ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ.ವಿ. ರಂಗಶೆಟ್ಟಿ


 ಸಿ.ವಿ. ರಂಗಶೆಟ್ಟಿ 


ಫೇಸ್ಬುಕ್ನಲ್ಲಿ ನನಗೆ ಹಲವು ವರ್ಷಗಳಿಂದ ಸಿ.ವಿ.ಆರ್.ಶೆಟ್ಟಿ ಆಪ್ತರಾದವರು. ಮುಖತಃ ನಾವು ಕಂಡಿಲ್ಲವಾದರೂ, ಅವರಿಗೆ ನನ್ನ ಕುರಿತು ಅದಮ್ಯ ಪ್ರೀತಿ.  ಅವರ ಸಾಧನೆ ತಿಳಿದು ಬರೆಯಬೇಕು ಎಂಬುದು ನನ್ನ ಬಹುದಿನದ ಇಚ್ಛೆ ಆಗಿತ್ತು.  ಆ ನಿಟ್ಟಿನ ಯತ್ನದಲ್ಲಿದ್ದಾಗ ಇಂದು ನನ್ನ ಕಣ್ಣಿಗೆ ಬಿದ್ದದ್ದು ಅವರ ಶಿಷ್ಯಬಳಗಕ್ಕೆ ಸೇರಿದ ಆತ್ಮೀಯ ಗೆಳೆಯ ಸಿ.ಎನ್. ರಮೇಶ್ ಅವರು  ಬರೆದಿರುವ ಅಮೂಲ್ಯ ಲೇಖನ.  ಹಾಗಾಗಿ ಹೆಚ್ಚಿನ ಶ್ರಮ ಇಲ್ಲದೆ, ಸಿ.ಎನ್. ರಮೇಶ್ ಅವರನ್ನೇ ಬರಹ ಕೊಡಲು ಕೇಳಿದೆ.  ಇದೋ ಆ ಬರಹ ಇಲ್ಲಿದೆ:

ಮಲ್ಲೇಶ್ವರದಲ್ಲಿ ಪಾಠ ಮಾಡಿದ್ದ "ಆಧುನಿಕ ಕುವೆಂಪು" ಶ್ರೀ.ಸಿ ವಿ ರಂಗಶೆಟ್ಟಿ 
ಲೇಖಕರು: ಸಿ.ಎನ್.ರಮೇಶ್ CN Ramesh

