ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಹ್ಲಾದರಾವ್


 ಎನ್. ಪ್ರಹ್ಲಾದರಾವ್


ಎನ್. ಪ್ರಹ್ಲಾದರಾವ್ ಮಹತ್ವದ ಪ್ರಬಂಧ ಸಾಹಿತ್ಯಕಾರರಾಗಿ ಹೆಸರಾಗಿದ್ದವರು.

ಎನ್. ಪ್ರಹ್ಲಾದರಾವ್  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಂಡಗದ್ದೆ ಎಂಬಲ್ಲಿ 1920ರ ಜೂನ್  10ರಂದು ಜನಿಸಿದರು.  ತಂದೆ ಹನುಮಂತರಾವ್ ಮತ್ತು ತಾಯಿ ತುಳಜಾಬಾಯಿ. 

ಪ್ರಹ್ಲಾದರಾವ್ ಅವರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಶಿವಮೊಗ್ಗದಲ್ಲಿ ನಡೆಯಿತು. ಪ್ರೌಢಶಿಕ್ಷಣ ಮೈಸೂರಿನಲ್ಲಿ ನಡೆಯಿತು. ಯುವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜುಗಳಿಂದ  ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಗಳಿಸಿದರು. 

ಎಂ.ಎ. ಪದವಿ ಪಡೆದನಂತರ  ಅಠಾರ ಕಚೇರಿಯಲ್ಲಿ ಕೆಲ ಕಾಲ ಗುಮಾಸ್ತರಾಗಿ ದುಡಿದರು. ಅಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರವೇಶಿಸಿ ನಂತರ ರೀಡರ್ ಆಗಿ ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಮುಂತಾದೆಡೆಗಳಲ್ಲಿದ್ದು, ಅಧ್ಯಾಪಕ ವೃತ್ತಿಯ ಜೊತೆಗೆ ಮೈಸೂರು ವಿ.ವಿ.ದ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ ಕನ್ನಡ ‘ವಿಶ್ವಕೋಶ’ದ ಸಂಯೋಜಕ ಸಂಪಾದಕರಾಗಿ ದುಡಿದರು. 

