿ, ಕಲಾ ಜ್ಯೋತಿ, ಕಾವ್ಯವಾಚನ ಪ್ರವೀಣ, ಕಾವ್ಯ ವಾಚನ-ವ್ಯಾಖ್ಯಾನ ದುರಂಧರ, ಕಲಾದೀಪ್ತಿ, ಸಂಗೀತ ಶ್ರೀ, ಗಮಕ ಪರಿಮಳ, ಸ್ವರ ಕಲಾನಿಧಿ ಬಿರುದುಗಳು. ಇಷ್ಟೇ ಅಲ್ಲದೇ ಇನ್ನೂ ಅನೇಕ ಸಂಘ ಸಂಸ್ಥೆಗಳಿಂದ, ಮಠಾಧಿಪತಿಗಳಿಂದ ಗೌರವ, ಸನ್ಮಾನಗಳು ಸಂದಿವೆ. 14.11.2009 ರಂದು 75ನೇ ಜನ್ಮದಿನದ ಕುರುಹಾಗಿ "ಅಮೃತ ಧಾರಾ" ಅಭಿನಂದನಾ ಸಂಚಿಕೆ ಪ್ರಕಟಿಸಲಾಯಿತು. 2016ರ ವರ್ಷದಲ್ಲಿ ಅಮೆರಿಕದ ಉತ್ತರ ಕೊರೋಲಿನದ ಡ್ಯೂಕ್ ವಿಶ್ವವಿದ್ಯಾಲಯವು ಜಯರಾಮ ರಾವ್ ಅವರಿಗೆ ಸಂಗೀತ ಮತ್ತು ಗಮಕ ಕಲೆಗೆ ನೀಡಿರುವ ಮಹತ್ವದ ಕೊಡುಗೆಗಳಿಗಾಗಿ ಡಾಕ್ಟರೇಟ್ ಗೌರವ ಅರ್ಪಿಸಿತು. ‘ಸಾರ್ಥ-ಕತೆ’ ಎಂಬುದು ಡಾ. ಎಂ.ಎ. ಜಯರಾಮ್ ರಾವ್ ಅವರ ಸಂತೃಪ್ತ ಭಾವದ ಕುರುಹು ಮಾತ್ರವಲ್ಲ ಅವರ ಆತ್ಮಚರಿತ್ರೆಯ ಹೆಸರೂ ಹೌದು.
---
ಮಹಾನ್ ಸಾಧಕರಾದ ಡಾ. ಎಂ. ಎ. ಜಯರಾಮ್ ಅವರು 2024ರ ಮೇ 16ರಂದು ಈ ಲೋಕವನ್ನಗಲಿದರು. ನಮ್ಮನ್ನೆಲ್ಲ ಅವರು ಮತ್ತು ಅವರ ಕುಟುಂಬದವರು ಆಪ್ತವಾಗಿ ಕಾಣುತ್ತ ಬಂದವರು. ಅವರ ಅಗಲಿಕೆ ನಮಗೆಲ್ಲ ಅಪಾರ ನಷ್ಟ. ಈ ಮಹಾನ್ ಹಿರಿಯರ ಅಗಲಿಕೆಯನ್ನು ಸಹಿಸುವ ಶಕ್ತಿ ಅಮ್ಮ ರುಕ್ಮಿಣಿ ಜಯರಾಮ ರಾವ್ ಮತ್ತು ಅವರ ಕುಟುಂಬದವರಿಗೆ ಲಭಿಸಲಿ.
ಜಯಂತಿ ತೇ ಸುಕೃತಿನೋ
ರಸಸಿದ್ಧಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
ಆಧಾರ:. ಜಯರಾಮ ರಾವ್ ಅವರ ಸುಪುತ್ರಿ Kumudavalli Arun Murthy ಅವರ ಬರೆಹ
Respects to departed soul Great journalist, scholar, Gamaki and our affectionate Jayaram Rao Sir 🌷🙏🌷
ಕಾಮೆಂಟ್‌ಗಳು