ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಕಲಮಾ


ಸಕಲಮಾ
ಲೇಖಕಿ: ಪ್ರಿಯಾ ಕೆರ್ವಾಶೆ

“ಮನಸ್ಸಿನ ವ್ಯಾಪ್ತಿಯನ್ನು ಮೀರಿ ಬೆಳೆದರಷ್ಟೇ ಈ ಬ್ರಹ್ಮಾಂಡದ ಅರಿವು ದಕ್ಕಲು ಸಾಧ್ಯ. ಆ ಮಹಾನ್ ದರ್ಶನದತ್ತ ಮುನ್ನಡೆಯೋಣ.”
- ಶ್ರೀಗುರು ಸಕಲಮಾ

ಶ್ರೀಗುರು ಸಕಲಮಾ ಈ ಕಾಲಘಟ್ಟದ ಮಹಾನ್ ಯೋಗಿನಿ ಎನಿಸಿದ್ದಾರೆ. ಇವರು ಉತ್ತರ ಹಾಗೂ ದಕ್ಷಿಣದ ಶ್ರೀವಿದ್ಯಾ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿದ ಅಧ್ಯಾತ್ಮ ಗುರು. ಜಗತ್ತಿನಾದ್ಯಂತ ಅಧ್ಯಾತ್ಮದ ಕಂಪು ಪಸರಿಸಿದ ಹಿಮಾಲಯದ ಯೋಗಿ ಸ್ವಾಮಿ ರಾಮ ಅವರ ನೇರ ಶಿಷ್ಯೆ. ಇನ್ನೊಂದೆಡೆ ಮೈಸೂರಿನ ವಿದ್ವಾಂಸ, ಪದ್ಮಶ್ರೀ ಡಾ ಆರ್‌ ಸತ್ಯನಾರಾಯಣ ಅವರಿಂದ ದಕ್ಷಿಣ ಭಾರತೀಯ ಶ್ರೀ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯನ್ನು ಧಾರೆ ಎರೆಸಿಕೊಂಡ ಧೀಮಂತೆ.  ಸದ್ಯ ಈ ಎರಡೂ ಪರಂಪರೆಗಳ ಪ್ರತಿನಿಧಿಯಾಗಿ ಸಾವಿರಾರು ಮಂದಿಯನ್ನು ಆಧ್ಯಾತ್ಮದ ಬೆಳಕಿನಲ್ಲಿ ಮುನ್ನಡೆಸುತ್ತಿದ್ದಾರೆ. 

ಶ್ರೀ ಸಕಲಮಾ ಹುಟ್ಟಿದ್ದು 1957ರ ಜೂನ್ 10ರಂದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ. ಬೆಳೆದದ್ದು ಸಾಗರದಲ್ಲಿ. ಇವರ ಪೂರ್ವಾಶ್ರಮದ ಹೆಸರು ಜ್ಯೋತಿ. ಆ ಕಾಲದಲ್ಲಿ ಮಧ್ಯಮ ವರ್ಗ ಅನುಭವಿಸುತ್ತಿದ್ದ ಬವಣೆಗಳ ಜೊತೆಗೇ ಇವರ ಬಾಲ್ಯ ಕಳೆಯಿತು. ಆದರೆ ಬಾಲ್ಯದಿಂದಲೂ ನಾಟ್ಯದೆಡೆಗಿನ ಅದಮ್ಯ ಪ್ರೀತಿ ಇವರನ್ನು ಭರತನಾಟ್ಯ ಕಲಿಯಲು ಪ್ರೇರೇಪಿಸಿತು. ಇನ್ನೊಂದೆಡೆ ಕಲಿಕೆಯಲ್ಲೂ ಅಮಿತವಾದ ಆಸಕ್ತಿ ಇತ್ತು. ಇದು ನಾಟ್ಯ ಹಾಗೂ ಪಠ್ಯ ಎರಡರಲ್ಲೂ ಪಾರಮ್ಯ ಸಾಧಿಸುವಂತೆ ಮಾಡಿತು. ಮುಂದೆ ಆಂಗ್ಲ ಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಉಪನ್ಯಾಸಕಿಯಾದರು. ಇನ್ನೊಂದೆಡೆ ಭರತನಾಟ್ಯದಲ್ಲಿ ಸಾಧನೆ ಮಾಡಿ ಗುರುವಾದರು. ಒಂದು ಕಡೆ ಆಂಗ್ಲ ಸಾಹಿತ್ಯದಲ್ಲಿ ಹೊಸ ಹುಡುಗರಿಗೆ ಮಾರ್ಗದರ್ಶನ ನೀಡುತ್ತಾ, ಇನ್ನೊಂದೆಡೆ ಭಾರತದ ಪುರಾತನ ಕಲೆ ಭರತನಾಟ್ಯವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾ, ಯೋಗದಲ್ಲೂ ಸಾಧನೆ ಮಾಡುತ್ತಾ ಮುಂದುವರಿಯುತ್ತಿದ್ದಾಗಲೇ ಯೋಗಾಚಾರ್ಯ ಪಟ್ಟಾಭಿರಾಮ್ ಅವರ ಪರಿಚಯವಾಯಿತು. ಮುಂದೆ ಅವರ ಬಾಳ ಸಂಗಾತಿಯೂ ಆದರು.

