ವೀರಕಪುತ್ರ ಎಂ. ಶ್ರೀನಿವಾಸ
ವೀರಕಪುತ್ರ ಎಂ. ಶ್ರೀನಿವಾಸ
ಇಂದು ಕನ್ನಡ ನಾಡಿನಲ್ಲಿ ಸಂಚಲನ ಹುಟ್ಟಿಸಿರುವ ವೀರಕಪುತ್ರ ಎಂ ಶ್ರೀನಿವಾಸ ಎಂಬ ಯುವಕರಿಗೆ ನಾವು ಶುಭ ಹೇಳಲೇಬೇಕು. ಒಂದು ಭಕ್ತಿಯನ್ನು- ಅಭಿಮಾನವನ್ನು ಏನಕ್ಕೂ ಬಳಸಿಕೊಳ್ಳಬಹುದು! ಆದರೆ ಅದನ್ನು ಒಂದು ಶಕ್ತಿಯಾಗಿ ಪರಿವರ್ತಿಸಿ, ನಾಡು, ನುಡಿ ಮತ್ತು ನಾಡಿನ ಬದುಕಿನ ಕುರಿತಾದ ಇಂತಹ ಚಿಂತನೆಗೆ ಮಾರ್ಪಡಿಸುವುದು ಶ್ರೀನಿವಾಸರಂತಹ ಅಸಾಮಾನ್ಯರಿಗೆ ಮಾತ್ರವೇ ಸಾಧ್ಯವಿರುವಂತದ್ದು.
ಜೂನ್ 8, ವೀರಕಪುತ್ರ ಎಂ. ಶ್ರೀನಿವಾಸ ಅವರ ಜನ್ಮದಿನ. ದಿನಾಂಕದ ಬಗ್ಗೆ ಸ್ಪಷ್ಟತೆಗಾಗಿ ಅವರ ಪುಟಕ್ಕೆ ಹೋದಾಗ, ಅವರ ವಿಡಿಯೋ ಮಾತು ನೋಡಿದೆ. ಅವರಿಗೆ ತಾವು "ಯಜಮಾನ್ರು" ಎಂದು ಭಾವಿಸಿರುವ ವಿಷ್ಣುವರ್ಧನ್ ಬಗ್ಗೆ ಎಂಥ ವಿಶಾಲ ಸಹೃದಯ ಭಾವವಿದೆ, ಆ ಭಾವಕ್ಕಾಗಿ ವಿಷ್ಣುವರ್ಧನ್ ಅಮೃತ ಮಹೋತ್ಸವ ಆಚರಣೆಯ ಮೂಲಕ, ಜನಸಾಮಾನ್ಯರಾಗಿರುವ ಅವರ ಅಭಿಮಾನಿಗಳ ಬದುಕಿನ ಬವಣೆ ನೀಗಿಸಲು ಅವರು ಹಾಕಿಕೊಂಡಿರುವ ನೀಲಿ ನಕ್ಷೆ ನೋಡಿ ನಿಜಕ್ಕೂ ಕಣ್ತುಂಬಿ ಬಂತು. ನಾನೂ ವಿಷ್ಣುವರ್ಧನ್ ಅವರ ಅಭಿಮಾನಿ. "ವಿಷ್ಣುವರ್ಧನ್ ಅವರೆ ನೀವು ವೀರಕಪುತ್ರ ಎಂ. ಶ್ರೀನಿವಾಸ ಅಂತಹ ಅಭಿಮಾನಿಯನ್ನು ಗಳಿಸಿದ್ದಿರಿ ಎಂಬುದು ನಿಮ್ಮ ಅತ್ಯಂತ ಶ್ರೇಷ್ಠ ಸಾಧನೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ!".
ವೀರಕಪುತ್ರ ಮುನಿವೆಂಕಟಪ್ಪ ಶ್ರೀನಿವಾಸ ಅವರು ಕನ್ನಡದ ಮೇಲಿನ ಪ್ರೀತಿಯಿಂದ ತಮ್ಮ ಉತ್ಸಾಹ, ಜಾಣ್ಮೆ ಮತ್ತು ಜನಪ್ರಿಯತೆಯನ್ನು ಕನ್ನಡ ಪುಸ್ತಕೋದ್ಯಮಕ್ಕೆ ತಂದಿದ್ದಾರೆ. ಅನೇಕ ಬರೆಹಗಾರರ ಪುಸ್ತಕ ಪ್ರಕಟಣೆಗೆ, ವಿತರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಪತ್ರಿಕೆಗಳೊಂದಿಗೆ ಕೈಜೋಡಿಸಿ ಉತ್ತಮ ಬರೆಹಗಾರರಿಗೆ ಪ್ರೋತ್ಸಾಹ ನೀಡಿ ಅವರುಗಳು ಬರೆಯುವಂತೆ ಮಾಡುತ್ತಿದ್ದಾರೆ, ಬಹುಮಾನ, ಉತ್ತೇಜನ ನೀಡಿದ್ದಾರೆ. ಪ್ರಕಟಣೆ ಮಾಡಲು ಹೊರಟಿದ್ದಾರೆ. ಕನ್ನಡ ಬರೆಹಗಾರರು ತಾವೂ ದೊಡ್ಡ ಮಟ್ಟದಲ್ಲಿ ಕನಸು ಮೂಡಿಸಿಕೊಳ್ಳಬಹುದು ಎಂಬಂತಹ ಬೃಹತ್ ಪುಸ್ತಕ ಸಂತೆಯಂತಹ ಜನ ಮುಗಿಬೀಳುವಂತಹ ವಾತಾವರಣ ಸೃಷ್ಟಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ.
