ಮಲ್ಲೇಪುರಂ ಜಿ. ವೆಂಕಟೇಶ
ಮಲ್ಲೇಪುರಂ ಜಿ. ವೆಂಕಟೇಶ
ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾಗಿ ಗೌರವಾನ್ವಿತರೆನಿಸಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ಅವರ ಬರಹಗಳು, ಉಪನ್ಯಾಸಗಳು ಮತ್ತು ವಿದ್ವತ್ಪೂರ್ಣ ಚಿಂತನೆಗಳು ಮಾಧ್ಯಮಗಳಲ್ಲಿ, ಕೃತಿರೂಪಗಳಲ್ಲಿ ನಿರಂತರವಾಗಿ ಹರಿದು ಬರುತ್ತಿವೆ. ಮಲ್ಲೇಪುರಂ ಜಿ. ವೆಂಕಟೇಶ ಅವರು ವೇದ ಉಪನಿಷತ್ತುಗಳನ್ನು ಆಧುನಿಕ ರೀತಿಯಲ್ಲಿ ಅಧ್ಯಯನ ಮಾಡುತ್ತಿರುವವರಲ್ಲಿ ಪ್ರಮುಖರೆನಿಸಿದ್ದಾರೆ.
ಮಲ್ಲೇಪುರಂ ಜಿ. ವೆಂಕಟೇಶ ಅವರು 1952ರ ಜೂನ್ 5ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವಿಶ್ವೇಶ್ವರಪುರ (ಕಸಬ) ಗ್ರಾಮದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಅವರು ಸಿದ್ಧಗಂಗೆಯ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತವನ್ನು ಕಲಿತರು. ಮಹಾನ್ ವಿದ್ವಾಂಸರಾದ ವಿದ್ವಾನ್ ವಿಶ್ವನಾಥ ಶರ್ಮ ಅವರಲ್ಲಿ ಕಾವ್ಯವನ್ನು ಅಧ್ಯಯನ ಮಾಡಿ ಸಂಸ್ಕೃತ ಅಲಂಕಾರ ವಿದ್ವತ್ ಉತ್ತೀರ್ಣತೆ ಸಾಧಿಸಿದರು. ಎಂ. ಎ. ಸಂಸ್ಕೃತ, ಎಂ. ಎ. ಕನ್ನಡ, ಕನ್ನಡ ಪಂಡಿತ್, ಗಮಕ ವಿದ್ವಾನ್ ಮತ್ತು ತುಮಕೂರು ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಗಳನ್ನು ಗಳಿಸಿದರು.
ಮಲ್ಲೇಪುರಂ ಜಿ. ವೆಂಕಟೇಶ ಅವರು 1976ರಲ್ಲಿ ಕೆಲಕಾಲ 'ಲೋಕವಾಣಿ' ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿದ್ದರು. 1977ರಲ್ಲಿ ದಿನಪತ್ರಿಕೆಯೊಂದರ ವಾರದ ವಿಭಾಗದ ಅಸೋಸಿಯೇಟ್ ಎಡಿಟರ್ ಆಗಿದ್ದರು. ಡಾ. ಶಂಭಾ ಜೋಷಿಯವರ ಒತ್ತಾಸೆಯ ಮೇರೆಗೆ ವಿಚಾರ ಪ್ರಕಾಶನ ಸ್ಥಾಪಿಸಿದರು. ಆ ಮೂಲಕ 'ಫಿಲಸಾಫಿಕಲ್ ಥಿಂಕರ್ಸ್ ಅಟ್ ದ ಬೇಸ್ ಆಫ್ ಕಲ್ಚರ್', 'ದಾರಿಯ ಬುತ್ತಿ' ಸೇರಿ 8 ಪುಸ್ತಕಗಳು ಪ್ರಕಟಗೊಂಡವು. ಪ್ರಕಾಶನ ಸಂಸ್ಥೆಯೊಂದಕ್ಕಾಗಿ 'ಸಂಸ್ಕೃತಿ ವಿಕಾಸ ಮಾಲೆ' ಅಡಿಯಲ್ಲಿ ಅನೇಕ ಪುಸ್ತಕಗಳನ್ನು ಮೂಡಿಸಿದರು. ಮೇನಕಾ, ಮಲ್ಲಿಗೆ, ರೂಪತಾರಾ ಮತ್ತಿತರ ನಿಯತಕಾಲಿಕಗಳಿಗೆ ಲೇಖನಗಳನ್ನು ಬರೆದರು.
