ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ಆರ್.ಶಂಕರಮೂರ್ತಿ


 ಎಂ. ಆರ್. ಶಂಕರಮೂರ್ತಿ


ವಿದ್ವಾನ್ ಎಂ. ಆರ್. ಶಂಕರಮೂರ್ತಿ ಕಳೆದ ಶತಮಾನದ ಮಹಾನ ಸಂಗೀತ ವಿದ್ವಾಂಸರು.  ಜೊತೆಗೆ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅನೇಕ ಕೃತಿರೂಪದಲ್ಲಿ ಕನ್ನಡಕ್ಕೆ ತಂದ ಮಹಾನ್ ವ್ಯಕ್ತಿ.

ಶಂಕರಮೂರ್ತಿಯವರು ಹಾಸನ ಜಿಲ್ಲೆಯ ಮುದಲಾಪುರದಲ್ಲಿ 1922ರ ಜೂನ್ 10ರಂದು ಜನಿಸಿದರು.  ತಂದೆ ರಾಮಕೃಷ್ಣಯ್ಯ, ತಾಯಿ ನಂಜಮ್ಮ, ತಂದೆ ತಾಯಿಗಳು ವಲಸೆ ಬಂದು ನೆಲಸಿದುದು ವೇದ, ಸಂಸ್ಕೃತ, ಸಂಗೀತಶಾಸ್ತ್ರ ಶಿಕ್ಷಣಗಳ ನೆಲೆಯಾದ ಮತ್ತೂರಿನಲ್ಲಿ. 
ಪರಿಸರಕ್ಕೆ ತಕ್ಕಂತೆ ಶಂಕರಮೂರ್ತಿ ಅವರಿಗೆ ಎಳೆತನದಿಂದಲೇ ಸಂಗೀತದಲ್ಲಿ ಆಸಕ್ತಿ ಮೊಳೆಯಿತು.  ತರೀಕೆರೆ ತಾಲ್ಲೂಕಿನ ಲಿಂಗದ ಹಳ್ಳಿಯಿಂದ ವಲಸೆ ಹೋಗಿ ತಮಿಳುನಾಡಿನಲ್ಲಿ ನೆಲೆಸಿದ್ದ ರಾಮಭಟ್ಟರಲ್ಲಿ ಮೂರು ವರ್ಷಗಳ ಕಾಲ ಸಂಗೀತ ಪಾಠ ಪಡೆದರು. ತಮಿಳು, ತೆಲುಗು ಭಾಷೆಗಳನ್ನು ಕಲಿತರು. ಕೇರಳಕ್ಕೆ ಹೋಗಿ, ಸಂಗೀತ ಪ್ರಪಂಚದ ಭೀಷ್ಮರೆನಿಸಿದ್ದ ಚೆಂಬೈ ವೈದ್ಯನಾಥ ಭಾಗವತರಲ್ಲಿ ಶಿಷ್ಯವೃತ್ತಿ ಮಾಡಿ ಸಂಗೀತ ಕಲಿತರು. ಮಲಯಾಳಂ ಭಾಷಾಧ್ಯಯನ ಮಾಡಿದರು. ಮುಂಬಯಿಗೆ ತೆರಳಿ ಪಂ. ವಿಷ್ಣುಭಾತ ಖಂಡೆಯವರಲ್ಲಿ ಹಿಂದೂಸ್ತಾನಿ ಸಂಗೀತ ಕಲಿತರು. ಹೀಗೆ ಬಹುಭಾಷಾ ಪಾಂಡಿತ್ಯದೊಡನೆ ಉಭಯ ಸಂಗೀತಗಳ ಪ್ರಭುತ್ವ ಗಳಿಸಿದರು. 

ಶಂಕರಮೂರ್ತಿಯವರು ಬೆಳಕವಾಡಿ ವರದರಾಜ ಅಯ್ಯಂಗಾರ್ಯರಿಂದಲೂ ಸಂಗೀತ ಕ್ರಮವನ್ನು ಅಭ್ಯಾಸ ಮಾಡಿದರು.  ಬೆಂಗಳೂರು ಆಕಾಶವಾಣಿ, ಮದರಾಸು ಆಕಾಶವಾಣಿ ಕೇಂದ್ರಗಳಿಂದ ಇವರ ಹಲವಾರು ಸಂಗೀತ ಕಾರ್ಯಕ್ರಮಗಳು ಭಿತ್ತರಗೊಂಡವು. ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನ ಸಭಾ, ನಾದಜ್ಯೋತಿ ಶ್ರೀ ತ್ಯಾಗರಾಜ ಸ್ವಾಮಿ ಭಜನ ಸಭಾ ಸೇರಿದಂತೆ ಅನೇಕ  ವೇದಿಕೆಗಳಲ್ಲಿ  ಸಂಗೀತ ಕಚೇರಿ ನಡೆಸಿಕೊಟ್ಟರು. 