ವಿದ್ಯಾರ್ಥಿ ದೆಸೆಯಲ್ಲಿಯೇ ಬರವಣಿಗೆಯನ್ನು ಪ್ರಾರಂಭಿಸಿದ ಪ್ರಹ್ಲಾದರಾವ್‌ ಅವರಿಗೆ ಜಿ.ಪಿ. ರಾಜರತ್ನಂ ಗುರುಗಳಾಗಿದ್ದರು. ಒಮ್ಮೆ ಕಾಲೇಜು ಕ್ಯಾಂಟೀನಿನಲ್ಲಿ ಕುಳಿತಿದ್ದವರನ್ನು ಇವರೇ ರಾಜರತ್ನಂ ಎಂದು ಸ್ನೇಹಿತನೊಬ್ಬ ತೋರಿಸಿದಾಗ, ಪ್ರಹ್ಲಾದರಾವ್‌ರವರ ಮನಸ್ಸಿನಲ್ಲಿ ಕೀಟಲೆಯ ಬುದ್ಧಿ ಜಾಗೃತವಾಗಿ ಅವರ ಮುಂದಿನ ಕುರ್ಚಿಯಲ್ಲೇ ಹೋಗಿ ಕುಳಿತರು. ಏನೋ ಓದುತ್ತಾ ಕುಳಿತಿದ್ದ ರಾಜರತ್ನಂ ಇವರನ್ನು ಗಮನಿಸಲಿಲ್ಲ. ರಾಜರತ್ನಂರವರು ಸಪ್ಲೈಯರ್ ಬಂದಾಗ ‘ಇಡ್ಲಿ, ವಡೆ, ತುಪ್ಪ ಹಾಕಿ ತಾ’ ಎಂದರು. ಎದುರಿಗೆ ಕುಳಿತಿದ್ದ ಪ್ರಹ್ಲಾದರಾವ್‌ರವರು ‘ನನಗೂ ಅಷ್ಟೆ’ ಎಂದರು. ರಾಜರತ್ನಂ ಕತ್ತೆತ್ತಿ ನೋಡಿದರು. ತಿಂದು ಮುಗಿಸಿ ಬೆಣ್ಣೆಮಸಾಲೆ ಎಂದರು ರಾಜರತ್ನಂ. ಪ್ರಹ್ಲಾದರಾವ್ ‘ನನಗೂ’ ಎಂದರು. ಕಾಫಿ ಎಂದರು ರಾಜರತ್ನಂ. ಇವರು ‘ನನಗೂ’ ಎಂದು ಹೇಳಿ ಕುಡಿದು ಮುಗಿಸಿ ತರಗತಿಗೆ ತೆರಳಿದರು. ರಾಜರತ್ನಂ ತರಗತಿಯನ್ನು ಪ್ರವೇಶಿಸಿ ನೋಡಿದರೆ, ಕ್ಯಾಂಟೀನಿನಲ್ಲಿ ಪೈಪೋಟಿಯಲ್ಲಿ ತಿಂಡಿ ತಿಂದ ಹುಡುಗ ಮೊದಲ ಬೆಂಚಿನಲ್ಲಿ ಕುಳಿತಿದ್ದ. ಈಗ ಇವರ ಬುದ್ಧಿ ಜಾಗೃತವಾಯಿತು. ನಿಮ್ಮ ಬಾಲ್ಯದ ಘಟನೆಯನ್ನಾಧರಿಸಿ ಪ್ರಬಂಧ ಬರೆಯಿರಿ ಎಂದು ತರಗತಿಯನ್ನುದ್ದೇಶಿಸಿ ಹೇಳಿದರು. ಪ್ರಹ್ಲಾದರಾವ್ ಬರೆದರು. ತಿಂಡಿ ತಿನ್ನಲು ಪೈಪೋಟಿಯನ್ನು ಮಾಡಿದೆಯಲ್ಲ ಎಂದು ಮನಸ್ಸಿನಲ್ಲೆ ಅಂದುಕೊಂಡು ರಾಜರತ್ನಂ ‘ಇನ್ನೊಂದು’ ಬರೆಯಿರಿ ಎಂದರು. ಅದನ್ನು ಬರೆದರು. ಮತ್ತೊಂದು ಪ್ರಬಂಧ ಬರೆಯಿರಿ ಎಂದಾಗ, ಪ್ರಹ್ಲಾದರಾವ್ ಅದನ್ನೂ ಬರೆದುಕೊಟ್ಟರು. ರಾಜರತ್ನಂ ಎಲ್ಲವನ್ನು ಒಟ್ಟೂಗೂಡಿಸಿ ಓದಿ ನಸುನಕ್ಕು ಕಾಲೇಜು ಮ್ಯಾಗಜಿನ್‌ನಲ್ಲಿ ಪ್ರಕಟಿಸಿದಾಗ ಪ್ರಹ್ಲಾದರಾವ್‌ಗೆ ಆದ ಆಶ್ಚರ್ಯ, ಆನಂದ ಹೇಳತೀರದಾಗಿತ್ತು.   ಹೀಗೆ ಪ್ರಾರಂಭಗೊಂಡ ಇವರ ಬರಹಗಳು ಜೀವನ, ಪ್ರಬುದ್ಧ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾದವು. 

ಮುಂದೆ ರಥ-ರಥಿಕ, ಮಧುವ್ರತ, ಮುತ್ತಿನ ಹಾರ ಮುಂತಾದವು ಸಂಕಲನಗಳಲ್ಲೂ ಮೂಡಿಬಂದವು. ಲೇಖನ ಕಲೆಯ ಬಗ್ಗೆಯೇ ಇವರು ಬರೆದ ಕೃತಿ ‘ಲೇಖನ ಕಲೆ’.   ಇವರ ಪ್ರಬಂಧಗಳು ಹಿಂದಿಗೂ ಅನುವಾದಗೊಂಡು ಪ್ರಖ್ಯಾತಿ ಪಡೆದವು.

ಶಿಶುಸಾಹಿತ್ಯಕ್ಕೂ ಸಾಕಷ್ಟು ಕೊಡುಗೆ ನೀಡಿರುವ ಪ್ರಹ್ಲಾದರಾಯರು ಬರೆದಿರುವ ಕೃತಿಗಳು ಮಿಂಚುಳ್ಳಿ, ಕ್ರಿಸ್ಟೋಫರ್ ಕೊಲಂಬಸ್ ಮತ್ತು ಪಿನೋಕಿಯೋ (ಅನುವಾದ). 