ಶ್ರೀನಿವಾಸ ಅವರು ಜನಿಸಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಗ್ರಾಮದಲ್ಲಿ. ಇವರ ತಂದೆ ಮುನಿವೆಂಕಟಪ್ಪ. ತಾಯಿ ನಾರಾಯಣಮ್ಮ. ಕೆಜಿಎಫ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾಪದವಿ ಪಡೆದು ಜೀವನ ಅರಸಿ ಬೆಂಗಳೂರಿಗೆ ಬಂದು ತಾವೇ ಹಲವು ನೂರು ಜೀವಗಳಿಗೆ ಪ್ರತ್ಯಕ್ಷವಾಗಿ ಮತ್ತು ಸಹಸ್ರಾರು ಜನರಿಗೆ ಪರೋಕ್ಷವಾಗಿ ಒತ್ತಾಸೆಯಾಗಿದ್ದಾರೆ. ಅವರ ಈ ಜೀವನ ಯಾನದ ಕುರಿತಾದ "ಬದುಕೇ ಥ್ಯಾಂಕ್ಯೂ" ಪುಸ್ತಕದಲ್ಲಿ ಈ ಕುರಿತ ವಿವರಗಳನ್ನು ದಾಖಲಿಸಿದ್ದಾರೆ.
ಶ್ರೀನಿವಾಸ ಅವರು ಬೆಂಗಳೂರಿನಲ್ಲಿ ಫಸ್ಟ್ ಫೋರ್ಸ್ ಎಂಬ ಕಟ್ಟಡ ಸುರಕ್ಷಣಾ ದಳದ ಸೇವಾ ಸಂಸ್ಥೆಯನ್ನು 2005 ರಲ್ಲಿ ಆರಂಭಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಡೆಸಿಕೊಂಡು ಬರುತ್ತಿದ್ದು ಹಲವು ನೂರು ಮಂದಿ ಸಿಬ್ಬಂದಿ ಇಲ್ಲಿ ಸೇವೆಯಲ್ಲಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಅವರಿಗೆ ವಿಷ್ಣುವರ್ಧನ್ ಕೇವಲ ಒಬ್ಬ ನಟರಲ್ಲ. "ಯಜಮಾನ್ರು!" ಎಂದು ಅವರು ಹೇಳುವುದನ್ನು ಹೃದಯದಿಂದ ಆಲಿಸುವವರಿಗೆ ಅದು ನೇರ ತಟ್ಟುವಂತಿದೆ. ಒಬ್ಬ ವ್ಯಕ್ತಿ ಇಹದಿಂದ ದೂರವಾಗಿ ಹದಿನೈದು ವರ್ಷ ಕಳೆದ ನಂತರವೂ ಹೀಗೆ ಅವರನ್ನು ಆಪ್ತವಾಗಿ ನೆನೆಯುವರಿದ್ದಾರೆ ಎಂಬುದು ಊಹಿಸಲಿಕ್ಕೂ ಕಷ್ಟ. ವಿಷ್ಣುವರ್ಧನ್ ಅವರ ಅಭಿಮಾನಿಯಾದ ಇವರು ಅವರ ಹೆಸರಿನ ಡಾ.ವಿಷ್ಣು ಸೇನಾ ಸಮಿತಿ ಎಂಬ ಅಭಿಮಾನಿ ಸಂಘವನ್ನು ರಾಜ್ಯದ್ಯಾಂತ ಕಟ್ಟಿ ಅದರ ರಾಜ್ಯಾಧ್ಯಕ್ಷರಾಗಿ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಅಸಂಖ್ಯಾತ.
