ಗೋವಿನ ಕಥೆ
ಗೋವಿನ ಕಥೆ
ಆಧಾರ: ಡಿ. ಎಲ್. ನರಸಿಂಹಾಚಾರ್ ರವರು ಸಂಪಾದಿಸಿದ
ಗೋವಿನ ಕಥೆಯ ಪದ್ಯಗಳು ಮತ್ತು
ಪ್ರೊ. ಟಿ. ಕೇಶವಭಟ್ಟರು ಸಂಪಾದಿಸಿದ ಕೃತಿ
ಕೃತಜ್ಞತೆಗಳು: Harishankar H S
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಪ್ರಸ್ತಾವನೆ
ಪ್ರಾಥಮಿಕ ಶಾಲೆಯಲ್ಲಿ ಕಲಿತ ಪುಣ್ಯಕೋಟಿಯ ಕಥೆಯು ಇಂದಿಗೂ ಮನದಲ್ಲಿ ಉಳಿಯಲು ಕಾರಣ ಅದರ ಗೇಯತೆಯ ಗುಣ ಮತ್ತು ವರ್ಣನೆಗಳು. ಜೊತೆಗೆ ಮೌಲ್ಯಯುತ ಜೀವನ ನಡೆಸಿದ ಹಸುವಿನ ಕಥೆ, ಕರುಣರಸದ ಕಥನ, ಹುಲಿಯ ಪಶ್ಚಾತ್ತಾಪ, ಗೊಲ್ಲನ ದಿನಚರಿ, ಸತ್ಯವನ್ನು ಎತ್ತಿ ಹಿಡಿಯುವ ಗುಣ ಎಲ್ಲವೂ ಸೇರಿವೆ. ಸತ್ಯವೇ ಭಗವಂತನೆಂದೂ, ಅದನ್ನು ತಪ್ಪಬಾರದೆಂದೂ ತಿಳಿಸುವ ನೀತಿಕಥನ.
ಹೀಗೇ ಇದರ ಬಗ್ಗೆ ನೋಡುತ್ತಾ ಹೋದಾಗ ಇದು ಇನ್ನೂ ವಿಸ್ತಾರವಾದ ಗೀತೆಯೆಂದು ತಿಳಿದು ಬಂತು. ಆಗ ಅದರ ಬಗ್ಗೆ ಹುಡುಕಿದಾಗ ಮಾನ್ಯ ಡಿ. ಎಲ್. ನರಸಿಂಹಾಚಾರ್ ರವರು ಸಂಪಾದಿಸಿದ ಗೋವಿನ ಕಥೆಯ ಪದ್ಯಗಳು ಸಿಕ್ಕವು. ಹಾಗೆಯೇ ಪ್ರೊ. ಟಿ. ಕೇಶವಭಟ್ಟರು ಸಂಪಾದಿಸಿದ ಪ್ರತಿಯೂ ದೊರಕಿತು. ಇವೆರಡನ್ನೂ ಇಟ್ಟುಕೊಂಡು ಇದರ ವಿವರವಾದ ಕಥೆಯನ್ನು ಸವಿಯುವ ಸೌಭಾಗ್ಯ ನನ್ನದಾಯಿತು. ಡಿ. ಎಲ್.ಎನ್.ರವರ ಪ್ರತಿಯನ್ನು ನನಗಾಗಿ ಪೂರ್ಣ ಜೆರಾಕ್ಸ್ ಮಾಡಿಸಿ ಫೋಟೋ ತೆಗೆದು ಕಳಿಸಿಕೊಟ್ಟಿದ್ದು ಹಿರಿಯರಾದ ಶ್ರೀ ಹರಿಶಂಕರ್ ಅವರು. ಅವರು ನನ್ನ ಬಂಧುಗಳು ಕೂಡಾ. ಅವರನ್ನು ಭೇಟಿಯಾದಾಗ ಈ ಪ್ರತಿಯನ್ನು ನೋಡುವ ಅವಕಾಶ ಸಿಕ್ಕಿತು. ಕೇಶವಭಟ್ಟರ ಪ್ರತಿ ನನ್ನಲ್ಲಿ ಇತ್ತು. ಇವೆರಡನ್ನೂ ಸಮನ್ವಯಗೊಳಿಸಿ ಇದರ ಸಾರಾಂಶವನ್ನು ಗದ್ಯರೂಪದಲ್ಲಿ ತರುವ, ಈ ಮೂಲಕ ಹಳೆಯ ಸಾಹಿತ್ಯದ ಪರಿಚಯ ಈಗಿನವರಿಗೆ ಸಿಗುವಂತೆ ಮಾಡುವ ಪ್ರಯತ್ನಕ್ಕೆ ತಿರು ಶ್ರೀಧರ್ ಪ್ರೋತ್ಸಾಹ ಕಾರಣ.
ಹೀಗೆ ಎರಡು ಪ್ರತಿಗಳನ್ನು ಬಳಸಿಕೊಂಡು ಈ ಕಥೆಯನ್ನು ಗದ್ಯ ರೂಪದಲ್ಲಿ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡಿದ್ದೇನೆ. ತಮ್ಮಗಳ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ನಮಸ್ಕಾರ.
ಗೋವಿನ ಕಥೆ 1 ( ಗಿಡ ಮರಗಳ ವರ್ಣನೆ )
ಧರಣಿ ಮಂಡಲ ಮಧ್ಯದೊಳಗೆ
ಮೆರೆವುದೈವತ್ತಾರು ದೇಶದಿ
ಇರುವಕಾಳಿಂಗನೆಂಬ ಗೊಲ್ಲನ
ಪರಿಯ ನಾನಿಂತು ಪೇಳ್ವೆನು.
ರೂಢಿಯೊಳಗರುಣಾದ್ರಿ ಗಿರಿಯು
ನಾಡಿನೊಳಗಿಹುದೊಂದು ಬೆಟ್ಟವು
ರೂಢಿಗಂಬರ ತುಡುಕುವಂದದಿ
ನೋಡಲಾಶ್ಚರ್ಯವೆನಿಸಿತು.
ಸೃಷ್ಟಿಯೊಳಗರುಣಾದ್ರಿ ಗಿರಿಯು
ಬೆಟ್ಟದಾ ಬಳಸೇಳು ಗಿರಿಗಳು
ನೆಟ್ಟನೆ ಹನ್ನೆರಡು ಯೋಜನ
ದಟ್ಟೈಸಿತಾರಣ್ಯದಿ.
ನಾಗಸಂಪಗೆ ಮಾವು ನೇರಿಲು
ತೇಗ ಚೆನ್ನಂಗಿ ಬನ್ನಿ ಪಾದ್ರಿಯು
ಬಾಗೆ ತಿಂತ್ರಿಣಿ ಮತ್ತೆ ಬಿಲ್ವ
ತಾಗಿ ಮೆರೆದವರಣ್ಯದಿ.
ಆಲವರಳಿಯು ಅತ್ತಿ ಕಿತ್ತಿಳೆ
ಜಾಲ ತದಿಗಿಲು ಅಗಿಲು ಶ್ರೀಗಂಧ
ಬೇಲ ಭೂತಳೆ ಬಿದಿರು ಬೂರಗ
ಲೀಲೆಯೊಳು ವನವೊಪ್ಪಿತು.
ಜಂಬು ನಿಂಬೆಯು ಹಲಸು ಹಾಲೆಯು
ಅಂಬರಕ್ಕೇ ಹರಿವಾಡಕೆಯು
ತುಂಬಿ ತುಳುಕುವ ತೆಂಗಿನಾ ಮರ
ಸಂಭ್ರಮದಿ ವನವೊಪ್ಪಿತು.
ಎಕ್ಕೆ ಎಲಚಿಯು ಲಕ್ಕಿ ಗಿಡಗಳು
ಸೊಕ್ಕಿ ಹಬ್ಬಿದ ಸೀಗೆ ಗಿಡಗಳು
ಉಕ್ಕಿ ಬೆಳೆವಾ ನೆಲ್ಲಿ ಗಿಡಗಳು
ತಕ್ಕಯಿಸಿತದವರಣ್ಯದಿ.
ಆಡಸೋಗೆಯು ಕಾಡನುಗ್ಗೆಯು
ರೂಢಿಯಿಂದಲಿ ಬೆಳೆವ ಹೊನ್ನೆಯು
ಕೂಡಿ ಬೆಳೆವಾ ಈಚಲಿಪ್ಪೆಯು
ರೂಢಿಯೊಳು ವನವೊಪ್ಪಿತು.
ತೊಂಡೆ ತೊಟ್ಟಿಯು ಸೊಂಡೆಗಿಡ ಭೂ
ಮಂಡಲದೊಳು ಬೆಳೆವತೊಳಸಿಯು
ಉಂಡು ಸಂತಸಗೊಂಬ ಮಾದಳೆ
ತಂಡ ತಂಡದಿ ಮೆರೆದುವು.
ತಾಳೆ ತಗರಿಯು ಅಗಸೆ ಜಾಜಿಯು
ಪನೆಯ ಈಚಲು ಅತ್ತಿ ಗಿಡಗಳು
ಸೊಕ್ಕಿ ಬೆಳೆವಾ ಗೋಣಿ ಬಸರಿಯು
ಬಳಸಿ ಮೆರೆದವರಣ್ಯದಿ.
ಗೋವಿನ ಕಥೆ ಆರಂಭವಾಗುವುದೇ ಧರಣಿ ಮಂಡಲ ಮಧ್ಯದೊಳಗೆ ಎನ್ನುವ ಸಾಲಿನಿಂದ. ಈ ಭಾಗದಲ್ಲಿ ವಿವರವಾಗಿ ಮರಗಳನ್ನು ಹೆಸರಿಸಲಾಗಿದೆ. ನಮ್ಮ ನಾಡಿನಲ್ಲಿ ಅರಣ್ಯ ಸಂಪತ್ತು ಸಮೃದ್ಧಿಯಾಗಿ ಇದ್ದ ಸಮಯವದು.
ಅರುಣಾದ್ರಿಯೆಂಬ ಬೆಟ್ಟದ ತಪ್ಪಲಿನಲ್ಲಿ ಇದ್ದ ಮರಗಳು ಈ ಬಗೆಯವು ಎಂದು ಕವಿ ವರ್ಣಿಸುತ್ತಾರೆ. ಹನ್ನೆರಡು ಯೋಜನದಷ್ಟು ಅರಣ್ಯ ಅಲ್ಲಿ ಸುತ್ತುವರೆದಿತ್ತು.
ನಾಗಸಂಪಿಗೆ, ಮಾವು, ನೇರಳೆ, ತೇಗ, ಚನ್ನಂಗಿ, ಬನ್ನಿ, ಪಾದರಿ, ಬಾಗೆ, ತಿಂತ್ರಿಣಿ, ಬಿಲ್ವ, ಈ ಮರಗಳು ಅಲ್ಲಿ ಮೆರೆದಿದ್ದವು.
ಆಲ, ಅರಳಿ, ಅತ್ತಿ, ಕಿತ್ತಳೆ, ಜಾಲಿಗಿಡ, ಅಗಿಲು, ಶ್ರೀಗಂಧ, ಬೇಲ, ಬೂತಳೆ, ಬಿದಿರು, ಬೂರಗ ಮುಂತಾದ ಆ ಅರಣ್ಯದಲ್ಲಿ ಬೆಳೆದಿದ್ದವು.
ಜಂಬು, ನಿಂಬೆ, ಹಲಸು, ಹಾಲೆ, ಅಡಕೆ, ತೆಂಗು, ಎಕ್ಕೆ,ಎಲಚಿ, ಲಕ್ಕಿ, ಸೀಗೆ, ನೆಲ್ಲಿ ಇವೆಲ್ಲವೂ ಅಲ್ಲಿದ್ದವು. ಆಡಸೋಗೆ, ಕಾಡುನುಗ್ಗೆ, ಹೊನ್ನೆ, ಈಚಲು, ಇಪ್ಪೆ , ತುಳಸಿ, ತೊಂಡೆ, ತಾಳೆ, ಅಗಸೆ, ಗೋಣಿ, ಬಸರಿ ಇತ್ಯಾದಿ ಗಿಡಮರಗಳು, ಪೊದೆಗಳು, ಆಕಾಶದೆತ್ತರ ಬೆಳೆದ ಮರಗಳು ಇದ್ದವು.
ಒಟ್ಟಿನಲ್ಲಿ ಎಲ್ಲಾ ರೀತಿಯ ಸಸ್ಯಸಂಪತ್ತು ಅಲ್ಲಿ ಇದ್ದಿತು. ಇಂದು ಎಷ್ಟೋ ಮರಗಳ ಹೆಸರೇ ತಿಳಿಯದು. ನೋಡಿಯೇ ಇರುವುದಿಲ್ಲ.
ಗೋವಿನ ಕಥೆ 2 ( ಹೂಗಳ ವಿವರಗಳು )
ಮೊಲ್ಲೆ, ಮಲ್ಲಿಗೆ, ಮುಗುಳು ಸಂಪಗೆ
ಚೆಲ್ವ ಜಾಜಿಯು ಸುರಗಿ ಸುರಹೊನ್ನೆ
ಎಲ್ಲಿನೊಡಲು ದವನ ಕೇತಕಿ
ಅಲ್ಲಿ ಮೆರೆದವರಣ್ಯದಿ.
ಕದಳಿಗಳು ದಾಳಿಂಬ ದ್ರಾಕ್ಷೆಯು
ಬದರಿ ಖರ್ಜುರ ಅಂಜುರವು ಬಹು
ವಿದದ ಫಲ ಸುಮ ವೃಕ್ಷತತಿ ಚಂ
ದದಲಿ ವನದಲಿ ಮೆರೆದುವು.
ದುಂಡುಮಲ್ಲಿಗೆ ಚೆಂಡುಮಲ್ಲಿಗೆ
ಕೋಲುಮಲ್ಲಿಗೆ ಕದಿರುಮಲ್ಲಿಗೆ
ಹಸರುಮಲ್ಲಿಗೆ ಸಂಜೆಮಲ್ಲಿಗೆ
ಎಸೆಯುತಿರ್ದುವು ವನದೊಳು.
ಜಾಜಿಮಲ್ಲಿಗೆ ದೂಜಿಮಲ್ಲಿಗೆ
ವರಗುಲಾಬಿಯು ಮುಗುಳು ಸಂಪಗೆ
ಪಾರಿಜಾತವು ಸೂರ್ಯಕಾಂತಿಯು
ವನದಿ ರಂಜಿಸುತ್ತಿರ್ದವು.
ಮರುಗ ಕೇದಗೆ ರತ್ನಗಂಧಿಯು
ಸುರಗಿ ಸೇವಂತಿಗೆಯು ಕಣಗೆಲೆ
ಪರಿಪರಿಯ ವರ ಪುಷ್ಪ ತರುಗಳು
ಮೆರೆಯುತ್ತಿರ್ದವು ವನದೊಳು.
ಮರಗಳ ವಿವರಗಳನ್ನು ನೀಡಿದ ನಂತರ ಇಲ್ಲಿ ಅರಳಿದ್ದ, ಸುವಾಸನಾಭರಿತ ಹೂವುಗಳ ಬಗ್ಗೆ ವಿವರಿಸಿದ್ದಾರೆ. ಹೂವುಗಳನ್ನು ಇಲ್ಲಿ ಹೆಸರಿಸಲಾಗಿದೆ. ಹಾಗೆಯೇ ಕೆಲವು ಹಣ್ಣುಗಳ ಹೆಸರುಗಳೂ ಇಲ್ಲಿವೆ.
ಮೊಲ್ಲೆ, ಮಲ್ಲಿಗೆ, ಸಂಪಿಗೆ, ಜಾಜಿ, ಸುರಹೊನ್ನೆ, ದವನ ಕೇತಕಿ ಮುಂತಾದ ಸುವಾಸನಾಭರಿತ ಹೂಗಳು ಇಲ್ಲಿ ಅರಳಿವೆ.
ಬಾಳೆಗಿಡಗಳಲ್ಲಿ ಬಾಳೆಯ ಗೊನೆಗಳು ಬಾಗಿವೆ. ದಾಳಿಂಬೆ, ದ್ರಾಕ್ಷಿ, ಖರ್ಜೂರ, ಅಂಜೂರ ಮುಂತಾದ ಫಲಗಳು ತುಂಬಿ ತುಳುಕುತ್ತಿವೆ.
