ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ಡಿ.ಸಿ.


ಗೀತಾ ಡಿ.ಸಿ.


ಡಾ. ಗೀತಾ ಡಿ.ಸಿ. ಪ್ರಸಿದ್ಧ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ, ಬರಹಗಾರ್ತಿ ಎಲ್ಲಕ್ಕೂ ಮುಖ್ಯವಾಗಿ ಕನ್ನಡದ ಅನುಪಮ ಪರಿಚಾರಕಿ ಹಾಗೂ ಕನ್ನಡದ ಕುರಿತಾದ ಪ್ರೀತಿಯನ್ನು ಯುವ ಮನಗಳಲ್ಲಿ ನೆಲೆ ನಿಲ್ಲಲು ಶ್ರಮಿಸುತ್ತಿರುವ ವಿಶಿಷ್ಟ ಕನ್ನಡತಿ.

ಸೆಪ್ಟೆಂಬರ್ 14, ಗೀತಾ ಅವರ ಹುಟ್ಟುಹಬ್ಬ. 
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡಹೆಜ್ಜಾಜಿ ಗ್ರಾಮ ಇವರು ಹುಟ್ಟಿದ ಊರು. ಮನೆಯಲ್ಲಿ ಒಟ್ಟು ಕುಟುಂಬದ ಎಲ್ಲ ಹಿರಿಕಿರಿಯರಿಗೂ ಓದುವ ಹವ್ಯಾಸ. ತಾತ, ಆನಂತರ ಅಪ್ಪ ಓದುತ್ತಿದ್ದ ರಾಮಾಯಣ, ಮಹಾಭಾರತಗಳನ್ನು ಮನೆಯವರೆಲ್ಲರೂ ಕುಳಿತು ಕೇಳಿಸಿಕೊಳ್ಳಬೇಕಾಗಿತ್ತು. ಜೊತೆಗೆ ಊರಿನ ಕೆಲವು ಆಸಕ್ತರೂ ಸೇರಿಕೊಳ್ಳುತ್ತಿದ್ದರು. ತಂದೆ ತುಂಬಾ ಮಹತ್ವಾಕಾಂಕ್ಷಿ. ತಮ್ಮ ಮಕ್ಕಳು ಮಾತ್ರವಲ್ಲ ಊರಿನ ಶಾಲೆಯ ಎಲ್ಲಾ ಮಕ್ಕಳೂ ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು ಎನ್ನುವುದು ಅವರ ದೊಡ್ಡ ಕನಸಾಗಿತ್ತು.  ಹೆಚ್ಚಾಗಿ ಶಿಕ್ಷಕರಿಂದಲೇ ತುಂಬಿದ್ದ ಊರು. ಧಾರ್ಮಿಕ ಮನೋಭಾವವುಳ್ಳ ಇವರೆಲ್ಲ ಭಜನೆ ಹಾಡುಗಳು, ಸಂಗೀತ, ಸಾಹಿತ್ಯ, ಊರಲ್ಲಿ ಆಡುತ್ತಿದ್ದ ನಾಟಕಗಳು ಎಲ್ಲದರಲ್ಲೂ ಆಸಕ್ತಿಯುಳ್ಳವರಾಗಿದ್ದರು. ಇದಕ್ಕೆಲ್ಲ ಜೊತೆಗಿದ್ದು ಪ್ರೋತ್ಸಾಹ ನೀಡುತ್ತಿದ್ದವರು ಇವರ ತಂದೆ.  ಇಂಥ ವಾತಾವರಣದ ಜೊತೆಗೆ ತಂದೆಯವರು ಪೇಪರ್ ಏಜೆನ್ಸಿ ನಡೆಸುತ್ತಿದ್ದುದ್ದರಿಂದ 'ಚಂದಮಾಮ'ದಿಂದ ಮೊದಲುಗೊಂಡು ಕನ್ನಡದ ಎಲ್ಲಾ ದಿನ ಪತ್ರಿಕೆಗಳು, ಸುಧಾ, ರೂಪತಾರ, ಮಂಗಳ, ಪ್ರಜಾಮತ, ಮಯೂರ, ತುಷಾರ, ಕಸ್ತೂರಿ- ಹೀಗೆ ವಾರ, ತಿಂಗಳ ಪತ್ರಿಕೆಗಳು ಚಿಕ್ಕ ವಯಸ್ಸಿನಲ್ಲೇ ಓದಲು ಸಿಗುತ್ತಿದ್ದವು. ಅಜ್ಜಿಗೆ ಸುಧಾ, ಪ್ರಜಾಮತದಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಗಟ್ಟಿಯಾಗಿ ಓದಿ ಹೇಳಬೇಕಾಗಿತ್ತು. ಹಾಗೆ ಓದುವ ಸರದಿಯಲ್ಲಿ ಗೀತಾ ಕೂಡ  ಇರುತ್ತಿದ್ದರು.  ಇವೆಲ್ಲವೂ ಇವರಲ್ಲಿ ಓದಿನ ಅಭಿರುಚಿ ಬೆಳೆಸಿತು. 
ಯಾವುದೇ ಕೆಲಸವಾಗಲೀ ಶ್ರದ್ಧೆಯಿಂದ ಶುದ್ಧ ಮನಸ್ಸಿನಿಂದ ಮಾಡಬೇಕೆನ್ನುವುದು ಅಪ್ಪ-ಅಮ್ಮ ಹೇಳಿಕೊಟ್ಟ ಅಥವಾ ಅವರು ಹಾಗೆ ಇದ್ದುದನ್ನು ನೋಡಿ ಕಲಿತದ್ದರಿಂದ ಇವರಲ್ಲಿ
ಆರಂಭಗೊಂಡಿತು.

