ರೋಹಿಣಿ ಸುಬ್ಬರತ್ನಂ
ರೋಹಿಣಿ ಸುಬ್ಬರತ್ನಂ
ಸಂಗೀತ ಶಾಸ್ತ್ರಜ್ಞೆ ವಿದುಷಿ ಕೆ. ರೋಹಿಣಿ ಸುಬ್ಬರತ್ನಂ ಅವರು ಸಂಗೀತ - ಸಾಹಿತ್ಯ - ಸಾಂಸ್ಕೃತಿಕ ಸತ್ಪರಂಪರೆಗಳ ತ್ರಿವೇಣಿ ಸಂಗಮ ಇದ್ದಂತೆ.
ರೋಹಿಣಿ ಅವರು 1958ರ ಮೇ 20ರಂದು ಜನಿಸಿದರು. ತಂದೆ ಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರು ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಖ್ಯಾತರೆನಿಸಿದ್ದವರು. ರೋಹಿಣಿ ಅವರು ಓದಿ ಬೆಳೆದದ್ದು ಮೈಸೂರಿನಲ್ಲಿ. ಸೀನಿಯರ್ ಸಂಗೀತ ಕಲಿಯುತ್ತ, ನೃತ್ಯ ಕಲಿಯುತ್ತ, ಕಾಲೇಜಿನಲ್ಲಿ ಓದುವ ದಿನಗಳಲ್ಲೇ, ಅವರು ಮದುವೆಯಾಗಿ ಸೇರಿದ್ದು ಸಂಗೀತ ಲೋಕದ ಪ್ರಸಿದ್ಧ ಕಾಂಚನಾ ಕುಟುಂಬವನ್ನು. ಮಹಾನ್ ಸಂಗೀತಗಾರ ವಿದ್ವಾನ್ ಕಾಂಚನ ವಿ. ಸುಬ್ಬರತ್ನಂ ಇವರ ಪತಿ. ಸ್ವಯಂ ರೋಹಿಣಿಯವರೂ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಿದರು.
ರೋಹಿಣಿ ಸುಬ್ಬರತ್ನಂ ಅವರು ಯಾವಾಗಲೂ ಸಂಗೀತ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರುಗಳ ಆಗಮನದಿಂದ ತುಂಬಿರುತ್ತಿದ್ದ ಕಾಂಚನ ಕುಟುಂಬದ ಹಿರಿಮೆಯನ್ನು ಎತ್ತಿ ಹಿಡಿಯುತ್ತ ಸಾಗಿದರು. ಕುಟುಂಬದ ಸಂಗೀತ ಶಾಲೆಯಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳನ್ನು ಪೋಷಿಸಿ ಮಾರ್ಗದರ್ಶಿಸಿದರು. ತಮ್ಮ ಮಕ್ಕಳೂ ಇದೇ ಸಂಸ್ಕಾರದಲ್ಲಿ ಪ್ರಕಾಶಿಸಲು ಪ್ರೇರಣೆಯಾದರು. ಇವರ ಸುಪುತ್ರಿಯರಾದ ಕಾಂಚನ ಶ್ರೀರಂಜಿನಿ ಮತ್ತು ಕಾಂಚನ ಶ್ರುತಿರಂಜಿನಿ Kanchana Shriranjani - Shruthiranjani Kanchana ಜೋಡಿ ಇಂದು ಸಂಗೀತಲೋಕದಲ್ಲಿ ವಿಶ್ವಪ್ರಸಿದ್ಧರಾಗಿದ್ದಾರೆ.