ಮಲ್ಲಿಗೆಯ ವಿವಿಧ ಬಗೆಗಳನ್ನು ಹೆಸರಿಸಿದ್ದಾರೆ. ದುಂಡುಮಲ್ಲಿಗೆ, ಚೆಂಡುಮಲ್ಲಿಗೆ, ಕೋಲುಮಲ್ಲಿಗೆ, ಕದಿರುಮಲ್ಲಿಗೆ, ಹಸುರು ಮಲ್ಲಿಗೆ, ಸಂಜೆಮಲ್ಲಿಗೆ, ಜಾಜಿಮಲ್ಲಿಗೆ, ಸೂಜಿಮಲ್ಲಿಗೆ, ಗುಲಾಬಿ, ಸೂರ್ಯಕಾಂತಿ, ಮರುಗ, ಕೇದಗೆ,ರತ್ನಗಂಧಿ, ಸುರಗಿ, ಸೇವಂತಿಗೆ, ಕಣಗಿಲೆ...ಇತ್ಯಾದಿ ವಿಧವಿಧವಾದ ಹೂಗಳು ಅಲ್ಲಿದ್ದವು.
ಹೀಗೆ ಅಲ್ಲಿನ ವಾತಾವರಣದಲ್ಲಿ ಈ ಎಲ್ಲ ಹೂಗಳ ಕಂಪು ಸೇರಿ ಮನಮೋಹಕವಾಗಿತ್ತು. ಕಾಡಿನಲ್ಲಿರಲಿ, ನಾಡಿನಲ್ಲಿರಲಿ ಹೂಗಳ ಚೆಲುವು, ಸುಗಂಧ ಬದಲಾಗದು.
ಗೋವಿನ ಕಥೆ 3 ( ಪ್ರಾಣಿ ಪಕ್ಷಿಗಳ ವಿವರ )
ಕೆಂಚನಾಯ್ಗಳು ಕೆಲವು ಕಾಡ್ಕೊಳಿ
ಪಂಚವರ್ಣದ ಪಾರಿವಾಳವು
ಸಂಚಿನೊಳ್ತಾ ಬರುವ ಕಿರುಬನು
ಮುಂಚಿಮೆರೆದವರಣ್ಯದಿ.
ಹೊಂಚಿ ಕಾಯುವ ತೋಳ ನರಿಗಳು
ಅಂಜಿವೋಡುವ ಮೊಲವು ಕಪಿಗಳು
ರಂಜಿಸುತ್ತಿಹ ಕೋಣ ಮರಿಗಳು
ಬಂದುಮೆರೆದವರಣ್ಯದಿ.
ಚೆಲುವ ಭಾರದ್ವಾಜ ಪಕ್ಷಿಯು
ಲಾವುಗೆಯು ರಣಹದ್ದು ಕೊಕ್ಕರೆ
ಶ್ಯಾಮ ಕುಕ್ಕುಟ ಚಕ್ರಪಕ್ಷಿಯು
ವನದಿ ರಂಜಿಸುತ್ತಿದ್ದವು.
ಗಿಳಿಯು ಕೋಗಿಲೆ ನವಿಲು ಟಿಟ್ಟಿಭ
ಹೊಳೆವ ಗಿಡುಗನು ಕೃಷ್ಣ ಪಕ್ಷಿಯು
ಸುಳಿವ ಗೊರವ ಚಕೋರ ಹಂಸೆಯು
ಬಳಗವೊಪ್ಪಿತು ವನದೊಳು.
ಪಚ್ಚೆಹಕ್ಕಿಯು ಪಾರಿವಾಳವು
ಹೆಚ್ಚಿನಾ ಗೌಜಿಗನ ಹಕ್ಕಿಯು
ಕಚ್ಚಿಯಾಡುವ ಚಪಲೆ ಹಕ್ಕಿಯು
ಹೆಚ್ಚಿ ಮೆರೆದವರಣ್ಯದಿ.
ಹದ್ದು ಕೊಕ್ಕರೆ ಕಾಡ ಕೋಳಿಯು
ಗಂಡಭೇರುಂಡಗಳು ಗೂಬೆಯು
ಬಾವಲಿಯು ಕಾಳಿಂಗ ಗುಬ್ಬಿಯು
ವನದಿ ಶೋಭಿಸುತ್ತಿದ್ದವು.
ಉರುಬಿನಿಂದಾಬರುವ ತೋಳ್ಗಳು
ಎರಗಿ ಬರುತಿಹ ಗಂಡ ಮೃಗಗಳು
ತರುಬಿ ಬರುತಿಹ ಮಲೆಯ ಹೋರಿಯು
ಬಳಸಿ ಮೆರೆದವರಣ್ಯದಿ.
ಅರುಣ ಸಾರಂಗವರ ಕೋಡಗ
ನರಿಯು ಮುಸುಗವು ಸಿಂಗಳೀಕವು
ಚಿರತೆ ಶಾರ್ದೂಲಗಳು ತೋಳವು
ಮೆರೆಯುತ್ತಿರ್ದವರಣ್ಯದಿ.
ಖಡ್ಗಮೃಗ ಕಸ್ತೂರಿ ಮೃಗಗಳು
ಕೃಷ್ಣಮೃಗಗಳು ಕೆಂಚನಾಯ್ಗಳು
ಕಾಡ ಮಾರ್ಜಾಲಗಳು ಕುರಿಗಳು
ಓಡುತ್ತಿರ್ದವರಣ್ಯದಿ.
ಶರಭ ಸಾಳುವ ಹರಿಣ ವಾರಣ
ವರಹ ಕೇಸರಿ ವ್ಯಾಘ್ರ ಕಡವೆಯು
ಕರಡಿಗಳು ಕಾಡ್ಕೋಣ ಮೊಲಗಳು
ಚರಿಸುತ್ತಿರ್ದವು ವನದೊಳು.
ಬಣ್ಣದಳಿಲು ಬೆಟ್ಟದುಡಗಳು
ಕಣ್ಣಿಗಪ್ರಿಯವಾದ ಸರ್ಪವು
ನುಣ್ಣನೆಸೆವಾ ಕೀರ ಮರಿಗಳು
ತಣ್ಣಗಿರ್ದವರಣ್ಯದಿ.
**************************************
ಈ ಭಾಗದಲ್ಲಿ ಕೆಲವು ಪ್ರಾಣಿಗಳ ಮತ್ತು ಪಕ್ಷಿಗಳನ್ನು ಹೆಸರಿಸಿದ್ದಾರೆ. ಅಲ್ಲಿನ ಸಸ್ಯಸಂಪತ್ತಿಗೆ ತಕ್ಕಂತೆ ಈ ಪಶುಪಕ್ಷಿಗಳಿದ್ದವು. ಧಾರಾಳವಾಗಿ ಹಣ್ಣುಗಳು, ವಾಸಕ್ಕೆ ಜಾಗ, ಮಾಂಸಾಹಾರಿ ಪ್ರಾಣಿಗಳಿಗೆ ಬೇಟೆಯಾಡಲು ಅವಕಾಶ ಇದ್ದುದರಿಂದ ಅಲ್ಲಿನ ಜೀವಿಗಳ ಬದುಕು ಸುಖವಾಗಿತ್ತು.
ಸಾರಂಗ, ಕೋಡಗ, ನರಿ, ಮುಸುವ, ಸಿಂಗಳೀಕ, ಚಿರತೆ, ಶಾರ್ದೂಲಗಳು, ತೋಳಗಳು ಅಲ್ಲಿ ಮೆರೆಯುತ್ತಿದ್ದವು. ಖಡ್ಗಮೃಗ, ಕಸ್ತೂರಿ ಮೃಗ, ಕೃಷ್ಣಮೃಗಗಳು, ಕೆಂಚನಾಯಿಗಳು, ಕಾಡು ಬೆಕ್ಕುಗಳು, ಕುರಿಗಳು ಅಲ್ಲಿ ಓಡಾಡುತ್ತಿದ್ದವು.
ಶರಭ, ಸಾಳುವ, ಹರಿಣ, ವಾರಣ (ಆನೆ ) ವರಾಹ, ಕೇಸರಿ, ವ್ಯಾಘ್ರ, ಕಡವೆ, ಕರಡಿ, ಕಾಡುಕೋಣ, ಮೊಲ ಇವೆಲ್ಲವೂ ಅಲ್ಲಿ ಇದ್ದವು. ಅಳಿಲುಗಳು, ಬೆಟ್ಟದ ದೊಡ್ಡ ಹಲ್ಲಿಗಳು, ಕಣ್ಣಿಗೆ ಬೇಡವಾದ ಸರ್ಪಗಳು, ಆರಾಮವಾಗಿ ಓಡಾಡಿಕೊಂಡಿದ್ದವು.
ಇವುಗಳ ಜೊತೆಗೆ ಅಲ್ಲಿ ಗಿಳಿಗಳು, ಕೋಗಿಲೆ, ನವಿಲು, ಟಿಟ್ಟಿಭ, ಗಿಡುಗ, ಕೃಷ್ಣಪಕ್ಷಿ, ಗೊರವ, ಹಂಸಗಳು, ಪಚ್ಚೆ ಹಕ್ಕಿ, ಪಾರಿವಾಳ , ಗೌಜಿಗ, ಚಿಪಲೆ ಹಕ್ಕಿಗಳು ಕಲಕಲ ಎನ್ನುತ್ತಿದ್ದವು. ಹದ್ದು, ಕೊಕ್ಕರೆ, ಕಾಡುಕೋಳಿ, ಗಂಡಭೇರುಂಡ, ಗೂಬೆ, ಬಾವಲಿ, ಕಾಳಿಂಗ ಗುಬ್ಬಿ, ಮುಂತಾದ ಪಕ್ಷಿಗಳಿಂದ ಆ ಅರಣ್ಯವು ಶೋಭಿಸುತ್ತಿತ್ತು.ಅಲ್ಲಿ ಎಷ್ಟು ಮಧುರವಾದ ಕಲರವ ಇದ್ದಿರಬಹುದು! ಇಂದು ಪಕ್ಷಿಗಳನ್ನು ಹುಡುಕಬೇಕಾಗಿದೆ.
ಗೋವಿನ ಕಥೆ 4 ( ಪ್ರಾಣಿ, ಪಕ್ಷಿ, ನದಿಗಳ ವಿವರ )
ಉರುಬಿನಿಂದಾ ಬರುವ ಕರಿಗಳು
ಎರಗಿ ಬರುತಿಹ ಗಂಡ ಮೃಗಗಳು
ತರುಬಿ ಬರುತಿಹ. ಮಲೆಯ ಹೋರಿಯು
ಬಳಸಿ ಮೆರೆದವರಣ್ಯದಿ.
ಹೊಂಚಿ ಕಾಯುವ ತೋಳ ನರಿಗಳು
ಅಂಜಿವೋಡುವ ಮೊಲನು ಕಪಿಗಳು
ರಂಜಿಸುತ್ತಿಹ ಕೋಣ ಮರಿಗಳು
ಬಂದು ಮೆರೆದವರಣ್ಯದಿ.
ಪೃಥ್ವಿಯೊಳಗರುಣಾದ್ರಿ ಗಿರಿಯ
ಒತ್ತಿನೊಳಗಿಹ ಪುಣ್ಯತೀರ್ಥವು
ಸತ್ಯಸಾಗರ ಮುಂದೆ ಗೌತಮಿ
ಉತ್ತಮದಿ ನದಿ ಮೆರೆದವು.
ಯಮುನೆ ಫಲ್ಗುಣಿ ಕೃಷ್ಣವೇಣಿಯು
ನರ್ಮದೆಯು ಕಾವೇರಿ ಗಂಗೆಯು
ಭೀಮರಥಿ ವರ ತುಂಗಭದ್ರೆಯು
ಗಿರಿಯ ಪ್ರಾಂತದಿ ಮೆರೆದವು.
ವರ ಸರಸ್ವತಿ ಗಂಡಕಿಯು ಪು
ಷ್ಕರಿಣಿ ತೀರ್ಥವು ಕಪಿಲೆ ಗೋದಾ
ವರಿಯು ಭಾಗೀರಥಿ ಕುಮುದ್ವತಿ
ಗಿರಿಯ ಸುತ್ತಲು ಮೆರೆದವು.
ಗಿರಿಯ ಪ್ರಾಂತ್ಯದಿ ಶೈಲ ಗೃಹದಿ
ಇರುವ ಮುನಿಗಳು ತಪಸಿ ಸಿದ್ಧರು
ಪರಮ ಮುನಿಜನ ಬ್ರಹ್ಮ ಋಷಿಗಳು
ಹರಿಯ ಧ್ಯಾನದೊಳಿರ್ದರು.
**********************************
ಇಲ್ಲಿ ಆ ಅರಣ್ಯದಲ್ಲಿದ್ದ ಇನ್ನಷ್ಟು ಪ್ರಾಣಿ ಪಕ್ಷಿಗಳ ಹೆಸರುಗಳು ಬಂದಿವೆ. ಜೊತೆಗೆ ಅಲ್ಲಿ ಹರಿಯುತ್ತಿದ್ದ ನದಿಗಳನ್ನು ಹೆಸರಿಸಲಾಗಿದೆ. ಅಲ್ಲಿ ಹಲವಾರು ನದಿಗಳು ಗಿರಿಯ ಸುತ್ತಲೂ ಹರಿಯುತ್ತಿದ್ದವೆಂದರೆ ಆ ಕಾಲದ ಜಲಸಂಪತ್ತು ಎಷ್ಟು ಸಂಮೃದ್ಧವಾಗಿತ್ತು ಎನಿಸುತ್ತದೆ.
ಅಲ್ಲಿ ನುಗ್ಗಿ ಕೊಂಡು ಬರುತ್ತಿದ್ದ ಆನೆಗಳು, ಘೇಂಡಾಮೃಗಗಳು, ಕೊಬ್ಬಿದ ಗೂಳಿಗಳು ಓಡಾಡುತ್ತಿದ್ದವು. ಕೆಂಚನಾಯಿಗಳು, ಕಾಡುಕೋಳಿಗಳು, ಐದುಬಣ್ಣಗಳ ಗಿಳಿಗಳು, ಸಂಚಿನಿಂದ ಬರುತ್ತಿದ್ದ ಕಿರುಬಗಳು ಎಲ್ಲವೂ ಅಲ್ಲಿದ್ದವು. ಹೊಂಚು ಹಾಕುತ್ತಿದ್ದ ತೋಳ ನರಿಗಳು, ಅವುಗಳಿಗೆ ಹೆದರಿಕೊಂಡು ಓಡುತ್ತಿದ್ದ ಮೊಲ, ಕಪಿಗಳು, ಮುದ್ದಾದ ಕೋಣನ ಮರಿಗಳು ಮೆರೆದವು. ಚೆಲುವಾದ ಭಾರದ್ವಾಜ ಪಕ್ಷಿ, ರಣಹದ್ದು, ಕೊಕ್ಕರೆ, ಶ್ಯಾಮ ಕುಕ್ಕುಟ, ಚಕ್ರಪಕ್ಷಿ ಇವೆಲ್ಲವೂ ರಂಜಿಸುತ್ತಿದ್ದವು.
ಆ ಅರುಣಾದ್ರಿ ಗಿರಿಯ ತಪ್ಪಲಿನಲ್ಲಿ ಹಲವು ಪುಣ್ಯತೀರ್ಥಗಳಿದ್ದವು. ಸತ್ಯಸಾಗರ, ಗೌತಮಿ, ಯಮುನೆ, ಫಲ್ಗುಣಿ, ಕೃಷ್ಣವೇಣಿ, ನರ್ಮದೆ, ಕಾವೇರಿ, ಗಂಗೆ, ಭೀಮರಥಿ, ತುಂಗಭದ್ರೆ, ಸರಸ್ವತಿ, ಗಂಡಕಿ, ಪುಷ್ಕಿರಿಣಿ, ಕಪಿಲೆ, ಗೋದಾವರಿ ಭಾಗೀರಥಿ, ಕುಮುದ್ವತಿ ಮುಂತಾದ ನದಿಗಳನ್ನು ಹೆಸರಿಸುವ ಮೂಲಕ ತಾನು ಕೇಳಿದ ನದಿಗಳ ಹೆಸರುಗಳನ್ನೆಲ್ಲ ಇಲ್ಲಿ ಬಳಸಿರುವಂತೆ ಕಾಣುತ್ತದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ತರತಮವಿಲ್ಲದೆ ಎಲ್ಲವೂ ಪುಣ್ಯನದಿಗಳೆಂಬ ಭಾವ ಇಲ್ಲಿದೆ. ಕಂಡ ತೀರ್ಥಗಳೆಲ್ಲವೂ ಪುಣ್ಯತೀರ್ಥಗಳೇ ಎಂಬ ಭಾವ ಎಷ್ಟು ಉತ್ತಮವಾಗಿದೆ.