ಮಲ್ಲೇಪುರಂ ಜಿ. ವೆಂಕಟೇಶ ಅವರು 1979-83 ಅವಧಿಯಲ್ಲಿ ಕನಕಪುರದ ಟೌನ್ ಮುನಿಸಿಪಲ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ, 1983-92 ಅವಧಿಯಲ್ಲಿ ಬೆಂಗಳೂರು ಮಲ್ಲೇಶ್ವರದ ಕಾರ್ಪೊರೇಷನ್ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕರಾಗಿ; ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 1992-97 ಅವಧಿಯಲ್ಲಿ ರೀಡರ್ ಆಗಿ, 1996-97 ಅವಧಿಯಲ್ಲಿ ಅಲ್ಲಿನ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, 1997-98ರಲ್ಲಿ ಅಲ್ಲಿನ ದ್ರಾವಿಡನ್ ಅಧ್ಯಯನ ವಿಭಾಗದ ನಿರ್ದೇಶಕರಾಗಿ, 1998-2001 ಅವಧಿಯಲ್ಲಿ ಹಂಪಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ; 2001-2004 ಅವಧಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ; 2005-2008 ಅವಧಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗದ ಡೀನ್ ಆಗಿ; 2008ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಗಳಾಗಿ, 2010ರಿಂದ 2014ರ ವರೆಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪ-ಕುಲಪತಿಗಳಾಗಿ ಸೇವೆ ಸಲ್ಲಿಸಿದರು.
ಮಲ್ಲೇಪುರಂ ಜಿ. ವೆಂಕಟೇಶ ಅವರು ನಿರಂತರವಾಗಿ ಶಂ. ಭಾ. ಜೋಷಿ, ಎಂ. ಎಂ. ಕಲಬುರ್ಗಿ, ಎಂ. ಚಿದಾನಂದ ಮೂರ್ತಿ, ವಿ. ಸೀತಾರಾಮಯ್ಯ, ಪು. ತಿ. ನರಸಿಂಹಾಚಾರ್, ಬೆಳಗೆರೆ ಕೃಷ್ಣಶಾಸ್ತ್ರಿ, ಎಸ್. ಕೆ. ರಾಮಚಂದ್ರರಾವ್, ಕಮಲಾ ಹಂಪನಾ ಮುಂತಾದ ಮಹಾನ್ ವಿದ್ವಾಂಸರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಕುವೆಂಪು ಶತಮಾನೋತ್ಸವ ವರ್ಷದಲ್ಲಿ ಇವರ ಸಂಪಾದನೆಯಲ್ಲಿ ಮೂಡಿಬಂದ 110 ಪುಸ್ತಕಗಳನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಬಿಡುಗಡೆ ಮಾಡಿದರು.
ಮಲ್ಲೇಪುರಂ ಜಿ. ವೆಂಕಟೇಶ ಅವರ ಕೃತಿಗಳಲ್ಲಿ ನೆನಪು ಒಂದು ಆಧ್ಯಾಯ, ಶಂಬಾ ಅಧ್ಯಯನ, ಕಾಣುತಿರುವ ಕೃತಿ ನೋಟ, ಸ್ವಯಂಭುವ ಮನು ಮತ್ತು ವೈವಸ್ವತ ಮನು, ಪರಿಸರ ಸಮಸ್ಯೆ, ಸುಂದರ ರಾಮಾಯಣ, ಶಂಬಾ ಕೃತಿ ಸಮೀಕ್ಷೆ, ಸ್ಫೋಟ ವೇದ, ಸಾಹಿತ್ಯ ಮತ್ತು ಪುರಾಣ, ಸಂಸ್ಕೃತಿ ಮತ್ತು ಶಂಬಾ, ಪ್ರವಾಸ ಸಾಹಿತ್ಯ - ಒಂದು ಅಧ್ಯಯನ, ಪಾತಲಿ, ಕನ್ನಡ ವಾರ್ಷಿಕ, ಮೂರ್ಖರ ಮೇಳ, ವೇಣುಗೋಪಾಲ ಸೊರಬರ ಆಯ್ದ ಲೇಖನಗಳು, ಮಹಲಿಂಗರಂಗ, ತಿಳಿವ ತೇಜದ ಮುಂದೆ, ಈ ಶತಮಾನದ ಒಂದು ನೋಟ, ವಿ. ಕೃ. ಗೋಕಾಕ್, ಶಂಬಾ ಜೋಷಿಯವರ ಆಯ್ದ ಲೇಖನಗಳು, ಕೆಳದಿ ಬಸವರಾಜ ಭೂಪಾಲ ವಿರಚಿತ ಶಿವ ತತ್ವ ರತ್ನಾಕರ, ಶಂಬಾ ಕೃತಿ ಸಮೀಕ್ಷೆ, ಧವಳಶ್ರೀ, ಶಂಕರ ವೇದಾಂತ, ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ, ಡಾ. ಶಂಬಾ ಜೋಷಿ (ಜೀವನ ಚರಿತ್ರೆ), ದೇವುಡು ಸಮಗ್ರ ಲೇಖನಗಳು, ಕನ್ನಡಿಯ ನೋಟ, ಮಕ್ಕಳ ಸುಂದರ ಸುಭಾಷಿತ, ದ್ರಾವಿಡ ಶಾಸ್ತ್ರ, ಅರಿವಿನ ಕಥನ, ಸಿದ್ಧವನಹಳ್ಳಿ ಕೃಷ್ಣಶರ್ಮ ಸಮಗ್ರ ಸಾಹಿತ್ಯ, ಅನಂತ ಸಾಹಿತ್ಯ, ನಲ್ಲೂರು, ಲೋಕಮಿತ್ರ, ಧ್ಯಾನಮುಖ, Of Mystics and Mysticism, ಮುನ್ನುಡಿಗಳೆಂಬ ಶಬ್ಧಪ್ರಸಂಗ, ಗಾದೆಯ ಮಾತು, ತೌಲನಿಕ ಸಾಹಿತ್ಯಧ್ಯಾನ, ಡಾ. ಹೋ. ಶ್ರೀ. ಸಮಗ್ರ ಸಾಹಿತ್ಯ, ಕಾವ್ಯ ಕಥನ, ಕನ್ನಡ ಭಾಷಾಧ್ಯಯನ, ತೌಲನಿಕ ಕಾವ್ಯಚಿಂತನೆ, ಆಕೃತಿಕಥನ, ಕಥನಕಾರಣ, ನುಡಿಕಥನ, ಶ್ರೀ ಶಿವತತ್ವ ರತ್ನಾಕರ, ಶಾಸ್ತ್ರಜೀವಿತ, ಪರಮಹಂಸ ಶ್ರೀ ಆಂಜನೇಯಸ್ವಾಮಿ ವಿರಚಿತ ತತ್ವಯೋಗ ರಹಸ್ಯ, ಧ್ಯಾನಸೂತ್ರ, ಮನಸೋಲ್ಲಾಸ, ಕನ್ನಡ ವಿಮರ್ಶಾ ಕಥನ, ನುಡಿ ಮುನ್ನುಡಿ ಕಲಾಕಥನ, ಕೃತಿ-ಕಥನ, ಭವದ ಬೆಳಗು, ಪೂರ್ವಯಾನ, ಕಾವ್ಯ ವ್ಯಾಖ್ಯಾನ ಕಥನ, ಸಾರಸ್ವತ ಕಥನ, ವಿಶ್ವಕಲಾ ದರ್ಶನ, ಡಾ. ಶಂಬಾ ಜೋಶಿಯವರ ಸಮಗ್ರ ಸಂಪುಟಗಳು (6 ಸಂಪುಟಗಳು) ಸೇರಿದಂತೆ ವಿಫುಲ ವ್ಯಾಪ್ತಿ ಇದೆ. ದಲಿತ ಸಾಹಿತ್ಯದ ಕುರಿತು ಹತ್ತು ಸಂಪುಟಗಳ ಕಾರ್ಯ ಮಾಡುತ್ತಿದ್ದಾರೆ.
ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ, ಶಂಬಾ ಜೋಷಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಎ.ಆರ್. ಕೃಷ್ಣಶಾಸ್ತ್ರಿ ಪ್ರಶಸ್ತಿ, ವಿ. ಎಮ್. ಇನಾಂದಾರ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ನಿರ್ಪಾಜೆ ಭೀಮಭಟ್ಟ ಪ್ರಶಸ್ತಿ, ಸುಂದರಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವೇದಶ್ರೀ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಮಲ್ಲೇಪುರಂ ಜಿ. ವೆಂಕಟೇಶ ಅವರು ಅನೇಕ ಸಂಘ ಸಂಸ್ಥಗಳಿಗೆ ಪದಾಧಿಕಾರಿಗಳಾಗಿ, ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಾ ಉನ್ನತ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ವಿವಿಧ ವೇದಿಕೆಗಳಲ್ಲಿ ಆದ್ಯ ಆಯ್ಕೆಯ ಉಪನ್ಯಾಸಕರೆನಿಸಿದ್ದಾರೆ. ಅನೇಕ ಪತ್ರಿಕೆಗಳಲ್ಲಿನ ಅವರ ಅಂಕಣಗಳು ಅಪಾರ ಓದುಗರನ್ನು ಪ್ರತಿನಿತ್ಯ ತಲುಪುತ್ತಿವೆ.
ನಾಡಿನ ಹೆಮ್ಮೆಯ ಅಮೂಲ್ಯ ವಿದ್ವಾಂಸರೆನಿಸಿರುವ ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಜನ್ಮದಿನದ ಸಂದರ್ಭದಲ್ಲಿ ಗೌರವಪೂರ್ಣ ನಮನಗಳು.
On the birthday of our great scholar Dr. Mallepuram G. Venkatesh
ಕಾಮೆಂಟ್‌ಗಳು