ದೀಪಿಕಾ ಶ್ರೀನಿವಾಸನ್
ದೀಪಿಕಾ ಶ್ರೀನಿವಾಸನ್
ವಿದುಷಿ ದೀಪಿಕಾ ಶ್ರೀನಿವಾಸನ್ ಹೆಸರಾಂತ ಯುವ ಮೃದಂಗ ಕಲಾವಿದೆಯಾಗಿಯಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಕೈಗೊಂಡು, ವೃತ್ತಿ ನಡೆಸಿದರೂ, ಸಂಗೀತದಲ್ಲಿ ಆಸಕ್ತಿ ಮೂಡಿಸಿಕೊಂಡು ಮಹತ್ವದ ಸಾಧನೆ ಮಾಡುತ್ತ ಸಾಗಿದ್ದಾರೆ
ಮೇ 29, ದೀಪಿಕಾ ಅವರ ಜನ್ಮದಿನ. ಅವರದ್ದು ಸಂಗೀತ ಸಾಹಿತ್ಯಗಳಲ್ಲಿ ಪ್ರಸಿದ್ಧವಾದ ಕುಟುಂಬ. ಇವರ ತಾತ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ವಿಮರ್ಶಕರೂ, ವಿದ್ವಾಂಸರೂ ಮತ್ತು ನಮ್ಮ ನಾಡಿನ ಕನ್ನಡ ಮತ್ತು ಇಂಗ್ಲಿಷಿನ ಶ್ರೇಷ್ಠ ಬರೆಹಗಾರರೂ ಆದ ಪ್ರೊ. ಸಿ. ಎನ್. ರಾಮಚಂದ್ರನ್. ತಾಯಿ ಗೀತಾ ಶ್ರೀನಿವಾಸನ್ ಅವರೂ ಮಹತ್ವದ ಬರೆಹಗಾರ್ತಿಯಾಗಿ ಹೆಸರಾಗಿದ್ದಾರೆ. ದೀಪಿಕಾ ಅವರ ಸಹೋದರಿ ಕೃತ್ತಿಕಾ ಶ್ರೀನಿವಾಸನ್ Krithika Sreenivasan ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಸರಾಂತ ಗಾಯನ ಕಲಾವಿದೆ.
ದೀಪಿಕಾ ಅವರು ವಿದ್ವಾನ್ ನಂದಲಾಲ್ ರಾಮಮೂರ್ತಿ ಅವರಿಂದ ಮೃದಂಗ ವಾದನವನ್ನು ಕಲಿತು ಮುಂದೆ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಅವರಲ್ಲಿ ಉನ್ನತ ಸಾಧನೆ ಮಾಡುತ್ತ ಬಂದಿದ್ದಾರೆ.
ದೀಪಿಕಾ ತಮ್ಮ ಸಹೋದರಿ ಕೃತ್ತಿಕಾ ಸೇರಿದಂತೆ, ಹೆಸರಾಂತ ಕಲಾವಿದರಿಗೆ ಪ್ರಸಿದ್ಧ ವೇದಿಕೆಗಳಲ್ಲಿ ಮೃದಂಗ ವಾದನ ಸಹಕಾರ ನೀಡಿರುವುದಲ್ಲದೆ ತಮ್ಮದೇ ಸೋಲೋ ತಾಳವಾದ್ಯ ಕಾರ್ಯಕ್ರಮಗಳನ್ನೂ ನೀಡಿ ಹೆಸರಾಗಿದ್ದಾರೆ.
ದೀಪಿಕಾ ಅವರು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ನಡೆಸುವ ವಿದ್ವತ್ ಪದವಿ ಪರೀಕ್ಷೆಗಳಲ್ಲಿ ಉನ್ನತ ಸಾಧನೆಯೊಂದಿಗೆ ಉತ್ತೀರ್ಣತೆ ಗಳಿಸಿದವರು. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ ಮಹಾನ್ ಕಲಾವಿದರು ನಡೆಸುವ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡವರು. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಿದ್ಯಾರ್ಥಿ ವೇತನವೂ ಸಂದಿತು. ದೀಪಿಕಾ ಆಕಾಶವಾಣಿಯ ಬಿ-ಹೈಗ್ರೇಡ್ ಮಾನ್ಯತೆ ಗಳಿಸಿದ ಕಲಾವಿದೆಯಾಗಿದ್ದಾರೆ.
ದೀಪಿಕಾ ಅವರಿಗೆ ವೆಲ್ಲೂರು ರಾಮಭದ್ರನ್ ದತ್ತಿ ಬಹುಮಾನ, ಅಮೃತೂರು ಜಾನಕಿ ಅಮ್ಮಾಳ್ ದತ್ತಿ ಬಹುಮಾನ ಸೇರಿದಂತೆ ಅನೇಕ ಬಹುಮಾನಗಳು ಸಂದಿವೆ. ಅನೇಕ ವಿಶೇಷ ಸಂಗೀತ ಯೋಜನೆಗಳಲ್ಲ ಸಹಭಾಗಿಯಾಗಿರುವ ದೀಪಿಕಾ ಕೆಲವೊಂದು ಸಂಗೀತ ಕಾರ್ಯಕ್ರಮಗಳನ್ನೂ ನಿರ್ದೇಶಿಸಿದ್ದಾರೆ. ದೇಶ ವಿದೇಶಗಳ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಇವರ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದು, ಅನೇಕ ಸಂಘ ಸಂಸ್ಥೆಗಳ ಗೌರವವೂ ಸಂದಿದೆ.
ಪ್ರತಿಭಾನ್ವಿತ ಮೃದಂಗ ವಾದನ ಕಲಾವಿದೆ ವಿದುಷಿ ದೀಪಿಕಾ ಶ್ರೀನಿವಾಸನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to our Mridangam artiste Vidushi. Deepikaa Sreenivasan
ಕಾಮೆಂಟ್‌ಗಳು