ಇಂತಹ ಪುಣ್ಯಸ್ಥಳದಲ್ಲಿದ್ದ ಗುಹೆಗಳಲ್ಲಿ ತಪೋನಿರತರಾದ ಹಲವು ಮುನಿಗಳಿದ್ದರು.ಈ ಬ್ರಹ್ಮ ಋಷಿಗಳು ಸದಾ ಹರಿಯ ಧ್ಯಾನದಲ್ಲಿ ಇರುತ್ತಿದ್ದರು.
ಗೋವಿನ ಕಥೆ 5
*ಗೊಲ್ಲಗೌಡನ ವರ್ಣನೆ ಮತ್ತು ಹಸುಗಳ ನಾಮಧೇಯಗಳು*
ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮದನ ತಿಲಕವ ಪಣೆಯೊಳಿಟ್ಟು
ಚದುರಸಿಕೆಯನು ಹಾಕಿದ.
ಉಟ್ಟ ದಟ್ಟಿಯು ಪಟ್ಟೆ ಚಲ್ಲಣ
ತೊಟ್ಟ ಪದಕವು ಬಿಲ್ಲೆ ಸರಗಳು
ಕಟ್ಟಿ ಭಾಪುರಿ ಭುಜದ ಕೀರ್ತಿಯು
ಇಟ್ಡ ಮುದ್ರಿಕೆಯುಂಗುರ.
ಪಚ್ಚೆ ಕಡಗವು ಪವಳದಾ ಸರ
ಹೆಚ್ಚಿನಾ ಕಾಲ್ಗಡಗ ಗೆಜ್ಜೆಯು
ನಿಶ್ಚಿಂತಾನಂದದಲಿ ಮೆರೆದನು
ಮುತ್ತಿನಾ ಸರ ಪದಕವು
ಇಟ್ಟ ಮುತ್ತಿನ ಒಂಟಿ ಬಾವುಲಿ
ಕಂಠಮಾಲೆ ಪದಕ ಸರಗಳು
ದಿಟ್ಟತನದಲಿ ಧರಿಸಿ ಮೆರೆದನು
ಗಂಟೆ ಮೊದಲಾದೊಡವೆಯ.
ನೀಲದೊಂಟಿಯು ತಾಳಿ ಚೌಕುಳಿ
ಕಾಲ ಕಡಗವು ಮೇಲೆ ಭಾಪುರಿ
ನೀಲದುಂಗುರ ಸಾಲ ಸರಗಳು
ಲೋಲ ಧರಿಸಿಯೆ ಮೆರೆದನು.
ಚಂದ್ರಗಾವಿಯ ಅಂಗಿ ತೊಟ್ಟು
ಇಂದ್ರನೀಲದ ಪಾಗು ಸುತ್ತಿ
ಚಂದ್ರಕಾಂತಿಯ ದುಪಟಿಯನ್ನು
ಚಂದದಿಂದಲಿ ಪೊದ್ದನು.
ಗೊಲ್ಲ ಶೃಂಗಾರಿಸಿಕೊಂಡು
ಒಳ್ಳೆ ದುಕುಲಗಳನ್ನು ಪೊದ್ದು
ಬೆಳ್ಳೆಯಂಡೆಯ ಕೈಲಿ ಪಿಡಿದು
ಎಲ್ಲ ಗೋವ್ಗಳ ಕರೆದನು.
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿನಿಂದಾ ತುರುಗಳನ್ನು
ಬಳಿಗೆ ಕರೆದನು ಹರುಷದಿ
ಪಾರ್ವತೀ ಲಕ್ಷ್ಮೀಯೆ ಬಾರೆ
ಸರಸ ಸದ್ಗುಣ ವನಿತೆ ಬಾರೆ
ಸರಸ್ವತಿಯ ಮಾಣಿಕವೆ ಬಾರೆಂದು
ಸರಸದಿಂದಲಿ ಕರೆದನು.
ರಂಗನಾಯಕಿ ನೀನು ಬಾರೆ
ರಘುಕುಲೋತ್ತಮೆ ನೀನು ಬಾರೆ
ಶೃಂಗಾರದ ಸೊಬಗಿ ಬಾರೆಂದು
ಅಂಗವಿಸಿ ಗೊಲ್ಲ ಕರೆದನು.
ಪುಣ್ಯಕೋಟಿಯೆ ನೀನು ಬಾರೆ
ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣ ಸಂಪನ್ನೆ ಬಾರೆಂದು
ನಾಣ್ಯದಿಂ ಗೊಲ್ಲ ಕರೆದನು.
ಕಾಮಧೇನು ನೀನು ಬಾರೆ
ಭೂಮಿದೇವಿಯೆ ನೀನು ಬಾರೆ
ರಾಮನರಗಿಣಿ ನೀನು ಬಾರೆಂದು
ಪ್ರೇಮದಿಂ ಗೊಲ್ಲ ಕರೆದನು.
ಭಾಗ್ಯಲಕ್ಷ್ಮಿಯೆ ನೀನು ಬಾರೆ
ಭಾಗ್ಯ ಗುಣ ಚಾರಿತ್ರೆ ಬಾರೆ
ಯೋಗವತಿಯೇ ನೀನು ಬಾರೆಂದು
ಬೇಗದಿಂ ಗೊಲ್ಲ ಕರೆದನು.
ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದವಾಗ
ಚೆಲ್ಲಿ ಸೂಸಿ ಪಾಲ ಕರೆದು
ಅಲ್ಲಿ ತುಂಬಿತು ಬಿಂದಿಗೆ.
*************************************
ಆ ಪ್ರದೇಶದಲ್ಲಿ ಇದ್ದ ಕಾಳಿಂಗನೆಂಬ ಗೊಲ್ಲನ ಪರಿಚಯ ಇಲ್ಲಿಂದ ಆರಂಭವಾಗುತ್ತದೆ. ಅದು ಕರ್ನಾಟದೇಶವೆಂಬ ವಿವರಣೆ ಇದೆ. ಅವನು ಪ್ರತಿದಿನದಂತೆ ಉದಯಕಾಲದಲ್ಲಿ ಎದ್ದು ನದಿಯಲ್ಲಿ ಸ್ನಾನ ಮಾಡಿಕೊಂಡು ಮದನ ತಿಲಕವನ್ನು ಹಣೆಗಿಟ್ಟು ಚದುರ ಶಿಖೆಯನ್ನು ಹಾಕಿದನು. ದಟ್ಟಿಯುಟ್ಟು, ಪಟ್ಟೆಚಲ್ಲಣ ತೊಟ್ಟು, ಪದಕಸರಗಳನ್ನು ಹಾಕಿಕೊಂಡು, ಮುದ್ರಿಕೆಯುಂಗುರವನ್ನು ತೊಟ್ಟನು. ಆ ಕಾಲದ ಸಾಂಪ್ರದಾಯಿಕ ಉಡುಗೆ ತೊಡುಗೆ, ಧರಿಸುತ್ತಿದ್ದ ಆಭರಣಗಳ ವಿವರಗಳು ಮನಸೆಳೆಯುತ್ತವೆ.
ಪಚ್ಚೆ ಕಡಗ, ಹವಳದ ಸರ, ಕಾಲ್ಗಡಗ, ಗೆಜ್ಜೆ, ಮುತ್ತಿನಸರಗಳೊಂದಿಗೆ ನಿಶ್ಚಿಂತನಾಗಿ ಆನಂದದಿಂದ ಮೆರೆದನು. ಒಂಟಿ ಬಾವುಲಿ ( ಕಿವಿಯ ಆಭರಣ ) ಕಂಠಮಾಲೆ, ಗಂಟೆ ಮೊದಲಾದ ಆಭರಣಗಳನ್ನು ಧರಿಸಿದನು. ನೀಲದ ಒಂಟಿ, ಚೌಕುಳಿ, ನೀಲದುಂಗುರ ಮೊದಲಾದ ಹಲವಾರು ಆಭರಣಗಳನ್ನು ಧರಿಸಿದನು. ಚಂದ್ರಕಾವಿ ಬಣ್ಣದ ಅಂಗಿಯನ್ನು ತೊಟ್ಟು ಪಾಗನ್ನು ತಲೆಗೆ ಸುತ್ತಿ, ಚಂದ್ರಕಾಂತಿಯ ದುಪಟಿಯನ್ನು ಹೊದ್ದನು.
ಇಷ್ಟೆಲ್ಲ ಅಲಂಕರಿಸಿಕೊಂಡ ನಂತರ ಗೊಲ್ಲನು ಎಳೆಯ ಮಾವಿನಮರದ ಕೆಳಗೆ ನಿಂತು ಕೊಳಲನ್ನು ಊದುತ್ತ ತನ್ನ ಗೋವುಗಳನ್ನು ಹೆಸರಿಸಿ ಕರೆದನು.
ಗಂಗೆ, ತುಂಗೆ, ಪಾರ್ವತಿ, ಲಕ್ಷ್ಮಿ, ಸರಸ ಸದ್ಗುಣ ವನಿತೆ, ಸರಸ್ವತಿಯ ಮಾಣಿಕ, ಪುಣ್ಯಕೋಟಿ, ಪುಣ್ಯವಾಹಿನಿ, ಪೂರ್ಣಗುಣ ಸಂಪನ್ನೆ, ಭೂಮಿದೇವಿ, ಕಾಮಧೇನು, ಅಂಗನಾಮಣಿ, ತುಂಗಭದ್ರೆ, ಧರ್ಮದೇವಿ, ಧರ್ಮಗುಣವಾಣಿ, ಧರ್ಮವತಿ, ಉದಯಭಾಸ್ಕರದೇವಿ, ಭಾಗ್ಯ ಲಕ್ಷ್ಮಿ, ಭಾಗ್ಯಗುಣಚರಿತೆ, ಯೋಗವತಿ, ರಾಮನರಗಿಣಿ, ರಂಗನಾಯಕಿ, ರಘುಕುಲೋತ್ತಮೆ, ಅಂಗನಾಮಣಿ ಹೃದಯ ನಿರ್ಮಲೆ ಇತ್ಯಾದಿ ಸುಂದರವಾದ ಅರ್ಥಪೂರ್ಣವಾದ ಹೆಸರುಗಳನ್ನು ಹೊಂದಿದ್ದ ಗೋವುಗಳನ್ನು ಪ್ರೇಮದಿಂದ, ಸ್ನೇಹದಿಂದ, ಆತ್ಮೀಯತೆಯಿಂದ ಕರೆದನು.
ಹಾಗೆ ಕರೆಯುತ್ತಲೂ ಎಲ್ಲ ಹಸುಗಳೂ ಬಂದು ನಿಂತವು. ಹಾಲು ಕರೆದಾಗ ಬಿಂದಿಗೆಗಳು ತುಂಬಿ ತುಳುಕಿದವು.
ಗೋವಿನಕಥೆ 6 - ಹಸುಗಳ ವರ್ಣನೆ,
ಗೊಲ್ಲನ ಬುದ್ಧಿ ಮಾತುಗಳು
ಒಡನೆ ದೊಡ್ಡಿಯ ಬಿಡುತ ಹಸುಗಳು
ನಡೆದವಾಗಾರಣ್ಯಕಾಗಿ
ಕಡಲು ಮೇಘವು ತೆರಳುವಂದದಿ
ನಡೆದವಾಗಾರಣ್ಯಕೆ.
ಎಣಿಕೆ ಹುಲ್ಲೆ ವರ್ಣದಾವು
ಉನ್ನಂತ ಬೆಟ್ಟದ ಕೆಂದ ಆವು
ಉನ್ನಂತವಹ ಕಪಿಲೆ ಗೋವ್ಗಳು
ಉನ್ನಂತವಾಗಿನಡೆದವು.
ಕರವುಗಾಳು ಕಡಸುಗಾಳು
ಸರಿಯ ಪ್ರಾಯದ ಎತ್ತುಗಾಳು
ದುರುಳು ಪ್ರಾಯದ ಗೋವ್ಗಳೆಲ್ಲ
ತೆರಳಿದಾವಾರಣ್ಯಕೆ.
ನೆಟ್ಟ ಕೊಂಬಿನ ಮೋಟ ಕೊಂಬಿನ
ಮಟ್ಟಕೊಂಬಿನ ಕಾಕಿಗಣ್ಣಿನ
ಚೊಟ್ಟಕೊಂಬಿನ ಹಸುಗಳೆಲ್ಲಾ
ದಿಟ್ಟತನದಲಿ ನಡೆದುವು.
ಘೋರ ಕಾನನದೊಳಗೆ ಗೊಲ್ಲನು
ಸಾರಿ ಹೇಳಿದ ಪಶುಗಳಿಗೆ ನೀವ್
ಬೇರೆ ಬೇರೆಯೆ ಸಂಚರಿಸದಿರಿ
ಸೇರಿ ಜತೆಯೊಳೆ ಮೇಯಿರಿ.
ಹುಲ್ಲು ನೀರಿನ ತಳವ ನೋಡಿ
ಅಲ್ಲಿ ಹುಲ್ಲನು ಮೇದು ನಿತ್ಯವು
ಒಳ್ಳೆ ನೀರನು ಮುದದಿ ಕುಡಿಯುತ
ಎಲ್ಲರೊಟ್ಟಿಗೆ ಬನ್ನಿರಿ.
ಬಿಟ್ಟು ಹಿಂಡನು ತಿರುಗಬೇಡಿರಿ
ಕೆಟ್ಟ ಹುಲಿಗಳು ಹೊಂಚುತಿರುವವು
ಒಟ್ಟಿಲೆಲ್ಲರು ಮುದದಿ ಮೇಯುತ
ಒಟ್ಟುಗೂಡುತ ಬನ್ನಿರಿ.
ಚೂತವೃಕ್ಷದ ಬುಡದಿ ನಾನು
ಸಂತಸದಿ ಮಲಕೊಂಡು ಸೂರ್ಯನ
ಅಸ್ತ ಕಾಲದೊಳೆದ್ದು ಕರೆವೆನು
ಕೊಳಲನೂದುತ ನಿಮ್ಮನು.
ಒಡೆಯನಪ್ಪಣೆ ಶಿರದಿ ಧರಿಸಿ
ಒಡನೆ ಪಶುಗಳು ಹರುಷದಿಂದಲಿ
ಅಡವಿಯೊಳಗಣ ಎಳೆಯ ಹುಲ್ಲನು
ಬಿಡದೆ ಮೇಯುತಲಿರ್ದವು.
ಅಟ್ಟಬೆಟ್ಟದ ಕಿಬ್ಬಿಯೊಳಗೆ
ಇಟ್ಟೆಡೆಯ ಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು
ಮುಟ್ಟಿ ಮೇದವು ಹುಲ್ಲನು.
ಅಕ್ಕಿಯಂತ ಹುಲ್ಲುಗಳನು
ಸಕ್ಕರೆಯಂದದಲಿ ಸವಿದು
ಅಕ್ಕರಿಂದಾಹಾರಗೊಂಡು
ಸೊಕ್ಕಿ ಸಂತಸಗೊಂಡವು.
ಹರಿದು ಮೇದ ಪಶುಗಳನ್ನು
ಕರೆದು ತಂದನು ಗೊಲ್ಲ ಗೌಡನು
ಕೊರಳ ಗಂಟೆಯು ಢಣಿರು ಢಣಿರೆನೆ
ಮರಳಿ ಬಂದವು ದೊಡ್ಡಿಗೆ.
*************************************
ಅಲಂಕೃತಗೊಂಡ ಗೊಲ್ಲನು ಎಲ್ಲ ಹಸುಗಳನ್ನು ಕರೆದುಕೊಂಡು ಅಡವಿಯ ಕಡೆಗೆ ನಡೆದನು. ಎಳೆಯ ಹಸುರಿನ ಹುಲ್ಲನ್ನು ಮೇಯುವ ಆತುರದಿಂದ ಗೋವುಗಳು ಹೊರಟವು.