ಅದು 1992ನೇ ಇಸವಿ. ಮೈಸೂರಿನ ಶಿವಯೋಗ ಇನ್ಟಿಟ್ಯೂಟ್‌ನಲ್ಲಿ ಆಯೋಜಿತವಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ಒಂದರಲ್ಲಿ ಭಾಗವಹಿಸಲು ಸ್ವಾಮಿ ರಾಮ ಬಂದಿದ್ದರು. ಅಲ್ಲಿ ಆಕಸ್ಮಿಕವಾಗಿ ಜ್ಯೋತಿ ಅವರು ತಮ್ಮ ಪತಿ ಪಟ್ಟಾಭಿರಾಂ ಅವರೊಂದಿಗೆ ಸ್ವಾಮಿ ರಾಮರನ್ನು ಭೇಟಿಯಾಗುತ್ತಾರೆ. ಇದು ಇವರ ಬದುಕಿನ ಗತಿಯನ್ನೇ ಬದಲಿಸಿಬಿಡುತ್ತದೆ. ಮುಂದೆ ಹೃಷಿಕೇಶದ ಸ್ವಾಮಿ ರಾಮ ಅವರ ಸಾಧನ ಮಂದಿರದಲ್ಲಿ ಇವರಿಗೆ ಸ್ವಾಮಿ ರಾಮ ಅವರು ಶಾಂಭವ ದೀಕ್ಷೆ ನೀಡುತ್ತಾರೆ. ಇದು ಈಗ ಜನಪ್ರಿಯವಾಗಿರುವ ಶಾಂಭವಿ ದೀಕ್ಷೆ ಅಲ್ಲ. ಶ್ರೀವಿದ್ಯೆಯ ಅತ್ಯುನ್ನತ ದೀಕ್ಷೆ. ಮುಂದೆ ಸ್ವಾಮಿ ರಾಮ ಅವರ ದೇಹಾಂತ್ಯದ ಬಳಿಕ ಅವರ ಆಣತಿಯಂತೆ ಮೈಸೂರಿನ ಡಾ ಆರ್‌ ಸತ್ಯನಾರಾಯಣ ಅವರ ಶಿಷ್ಯರಾಗುತ್ತಾರೆ. ರಾ ಸ ಗುರುಗಳೆಂದೇ ಖ್ಯಾತರಾದ ಮಹಾಮಹೋಪಾಧ್ಯಾಯ ಡಾ. ರಾ ಸತ್ಯನಾರಾಯಣ ಅವರು ಇವರಿಗೆ ದಕ್ಷಿಣದ ವಿದ್ಯಾರಣ್ಯ ಭಾರತೀ ಪರಂಪರೆಯಲ್ಲಿ ಶ್ರೀವಿದ್ಯೆಯನ್ನು ಆರಂಭದಿಂದ ಅತ್ಯುನ್ನತ ಸಾಧನೆಯವರೆಗೆ ಮಾರ್ಗದರ್ಶನ ಮಾಡುತ್ತಾರೆ. 