198 ವಚನಗಳ ಸಂಗ್ರಹ ಅಮಲಿನ ವಚನಗಳು ಪ್ರಹ್ಲಾದರಾಯರ ವಿಶಿಷ್ಟ  ಕೃತಿ. ಇದಲ್ಲದೆ ರಾಜಬೆಸ್ತ, ಮೈಸೂರ್ ಪಾಕ್, ಸಾಕುತಾಯಿ ಪರಪುಟ್ಟ, ಸ್ಮೃತಿಕನ್ಯೆ (ಕವನ ಸಂಕಲನ), ಅವತಾರ ಕಥಾ ಸಂಕಲನ ಮುಂತಾದ ಕೃತಿಗಳನ್ನೂ ಪ್ರಕಟಿಸಿದ್ದರು. ಇವರ ಸ್ಮೃತಿ ಕನ್ಯೆ ಕವನ ಸಂಕಲನದಲ್ಲಿ ಹಾಸ್ಯ, ವಿಡಂಬನೆ ಸೇರಿದೆ. 

ಪರೀಕ್ಷೆಯ ಹಾಲಿನಲ್ಲಿ ಓದಿದ ವಿಷಯ ನೆನಪಿಗೆ ಬಾರದೆ, ವಿದ್ಯಾರ್ಥಿ ಪಡುವ ಪಾಡು 

ಬತ್ತಿದ ಉದರದ ಕೆರೆಯ ಅಂಗಳಕೆ 
ನೀರನು ಸುರಿದಾಯ್ತು. 
ಪೂರ ಬಂದು ಕೆರೆ ತುಂಬಿ ತುಳುಕಿದರು
ನೆನಪೇರಿ ಬಾರದಾಯ್ತು,
ಉತ್ತರ ತೇಲಿ ಬಾರದಾಯ್ತು
ಎಲೈ ಪರೀಕ್ಷಕ ಪ್ರಭುವೆ 
ನಮ್ಮನ್ನಾಳುವ ವಿಭುವೆ 
ಹಾಕು ನಂಬರನು, 
ಮೇಲ್‌ನಾಕು ನಂಬರನು.
(ಇದು ಸ್ಮೃತಿ ಕನ್ಯೆ ಕವನ ಸಂಕಲನದ ಆಯ್ದಭಾಗ).

ಹೀಗೆ ಹಾಸ್ಯ, ವಚನ, ಪ್ರಬಂಧ ಎಲ್ಲವುಗಳಲ್ಲೂ ವಿಡಂಬನೆಯನ್ನು ಪ್ರಮುಖವಾಗಿರಿಸಿಕೊಂಡು ಪ್ರಹ್ಲಾದರಾಯರು ಕೃತಿ ರಚಿಸಿದ್ದಾರೆ. ಇದಲ್ಲದೆ ಪ್ರೊ. ಕೆ. ವೆಂಕಟರಾಮಪ್ಪನವರೊಂದಿಗೆ ಕುಮಾರವ್ಯಾಸ ಭಾರತದ ವಿರಾಟಪರ್ವ ಮತ್ತು ಸಭಾಪರ್ವಗಳ ಗದ್ಯಾನುವಾದವನ್ನು ‘ಮತ್ಸ್ಯನಗರಿ’, ‘ರಾಜಸೂಯ’ ಎಂದು ಎರಡು ಪುಸ್ತಕಗಳಲ್ಲಿ ಪ್ರಕಟಸಿದ್ದಾರೆ. ಐ.ಬಿ. ಎಚ್. ಪ್ರಕಾಶನಕ್ಕಾಗಿ ‘ಇದು ನಮ್ಮ ಭಾರತ’ ಮಾಲಿಕೆಗಾಗಿ 5 ಸಂಪುಟಗಳನ್ನು ಅನುವಾದಿಸಿಕೊಟ್ಟಿದ್ದಾರೆ. 

ಪ್ರಹ್ಲಾದರಾವ್ ಅವರ ಮಿಂಚುಳ್ಳಿ ಮಕ್ಕಳ ಪದ್ಯಗಳ ಸಂಕಲನಕ್ಕೆ 1962ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನ ಬಂದಿದ್ದರೆ, ಎಂ. ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (1979) ಶಿಶು ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ ಗೌರವ ಇವರದ್ದಾಗಿತ್ತು.

ಪ್ರಹ್ಲಾದರಾವ್ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದಾಗಲೂ ಚೇತರಿಸಿಕೊಂಡು ನೋಡಲು ಬಂದವರನ್ನು ನಗಿಸುತ್ತಿದ್ದರಂತೆ. ಅವರು 1980ರ ಮಾರ್ಚ್ 18 ರಂದು ಈ ಲೋಕವನ್ನಗಲಿದರು. ನಗಿಸುವುದೇ ಅವರ ಜೀವನ ಧರ್ಮವಾಗಿತ್ತು.

On the birth anniversary of great writer N Prahladrao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