ಜಿಂಕೆಯ ಬಣ್ಣದವು, ಎತ್ತರವಾದ ಹೆಗಲಿನ ಎತ್ತುಗಳು, ಕಪಿಲೆಗಳು ನಡೆದವು. ಸ್ವಲ್ಪ ದೊಡ್ಡದಾಗಿದ್ದ ಕರುಗಳು, ಕಡಸುಗಳು, ಪ್ರಾಯದ ಎತ್ತುಗಳು, ನೆಟ್ಟ ಕೊಂಬಿನ, ಮೋಟ ಕೊಂಬಿನ, ಮಟ್ಟಕೊಂಬಿನ, ಚೊಟ್ಟ ಕೊಂಬಿನ ಹಸುಗಳು ಹೊರಟವು. ಕಾಕಿಗಣ್ಣಿನ, ಕೆಂದ ಬಣ್ಣದ ಹಸುಗಳೆಲ್ಲ ಹೊರಟವು.
ದುರ್ಗಮವಾದ ಕಾನನದಲ್ಲಿ ಅವುಗಳಿಗೆ ಗೊಲ್ಲನು ಬುದ್ಧಿಮಾತನ್ನು ಹೇಳುವನು. ಎಲ್ಲರೂ ಒಟ್ಟಾಗಿರಿ. ವ್ಯಾಘ್ರಗಳು ಇರುತ್ತವೆ. ಜೋಪಾನ. ಹುಲ್ಲು ತಿಂದು ನೀರು ಕುಡಿದು ನಾನು ಕೊಳಲನ್ನು ಊದಿ ಕರೆದ ಕೂಡಲೇ ಬರಬೇಕು ಎಂದು ಹೇಳಿ ಅಲ್ಲಿದ್ದ ಒಂದು ಎಳೆಯ ಮಾವಿನಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದನು.
ಆನಂದದಿಂದ ಗೋವುಗಳು ಅಕ್ಕಿಯಂತಹ ರುಚಿಯಾದ ಹುಲ್ಲನ್ನು ಸಕ್ಕರೆಯಂತೆ ಸವಿದು ಹೊಟ್ಟೆ ತುಂಬಿದ ಸಮಯದಲ್ಲಿ ಸಂತಸದಿಂದ ನಲಿದವು. ಅಲ್ಲಲ್ಲಿ ಬೆಳೆದಿದ್ದ ಎಳೆಯ ಹುಲ್ಲನ್ನು ಸವಿದವು. ಅಕ್ಕರೆಯಿಂದ ತಿಳಿನೀರನ್ನು ಕುಡಿದು ಓಡಾಡಿದವು.
ನಳಿನಮಿತ್ರನಾದ ಸೂರ್ಯನು ಅಸ್ತಮಿಸುವ ವೇಳೆಯಾಗಲು ಗೊಲ್ಲನು ತನ್ನ ಕೊಳಲನ್ನು ಊದಿದನು. ಗೊಲ್ಲನ ಕರೆಯನ್ನು ಕೇಳಿದ ಹಸುಗಳು ಒಂದುಗೂಡಿ ಗೊಲ್ಲನೆಡೆಗೆ ಬಂದವು. ಅವುಗಳನ್ನು ದೊಡ್ಡಿಯೆಡೆಗೆ ನಡೆಸಿಕೊಂಡು ಗೊಲ್ಲನು ಹೊರಟನು. ಕೊರಳಿನ ಗಂಟೆಗಳು ಢಣಿರುಢಣಿರೆನ್ನುತ್ತಿರಲು ಎಲ್ಲವೂ ಮನೆಯೆಡೆಗೆ ಹೊರಟವು.
ಗೋವಿನಕಥೆ 7 - ಹುಲಿಯ ಪ್ರವೇಶ
ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ
ಕಿಬ್ಬಿಯೊಳು ತಾನಿರುವನು.
ಒಡಲಿಗೇಳು ದಿವಸದಿಂದ
ತಡೆದಾಹಾರವ ಬಳಲಿ ವ್ಯಾಘ್ರನು
ಅಡಗಿಕೊಂಡು ಗವಿಯ ಬಾಗಿಲ
ಹೊರನುಡಿಯ ಆಲಿಸುತ್ತಿರ್ದನು.
ಕೊರಳ ಗಂಟೆಯ ಧ್ವನಿಯು ಕರ್ಣಕೆ
ಎರಗಲಾಕ್ಷಣ ವ್ಯಾಘ್ರನೆದ್ದು
ಹರಿದು ಆಹಾರಗೊಂಬೆನೆನುತಲಿ
ಹೊರಹೊರಟು ತಾ ಬಂದಿತು.
ಸಿಡಿಲು ಘೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ವ್ಯಾಘ್ರನು
ತುಡುಕಿಯೆರಗಿದ ರಭಸದಿಂದೊ
ಗ್ಗೊಡೆದವಾಗಾ ಗೋವ್ಗಳು.
ಅದರ ರಭಸಕೆ ನಿಲ್ಲಲರಿಯದೆ
ಕದುಮಿ ಕಮರಿಯ ಬಿದ್ದು ಪಶುಗಳು
ಪದರಿ ತಲ್ಲಣಗೊಂಡು ಪಶುಗಳು
ಚೆದರಿ ಓಡಿಹೋದವು.
ಚೆಲ್ಲಿವೋಡುವ ಪಶುಗಳನ್ನು
ಸಿಕ್ಕಲಿಲ್ಲಾವೆನುತ ವ್ಯಾಘ್ರನು
ಅಲ್ಲಿ ಕೋಪದಿ ಹಲ್ಲು ಕಡಿಯುತ
ದಿಕ್ಕು ದಿಕ್ಕಿಗೆ ನೋಡಿತು.
ಕೋಮಲತೆಯಿಂ ನಲಿದು ನೆಗೆಯುತ
ಆ ಮಹಾಟವಿ ಮಧ್ಯದಲ್ಲಿ
ಪ್ರೇಮದಿಂದಲಿ ಬರುವ ಪಶುವನು
ಭೂಮಿಯೊಳು ಹುಲಿ ಕಂಡಿತು.
ಕನ್ನೆ ಮಗನ ಪಡೆದ ಪಶುವು
ತನ್ನ ಕಂದನ ನೆನೆದುಕೊಂಡು
ಪುಷ್ಯಕೋಟಿಯೆಂಬ ಪಶುವು
ಚೆನ್ನಾಗಿ ತಾ ಬರುತಿರೆ.
ಇಂದು ಎನಗಾಹಾರ ಸಂದಿತು
ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ಕೊಂಡಿತಾಗ ಪಶುವನು.
ಮೇಲೆ ಬೀಳುತ ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನೆನುತ ಕೋಪದಿ
ಖೂಳ ಹುಲಿಯಾರ್ಭಟಿಸಲು
ಹುಲಿಯ ಮಾತನು ಪುಣ್ಯಕೋಟಿಯು
ಕೇಳಿ ವಿಸ್ಮಯಗೊಂಡು ಮನದೊಳು
ಹೇಳಿಕೊಂಡಳು ವ್ಯಾಘ್ರನೊಂದಿಗೆ
ಶೀಲವತಿ ಬಲು ವಿನಯದಿ.
**************************************
ಆ ದಟ್ಟ ಅರಣ್ಯದ ಮಧ್ಯದಲ್ಲಿ ಒಂದು ಕಿಬ್ಬಿಯೊಳಗೆ ಅರ್ಬುತನೆಂಬ ವ್ಯಾಘ್ರವು ವಾಸವಾಗಿತ್ತು. ಏಳು ದಿನಗಳಿಂದ ಯಾವ ಆಹಾರವೂ ಸಿಗದೆ ಹುಲಿಯು ಬಳಲಿತ್ತು. ಆಹಾರಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ ಹುಲಿಯ ಕಿವಿಗೆ ಗಂಟೆಗಳ ಶಬ್ದ ಕೇಳಿಸಿತು. ಕೂಡಲೆ ಆಹಾರವನ್ನು ಪಡೆಯುವೆನೆಂದು ಗವಿಯಿಂದ ಹೊರಹೊರಟಿತು.
ಸಿಡಿಲಿನಂತೆ ಆರ್ಭಟಿಸುತ್ತಾ, ಘುಡುಘುಡಿಸಿ ರಭಸದಿಂದ ತುಡುಕಿ ಎರಗಲು ಹಸುಗಳು ಸಿಕ್ಕ ಕಡೆಗೆ ಓಡುತ್ತ ಚದುರಿದವು. ಹುಲಿಯ ರಭಸಕ್ಕೆ ಬೆದರಿ ತಲ್ಲಣಗೊಂಡು ಹಸುಗಳು ಕಮರಿ, ದಿಬ್ಬ, ಏನೂ ಗಮನಿಸದೆ ಓಡಿಹೋದವು. ಓಡಿಹೋಗುವ ಹಸುಗಳನ್ನು ಹಿಡಿಯಲಾಗದೆ ಹುಲಿಯು ರೋಷದಲ್ಲಿ ಹಲ್ಲುಗಳನ್ನು ಕಡಿಯುತ್ತ ದಿಕ್ಕುದಿಕ್ಕಿಗೆ ನೋಡತೊಡಗಿತು.
ಆ ಸಮಯದಲ್ಲಿ ಪುಣ್ಯಕೋಟಿ ಎಂಬ ಹಸುವು ಇದಾವುದರ ಕಡೆಗೂ ಗಮನ ಕೊಡದೆ ತನ್ನ ಕಂದನನ್ನು ನೆನಪಿಸಿಕೊಳ್ಳುತ್ತ ಉಲ್ಲಾಸದಿಂದ ಬರುತ್ತಿತ್ತು. ಇದನ್ನು ಹುಲಿಯು ನೋಡಿತು.
ಇಂದು ನನಗೆ ಆಹಾರ ದೊರಕಿತು ಎಂದು ಸಂತಸಗೊಂಡ ವ್ಯಾಘ್ರವು ಬಂದು ಬೇಗನೆ ಹಸುವನ್ನು ಅಡ್ಡಗಟ್ಟಿ ನಿಂತಿತು. ನಿಲ್ಲು, ನಿಲ್ಲು, ಎಲ್ಲಿ ಹೋಗುವೆ? ನಿನ್ನನ್ನು ತಿನ್ನುವೆ. ಎಲುಬುಗಳನ್ನು ಮುರಿಯುವೆನೆಂದು ಖೂಳ ವ್ಯಾಘ್ರವು ನುಡಿಯಿತು. ನಾನು ಆಹಾರಕ್ಕಾಗಿ ಎಲ್ಲೆಲ್ಲೋ ಅಲೆದೆ. ಬೆಳೆದ ಪೈರನ್ನು ಕೆಡಿಸಿದೆ. ಈಗ ನೀನಾಗಿ ನನ್ನ ಗವಿಯ ಬಾಗಿಲಿಗೆ ಬಂದಿರುವೆ. ನಿನ್ನನ್ನು ಕೊಂದು ತಿನ್ನುವೆನೆಂದು ಆರ್ಭಟಿಸಿತು. ಉಳಿದ ಹಸುಗಳೆಲ್ಲ ಭಯದಿಂದ ಬೇಗ ಬೇಗ ನಡೆದು ದೊಡ್ಡಿಗೆ ಬಂದವು. ನಿನ್ನನ್ನು ಈಗಲೆ ಕೊಲ್ಲುವೆ, ನಿನ್ನ ಹೊಟ್ಟೆಯನ್ನು ಸೀಳುವೆನೆಂದು ಅಬ್ಬರಿಸಿ ಹುಲಿಯು ಪುಣ್ಯಕೋಟಿಯ ಮೇಲೆ ಎರಗಲು ಸಿದ್ಧವಾಯಿತು.
ಹುಲಿಯನ್ನು ನೋಡಿ, ಅದರ ಆರ್ಭಟವನ್ನು ಕೇಳಿ ವಿಸ್ಮಯ ಮತ್ತು ಭಯದಿಂದ ಕೂಡಿದ ಪುಣ್ಯಕೋಟಿಯು ಹುಲಿಗೆ ಉತ್ತರಿಸಲು ಆರಂಭಿಸಿತು.
ಗೋವಿನಕಥೆ 9
(ಗೋವು ತನ್ನ ದೇಹದ ಮಹತ್ವವನ್ನು ಹೇಳಿ ಹುಲಿಯಿಂದ ಅಪ್ಪಣೆ ಪಡೆದು ದೊಡ್ಡಿಗೆ ಬರುವುದು )
ಎನ್ನ ವಂಶದ ನಿಜವ ಪೇಳ್ವೆನು
ಮನ್ನಿಸೈ ಹುಲಿರಾಯ ನೀನು
ಎನ್ನ ದೇಹದ ಬಗೆಯ ತಿಳಿಯೋ
ಇನ್ನು ಎಲ್ಲಾ ಪೇಳ್ವೆನು.
ಎನ್ನ ಉಚ್ಛಾಸಗಳೆ ವೇದವು
ಎನ್ನ ನೇತ್ರವೆ ಸೂರ್ಯ ಚಂದ್ರರು
ಎನ್ನ ಕರ್ಣವೆ ಇಂದ್ರಲೋಕವು
ಎನ್ನ ದೇಹವಿದೊಳ್ಳಿತು.
ನಾಲ್ಕು ಪಾದವೆ ದಿಕ್ಕು ನಾಲ್ಕು
ನಿಜದಿ ನೋಡಲು ರೋಮ ಸುರರು
ಬೆಳಕ ತೋರುವ ಜ್ಯೋತಿ ತಲೆಯು
ಇಳೆಯೊಳಿಂತಿದು ದೇವರು.
ಎನ್ನ ಕೆಚ್ಚಲೆ ಲೋಕವೆಲ್ಲಾ
ಎನ್ನ ಮೊಲೆಗಳೆ ಪದವಿ ನಾಲ್ಕು
ಎನ್ನ ಸಾರವೆ ಅಮೃತ ಪದವಿದು
ಎನ್ನ ಗೋಪುರ ಮೇರುವೆ.
ಎನ್ನ ರಸವೇ ಪಂಚಗವ್ಯವು
ಎನ್ನ ವಂಶವೆ ಯಜ್ಞ ತಪಗಳು
ಎನ್ನ ದೇಹವೆ ಸ್ವರ್ಗ ತೋರ್ಪುದು
ಎನ್ನ ಪೆಸರೇ ಮೋಕ್ಷವು.
ಇಂತು ನಿನಗಿದ ತಿಳಿಯ ಪೇಳಿದೆ
ಕಂತುಹರ ಬಲ್ಲೆನ್ನ ಸತ್ಯವ
ಇಂತು, ನಿನಗೇ ಕೊಟ್ಟ ಭಾಷೆಯ
ಎಂತು ತಪ್ಪುವುದಿಲ್ಲವು.
ಹರಿಯು ಹರನೂ ಬ್ರಹ್ಮದೇವನು
ಸುರನರರು ಗಂಧರ್ವ ಕಿನ್ನರ
ಗರುಡ ಯಕ್ಷರು ಸಿದ್ಧಸಾಧ್ಯರು
ಪರಮ ಪುರುಷರು ಮೆಚ್ಚಲಿ.
ಎಷ್ಟು ಕಾಲವು ಇರುವುದಲ್ಲ
ನಷ್ಟವಾಗುವ ದೇಹ ನೆಚ್ಚಿ
ನಿಷ್ಠೆಯನು ನಾ ಮರೆತು ಬಹುತರ
ಭ್ರಷ್ಟಳಾಗುವದೇತಕೆ.
ನೀರ ಮೇಲಿನ ಗುಳ್ಳೆಯಂದದಿ
ತೋರಿಯಡಗುವ ತನುವನಿತ್ಯವು
ಧೀರತನದಲಿ ಸತ್ಯ ನಡೆಸುವೆ
ಕರುಣವೆನ್ನೊಳು ತೋರಯ್ಯ.
ಎನುತ ಭಾಷೆಯ ಕೊಡಲು ವ್ಯಾಘ್ರನು
ಮನದಿ ಕರುಣವ ತೋರಿ ಪಶುವಿಗೆ
ಕ್ಷಣದಿ ಬರುವುದು ತಳುವದೆಂದ
ಪ್ಪಣೆಯ ಕೊಟ್ಟಿತು ಗರ್ಜಿಸಿ.
ಅಲ್ಲಿಂದ ಕಳುಹೀಸಿಕೊಂಡು
ನಿಲ್ಲದೆ ದೊಡ್ಡೀಗೆ ಬಂದು
ಚೆಲ್ವ ಮಗನನು ಕಂಡು ಬೇಗ
ಅಲ್ಲಿ ಕೊಟ್ಟಿತು ಮೊಲೆಯನು.
ಮಗನೆ ಬಾರೊ ಮೊಲೆಯ ಕುಡಿಯೊ
ಹೇಗೆ ಬದುಕಿಯೊ ಏನನರಿಯೆ
ಬೇಗ ಬಾರೊ ಕಂದ ಎನುತಲಿ
ಮಗನ ನೋಡಿಯೆ ಎಂದಳು.