ಶಾಲೆ, ಪಿಯುಸಿ, ಪದವಿ ಎಲ್ಲಾ ಹಂತಗಳಲ್ಲೂ ಸಿಕ್ಕ ಓದಿನ ಹವ್ಯಾಸದ  ಜೊತೆಗೆ ಪಠ್ಯ ಹಾಗೂ ಪಠ್ಯ ಪೂರಕವಾಗಿ ಓದಿಸಿದ ಮೇಷ್ಟ್ರುಗಳು ಹಲವರು.  ಜೊತೆಗೆ  ಶಾಲಾ ಕಾಲೇಜುಗಳಿಂದಾಚೆಗೂ ಕಲಿಸಿದವರು ಅನೇಕರು.

ಕನ್ನಡ ಸಾಹಿತ್ಯ ಲೋಕ, ಬುದ್ಧ, ಗಾಂಧಿ, ಅಂಬೇಡ್ಕರ್ ಮುಂತಾದವರ ಚಿಂತನೆಗಳು ಗೀತಾ ಅವರಿಗೆ ಹತ್ತಿರ ಮಾತ್ರವಲ್ಲ ಆಪ್ತ.  ಪಂಪನಾದಿಯಾಗಿ ವಚನಕಾರರು, ದಾಸರು, ತತ್ವಪದಕಾರರು, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಕಾರಂತ, ತೇಜಸ್ವಿ, ಲಂಕೇಶ್ ಇದ್ದಾಗಿನ ಲಂಕೇಶ್ ಪತ್ರಿಕೆ, ಟಾಲ್ಸ್ಟಾಯ್, ಮ್ಯಾಕ್ಸಿಮ್ ಗಾರ್ಕಿ, ಕಾಫ್ಕ, ಕಾಮೂ, ಗ್ರೀಕ್ ನಾಟಕಗಳು, ಮುಂತಾದ...  ಜಗತ್ತಿನ ಅನೇಕ ಬೇರೆ ಬೇರೆ ಬರಹಗಾರರ ಬರಹಗಳು ಇವರ ಇಷ್ಟದ ಸಾಲಿನಲ್ಲಿವೆ. 

ಗೀತಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಗಳಿಸಿದರು. "ಕರ್ನಾಟಕದಲ್ಲಿ ಮಹಿಳಾ ಚಳುವಳಿಗಳು ಮತ್ತು ಸಾಹಿತ್ಯ ಪ್ರತಿಭೆ" ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಗಳಿಸಿದರು. 

ಗೀತಾ ಅವರು ಸದ್ಯ ಬೆಂಗಳೂರಿನ ಯಲಹಂಕದಲ್ಲಿರುವ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದಾರೆ.

ಗೀತಾ ಅವರ ಕಥೆ, ಕವಿತೆ, ಲೇಖನ, ಪುಸ್ತಕ ಪರಿಚಯ, ಸಂದರ್ಶನಗಳು ಕನ್ನಡ ಪ್ರಭ, ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ, ಲಂಕೇಶ್ ಇದ್ದಾಗಿನ ಲಂಕೇಶ್ ಪತ್ರಿಕೆ, ಮಯೂರ, ಶೂದ್ರ, ಸಂಚಯ, ಸಂಕ್ರಮಣ, ಗಾಂಧಿ ಬಜಾರ್, ಅಚಲ, ಮಾನಸ, ಕೆಂಡಸಂಪಿಗೆ, ಅವಧಿ, ಸಂಗಾತಿ, ನಸುಕು.ಕಾಂ, ಆಂದೋಲನ, ಪಂಜು,  ಮುಂತಾದ  ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಗೀತಾ ಅವರು ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ, ಬಿಬಿಎಂ, ಬಿಎಸ್ಸಿ ಪದವಿ ತರಗತಿಗಳಿಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ 'ರತ್ನ', 'ಜಾಣ' ಪರೀಕ್ಷೆಗಳಿಗೆ
ಪಠ್ಯಗಳ ಸಂಪಾದನೆ ಮಾಡಿದ್ದಾರೆ. 

