ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಸ್ವಾಮಿ


 ರಾಮಸ್ವಾಮಿ ಡಿ ಎಸ್


ಡಿ. ಎಸ್. ರಾಮಸ್ವಾಮಿ ಉತ್ಸಾಹಿ ಸಾಹಿತ್ಯ ಸಾಧಕರು.

ರಾಮಸ್ವಾಮಿ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಜನಿಸಿದರು. ತಂದೆ ಡಿ. ಶ್ರೀನಿವಾಸರಾವ್. ತಾಯಿ ಗಿರಿಜಮ್ಮ.  ತರೀಕೆರೆ, ಭದ್ರಾವತಿ, ಶಿವಮೊಗ್ಗೆಗಳಲ್ಲಿ  ವಿದ್ಯಾಭ್ಯಾಸ ನಡೆಯಿತು. ವಾಣಿಜ್ಯದಲ್ಲಿ ಪದವಿ, ಕನ್ನಡ ಎಂ.ಎ, ವಿಮೆ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದರು.

ರಾಮಸ್ವಾಮಿ ಭಾರತೀಯ ಜೀವ ವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1994ರಿಂದ ಇವರು ಅರಸೀಕೆರೆ ನಿವಾಸಿ.

ಸಾಹಿತ್ಯಾಸಕ್ತರಾದ ರಾಮಸ್ವಾಮಿ ಅವರ ಬರಹಗಳು ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಕವಿತೆ, ಕತೆ, ಪ್ರಬಂಧ, ಚಿಂತನ, ಅಂಕಣ ಮುಂತಾದ ಬಹುರೂಪದಲ್ಲಿ ಪ್ರಕಟಗೊಂಡಿವೆ.  ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ 2004, 2005 ಮತ್ತು 2008, ಕನ್ನಡಪ್ರಭ ಸಂಕ್ರಾಂತಿ ಕಥಾ ಸ್ಪರ್ಧೆ 2010, ಸಂಚಯ ಹಾಗೂ ಸಂಕ್ರಮಣ ಸಾಹಿತ್ಯ ಮುಂತಾದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ಆಕಾಶವಾಣಿಯ ಹಾಸನ, ಭದ್ರಾವತಿ ಮತ್ತು ಬೆಂಗಳೂರು ಕೇಂದ್ರಗಳಿಂದ ನೂರಾರು ಚಿಂತನಗಳ ಪ್ರಸಾರದಲ್ಲಿ ಪಾಲ್ಗೊಂಡಿದ್ದಾರೆ. ದೂರದರ್ಶನದ ಚಂದನ, ಕಸ್ತೂರಿ ಮತ್ತು ಉದಯ ವಾಹಿನಿಗಳ ಟಾಕ್ ಷೋಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡಪ್ರಭದ ವಿಮರ್ಶೆ ಅಂಕಣವನ್ನು ಡೀಎಸ್ಸಾರ್‌ ಹೆಸರಿನಲ್ಲಿ ನಿರ್ವಹಿಸಿದ ಅವರು ವಿಜಯಕರ್ನಾಟಕ ಪತ್ರಿಕೆಯ ಓಪೆಡ್ ಅಂಕಣಕಾರರಾಗಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಂತರ್ಜಾಲದ ಪತ್ರಿಕೆಗಳಾದ ಅವಧಿಯಲ್ಲಿ ಅಂಕಣಕಾರರಾಗಿ ಮತ್ತು ಕೆಂಡಸಂಪಿಗೆಯಲ್ಲಿ ಲೇಖನ, ಕವಿತೆಗಳನ್ನೂ ಪ್ರಕಟಿಸಿದ್ದಾರೆ.

ರಾಮಸ್ವಾಮಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಉಡುಪಿ ಮತ್ತು ಗದಗಗಳಲ್ಲಿ ಪ್ರಬಂಧ ಮಂಡನೆ,  ಜಿಲ್ಲಾ ಸಾಹಿತ್ಯ ಸಮ್ಮೇಳನ, ದಸರಾ ಕವಿಗೋಷ್ಠಿ, ನುಡಿಸಿರಿಯ ಕವಿ ಸಮಯ-ಕವಿ ನಮನ ಹಾಗೂ ಸಾಹಿತ್ಯ ಅಕಾಡೆಮಿಯ ವಿವಿಧ ಕಾರ್ಯಕ್ರಮಗಳಲ್ಲಿ ಉಪನ್ಯಾಸಕರಾಗಿ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅರಸೀಕೆರೆ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಸಂದಿದೆ.

ರಾಮಸ್ವಾಮಿ ಅವರ ಬರಹಗಳು ಕೃತಿರೂಪದಲ್ಲಿಯೂ ಮೂಡಿ ಅನೇಕ ಪ್ರಶಸ್ತಿ ಗಳಿಸಿವೆ. 'ಮರೆತ ಮಾತು' (2002) ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ಕಾವ್ಯ ಪ್ರಶಸ್ತಿ, 'ಉಳಿದ ಪ್ರತಿಮೆಗಳು (2007) ಹಸ್ತಪ್ರತಿಗೆ ಕನ್ನಡ ಕಾವ್ಯ ಸಂದರ್ಭದ ಪ್ರತಿಷ್ಠಿತ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯಪ್ರಶಸ್ತಿ (2006), 'ತೆರದರಷ್ಟೇ ಬಾಗಿಲು' (2010) ಹಸ್ತಪ್ರತಿಗೆ ಧಾರವಾಡದ ವಿಭಾಸಾಹಿತ್ಯ ಪ್ರಶಸ್ತಿ (2010), ‘ಮೀನು ಬೇಟೆಗೆ ನಿಂತ ದೋಣಿ ಸಾಲು' ಕೃತಿಗೆ ‘ಕಡೇಂಗೋಡ್ಲು ಕಾವ್ಯ ಪ್ರಶಸ್ತಿ 2021’  ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಆತ್ಮೀಯರೂ, ಸಾಧಕರೂ, ಉತ್ಸಾಹಿಗಳೂ ಆದ ಡಿ. ಎಸ್. ರಾಮಸ್ವಾಮಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of our friend and lovely writer D S Ramaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