*************************************
ಪುಣ್ಯಕೋಟಿಯು ತನ್ನ ವಂಶದ ಘನತೆಯನ್ನು ಹುಲಿಗೆ ಹೇಳತೊಡಗಿತು. ತನ್ನ ದೇಹವೆನ್ನುವುದು ಎಷ್ಟು ಪವಿತ್ರವಾದುದು ಎಂದು ಪರಿಚಯಿಸಿತು.
ನನ್ನ ಉಚ್ಛ್ವಾಸಗಳೇ ವೇದಗಳು. ನನ್ನ ಕಣ್ಣುಗಳೇ ಸೂರ್ಯಚಂದ್ರರು. ನನ್ನ ಕಿವಿ ಗಳೇ ಇಂದ್ರಲೋಕವು. ನಾಲ್ಕು ಪಾದಗಳು ನಾಲ್ಕುದಿಕ್ಕುಗಳು. ರೋಮರೋಮದಲ್ಲಿಯೂ ದೇವತೆಗಳಿರುವರು. ತಲೆಯು ಲೋಕಕ್ಕೆ ಬೆಳಕನ್ನು ತೋರಿಸುವುದು. ಹೀಗೆ ಈ ಭೂಮಿಯಲ್ಲಿ ಗೋವು ದೇವರು. ನನ್ನ ಕೆಚ್ಚಲಿದು ಲೋಕವು. ಮೊಲೆಗಳು ಧರ್ಮ, ಅರ್ಥ, ಕಾಮ ಮೋಕ್ಷವೆಂಬ ನಾಲ್ಕು ಪದವಿಗಳಾಗಿವೆ. ನನ್ನಲ್ಲಿರುವ ಕ್ಷೀರವು ಅಮೃತಕ್ಕೆ ಸಮ. ನನ್ನ ಗೋಪುರವಿದು ಮೇರು ಪರ್ವತವು. ನನ್ನ ರಸವೇ ಪಂಚಗವ್ಯವು. ನನ್ನ ವಂಶವೇ ಯಜ್ಞಗಳು. ತಪಸ್ಸುಗಳ ಫಲವು. ನನ್ನ ದೇಹವು ಸ್ವರ್ಗವನ್ನು ತೋರಿಸುವುದು. ನನ್ನ ಹೆಸರೇ ಮೋಕ್ಷಸಾಧನವು ಆಗಿದೆ.
ಹೀಗಾಗಿ ನಿನಗೆ ಕೊಟ್ಟ ಭಾಷೆಯನ್ನು ನಾನು ತಪ್ಪುವುದಿಲ್ಲ. ಹರಿ ಹರ ಬ್ರಹ್ಮಾದಿಗಳು, ಯಕ್ಷ ಕಿನ್ನರ ಗಂಧರ್ವರೆಲ್ಲರೂ ನನ್ನ ಸತ್ಯವನ್ನು ಮೆಚ್ಚಲಿ. ಈ ದೇಹಶಾಶ್ವತವಲ್ಲ. ಮೃತ್ಯು ಬಂದೇ ಬರುವುದು. ಆದುದರಿಂದ ಸತ್ಯವನ್ನು ಬಿಟ್ಟು ಭ್ರಷ್ಟನಾಗಲಾರೆ. ನೀರ ಮೇಲಿನಗುಳ್ಳೆಯಂತೆ ಈ ಬದುಕು ಕ್ಷಣಮಾತ್ರದ್ದು. ನನ್ನ ಮಾತನ್ನು ಆಲಿಸಿ ಕರುಣೆ ತೋರು ಎಂದು ಹುಲಿಯನ್ನು ಬೇಡಿಕೊಂಡಿತು.
ಕೊನೆಗೆ ಹುಲಿಯು ಹೋಗಿಬರಲು ಅಪ್ಪಣೆ ಕೊಟ್ಟಿತು. ಅಲ್ಲಿಂದ ಕಳುಹಿಸಿಕೊಂಡು ಬೇಗನೆ ದೊಡ್ಡಿಗೆ ಬಂದು ಮಗನನ್ನು ಕರೆದು ಹಾಲನ್ನು ಕೊಟ್ಟಿತು. ಇತರ ಹಸುಗಳು ಪುಣ್ಯಕೋಟಿಯು ಬಂದದ್ದು ನೋಡಿ ಸಂತಸಪಟ್ಟವು. ಮೊಲೆಯ ಹಾಲನ್ನು ಕುಡಿಯುತ್ತಿದ್ದ ಕಂದನಿಗೆ ಬುದ್ಧಿಯ ಮಾತುಗಳನ್ನು ಹೇಳತೊಡಗಿತು.
ಗೋವಿನ ಕಥೆ 10
ಪುಣ್ಯಕೋಟಿಯು ತನ್ನ ಕಂದನನ್ನೂ ಜೊತೆಯವರನ್ನೂ
ಒಡಂಬಡಿಸಿದ ಭಾಗ )
ಕಡೆಯಲಿ ಮೇಯದೀರು
ಬೆಟ್ಟದೊತ್ತಿಗೆ ಹೋಗದೀರು
ದುಷ್ಟ ವ್ಯಾಘ್ರಗಳುಂಟು ಅಲ್ಲಿ
ನಟ್ಟ ನಡುವಿರು ಕಂದನೆ.
ಇಂದು ಒಂದು ದುಷ್ಟ ವ್ಯಾಘ್ರನು
ತಿಂದೆನೆನುತಲಿ ಬಂದಿತಯ್ಯ
ಕಂದ ನಿನಗೆ ಮೊಲೆಯ ಕೊಡುವೆ
ನೆಂದು ಬಂದೆನು ದೊಡ್ಡಿಗೆ.
ಕೊಂದೆನೆಂಬ ದುಷ್ಟ ವ್ಯಾಘ್ರಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ.
ಅಮ್ಮ ನೀನು ಸಾಯಲೇಕೆ?
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು.
ಕೇಳಿ ಮಗನ ಬುದ್ಧಿಯನ್ನು
ತಾಳಿ ಹರುಷವ ಸತ್ಯವೆಂದು
ಬಾಳಿ ಬದುಕುವ ಭಾಗ್ಯ ನಿನ್ನದು
ಮುಂದರಿತು ನೀ ಬಾಳ್ವೆಯಾ
ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತ.
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಅಚ್ಯುತಾ ಹರಿ ಮೆಚ್ಚನು.
ಕೊಟ್ಟ ಭಾಷೆಗೆ ತಪ್ಪಿದಾರೆ
ಸೃಷ್ಟಿಯೊಳು ಶ್ರೀ ಹರಿಯು ಮೆಚ್ಚನು
ಎಷ್ಡುಕಾಲ ಇರುವುದೀ ಕಾಯ
ಕಟಕಟಾ ಕಂದಯ್ಯನೆ
ಎನ್ನ ಬಿನ್ನಹ ಲಾಲಿಸಮ್ಮ
ನಿನ್ನ ದೇಹವು ಅಳಿದ ಮೇಲೆ
ನನ್ನ ಬದುಕಿಂದೇನು ಸಾರ್ಥಕ
ನಾನು ಸಾಯುವುದುಚಿತವು
ಹಸಿದ ವ್ಯಾಘ್ರಗೆ ಹರುಷದಲಿ ನಾ
ನಸನವಾಗಲು ಸರ್ವ ದುರಿತವು
ನಸಿದು ಹೊಂದುವೆ ಮುಕ್ತಿಯನು ಲಾ
ಲಿಸುವುದೆನ್ನಯ ವಾಕ್ಯವ.
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ಎನಗೇ ಹಿತವರು
ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿ ಮಗನೈದನೆ.
ಮುಂದೆ ಬಂದರೆ ಹಾಯದೀರಿ
ಹಿಂದೆ ಬಂದರೆ ಒದೆಯದೀರಿ
ನಿಮ್ಮ ಕಂದನೆಂದು ಕಂಡಿರಿ
ತಬ್ಬಲಿ ಮಗನೈದನೆ
ಅಮ್ಮ ಕೇಳೆ ಪುಣ್ಯಕೋಟಿಯೆ
ನೀನು ಹೋಗಿ ಸಾಯಲೇತಕೆ
ಬಳಗವೆಲ್ಲವು ಕೂಡಿ ನಿನ್ನ
ಸಂಗಡಲೆ ನಾವ್ ಬರುವೆವು.
ಅಮ್ಮನೀವು ಎನ್ನ ಸಂಗಡ
ಬರುವುದೀಗ ಉಚಿತವಲ್ಲ
ಮುನ್ನ ನಾನು ಪಡೆದ ಫಲವಿದು
ಎನಗನ ಬಿಡುವುದೆ ಎಂದಿತು.
ಅಮ್ಮ ಕೇಳೆ ಪುಣ್ಯಕೋಟಿಯೆ
ನಿನ್ನ ಕಂದನೆ ನಮ್ಮ ಕಂದನು
ನಿನ್ನ ಮನದೊಳು ಖೇದವೇತಕೆ
ನಿರ್ಮಲಾದೊಳಿರಮ್ಮನೆ.
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ.
ಕಂದನೀಗೆ ಬುದ್ಧಿ ಹೇಳಿ
ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು
ನಿಂದು ಸ್ನಾನವ ಮಾಡಿತು.
**************************************
ಪುಣ್ಯಕೋಟಿಯು ತನ್ನ ಕಂದನಿಗೆ ಹೇಳಿತು. ಹಳ್ಳದ ಬಳಿಗೆ ಹೋಗಬೇಡ. ಬೆಟ್ಟದೆಡೆಗೆ ಹೋಗದಿರು. ಅಲ್ಲಿ ಹುಲಿಯಿರುತ್ತದೆ. ಎಲ್ಲರೊಂದಿಗೆ ಅವರ ನಡುವೆಯೇ ಇರು. ಅಡವಿಯೊಳಗೆ ನನ್ನನ್ನು ದೊಡ್ಡ ವ್ಯಾಘ್ರನು ತಡೆದನು. ನಿನಗೆ ಮೊಲೆಯ ಕೊಟ್ಟು ಬರುವೆನೆಂದು ಹೇಳಿ ಬಂದಿರುವೆನು. ನಿನ್ನನ್ನು ನೋಡಿ ಬರುವೆನೆಂದು ಭಾಷೆಯಿತ್ತು ಬಂದಿಹೆನು. ಬೇಗನೆ ಹಾಲು ಕುಡಿ ಎಂದಿತು.
ಆಗ ಕರುವು ಅಮ್ಮ,ನೀನು ಸಾಯುವುದೇಕೆ? ನನ್ನನ್ನು ತಬ್ಬಲಿ ಮಾಡುವುದೇಕೆ? ಅಲ್ಲಿಗೆ ಹೋಗದಿರು ಎಂದು ಹೇಳಿತು. ಆಗ ಹಸುವು ಸತ್ಯದ ಶ್ರೇಷ್ಟತೆಯನ್ನು ತಿಳಿಸುತ್ತ ಭಾಷೆಗೆ ತಪ್ಪಬಾರದು. ಕೆಟ್ಟ ಯೋಚನೆ ಮಾಡಲಾರೆ. ಖಂಡಿತ ಅಲ್ಲಿಗೆ ಹೋಗುವೆ ಎಂದಿತು. ಸತ್ಯವೇ ನಮ್ಮ ತಂದೆ, ತಾಯಿ, ಬಂಧು, ಬಳಗ ಎಲ್ಲವೂ ಆಗಿರುವಾಗ ಇದಕ್ಕೆ ತಪ್ಪಿದರೆ ಅಚ್ಯುತನು ಮೆಚ್ಚುವುದಿಲ್ಲ. ಎಷ್ಟುಕಾಲ ಇರುತ್ತದೆ ಈ ದೇಹ? ಕಂದನೆ, ನಾನು ಹೋಗಬೇಕಾಗಿದೆ. ಹಾಗಾದರೆ ನಾನೂ ನಿನ್ನೊಂದಿಗೆ ಬರುತ್ತೇನೆ. ಇಬ್ಬರೂ ಸಾಯುವಾ ಎಂದು ಕರು ಹೇಳಲು ಪುಣ್ಯಕೋಟಿಯು ಕರುವನ್ನು ಸಮಾಧಾನ ಮಾಡುವುದು.
ಕರು ದುಃಖದಿಂದ ಕೇಳುತ್ತದೆ. ಹಾಗಾದರೆ ನಾನು ಇನ್ನು ಮುಂದೆ ಯಾರ ಮೊಲೆಯನ್ನು ಕುಡಿಯಲಿ? ಯಾರ ಬಳಿ ಮಲಗಲಿ? ಯಾರು ನನಗೆ ಹಿತವರು? ಆಗ ಹಸುವು ಇತರ ಹಸುಗಳನ್ನು ಕೇಳಿಕೊಳ್ಳುತ್ತದೆ. ಅಮ್ಮಗಳಿರಾ, ಅಕ್ಕಗಳಿರಾ, ನಿಮ್ಮ ಕಂದನಂತೆ ಕಾಣಿರಿ ಈ ನನ್ನ ಮಗುವನ್ನು. ಮುಂದೆ ಬಂದಾಗ ಹಾಯದೆ, ಹಿಂದೆ ಬಂದಾಗ ಒದೆಯದೆ ನಿಮ್ಮ ಮಗನಂತೆಯೇ ಈ ತಬ್ಬಲಿಯನ್ನು ಕಾಣಿರಿ ಎಂದು ಹೇಳಿದಾಗ ಎಲ್ಲವೂ ಒಪ್ಪಿದವು. ಮತ್ತೆ ಅವುಗಳು ನಾವೂ ನಿನ್ನೊಂದಿಗೆ ಬರುವೆವು ಎಂದಾಗ ಇಲ್ಲ, ಇದು ಉಚಿತವಲ್ಲ. ಅವರವರು ಪಡೆದುಕೊಂಡು ಬಂದದ್ದನ್ನು ಅವರವರೇ ಅನುಭವಿಸಬೇಕು ಎಂದು ಹೇಳಿತು. ಆಗ. ಅವೆಲ್ಲವೂ ಪುಣ್ಯಕೋಟಿಯು ಕರುವನ್ನು ತಮ್ಮ ಕರುವಿನಂತೆಯೇ ಕಾಣುವುದಾಗಿ ಹೇಳಿದವು.
ತಬ್ಬಲಿಯು ನೀನಾದೆ ಮಗನೆ, ಹೆಬ್ಬುಲಿಯ ಬಾಯನ್ನು ಹೊಗುವೆನು. ನಮ್ಮಿಬ್ಬರ ಋಣ ತೀರಿತು ಎಂದು ಕಂದನನ್ನು ತಬ್ಬಿಕೊಂಡಿತು. ನನ್ನ ಬಸಿರಿನಲ್ಲಿ ಏಕೆ ಹುಟ್ಟಿದೆಯೋ... ಅಮ್ಮನೆಂದು ಕರೆಯುವ ಬಾಯಿಗೆ ಮಣ್ಣು ಬಿದ್ದಿತಲ್ಲ ಎಂದು ಶೋಕಿಸಿತು. ಪಾಪಿ ನಾನು ಎಂದು ಅಳುತ್ತಿದ್ದ ಕರುವಿಗೆ ಬುದ್ಧಿ ಹೇಳಿ, ಸಮಾಧಾನಿಸಿ ಪುಣ್ಯನದಿಯಲ್ಲಿ ಸ್ನಾನಮಾಡಿ ಸಿದ್ಧವಾಯಿತು.
ಗೋವಿನ ಕಥೆ 11
ಪುಣ್ಯಕೋಟಿಯು ಒಡೆಯನ ಅಪ್ಪಣೆ ಪಡೆದು ಹೊರಟದ್ದು
ಬಂದು ಒಡೆಯನ ಬಳಿಗೆ ಹರುಷದಿ
ಚಂದದಿಂದಲಿ ಕರವ ಮುಗಿದು
ನಿಂದು ವಾರ್ತೆಯನರುಹಿ ತೆರಳ್ವುದ
ಕೆಂದು ಅಪ್ಪಣೆ ಕೇಳ್ದಳು.
ಕೇಳಿ ಮಾತನು ಪುಣ್ಯಕೋಟಿಯ
ಆಲಿದೊಡೆಯನು ಪರಮ ವಿಸ್ಮಯ
ತಾಳಿ ಮನದೊಳಗಭಯ ವಚನವ
ಪೇಳಿದನು ತಾಭರದೊಳು.