ವಿದುಷಿ ಕೆ. ರೋಹಿಣಿ ಸುಬ್ಬರತ್ನಂ ಅವರ ಜೀವನವು ಕರ್ನಾಟಕ ಸಂಗೀತಕ್ಕೆ ಮುಡಿಪಾಗಿದೆ. ಅವರಿಗಿರುವ ಸಂಗೀತ ಜ್ಞಾನದ ಆಳ, ಶ್ರದ್ಧಾವಂತ ಅಳವಡಿಕೆ, ಸುಶ್ರಾವ್ಯತೆ ಮತ್ತು ಪರಿಣತಿಗಳು ವಿಶಾಲ ತಳಹದಿ ಉಳ್ಳದ್ದೆಂದು ವಿದ್ವತ್‍ಲೋಕದಲ್ಲಿ ಹೆಸರಾಗಿದೆ. ಅವರು ಓರ್ವ ಉತ್ಸಾಹಭರಿತ ಸಂಶೋಧಕಿ. ಸಂಗೀತಶಾಸ್ತ್ರ, ಭಾರತೀಯ ಸಂಸ್ಕೃತಿ, ಜಾನಪದ ಕಲಾ ಪ್ರಕಾರಗಳು ಮತ್ತು ಆಧ್ಯಾತ್ಮಿಕತೆಯ ಕುರಿತು ಅವರು ನೂರಾರು ಲೇಖನಗಳನ್ನು ಬರೆದಿದ್ದಾರೆ. ಇವುಗಳಲ್ಲಿನ ಕೆಲವು ಆಯ್ದ ಬರಹಗಳು ಇವರ ಇತ್ತೀಚಿನ ಕೃತಿಯಾದ 'ಆರೋಹಿಣೀ'ಯಲ್ಲಿ ಸಂಕಲನಗೊಂಡಿದೆ. ಇವರು ಹಲವಾರು ಸಂಗೀತ ಮತ್ತು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸಂಗೀತ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಅನೇಕ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. ತಮ್ಮ ಪತಿ ಕಾಂಚನ ಸುಬ್ಬರತ್ನಂ ಅವರು ರಚಿಸಿರುವ ಅನೇಕ ತೆಲುಗು ಮತ್ತು ಕನ್ನಡ ಕೃತಿಗಳಿಗೆ ಸ್ವರ ಪ್ರಸ್ತಾರ ಸಂಯೋಜಿಸಿದ್ದಾರೆ.
ರೋಹಿಣಿ ಸುಬ್ಬರತ್ನಂ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಜತೂರ್ ಮತ್ತು ಸುತ್ತಮುತ್ತಲಿನ ಹಿಂದೂ ದೇವಾಲಯಗಳು ಮತ್ತು ಸಾಂಸ್ಕೃತಿಕ ತಾಣಗಳ ಪುನರುಜ್ಜೀವನವನ್ನೂ ಕೈಗೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯನ್ನು ಉತ್ತಮ ವಿದ್ಯಾ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ. ಮಾನವೀಯ ಬದುಕು ಮತ್ತು ಮೌಲ್ಯಗಳನ್ನು ಉನ್ನತಗೊಳಿಸುವ ನಿಟ್ಟಿನ ಅನೇಕ ಯೋಜನೆಗಳ ರೂವಾರಿಯಾಗಿದ್ದಾರೆ . ಕಾಂಚನಾ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ನಿರ್ವಾಹಕರಾಗಿ ಪ್ರತಿ ವರ್ಷ ಸಂಗೀತೋತ್ಸವ. ಕಾಂಚನ ಪ್ರಶಸ್ತಿ ನೀಡಿಕೆ ಮತ್ತು ಇನ್ನಿತರ ಜನಪರ ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯೂ ಆಗಿದ್ದಾರೆ.
ರೋಹಿಣಿ ಸುಬ್ಬರತ್ನಂ ಅವರು ಕರ್ನಾಟಕ ಸರ್ಕಾರದ ಶ್ರೀ ನಿಜಗುಣ ಪುರಂದರ ಪ್ರಶಸ್ತಿ, ಸಂತ ಶಿಶುನಾಳ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಮುಂತಾದ ಆಯ್ಕೆ ಸಮಿತಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ವಿದುಷಿ ರೋಹಿಣಿ ಸುಬ್ಬರತ್ನಂ ಅವರಿಗೆ ಪ್ರತಿಷ್ಠಿತ ಅನನ್ಯ ಸಂಸ್ಥೆಯ "ಅನನ್ಯ ಶಾಸ್ತ್ರ ಕೌಸ್ತುಭ" ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸರಳ, ಸುಸಂಸ್ಕೃತ, ಆತ್ಮೀಯ ಭಾವವುಳ್ಳ ರೋಹಿಣಿ ಸುಬ್ಬರತ್ನಂ ಅವರೊಡನೆ ಸಂವಹನ ನಡೆಸುವುದೇ ಸಂತಸ ನೀಡುವಂತದ್ದು. ಈ ಭಾಗ್ಯ ಪಡೆದಿರುವ ನಾನು ರೋಹಿಣಿ ಸುಬ್ಬರತ್ನಂ ಅವರಿಗೆ ಗೌರವ ಪೂರ್ವಕವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸುವಲ್ಲಿ ತುಂಬ ಸಂತೋಷಿಸುತ್ತಿದ್ದೇನೆ. ನಮಸ್ಕಾರ.
Happy birthday to Musicologist Vidushi Rohini Subbarathnam 🌷🙏🌷
ಕಾಮೆಂಟ್‌ಗಳು