ಸುಮಾರು ವರ್ಷಗಳ ಹಿಂದೆ ನನ್ನ ಕನಸೊಂದು ಅಂದುಕೊಂಡಂತೆ ನನಸಾಗಿತ್ತು. ಆ ನನಸು - ನನ್ನ ಮೆಚ್ಚಿನ ಕನ್ನಡ ಉಪಾಧ್ಯಾಯರಾಗಿದ್ದ ಶ್ರೀ.ಸಿ ವಿ ರಂಗಶೆಟ್ಟಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕಿದ್ದು. ಸುಮಾರು ಮೂರು ದಶಕಗಳ ಹಿಂದಿನ ಕನಸು  ಅದು. ನಾನು ಮಲ್ಲೇಶ್ವರದ ರಾಘವೇಂದ್ರ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ "ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆಯ್ಕೆಯಾದವರ ಹೆಸರಿನ ಪಟ್ಟಿ ದಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವಿಷಯವನ್ನು ನೋಡಿದಾಗ ನನ್ನ ಕಣ್ಣು ಹುಡುಕುತ್ತಿದ್ದುದ್ದು  ಶ್ರೀ  ಸಿ ವಿ ರಂಗಶೆಟ್ಟಿ ಅವರ ಹೆಸರನ್ನು !  ನಮ್ಮ ಪ್ರೌಢ ಶಾಲಾ ಕನ್ನಡ ಶಿಕ್ಷಕರು. ಉನ್ನತ ಮಾನವೀಯ ಮೌಲ್ಯಗಳ, ಆದರ್ಶದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಬದುಕಿನುದ್ದಕ್ಕೂ ಆ ಮೌಲ್ಯಗಳು ಸಮಗ್ರ ವ್ಯಕ್ತಿತ್ವವಾಗಿ ನಮ್ಮಲ್ಲಿ ರೂಪುಗೊಳಿಸಿದ ವ್ಯಕ್ತಿ ಶ್ರೀ. ಸಿ ವಿ ರಂಗಶೆಟ್ಟಿ. ಅವರಿಗೆ ಬೆಂಗಳೂರು ಉತ್ತರ ವಿಭಾಗದ ಶಿಕ್ಷಣ ಇಲಾಖೆಯಿಂದ "ಉತ್ತಮ ಶಿಕ್ಷಕ" ಪ್ರಶಸ್ತಿ ಪ್ರಧಾನವಾಯಿತು. ನಮ್ಮ ಪ್ರೀತಿಯ ಮೇಷ್ಟ್ರು ಆ ದಿನಗಳಲ್ಲಿ ಒಂದು ವರ್ಷದ  ಸೇವೆಯನ್ನು ಹೊಂದಿದ್ದು ಬಿ ಇ ಎಲ್ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಕ್ಷುಬ್ಧ ವ್ಯವಹಾರಿಕ ಪ್ರಪಂಚದಲ್ಲೂ ಒಂದು ಒಳ್ಳೆಯ ಪ್ರಾಮಾಣಿಕ ಆಯ್ಕೆ ನಡೆದಿದ್ದು ವಿದ್ಯಾರ್ಥಿ ಸಮೂಹಕ್ಕೆ ಸಮಾಧಾನವಾಗಿತ್ತು ಎಂಬ ಸಮಾಧಾನದಲ್ಲಿ  ನಾನು, ಸಿ ಎಂ ನವನೀತ್, ರಜತ್ ಉದಯಕುಮಾರ್, ಲಕ್ಷ್ಮೀಪತಿ  ಹಾಗು ಅನೇಕ ವಿದ್ಯಾರ್ಥಿ ಸಮುದಾಯದವರು, ಶಿಕ್ಷಕ ಸಮುದಾಯದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಮ್ಮ ಭಾಗ್ಯ. ಕಾರಣವಿಷ್ಟೇ - ಬಹಳ ತಡವಾಗಿಯಾದರೂ ನಾನು ಕಂಡ ಕನಸು ನನಸಾಗಿದ್ದು. ಶ್ರೀಯುತ. ಸಿ ವಿ ರಂಗಶೆಟ್ಟಿ ಅವರು ಎಂತಹ ಕನ್ನಡ ಅಭಿಮಾನಿ ಎಂದರೆ ನಿಜಕ್ಕೂ "ಆಧುನಿಕ ಕುವೆಂಪು" ಅವರಂತೆ ವಿಶ್ವಮಾನವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮಹಾನ್ ವ್ಯಕ್ತಿ. ಅವರ ಕನ್ನಡ ಅಭಿಮಾನದ ಬಗ್ಗೆ ಮತ್ತಷ್ಟು ತಿಳಿಯಲು ಅವರ ಮಗನ ಹೆಸರಿನ ಬಗ್ಗೆಯೂ ತಿಳಿಸಲೇ ಬೇಕು. ಮೌಲ್ಯವಂತಿಕೆಗೆ ಒತ್ತು. ಶ್ರೀ.ಸಿ  ವಿ ರಂಗಶೆಟ್ಟಿಯವರು ತಮ್ಮ ಮಗನಿಗೆ  ಇಟ್ಟ ಹೆಸರು ಅನಿಕೇತನ. 

"BUDDHA was not a BUDDHIST. JESUS was not a CHRISTIAN. MUHAMMAD was not a MUSLIM. They were teachers who taught LOVE. LOVE was their religion. 