ಬೆದರನೇಡವೆ ತಾಯೆ ವ್ಯಾಘ್ರಗೆ
ಮುದದಿ ಬಾಳಿರು ಕಂದನೊಂದಿಗೆ
ವಧಿಸಿ ಬರುವೆನು ದುಷ್ಟ ವ್ಯಾಘ್ರನ
ಒದಗಿನಲಿ ಪೋಗೀಕ್ಷಣ.
ಎನುತ ಗರ್ಜಿಸಿ ಹಲ್ಲು ಕಡಿಯುತ
ಮನದಿ ರೋಷವ ತಾಳಿ ಕರದೊಳು
ಘನತರಾಸ್ತ್ರವ ತೆಗೆದುಕೊಳ್ಳಲು
ವಿನಯದಿಂದಲಿ ಸುರಭಿಯು.
ಪೇಳಿಕೊಂಡಳು ಅಗದಾಗದು
ಕೇಳು ಖಂಡಿತ ಬರುವೆನೆನುತಲಿ
ಖೂಳ ವ್ಯಾಘ್ರಗೆ ಘನದ ಭಾಷೆಯ
ಪೇಳಿ ಬಂದೆನು ಶೀಘ್ರದಿ.
ಕೊಟ್ಟ ಭಾಷೆಗೆ ತಪ್ಪಿ ನಡೆದು
ಭ್ರಷ್ಟಳೆನ್ನಿಸಿಕೊಂಡು ಜಗದೊಳು
ಕೆಟ್ಟ ನರಕವ ಸೇರಲಾರೆನು
ಶಿಷ್ಟ ಗುಣ ಸಂಪನ್ನನೆ.
ನಿನ್ನ ಚರಣಗಳಾಣೆ ವ್ಯಾಘ್ರಗೆ
ಎನ್ನ ಹರಣವನೊಪ್ಪಿಸಿರುವೆನು
ಎನ್ನ ನಂಬಿದ ವ್ಯಾಘ್ರನಿಗೆ ಕೇ
ಡನ್ನು ಬಗೆವುದು ಧರ್ಮವೆ.
ನಂದದಿಂದೆನಗಪ್ಪಣೆಯನು
ಇಂದು ಬೇಗದೊಳಿತ್ತು ಕಂದನ
ಚಂದದಿಂದಲಿ ಸಲಹುತಿರುವುದು
ಎಂದು ಬೇಡುವೆ ವಿನಯದಿ.
ಬಳಿಕ ತಡೆಯದೆ ಭರದಿ ವ್ಯಾಘ್ರದ
ಬಳಿಗೆ ಹೋಗುವ ರಭಸ ಕಾಣುತ
ಬಳಿಯ ಜನರತಿ ಕಳವಳಿಸಿ ಮನ
ದೊಳಗೆ ಗೋಳಿಡುತ್ತಿರ್ದರು.
ಗಂಗೆ ಗೌತಮಿ ತುಂಗಭದ್ರೆಯು
ಸಿಂಗರದ ಕಾವೇರಿ ಯಮುನೆಯು
ಐದು ನದಿಗಳ ಸಂಗಮದಲಿ
ಮಿಂದು ಸ್ತುತಿಯನು ಗೈದಳು.
ಇಂತು ಗಂಗಾಸ್ತುತಿಯ ಮಾಡಿ
ಅಂತರಾತ್ಮಕ ಕೃಷ್ಣನನ್ನು
ಅಂತರಂಗದಿ ಸ್ಮರಣೆಗೈಯುತ
ಚಿಂತೆ ಮರೆತು ನಡೆದಳು.
ದಾರಿಯಲಿ ತಡವಾಗದಂತರ
ಭೋರನೈದುತ ಗವಿಯ ಬಳಿಗೆ
ಸೇರಿ ಗವಿಯಾ ದ್ವಾರದಲ್ಲಿ
ವ್ಯಾಘ್ರರಾಯನ ಕರೆದಳು.
**************************************
ಪುಣ್ಯಕೋಟಿಯು ನಂತರ ತನ್ನ ಒಡೆಯನಲ್ಲಿಗೆ ಬಂದು ಎಲ್ಲ ಸಂಗತಿಯನ್ನು ವಿವರಿಸಿ ತಾನು ಹೊರಡಲು ಅಪ್ಪಣೆ ಬೇಡಿತು. ಅವನು ಅದಕ್ಕೆ ಹೆದರದಿರು. ನಿನ್ನ ಕಂದನೊಂದಿಗೆ ಸುಖವಾಗಿ ಬಾಳು. ನಾನು ಹೋಗಿ ಆ ವ್ಯಾಘ್ರವನ್ನು ಸಾಯಿಸಿ ಬರುವೆ ಎಂದನು.
ಹೀಗೆ ಘರ್ಜಿಸಿ ಆಯುಧವನ್ನು ತೆಗೆದುಕೊಳ್ಳಲು ಹಸುವು ಅವನನ್ನು ತಡೆದು ಬೇಡ, ಒಡೆಯನೆ, ಬೇಡ. ನಾನು ಭಾಷೆ ಕೊಟ್ಟು ಬಂದಿರುವೆನು. ಸತ್ಯವಾಕ್ಯಕ್ಕೆ ತಪ್ಪಬಾರದು. ಭ್ರಷ್ಟಳೆನ್ನಿಸಿಕೊಂಡು ನರಕಕ್ಕೆ ಹೋಗಲಾರೆನು. ನನ್ನನ್ನು ನಂಬಿ ಕಳಿಸಿರುವ ವ್ಯಾಘ್ರನಿಗೆ ನನ್ನ ಪ್ರಾಣವನ್ನು ಕೊಡುವೆನು. ನಿನ್ನ ಚರಣಗಳ ಮೇಲೆ ಆಣೆ ಎಂದಿತು.
ಅಪ್ಪಣೆಯನ್ನು ನೀಡಿ ಕಳಿಸು. ನನ್ನ ಕಂದನನ್ನು ಸಲಹು ಎನ್ನಲು ಒಡೆಯನಿಗೆ ಬಲು ಸಂಕಟವಾಯಿತು. ಅವನನ್ನು ಸಂತೈಸಿ ಅಪ್ಪಣೆಯನ್ನು ಪಡೆಯಿತು.
ಬಳಿಕ ತಡಮಾಡದೆ ವ್ಯಾಘ್ರನಲ್ಲಿಗೆ ಹೋಗುವ ರಭಸವನ್ನು ಕಂಡವರೆಲ್ಲರೂ ಕಳವಳಿಸಿದರು. ಅವರನ್ನೆಲ್ಲ ಸಂತೈಸಿ ಪುಣ್ಯನದಿಗಳನ್ನು ಸ್ಮರಿಸಿ ಸಂಗಮದಲ್ಲಿ ಮಿಂದು ಅಂತರಂಗದಲ್ಲಿ ಕೃಷ್ಣನನ್ನು ನೆನೆಯುತ್ತ ಚಿಂತೆಯನ್ಬು ತೊರೆದು ನಡೆಯಿತು. ತಡಮಾಡದಂತೆ ಗವಿಯ ಬಾಗಿಲ ಬಳಿಗೆ ಬಂದು ವ್ಯಾಘ್ರವನ್ನು ಕರೆಯಿತು.
( ಮಿಂದದ್ದೆಲ್ಲವೂ ಪುಣ್ಯತೀರ್ಥಗಳೇ ಎಂಬ ಭಾವ ಇಲ್ಲಿ ವ್ಯಕ್ತವಾಗಿದೆ. ನಾವು ಮನೆಯಲ್ಲಿ ಸ್ನಾನ ಮಾಡುವಾಗ ಗಂಗೇಚ ಯಮುನೇಚ...ಹೇಳುವುದರ ಹಿಂದಿನ ಭಾವವೂ ಇದೇ ಆಗಿದೆ. )
ಗೋವಿನ ಕಥೆ 12
ಹುಲಿಯ ಪಶ್ಚಾತ್ತಾಪ ಮತ್ತು ಅದರ ಮರಣ
ಅಣ್ಣ ಬಾರೋ ಹುಲಿಯ ರಾಯನೆ
ಹಸಿದೆಯಲ್ಲೋ ದೋಷ ಬಂದಿತು
ಎನ್ನ ಆಹಾರವನು ಬೇಗನೆ
ಕೊಳ್ಳೆಲೋ ಹುಲಿರಾಯನೆ.
ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಕೊಬ್ಬುಗಳಿವೆ ಕೋ
ಉಂಡು ಸಂತಸಗೊಂಡು ನೀ ಭೂ
ಮಂಡಲದೊಳು ಬಾಳಯ್ಯನೆ.
ಎನ್ನ ಕಂದನ ನೋಡಿ ಬರುವರೆ
ಎನ್ನ ಕೃಪೆಯೊಳು ಮನೆಗೆ ಕಳುಹಿದೆ
ನಿನ್ನ ಉಪಕೃತಿಯನ್ನು ನಾನು
ಜನ್ಮ ಜನ್ಮದಿ ನೆನೆವೆನು.
ಪುಣ್ಯಕೋಟಿಯ ಮಾತ ಲಾಲಿಸಿ
ತನ್ನೊಳಗೆ ವಿಸ್ಮಯವ ತಾಳುತ
ತನ್ನ ಗವಿಯನು ಹೊರಟು ಬಂದು
ಚೆನ್ನ ಯೋಚನೆ ಮಾಡಿತು.
ಧರೆಯೊಳಿಂತಾ ಸತ್ಯವಂತೆಯ
ಮುರಿದು ತಿಂದರೆ ಘೋರ ನರಕವು
ಬರುವುದಿದು ನಿಶ್ಚಯವು ಎನ್ನನು
ನರಹರಿಯು ತಾ ಮೆಚ್ಚನು.
ಎನ್ನ ಒಡಹುಟ್ಟಕ್ಕ ನೀನು
ನಿನ್ನ ತಿಂದು ನಾನೇನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು
ಎನ್ನ ಪ್ರಾಣವ ಬಿಡುವೆನು.
ಪರಮ ಪಾವನೆ ಕೇಳು ನಿನ್ನಯ
ದರುಶನದಿ ಇಂದೆನ್ನ ಜನ್ಮವು
ಉರು ಪವಿತ್ರವು ಇನ್ನು ಬಾಳಿರ
ಲಾರೆ ಧರೆಯೊಳು ಸತ್ಯವು.
ಎಲೆ ಮಹಾತ್ಮಳೆ ಕೇಳು ನಿನ್ನಯ
ಚರಣ ಸನ್ನಿಧಿಯಲ್ಲಿ ಪಗರಾಣವ
ತೊರೆದು ಪಡೆವೆನು ದಿವ್ಯ ಮುಕ್ತಿಯ
ಅಪ್ಪಣೆಯ ದಯಪಾಲಿಸು.
ಅಣ್ಣ ಕೇಳೈ ವ್ಯಾಘ್ರರಾಯನೆ
ನಿನ್ನ ಹರಣವ ತೊರೆಯುವುದನುಚಿತ
ಎನ್ನ ಮುದದೊಳು ತಿಂದು ಸುಖದಲಿ
ಬದುಕಿಕೊಂಡಿರು ಸುಖದಲಿ.
ನಿನ್ನ ಪ್ರಾಣವ ತೊರೆಯಲೇತಕೆ
ಕನ್ನೆಯೆನ್ನನು ತಿಂದು ಬದುಕದೆ
ಮುನ್ನ ಹಸಿವೆಯ ಶಾಂತಪಡಿಸೈ
ಪನ್ನಗಶಯನಗೆ ಪ್ರೀಯವು.
ಪುಣ್ಯಕೋಟಿಯ ಮಾತ ಕೇಳಿ
ಕಣ್ಣಿನೊಳಗೆ ನೀರ ಸುರಿಸುತ
ಮಣಿದು ಕರಗಳ ಮುಗಿದು ಗೋವಿಗೆ
ತಾನು ಬಿನ್ನಹಗೈದನು.
ಇನ್ನು ಛಲವನು ಮಾಡೆನೆನ್ನಯ
ಪ್ರಾಣದಾಶೆಯ ತೊರೆದೆ ಮೋಕ್ಷವ
ಹರುಷದಿಂದೆನಗಿತ್ತು ಕಂದನ
ಸೇರಿ ಬಾಳಿರು ಸುಖದೊಳು.
ಎಂದು ಬಿನ್ನಹಗೈದು ಗೋವಿಗೆ
ಚಂದದಿಂದಲಿ ಚರಣಕೆರಗುತ
ನಿಂದು ಹರಿಯನು ಮನದಿ ಧ್ಯಾನಿಸಿ
ಬಂದು ಮಿಂದನು ನದಿಯೊಳು.
ಹಲವು ಬಗೆಯಲಿ ಸ್ತುತಿಸಿ ಗೋವನು
ಬೇಡಿಕೊಂಡಪರಾಧ ಕ್ಷಮೆಯನು
ಸಕಲದೇವರ್ಕಳನು ಮನದಲಿ
ಬಕುತಿಯಿಂದಲಿ ಸ್ಮರಿಸುತ.
ಮೂರು ಮೂರ್ತಿಗೆ ಕೈಯ ಮುಗಿದು
ಹಾರಿ ಆಕಾಶಕ್ಕೆ ತಲೆ ಕೆಳ
ಗಾಗಿ ಗೋವಿನ ಚರಣ ಬಳಿಯಲಿ
ಉರುಳಿ ಪ್ರಾಣವ ಬಿಟ್ಟಿತು.
ಭೂಮಿ ಭಾರವು ತಪ್ಪಿತೆಂದು
ಪ್ರೇಮದಿಂ ವನಲಕ್ಷ್ಮಿದೇವಿಯು
ಕಾಮಜನಕನ ಕೂಡೆ ಪೇಳ್ದಳು
ತಾಮಸವನು ಮಾಡದೆ.
*************************************
ಗೋವು ಹುಲಿಯನ್ನು ಕರೆಯಿತು. ಅಣ್ಣ ಬಾರೋ, ಹುಲಿರಾಯ ಬಾರೋ, ಅಯ್ಯೋ ಹಸಿದೆಯಲ್ಲ ನೀನು. ಆ ದೋಷ ನನಗೆ ಬಂದಿತು. ಬೇಗ ಬಾ. ಖಂಡವಿದೆ ತಗೋ. ಮಾಂಸ, ಬಿಸಿರಕ್ತಗಳಿವೆ ತಗೋ. ಇವುಗಳನ್ನೆಲ್ಲ ಉಂಡು ನೀನು ಸಂತಸದಿಂದ ಇರು ಎಂದಿತು.
ನನ್ನ ಕಂದನನ್ನು ನೋಡಿ ಬರಲು ಕೃಪೆ ಮಾಡಿ ನನ್ನನ್ನು ಕಳಿಸಿದೆ ನೀನು. ನಿನ್ನ ಉಪಕಾರವನ್ನು ನಾನು ಜನ್ಮ ಜನ್ಮಗಳಲ್ಲಿಯೂ ನೆನೆಯುವೆನು. ನನ್ನ ಮೇಲೆ ಸಿಟ್ಟು ಮಾಡದೆ ನನ್ನನ್ನು ಬೇಗ ತಿಂದು ಮುಗಿಸು. ಹೊಟ್ಟೆ ತುಂಬಾ ಉಂಡು ಸಂತಸದಿಂದಿರು ಎಂದಿತು.
ಹಸುವಿನ ಮಾತನ್ನು ಕೇಳಿ ಹುಲಿಯು ಇವಳನ್ನು ಕೊಂದು ತಿಂದರೆ ದೇವರು ಮೆಚ್ಚುವುದಿಲ್ಲ. ಸತ್ಯವಂತೆ ಇವಳು ಎಂದು ತನ್ನ ಮನದಲ್ಲಿ ಯೋಚಿಸಿತು. ನೀನು ನನ್ನ ಒಡಹುಟ್ಟಿದ ಅಕ್ಕ. ನಿನ್ನನ್ನು ಕೊಂದು ತಿಂದರೆ ನನಗೇನು ಸಿಗುವುದು? ಭೂಮಿಯಲ್ಲಿ ಇಂತಹ ಸತ್ಯವಂತೆಯನ್ನು ಕೊಂದರೆ ಘೋರ ನರಕವು ತಪ್ಪದು. ನಿನ್ನಂತಹ ಸದ್ಗುಣ ಶೀಲೆಯನ್ನು ಇದುವರೆಗೆ ಕಂಡಿಲ್ಲ. ನನ್ನನ್ನು ಅಣ್ಣನೆಂದು ಕರೆದೆ. ಒಡಹುಟ್ಟಿದವಳಾದೆ. ನಿನ್ನ ಪಾದಕ್ಕೆ ಬಿದ್ದು ನನ್ನ ಪ್ರಾಣವ ಬಿಡುವೆನು. ಪ್ರಾಯಶ್ಚಿತ್ತ ಮಾಡಿಕೊಳ್ಳುವೆನು. ಪರಮಪಾವನೆಯಾದ ನಿನ್ನ ದರ್ಶನದಿಂದ ಜನ್ಮ ಪಾವನವಾಯಿತು. ನಿನ್ನ ಚರಣಗಳಲ್ಲಿ ಪ್ರಾಣವನ್ನು ತೊರೆದು ಮುಕ್ತಿಯನ್ನು ಪಡೆವೆನು. ಅಪ್ಪಣೆಯನ್ನು ದಯಪಾಲಿಸು ಎಂದಿತು.