ಶಂಕರಮೂರ್ತಿಯವರು ಬೆಂಗಳೂರಿನ ಶ್ರೀರಾಂಪುರದಲ್ಲಿ ಶ್ರೀಗುರು ಗುಹಗಾನ ನಿಲಯವನ್ನು ಸ್ಥಾಪಿಸಿದರು.  ಇದು ಸಂಗೀತ ಸಾಧನೆ, ಗಾಯನ, ಜಿಜ್ಞಾಸೆಗಳಿಗೆ ವೇದಿಕೆಯಾಯಿತು. ಸಂಗೀತದಲ್ಲಿ ಅನೇಕ  ಸಂಶೋಧನೆಗಳನ್ನು ಮಾಡಿದರು. ಪ್ರಾಥಮಿಕ ಹಂತದ ಕಲಿಕೆಗಾಗಿ ಉಪಯುಕ್ತ ಸಂಗೀತ ಗ್ರಂಥಗಳ ರಚನೆ ಮಾಡಿದರು. ಕರ್ನಾಟಕ ಸಂಗೀತ ತರಂಗಿಣಿ ಪುಸ್ತಕ ಮಾಲೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕನ್ನಡ ಗ್ರಂಥಗಳ ರಚನೆ ಮಾಡಿದರು. ಹಲವಾರು ಪ್ರಬುದ್ಧ ಕೃತಿಗಳ ಪ್ರಕಾಶನ ಮಾಡಿದರು. ತ್ಯಾಗರಾಜರ ಪಂಚರತ್ನ ಕೀರ್ತನೆಗಳು, ನವಾವರಣ ಕೃತಿಗಳು, ಪ್ರಸಿದ್ಧ ರಾಗಮಾಲಿಕೆಗಳು, ಭಕ್ತಿ ಸಂಗೀತ ಸುಧಾ, ಪ್ರಹ್ಲಾದ ವಿಜಯ, ನಾಮ ಮಹಿಮಾ ಕೀರ್ತನೆಗಳು, ಉಪಚಾರ ಕೀರ್ತನೆಗಳು, ಉತ್ಸವ ಸಂಪ್ರದಾಯ ಕೀರ್ತನೆಗಳು, ಮುತ್ತುಸ್ವಾಮಿ ದೀಕ್ಷಿತರ ನವಗ್ರಹ ಕೃತಿಗಳು, ಶ್ಯಾಮಾ ಶಾಸ್ತ್ರಿಗಳ ಕೃತಿಗಳು, ಸ್ವಾತಿ ತಿರುನಾಳರ ಕೃತಿಗಳು ಹೀಗೆ  ಅನೇಕ ಸಂಗೀತ ಶ್ರೇಷ್ಠ ವಾಗ್ಗೇಯಕಾರರ  ಕೃತಿಗಳನ್ನು ಕನ್ನಡದಲ್ಲಿ ಓದಿ ಸಂಗೀತಾಭ್ಯಾಸ ಮಾಡುವವರಿಗೆ ಅನುಕೂಲವಾಗುವ ಹಾಗೆ  ಪ್ರಕಟಣೆ ಮಾಡಿದರು. ಮುತ್ತುಸ್ವಾಮಿ ದೀಕ್ಷಿತರ ಆಂಗ್ಲ ಸಂಗೀತ ಸ್ವರ ಮಾಲಿಕೆಗಳ ರಚನೆಯ ವಿರಳ ಕೃತಿಯನ್ನು ನಾಲ್ಕು ಲಿಪಿಯನ್ನುಳ್ಳ ಪುಸ್ತಕ ಹಾಗೂ ಧ್ವನಿ ಸುರುಳಿಯಾಗಿ ಬಿಡುಗಡೆ ಮಾಡಿದರು. 

ವಿದ್ವಾನ್ ಶಂಕರಮೂರ್ತಿ ಅವರಿಗೆ ನಾದಜ್ಯೋತಿ ಶ್ರೀ ತ್ಯಾಗರಾಜ ಸ್ವಾಮಿ ಭಜನ ಸಭಾ, ಬೆಂಗಳೂರಿನ ಗಾಯನ ಸಮಾಜ, ತ್ಯಾಗರಾಜ ಗಾನಸಭಾ ಮುಂತಾದ ಸಂಸ್ಥೆಗಳಿಂದ ಸನ್ಮಾನ, ಪುರಸ್ಕಾರಗಳು ಸಂದವು.  ಈ ಮಹಾನ್ ವಿದ್ವಾಂಸರು 1993ರ ಜುಲೈ 2ರಂದು ಈ ಲೋಕವನ್ನಗಲಿದರು.

On the birth anniversary of great musician and scholar M. R. Shankara Murthy 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