ಉತ್ತರ ಹಾಗೂ ದಕ್ಷಿಣ ಭಾರತದ ಎರಡೂ ಪರಂಪರೆಗಳ 'ಅನುಭವ ವಿಜ್ಞಾನ' ಎಂದೇ ಹೆಸರಾದ ಶ್ರೀವಿದ್ಯೆಯಲ್ಲಿ ಪಾರಮ್ಯ ಮೆರೆದ ಶ್ರೀ ಸಕಲಮಾ ಸದ್ಯ ಈ ಎರಡೂ ಮಹಾನ್ ಅಧ್ಯಾತ್ಮ ಪರಂಪರೆಗಳ ಪ್ರತಿನಿಧಿಯಾಗಿದ್ದಾರೆ. ಮೂರು ದಶಕಗಳ ತಮ್ಮ ಅಧ್ಯಾತ್ಮ ಅನುಭವಗಳನ್ನು, ತಮ್ಮ ಅಧ್ಯಯನ, ಶೋಧಗಳಿಂದ ಕಂಡುಕೊಂಡ ಜ್ಞಾನವನ್ನು ಶಿಷ್ಯರಿಗೆ ಧಾರೆ ಎರೆಯುತ್ತಿದ್ದಾರೆ. 
 
ಸಕಲಮಾ ಅವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡಮಾಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ ನಾಟ್ಯಸರಸ್ವತಿ - ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ  ಸೇರಿದಂತೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ.
ಅನುಭವ ಜನ್ಯವಾದ ಇವರ ಉಪದೇಶಗಳು ಹಲವು ಅಧ್ಯಾತ್ಮ ಅನ್ವೇಷಕರಿಗೆ, ಸಾಧಕರಿಗೆ ಬೆಳಕಾಗಿ ಮುನ್ನಡೆಸುತ್ತಿವೆ. ಮಂತ್ರದೀಕ್ಷೆ, ಸತ್ಸಂಗ, ರಿಟ್ರೀಟ್, ಅಧ್ಯಾತ್ಮ ಕಾರ್ಯಾಗಾರ, ವೈಯುಕ್ತಿಕ ಮಾರ್ಗದರ್ಶನ ಇತ್ಯಾದಿಗಳಿಂದ ಜಗತ್ತಿನಾದ್ಯಂತ ನೆಲೆಸಿರುವ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. 

ಸಕಲಮಾ ಅವರ ಆತ್ಮಕಥನ 'ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು - ಸಕಾಲಿಕ ಮತ್ತು ಕಾಲಾತೀತ' ಕೃತಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡರಲ್ಲೂ ಶೀಘ್ರ ಹೊರಬರಲಿದೆ. 
ಹೀಗೆ ಎರಡು ಮಹಾನ್ ಗುರು ಪರಂಪರೆಗಳ ಸಂಗಮದಂತಿರುವ ಶ್ರೀಗುರು, ಶಿಷ್ಯರ ಪಾಲಿನ ವಾತ್ಸಲ್ಯಮಯೀ ಗುರುಮಾ ಶ್ರೀಗುರು ಸಕಲಮಾ ಅವರಿಗೆ ಜನ್ಮದಿನದ ಶುಭ ಹಾರೈಕೆಗಳು.

ಲೇಖನ ಕೃತಜ್ಞತೆ: ಪ್ರಿಯಾ ಕೆರ್ವಾಶೆ
ಒದಗಿಸಿದವರು:Rajkumar Holealur

On the birthday of Sakala Maa 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