ಆಗ ಪುಣ್ಯಕೋಟಿಯು ಹುಲಿಗೆ ಪ್ರಾಣವನ್ನು ತೊರೆಯುವುದು ಅನುಚಿತ. ನನ್ನನ್ನು ತಿಂದು ಸುಖವಾಗಿರು ಎನ್ನಲು ಹುಲಿಯು ಇದುವರೆಗೆ ನೂರಾರು ಗೋವುಗಳನ್ನು ತಿಂದಿರುವ ಮಹಾ ಪಾತಕವು ನಿನ್ನ ದರ್ಶನದಿಂದ ನಾಶವಾಗಿಹುದು. ಇನ್ನು ಮತ್ತೆ ಹತ್ಯೆ ಮಾಡುತ್ತ ಪಾಪಿಯಾಗಿ ಜೀವಿಸಿರಲಾರೆ. ನಾನು ಈ ಕ್ಷಣದಲ್ಲಿ ಪ್ರಾಣ ಬಿಡುವೆನು ಎನ್ನಲು ಗೋವು ದುಃಖದಿಂದ ನನ್ನ ಹರಣವನ್ನು ನಿನಗೆ ಒಪ್ಪಿಸಿರುವೆನು ಎಂದಿತು.
ಅದರಿಂದ ಹುಲಿಯು ಮತ್ತಷ್ಟು ದುಃಖವನ್ನು ತಾಳಿ ಹಸುವಿಗೆ ನಮಸ್ಕರಿಸಿ ಕಂದನೊಡನೆ ಸುಖವಾಗಿರು ಎಂದು ಹೇಳಿ ಹರಿಯನ್ನು ಧ್ಯಾನಿಸಿ ನದಿಯಲ್ಲಿ ಮಿಂದು ಬಂದು ಹಸುವಿಗೆ ಪ್ರದಕ್ಷಿಣೆಯನ್ನು ಹಾಕಿ ಕೈ ಮುಗಿದು ಸ್ತುತಿಸಿತು. ಹಲವು ಬಗೆಯಲ್ಲಿ ಸ್ತುತಿಸಿ, ಅಪರಾಧವನ್ನು ಕ್ಷಮಿಸು ಎಂದು ಬೇಡಿಕೊಂಡು ಎತ್ತರಕ್ಕೆ ಹಾರಿ ನೆಗೆದು ತಲೆಕೆಳಗಾಗಿ ಹಸುವಿನ ಚರಣಗಳ ಬಳಿ ಬಿದ್ದು ಅಸುನೀಗಿತು. ಅದನ್ನು ಕಂಡು ಭೂಮಿಯ ಭಾರವು ಕಡಿಮೆಯಾಯಿತೆಂದು ವನಲಕ್ಷ್ಮಿಗೆ ಸಂತಸವಾಗಿ ಕಾಮದೇವನೊಡನೆ ಹೇಳಿಕೊಂಡಳು.
ಗೋವಿನ ಕಥೆ 13
ಹುಲಿಗೆ ಮೋಕ್ಷಪ್ರಾಪ್ತಿ. ಹಸುವು ಪುನಃ
ದೊಡ್ಡಿಗೆ ತೆರಳಿದ್ದು. ತ್ರೈಮೂರ್ತಿಗಳ ದರ್ಶನ
ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar
ಹುಲಿಯ ರಾಯನು ಬಿದ್ದು ಪ್ರಾಣವು
ತೊಲಗಲಾಕ್ಷಣ ಪುಣ್ಯಕೋಟಿಯು
ಕೊಳುತ ಮೂರ್ಛೆಯ ಬೆದರಿ ಮನದೊಳು
ಹುಲಿಯ ಒತ್ತಿಲಿ ಬಿದ್ದಿತು.
ಬ್ರಹ್ಮ ವಿಷ್ಣು ಮಹೇಶ್ವರರುಗೋ
ವ್ಯಾಘ್ರಗಳ ವರ ಸತ್ಯ ಸದ್ಗುಷ
ಜ್ಞಾನ ಭಕ್ತಿಗೆ ಮೆಚ್ಚಿ ಪೊರಟರು
ಕಾಣಲವುಗಳ ಹರುಷದಿ.
ತಂಡದಮರರ ಕೂಡಿ ಬರೆ ಮುಂ
ಕೊಂಡು ಗಿರಿಯಲಿ ಬಿದ್ದ ಮೃಗಗಳ
ಕಂಡು ತ್ರೈಮೂರ್ತಿಗಳು ವಿಸ್ಮಯ
ಗೊಂಡರಾಗಲೆ ಮನದೊಳು.
ಪರಮ ಕರುಣವ ತಾಳಿ ಮನದೊಳು
ಚರಣ ಸ್ಪರ್ಶದಿ ಹುಲಿಯ ಬದುಕಿಸಿ
ಮೂರ್ಛೆಯಿಂದಲಿ ಗೋವನೆಬ್ಬಿಸಿ
ಸುರರು ಹರುಷವ ತಳೆದರು.
ಕಂಡು ತ್ರೈಮೂರ್ತಿಗಳ ಹರುಷವ
ಕೊಂಡು ಮೃಗಗಳು ಭಕ್ತಿಯಿಂದಲಿ
ತಂಡವಾಗಿಯೆ ಕೈ ಮುಗಿದು ಬಲ
ಗೊಂಡು ಸ್ತುತಿಯನು ಗೈದವು.
ಒಡನೆ ವ್ಯಾಘ್ರನು ಬಿನ್ನವಿಸಿದನು
ಒಡೆಯ ಎನ್ನಯ ಘೋರ ದುರಿತವು
ಕಡಿದು ಹೋದುದು ಇಂದು ಗೋವಿನ
ಅಡಿಯ ದರುಶನದಿಂದಲಿ.
ಮುಂದೆ ಬಾಳಿರಲಾರೆ ಧರೆಯಲಿ
ಇಂದು ಗೋವಿನ ಚರಣ ಬಳಿಯಲಿ
ಇಂದು ಪ್ರಾಣವ ತೊರೆದೆ ನಿಮ್ಮಯ
ಸುಂದರಾಂಘ್ರಿಯ ಸ್ಮರಿಸುತ.
ಅಸುವ ಹರುಷದಿ ತ್ಯಜಿಸಿದವನಿಗೆ
ಅಸುವನೀಯಲುಬಹುದೆ ಸ್ವಾಮಿಯೆ
ಎಸೆವ ಮೋಕ್ಷವನೆನಗೆ ದಯಪಾ
ಲಿಸುವದೀಗಲೆ ಕೃಪೆಯೊಳು.
ಧರೆಯೊಳಗೆ ಕ್ಷಣವಿನ್ನು ನಾ ಬದು
ಕಿರೆನು ತನುವೊಪ್ಪಿಸಿದೆ ನಿಮ್ಮಯ
ಚರಣಕಮಲಕ್ಕೀಗ ಮುಕ್ತಿಗೆ
ಭರದೊಳಪ್ಪಣೆಯೀವುದು.
ಇಂತು ವ್ಯಾಘ್ರನು ನುಡಿಯೆ ತ್ರೈಮೂ
ರ್ತಿಗಳು ಹರುಷವ ತಾಳಿ ಮನದಲಿ
ಮುಕುತಿಗಪ್ಪಣೆಗೀಯಲಾ ಕ್ಷಣ
ಪ್ರಾಣ ತೊಲಗಿತು ವ್ಯಾಘ್ರನ.
ಆಗ ಕರವನು ಮುಗಿದು ಪಶುವು
ಬಿನ್ನವಿಸಿದಳು ಎನ್ನ ಮಿತ್ರನು
ಅಳಿದುನಾನುಳಿದೇನು ಫಲವು
ಎನಗು ಮೋಕ್ಷವನೀವುದು.
ಮೂರು ಮೂರ್ತಿಗಳೊಡನೆ ಗೋವಿನ
ಹರುಷದಿಂದಲಿ ಕರೆದು ತಮ್ಮಯ
ವರದ ಹಸ್ತದಿ ಮೈದಡವುತ
ಕ್ಕರೆಯೊಳಾಗಲೆ ಪೇಳ್ದರು.
ಸೃಷ್ಟಿಯೊಳಗತಿ ಶ್ರೇಷ್ಠೆ ಕೇಳೆ
ತುಷ್ಟರಾದೆವು ನಿನ್ನ ಸತ್ಯಕೆ
ಸಕಲ ಸದ್ಗುಣಶೀಲೆ ನೀನು
ಸುಖದಿ ಬಾಳಿರು ಧರೆಯಲಿ.
ಹಸಿದು ಗೋಳಿಡುತಿಹುದು ನಿನ್ನಯ
ಶಿಶುವು ದೊಡ್ಡಿಲಿ ಸಕಲ ಚಿಂತೆಯ
ತೊರೆದು ಹರುಷದಿ ಮನೆಗೆ ತೆರಳುತ
ಮೊಲೆಯನುಣ್ಣಿಸು ಬೇಗನೆ.
ಎಂದು ತ್ರೈಮೂರ್ತಿಗಳು ಹರಸುತ
ಚೆಂದದಿಂದಪ್ಪಣೆಯ ಕೊಡುತಲೆ
ಚರಣಕೆರಗುತ ಬೇಡಿ ಕೃಪೆಯನು
ಭರದಿ ಪೊರಟಳು ಮುದದೊಳು.
ಪರಮ ಹರುಷದಿ ಹುಲಿಯ ಪ್ರಾಣವ
ಹರಿಯು ಬ್ರಹ್ಮನು ಶಿರವ ಬೇಗದಿ
ತೆಗೆದುಕೊಂಡರು ಹರನು ಚರ್ಮವ
ಪೊದ್ದುಕೊಂಡನು ಭರದೊಳು.
ಅಸ್ಥಿಗಳನೆಲ್ಲಾಯುಧಂಗಳ
ಅರ್ಥಿಯಿಂದಲಿ ಮಾಡಿಕೊಂಡರು
ಮತ್ತೆ ಮಾಂಸದ ಖಂಡ ದಂಡೆಯ
ನೆತ್ತಿಕೊಂಡರು ಕೊರಲೊಳು.
ಕಾಮಧೇನುವ ಕರೆದು ಸರ್ವರ
ತೃಪ್ತಿಪಡಿಸೆಂದಾಜ್ಞೆಯೀಯಲು
ಇಷ್ಟ ಭೋಜನವಾಗಿ ಸರ್ವರು
ಶ್ರೇಷ್ಠ ಸಂತಸ ಪಟ್ಟರು.
ಮತ್ತೆ ತ್ರೈಮೂರ್ತಿಗಳು ಸುರರು ಸ
ಮೇತ ತಮ್ಮಯ ವಾಹನಂಗಳ
ನೇರಿ ಪೊರಟರು ತಮ್ಮ ನಗರಿಗೆ
ಪರಮ ಸಂಭ್ರಮದಿಂದಲಿ.
ಪುಣ್ಯಕೋಟಿಯು ಇತ್ತ ಚಿಣ್ಣನ
ತನ್ನೊಳಗೆ ನೆನೆಯುತ್ತ ದೊಡ್ಡಿಗೆ
ಬಂದು ಹರುಷದೊಳಪ್ಪಿ ತನ್ನಯ
ಕಂದನಿಗೆ ಮೊಲೆ ಕೊಟ್ಟಳು.
ಬಳಗವೆಲ್ಲವು ಕೂಡಿ ಕೇಳ್ದವು
ಹುಲಿಯ ಬಾಯೊಳಗಿಂದ ತಪ್ಪಿಸಿ
ಹೇಗೆ ಬಂದೆಯೆ ಪುಣ್ಯಕೋಟಿಯೆ
ಹೇಗೆ ನೀನತಿ ಶೀಘ್ರದಿ.
ಇಂತು ಹರುಷದಿ ಹಸುವು ನಿಜ ವೃ
ತ್ತಾಂತವೊರೆಯಲು ಕೇಳಿ ಪಶುಗಳ
ತಿಂತಿಣಿಯು ಬಹು ವಿಸ್ಮಯವನು
ಅಂತರಂಗದಿ ತಾಳಿತು.
**************************************
ಇದುವರೆಗೆ ಹಿಂದೆ ನಾವು ಹುಲಿಯು ಪ್ರಾಣಬಿಟ್ಟ ತನಕದ ಕಥೆ ಕೇಳಿದ್ದೆವು. ಆದರೆ ಇಲ್ಲಿ ಮತ್ತೊಂದು ತಿರುವು ಕಾಣಿಸಿಕೊಳ್ಳುತ್ತದೆ.
ಹುಲಿಯು ಬಿದ್ದು ಸತ್ತದ್ದು ಕಂಡು ಗೋವು ಹೆದರಿ ಬಿದ್ದಿತು. ಆಗ ತ್ರಿಮೂರ್ತಿಗಳು ಹುಲಿ ಮತ್ತು ಹಸುಗಳ ಸತ್ಯಪರತೆಯನ್ನು ಮೆಚ್ಚಿ ಅವುಗಳನ್ನು ಕಾಣಲು ಬಂದರು. ದೇವತೆಗಳು ಹೂಮಳೆಗರೆದರು. ಬಿದ್ದಿದ್ದ ಹಸು ಹುಲಿಗಳನ್ನು ಕಂಡು ಪರಮ ಕರುಣೆಯಿಂದ ಚರಣಸ್ಪರ್ಶದಿಂದ ಹುಲಿಯನ್ನು ಬದುಕಿಸಿ, ಮೂರ್ಛೆಗೊಂಡಿದ್ದ ಗೋವನ್ನು ಎಚ್ಚರಿಸಿ ಹರುಷ ತಾಳಿದರು.
ತ್ರಿಮೂರ್ತಿಗಳನ್ನು ಕಂಡು ಕೈ ಮುಗಿದು ಭಕ್ತಿಯಿಂದ ಸ್ತುತಿ ಮಾಡಿದವು. ತನ್ನ ಘೋರ ದುರಿತವೆಲ್ಲವು ಈ ಗೋವಿನ ದೆಸೆಯಿಂದ ಕಡಿದುಹೋದವು ಎಂದು ಹುಲಿಯು ಹೇಳಿತು. ಈ ಭೂಮಿಯಲ್ಲಿ ಇನ್ನು ನಾನಿರಬಾರದೆಂದು ಪ್ರಾಣ ತ್ಯಜಿಸಿದೆ. ಆದರೆ ನೀವು ಮತ್ತೆ ನನಗೆ ಜೀವ ಕೊಟ್ಟಿರಿ. ನಿಮ್ಮ ಚರಣದರ್ಶನದಿಂದ ನನ್ನ ಪಾಪಗಳೆಲ್ಲ ತೊಲಗಿ ಪಾವನನಾದೆನು. ನನಗೆ ದಯವಿಟ್ಟು ಮುಕ್ತಿ ಕೊಡಿರಿ ಎಂದು ಪ್ರಾರ್ಥಿಸಿತು. ಆಗ ತ್ರಿಮೂರ್ತಿಗಳು ಹಾಗೆಯೇ ಆಗಲೆಂದು ಅದಕ್ಕೆ ಮುಕ್ತಿಯನ್ನು ನೀಡಲು ಕ್ಷಣದಲ್ಲಿ ಅದರ ಪ್ರಾಣ ಹೋಯಿತು.