ವೀರಲೋಕ ಬುಕ್ಸ್ ಎಂಬ ಪುಸ್ತಕ ಪ್ರಕಾಶನ ಸಂಸ್ಥೆ, ಕನ್ನಡ ಮಾಣಿಕ್ಯ ಪತ್ರಿಕೆ ಮತ್ತು ಬುಕ್ಸ್ ಬರ್ಗರ್ ಕಾಫಿ (ಬಿಬಿಸಿ) ಮಳಿಗೆಯನ್ನು ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ಹಸಿರಿನ ಉಳಿವಿಗಾಗಿ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಅಭಿಯಾನದ ನೇತೃತ್ವವನ್ನು ವಹಿಸಿದ್ದಾರೆ. ನೇರ ರಕ್ತದಾನದ ಮೂಲಕ ಹಲವು ನೂರು ಜನರಿಗೆ ರಕ್ತದಾನಿಗಳನ್ನು ಡಾ. ವಿಷ್ಣು ಸೇನಾನಿಗಳ ಮೂಲಕ ಒದಗಿಸಿಕೊಟ್ಟಿದ್ದಾರೆ. ಅನೇಕ ಕನ್ನಡ ಶಾಲೆಗಳನ್ನು ಆಧುನಿಕರಣಗೊಳಿಸಿದ್ದಾರೆ. ಡಾ.ವಿಷ್ಣುವರ್ಧನ್ ಅವರ ನೆನಪು ನಾಡಿನಲ್ಲಿ ನಿರಂತರವಾಗಿರಲು ಮಾಡಿದ ಪ್ರಕಟಣೆ, ಶಿಲ್ಪ ವಿತರಣೆ, ಕಟೌಟ್ ಸಂಚಲನ ಇವೆಲ್ಲವುಗಳ ಜೊತೆ ಅಪಾರ ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಷ್ಣುವರ್ಧನ್ ಹೆಸರಿನಲ್ಲಿ ದೊಡ್ಡ ದತ್ತಿ ನಿಧಿ ಸ್ಥಾಪಿಸಿ ಚಿತ್ರರಂಗದ ಶ್ರೇಷ್ಠರಿಗೆ ಪ್ರಶಸ್ತಿ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಗ್ರಾಮ ವೀರಕಪುತ್ರದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದ್ದಾರೆ. ಡಾ, ಶರಣ ಹುಲ್ಲೂರ ಅವರ ಜೊತೆಗೂಡಿ ಡಾ.ವಿಷ್ಣುವರ್ಧನ್ ರ ವೃತ್ತಿ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ "ಮೇರುನಟ" ಎಂಬ ಕೃತಿ ಹೊರತಂದಿದ್ದಾರೆ.
ಕನ್ನಡಪ್ರಭ ದಿನಪತ್ರಿಕೆ+ಏಷ್ಯಾನೆಟ್ -ಸುವರ್ಣ ನ್ಯೂಸ್ ಆಯೋಜಿಸಿದ ಸಮಾರಂಭದಲ್ಲಿ ಶ್ರೀನಿವಾಸ್ ಅವರಿಗೆ "ಅಸಾಮಾನ್ಯ ಕನ್ನಡಿಗ" ಪುರಸ್ಕಾರ ಸಂದಿದೆ. ಅವರಿಗೆ ಇನ್ನೂ ಅನೇಕ ಗೌರವಗಳು ಸಲ್ಲಬೇಕು ಎಂಬುದು ಕನ್ನಡಿಗರೆಲ್ಲರ ಆಶಯ.
2024ರ ಸೆಪ್ಟೆಂಬರ್ 18 ವಿಷ್ಣುವರ್ಧನ್ ಅವರ 74ನೇ ಹುಟ್ಟುಹಬ್ಬ ಆಗಿ, 75ನೇ ಹುಟ್ಟುಹಬ್ಬದ ಆರಂಭ. ಈ ಅಮೃತಮಹೋತ್ಸವಕ್ಕೆ ಅವರು ಮೇಲೆ ಹೇಳಿದಂತೆ ಮಹತ್ವದ ಸಮಾಜೋದ್ಧಾರದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ವೀರಕಪುತ್ರ ಎಂ. ಶ್ರೀನಿವಾಸ ಅವರ ಎಲ್ಲ ಯೋಜನೆಗಳಿಗೂ ಹಲವು ಸಹಸ್ರ ಆನೆಗಳ ಬಲ ಬರಲಿ. ಅವರ ಉತ್ಸಾಹಕ್ಕೆ ಸೂಕ್ತ ಬೆಂಬಲ ದೊರಕಲಿ ಎಂದು ಆಶಿಸುತ್ತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ. ನಮಸ್ಕಾರ.
Happy birthday Veerakaputra M Srinivasa
ಕಾಮೆಂಟ್‌ಗಳು