ನನಗಿನ್ನೂ ಚೆನ್ನಾಗಿ ನೆನಪಿದೆ ನಾನು ಮೊದಲ ಸಲ ನನ್ನ ಮೇಷ್ಟ್ರು ಶ್ರೀ. ಸಿ ವಿ ರಂಗಶೆಟ್ಟಿ ಅವರ ಪಾದರಾಯನಪುರದ ಬಾಡಿಗೆ ಮನೆಗೆ ಹೋಗಿದ್ದಾಗ ಅವರ ಮಗ ಹುಟ್ಟಿದ್ದ. ತೊಟ್ಟಿಲಲ್ಲಿ ಇದ್ದ ಪುಟ್ಟ ಮಗುವನ್ನು ತೋರಿಸಿ ಮಗುವಿನ ಹೆಸರನ್ನು ತಿಳಿಸಿದ್ದರು. ಮನಸ್ಸು ತುಂಬಿ ಬಂದಿತ್ತು. ತಮ್ಮ ಮಗನಿಗೆ ಅವರು ಇಟ್ಟಿದ್ದ ಹೆಸರು ಅನಿಕೇತನ. ಕುವೆಂಪು ಅವರ ವಿಶ್ವ ಮಾನವ ಗೀತೆ ಓ ನನ್ನ ಚೇತನದಲ್ಲಿ ಬರುವ ಅನಿಕೇತನ ಎಂಬ ಪದ ನನಗೆ ಹೊಸದು. ಆದರೆ ಸಿ ವಿ ರಂಗಶೆಟ್ಟಿ ಅವರಿಗೆ ಇದ್ದ ಕನ್ನಡ ಪ್ರೀತಿ ಮತ್ತು ವಿಶ್ವ ಮಾನವ ತತ್ವ ನಿಜಕ್ಕೂ ದೊಡ್ಡದು. ತಮ್ಮ ಮಗನಿಗೆ ಇಟ್ಟ ಆ ಹೆಸರನ್ನು ಸ್ವಲ್ಪ ನೋಡೋಣ. “ನಿಕೇತನ" ಅಂದರೆ ಮನೆ. “ಅನಿಕೇತನ" ಅಂದರೆ "ಮನೆ ಇಲ್ಲದಿರುವುದು" ಎನ್ನುವುದು ವಾಚ್ಯಾರ್ಥ. ಅದರ ಸೂಚ್ಯಾರ್ಥ - ಯಾವುದೇ ಜಾತಿ, ಮತ, ಕುಲ, ಗೋತ್ರ, ಭಾಷೆ, ದೇಶಗಳಿಗೆ ಅಂಟಿಕೊಳ್ಳದೆ ಹಾಗೂ ಅವುಗಳಿಗೆ ಸೇರಿರುವ ಭ್ರಮೆಗಳನ್ನು ಹೊಂದದೆ, ಮಾನಸಿಕ ಗೋಡೆಗಳನ್ನು ಕಟ್ಟಿಕೊಂಡು ಅದರಲ್ಲಿ ಉಳಿಯದೆ, ವಿಶ್ವ ಮನಸನ್ನು ಒಳಗೊಂಡು ಚೈತನ್ಯವು ವಿಶ್ವವ್ಯಾಪಕವಾಗಬೇಕು. ಮತ ಗುಂಪು ಕಟ್ಟಿಕೊಳ್ಳುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ ಪ್ರತಿಯೊಬ್ಬರೂ ತಾವು ಕಂಡುಕೊಳ್ಳುವ ತಮ್ಮ ಮತಕ್ಕೆ ಮಾತ್ರ ಸೇರಬೇಕು.ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಮತ ಮನುಜ ಮತವಾಗಿ, ವಿಶ್ವಪಥವಾಗಿ, ಮನುಷ್ಯ ವಿಶ್ವಮಾನವನಾಗಬೇಕು. ಮನುಷ್ಯರ ಮನಸ್ಸು, ಹೃದಯಗಳು ನಿಂತ ನೀರಾಗದೆ ನಿರಂತರ ಆಗುವಿಕೆಯತ್ತ ಹರಿಯುತ್ತಿರಲಿ ಎಂಬ ಆಶಯದ ವಿಚಾರಧಾರೆ ನನ್ನ ಮನಸ್ಸನ್ನು ಬಹಳ ತೀಕ್ಷ್ಣವಾಗಿ ತಟ್ಟಿ ನನ್ನ ಬದುಕಿನಲ್ಲೂ ಅಳವಡಿಸಿಕೊಳ್ಳಲು ಪ್ರೇರಣೆಯಾಯಿತು. ಈಗ ಸಿ ವಿ ರಂಗಶೆಟ್ಟಿ ಅವರ ಮಗ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸಕ್ಕೆ ಸೇರಿ ಇತ್ತೀಚೆಗೆ ಮದುವೆಯೂ ಆಗಿದೆ ಮಗಳು ಅನುಪಮ ಅವರ ಮದುವೆಯೂ ಆಗಿದೆ. ಇನ್ನು ಗುರು ಪತ್ನಿ ಮೀನಾ  ನನ್ನ ವಯಸ್ಸಿನವರು.ಮೇಷ್ಟ್ರ ಅಕ್ಕನ ಮಗಳು. ಮೇಷ್ಟ್ರು ದಂಪತಿಗಳು ನನಗೆ ಕನ್ನಡದ ಶೃಂಗಾರ ಕವಿ ಕೆ ಎಸ್ ನರಸಿಂಹ ಸ್ವಾಮಿಯವರನ್ನೂ ನೆನಪಿಸಿ ಬಿಡುತ್ತಾರೆ. ಮೇಷ್ಟ್ರು ದಂಪತಿಗಳು ತಾತಾ ಅಜ್ಜಿ ಕೂಡಾ ಆಗಿದ್ದಾರೆ.ಇಂದು ಸಿ ವಿ ಆರ್ ಅವರ 64 ನೇ ಹುಟ್ಟುಹಬ್ಬ. ಅವರಿಗೆ ಪ್ರೀತಿಯ ಶುಭಾಶಯಗಳು.‌

ವಿಶ್ವಮಾನವಗೀತೆ – ಅನಿಕೇತನ
ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

---
ಪೂಜ್ಯ ಆತ್ಮೀಯ ಹಿರಿಯರಾದ ಸಿ.ವಿ.ಆರ್.ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

ಲೇಖನ ಕೃಪೆ: ಸಿ.ಎನ್. ರಮೇಶ್ 

Happy Birthday Cvrsetty Sachhidaananda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