ಆಗ ಹಸುವು ನನ್ನ ಮಿತ್ರನು ಅಳಿದ ಬಳಿಕ ನಾನಿದ್ದೇನು ಪ್ರಯೋಜನ? ನನಗೂ ಮೋಕ್ಷ ನೀಡಿರಿ ಎನ್ನಲು ದೇವತೆಗಳು ಹೂಮಳೆಗರೆದರು. ಆಗ ತ್ರಿಮೂರ್ತಿಗಳು ಅಕ್ಕರೆಯಿಂದ ಅದರ ಮೈ ತಡವುತ್ತ ನಿನ್ನ ಸತ್ಯಕ್ಕೆ ನಾವು ಸಂತೃಪ್ತರಾದೆವು. ಧರೆಯಲ್ಲಿ ನೀನು ಸುಖದಿಂದ ಬಾಳು ಎಂದರು. ಹಸಿದು ಗೋಳಿಡುತ್ತಿರುವ ನಿನ್ನ ಕಂದನ ಬಳಿಗೆ ಹೋಗಿ ಮೊಲೆಯನುಣ್ಣಿಸು. ಕಂದನೊಂದಿಗೆ, ಬಂಧು ಬಳಗದೊಂದಿಗೆ ಚಂದದಿಂದ ಬಾಳು ಎಂದು ಹರಸಿದರು. ಹಸುವು ದೊಡ್ಡಿಯ ಕಡೆ ನಡೆಯಿತು.
ಹುಲಿಯ ಪ್ರಾಣವನ್ನು ಹರಿಯು, ಶಿರವನ್ನು ಬ್ರಹ್ಮನು, ಚರ್ಮವನ್ನು ಹರನು ತೆಗೆದುಕೊಂಡು ಹೊರಟರು. ಅಸ್ಥಿಗಳನ್ನು ಆಯುಧಗಳಿಗೆ ಇಟ್ಟುಕೊಂಡು ಖಂಡ ದಂಡೆಯನ್ನು ಎತ್ತಿಕೊಂಡು ಕೊರಳಿನಲ್ಲಿ ಧರಿಸಿದರು. ಕಾಮಧೇನುವು ಎಲ್ಲ ದೇವತೆಗಳಿಗೂ ಇಷ್ಟವಾದ ಭೋಜನವನ್ನು ಸಲ್ಲಿಸಿತು. ಎಲ್ಲರೂ ತಮ್ಮ ತಮ್ಮ ವಾಹನಗಳನ್ನೇರಿಕೊಂಡು ಹೊರಟರು.
ಪುಣ್ಯಕೋಟಿಯು ಮರಳಿ ದೊಡ್ಡಿಗೆ ಬಂದು ಸಂತಸದಿಂದ ಕಂದನೊಡನೆ ನಲಿಯಿತು. ಮತ್ತೆ ಬದುಕಿ ಬಂದ ತಾಯನ್ನು ಕಂಡು ಕರುವಿಗೂ ಸಂತಸವಾಯಿತು. ಆನಂದಬಾಷ್ಪವನ್ನು ಸುರಿಸುತ್ತ ಹಸು ಎಲ್ಲ ಕಥೆಯನ್ನು ಹೇಳಿತು.
ಗೋವಿನ ಕಥೆ ಸಮಾಪ್ತಿ
ಕಳೆದ ಹದಿನಾಲ್ಕು ದಿನಗಳಲ್ಲಿ ಗೋವಿನ ಕಥೆಯನ್ನು ಇಲ್ಲಿ ಪ್ರಕಟಿಸಿದೆವು. ಇಂದು ಇದರ ಕಡೆಯ ಭಾಗ ಇಲ್ಲಿ ಪ್ರಕಟಿಸಿದ್ದೇವೆ. ಪುಣ್ಯಕೋಟಿ ಕಥೆ ಕುರಿತು ಚಿಕ್ಕಂದಿನಿಂದ ಅನಿಸುವುದೆಂದರೆ, ಯಾರಿಗೇ ಆಗಲಿ ಅದು ಆಪ್ತ ಸಂವೇದನೆ ಕಟ್ಟಿಕೊಡುತ್ತದೆ. ಮಕ್ಕಳಾಗಿದ್ದಾಗಲಂತೂ ಈ ಕಥೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ.
ಚಿತ್ರಗೀತೆ ಕೇಳಿದ್ವಿ . ಅಲ್ಲಲ್ಲಿ ಅಷ್ಟಿಷ್ಟು ಪದ್ಯ ಓದಿದ್ವಿ. ಹುಡುಕ್ತಾ ಹುಡುಕ್ತಾ ಇದಕ್ಕೆ ಇನ್ನೂ ವ್ಯಾಪ್ತಿ ಇದೆ. ಈ ಕುರಿತು ಶ್ರೇಷ್ಠ ವಿದ್ವಾಂಸರುಗಳು ಎಷ್ಟೆಷ್ಟೋ ಸಂಶೋಧನೆ ಮಾಡಿದ್ದಾರೆ ಅಂತ ಗೊತ್ತಾಗ್ತಾ ಹೋಯ್ತು. ಈ ಸಂಶೋಧಕರಲ್ಲಿ ಪ್ರೊ. ಡಿ. ಎಲ್. ನರಸಿಂಹಾಚಾರ್ ಅವರು ಒಂದು ಪುಸ್ತಕ ಕೂಡ ಕಳೆದ ಶತಮಾನದಲ್ಲಿ ಮಾಡಿದ್ರು ಅಂತ ಗೊತ್ತಾಯ್ತು. ಅದನ್ನು ಪ್ರೊ. ಎಚ್. ಎಸ್. ಹರಿಶಂಕರ್ ಸಾರ್ ತುಂಬ ಪ್ರಯತ್ನಿಸಿ ದೊರಕಿಸಿಕೊಟ್ರು. ಅದರ ಜೊತೆಗೆ ಪ್ರಸಿದ್ಧ ವಿದ್ವಾಂಸರಾದ ಪ್ರೊ. ಟಿ.ಕೇಶವ ಭಟ್ಟರ ಸಂಪಾದಿತ ಕೃತಿಯನ್ನು ಜೊತೆಗಿರಿಸಿಕೊಂಡು ಅಚ್ಚುಕಟ್ಟಾಗಿ ಅಕ್ಷರಕ್ಕಿಳಿಸಿ ವ್ಯಾಖ್ಯಾನ ಮಾಡಿದವರು ಅದ್ಭುತ ಸಾಹಸಿ ಸುಬ್ಬುಲಕ್ಷ್ಮೀ ಅವರು. ಈ ಹಿಂದೆ ಕುಮಾರವ್ಯಾಸ ಭಾರತ, ಗೋಕುಲ ನಿರ್ಗಮನ, ಗೀತ ಗೋವಿಂದ, ಸೋಮೇಶ್ವರ ಶತಕ ಮುಂತಾದ ಅದ್ಭುತ ಕೃತಿಗಳಿಗೂ ಅವರದ್ದೇ ಪರಿಶ್ರಮ ನಮಗೆ ದಕ್ಕಿತ್ತು. ಇದೀಗ ಪುಣ್ಯಕೋಟಿ - ಗೋವಿನ ಕಥೆ ಇವರಿಂದ ನಮಗೆ ದಕ್ಕಿದೆ. ಈ ಎಲ್ಲರಿಗೆ ಮತ್ತು ಓದಿ ಬೆಂಬಲಿಸಿದ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು.
ಗೋವಿನ ಕಥೆ 14
ಗೊಲ್ಲನ ವಂಶ ಪಾವನವಾಯಿತು
ಪೇಳೆ ವೃತ್ತಾಂತಗಳನೆಲ್ಲವ
ಕೇಳಿನದೊಳು ಪರಮ ವಿಸ್ಮಯ
ತಾಳಿ ಗೊಲ್ಲನು ಹಲವು ವಿಧದಿ ಸು
ಶೀಲೆ ಗೋವನು ಸ್ತುತಿಸಿದ.
ಪುಣ್ಯಕೋಟಿಯೆ ಧನ್ಯನಾದೆನು
ನಿನ್ನ ದರ್ಶನದಿಂದ ನಾನು
ಉನ್ನತದ ಸೌಭಾಗ್ಯವನು ಕಾ
ರುಣ್ಯದಿಂದಲಿ ಪಾಲಿಸು.
ಎನಲು ಗೊಲ್ಲನು ಪುಣ್ಯಕೋಟಿಯು
ನೀವು ಸರ್ವರು ವರುಷವರುಷವ
ಸಂಕರಾಂತಿಯ ಹಬ್ಬದಲಿ ಶ್ರೀ
ಚೆನ್ನ ಕೃಷ್ಣನ ಭಜಿಸುತ.
ಪಾಲ ಪೊಂಗಲನಿಕ್ಕಿಸಯ್ಯ
ಬಾಲಗೋವ್ಗಳ ಕೂಡಿಸುತ ಗೋ
ಪಾಲಕೃಷ್ಣನು ನಿಮಗೆ ಒಲಿವನು
ಪಾಲಿಸೆನ್ನಯ ವಾಕ್ಯವ.
ಪುಣ್ಯಕೋಟಿಯೆ ಮಾತ ಕೇಳಿ
ಗೊಲ್ಲ ಗೌಡನು ತಾನು ಬೇಗದಿ
ಪುಣ್ಯ ನದಿಯೊಳು ಮಿಂದು ಬಂದು
ಆಗ ಹಬ್ಬವ ಮಾಡಿದ.
ಬ್ರಹ್ಮ ವಿಷ್ಣು ಮಹೇಶ್ವರರು
ಹೆಮ್ಮೆ ಹರುಷವ ತಾಳುವಂತೆ
ಅತಿ ಮಹೋತ್ಸವದಿಂದ ಪೊಂಗಲ
ಹಬ್ಬವಾಗಲೆ ಮಾಡಿದ.
ನಮ್ಮ ವಂಶಕೆ ವರುಷಕೊಂದು
ಸಂಕರಾತ್ರಿಯ ಹಬ್ಬದೊಳಗೆ
ಪಾಲುಪೊಂಗಲ ಮಾಳ್ಪೆವೆಂದು
ಆಗ ಹಬ್ಬವ ಮಾಡಿದ.
ಪರಮ ಹರುಷವ ತಾಳಿ ಮನದೊಳು
ನಿರುತ ತ್ರೈಮೂರ್ತಿಗಳ ಭಜಿಸುತ
ಭಕುತಿಯಿಂದಲಿ ಸಕಲ ಪಶುಗಳು
ಸುಖದಿ ಬಾಳಿರುತ್ತಿರ್ದವು.
ಪ್ರಾಸ ವರ್ಣಗಳೊಳಗೆ ಬಲು ವ್ಯ
ತ್ಯಾಸವಿರುವುದು ಎನುತ ಮನದಲಿ
ಬೇಸರದೆ ಕ್ಷಮಿಸುವುದು ಕೃಪೆಯಲಿ
ವಾಸುದೇವನ ಭಕ್ತರು.
ಧರೆಯೊಳಗೆ ಈ ಪುಣ್ಯ ಚರಿತೆಯ
ಪರಮ ಭಕ್ತಿಯೊಳೋದಿ ಕೇಳಲು
ಪೊರೆವ ಶ್ರೀ ನರಹರಿಯು ಕರುಣದಿ
ಭರಿತ ಸಂಪದವೀಯುತ.
ಗೋವು ಹೇಳಿದ ಪುಣ್ಯಕಥೆಗಳ
ಹೇಳಿದವರಿಗೆ ಕೇಳಿದವರಿಗೆ
ಈವ ಅಚ್ಯುತ ಸೌಭಾಗ್ಯ ಸಂಪದ
ಆವ ಕಾಲಕೆ ತೆಗೆಯದ.
ಪದ್ಮನಾಭನೆ ಪರಂಧಾಮನೆ
ಮದ್ದೂರ ಶ್ರೀ ನಾರಸಿಂಹನೆ
ಮುದ್ದು ವರಗಳ ಕೊಡುವ ನಿಮಗೆಯು
ನಮೋ ನಮೋ ಮಂಗಳಂ.
************************************
ಎಲ್ಲ ಹಸುಗಳು ಬಂದು ಆನಂದದಿಂದ ಅಪ್ಪಿಕೊಂಡವು. ಇಡೀ ಬಳಗವು ಪುನಃ ವಾಪಸ್ ಬಂದದ್ದು ಹೇಗೆ ಎನ್ನಲು ಎಲ್ಲ ಕಥೆಯನ್ನು ಹೇಳಿತು. ಆಗ ಎಲ್ಲ ಹಸುಗಳು ಇಂದುಧರ, ಗೋವಿಂದ ಎನ್ನುತ್ತ ನಲಿದವು.
ಗೊಲ್ಲನು ಬಂದು ಪುಣ್ಯಕೋಟಿಯ ಕಾಲಿಗೆರಗಿ ಸೌಭಾಗ್ಯವನ್ನು ನೀಡೆಂದು ಕೇಳಿದನು. ಆಗ ಪುಣ್ಯಕೋಟಿಯು ಆಗಲಿ ಎಂದಿತು. ಗೊಲ್ಲನು ಹಲವು ವಿಧಗಳಲ್ಲಿ ಗೋವನ್ನು ಸ್ತುತಿಸಿದನು. ಪುಣ್ಯಕೋಟಿಯ ದರ್ಶನದಿಂದ ನನ್ನ ವಂಶ ಪಾವನವಾಯಿತು ಎಂದನು. ಆಗ ಪುಣ್ಯಕೋಟಿಯು ಗೊಲ್ಲನಿಗೆ ಪ್ರತಿ ವರ್ಷ ಸಂಕ್ರಾಂತಿಯಂದು ಚೆನ್ನ ಕೃಷ್ಣನನ್ನು ಭಜಿಸಿ ಹಾಲುಪೊಂಗಲನ್ನು ಮಾಡಿಸಿ ಕರುಗಳಿಗೆ ತಿನ್ನಿಸಿ ಪೂಜಿಸಿರಿ. ಕೃಷ್ಣನು ಒಲಿಯುವನು ಎಂದಿತು.
ಆಗ ಗೊಲ್ಲನು ತನ್ನ ವಂಶದಲ್ಲಿ ಹಾಲು ಪೊಂಗಲಿನ ಪೂಜೆಯನ್ನು ಮಾಡುವೆವೆಂದು ಹೇಳಿದನು. ಆ ದಿನವೇ ಭರದಿಂದ ಹಬ್ಬವನ್ನು ಮಾಡಿದನು. ಎಲ್ಲ ಗೋವುಗಳೊಂದಿಗೆ ಅವನು ಸುಖವಾಗಿ ಬಾಳಿದನು.
ಈ ಕಥೆಯ ವಿವರಣೆಯಲ್ಲಿ ಪ್ರಾಸ ಅಕ್ಷರಗಳಲ್ಲಿ ದೋಷಗಳಿದ್ದರೆ ವಾಸುದೇವನ ಭಕ್ತರು ಕ್ಷಮಿಸಿರಿ ಎಂದು ಕವಿಯು ಪ್ರಾರ್ಥಿಸಿರುವರು. ಗೋವಿನ ಕಥೆಯನ್ನು ಹೇಳಿದವರಿಗೆ, ಕೇಳಿದವರಿಗೆ ಅಚ್ಯುತನು ಸಕಲ ಸೌಭಾಗ್ಯವನ್ನು ನೀಡುವನು. ಪದ್ಮನಾಭನಿಗೆ, ಪರಂಧಾಮನಿಗೆ, ಮುದ್ದು ನಾರಸಿಂಹನಿಗೆ ನಮೋ ನಮೋ. *ಶುಭ ಮಂಗಳಂ*.
[ಇಲ್ಲಿಗೆ ಗೋವಿನ ಕಥೆ ಸುಸಂಪನ್ನವಾಯಿತು. ನನ್ನ ಈ ಸಣ್ಣ ಪ್ರಯತ್ನವನ್ನು ನಿಮ್ಮ ಮುಂದೆ ತರಲು ಕಾರಣರಾದವರಿಗೆಲ್ಲ ಕೃತಜ್ಞತೆಯ ನಮನಗಳು. ಹಳೆಯ ಸಂಮೃದ್ಧ ಸಾಹಿತ್ಯವನ್ನು ಇಂದಿನವರಿಗೆ ಪರಿಚಯಿಸಬೇಕೆಂಬ ಹಂಬಲ ಈ ಕೆಲಸ ಮಾಡಿಸಿದೆ. ದೋಷಗಳನ್ನು ಕ್ಷಮಿಸಿ ಉದಾರತೆಯಿಂದ ಹರಸಿರೆಂದು ತಮ್ಮನ್ನು ಕೇಳಿಕೊಳ್ಳುತ್ತೇನೆ. ನಮಸ್ಕಾರ.]
ಕಾಮೆಂಟ್‌ಗಳು