ಗೀತಾ ಅವರ ಪ್ರಕಟಿತ ಕೃತಿಗಳಲ್ಲಿ 'ಉತ್ತರವಿರದ ಪ್ರಶ್ನೆಗಳು' ಕವನ ಸಂಕಲನ,  ಸಾಹಿತ್ಯ ಅಕಾಡೆಮಿಯ ಕಮ್ಮಟವೊಂದರ ಭಾಗವಾಗಿ ಬರೆದ ಮಹಾಭಾರತದ ಮಹಿಳಾ ಪಾತ್ರಗಳ ಸ್ವಗತದಂತಿರುವ ನಾಟಕ: 'ನಕ್ಷತ್ರಗಳ ಮಹಾಕತ್ತಲಿನಲ್ಲಿ',  ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಮತ್ತು  ಸಂಶೋಧನಾ ಕೇಂದ್ರದ ಫೆಲೋಶಿಪ್‌ನ  'ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ಕನಕದಾಸರ ಕೃತಿಗಳ ಅಧ್ಯಯನ' ಸಂಶೋಧನಾ ಕೃತಿ ಸೇರಿವೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಪ್ರಧಾನ ಸಂಪಾದಕತ್ವದಲ್ಲಿ ಚಿ. ಶ್ರೀನಿವಾಸರಾಜು ಅವರಿಗೆ ಅಭಿನಂಧನಾ ಗ್ರಂಥ ಸಂಪಾದನೆಯಲ್ಲಿ ಇವರು ಖಜಾಂಚಿಯಾಗಿ ಜವಾಬ್ದಾರಿ ನಿರ್ವಹಿಸಿದ್ದುದರ ಜೊತೆಗೆ ಅಭಿನಂದನಾ ಗ್ರಂಥದ ಸಂಪಾದನೆಯಲ್ಲಿ ದೊಡ್ಡ ಕೆಲಸ ಮಾಡಿದ್ದರು. ಹಣದ ವಿಚಾರದಲ್ಲಿ ಅತ್ಯಂತ ಪಾರದರ್ಶಕವಾಗಿದ್ದು, ಸಂಗ್ರಹವಾದ  ಹಣದಲ್ಲಿ, ಒಟ್ಟಾರೆ ಖರ್ಚಾದ ಪ್ರತಿಯೊಂದರ ಲೆಕ್ಕವಿಟ್ಟು. ಉಳಿದ ಹಣವನ್ನು ಹಣ ಕೊಟ್ಟಿದ್ದ ಎಲ್ಲರಿಗೂ ಸಮನಾಗಿ ಹಿಂತಿರುಗಿಸಿದ್ದರು. 

ಗೀತಾ ಅವರು ಕಾಲೇಜಿನ ಕನ್ನಡ ವಿಭಾಗದಿಂದ 2015ರಿಂದ ನಿರಂತರವಾಗಿ ಹೊರತರುತ್ತಿರುವ  "ಕನ್ನಡ ದೀವಿಗೆ" ಪತ್ರಿಕೆಯ ಸಂಪಾದಕಿಯಾಗಿದ್ದಾರೆ. ಈ ಮೂಲಕ ಕನ್ನಡದ ಓದು ಬರಹ ನಮ್ಮದಲ್ಲವೆಂದು ಪಕ್ಕಕ್ಕೆ  ಇಡುವಂತೆ ವ್ಯವಸ್ಥಿತವಾಗಿ ಕಾಯ್ದುಕೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ ತಯಾರಾಗಿ ಬಂದಿರುವ ವಿದ್ಯಾರ್ಥಿಗಳಲ್ಲಿ,  ಕನ್ನಡದ ಬಗೆಗೆ ಒಲವು ಮೂಡುವಂತೆ ಮಾಡಲು ಅವರು ಬರೆದು ಕೊಟ್ಟಿದ್ದನ್ನು ತಿದ್ದಿ ತೀಡಿ ಪ್ರಕಟಿಸುವ ಸುಂದರ ಪ್ರಯತ್ನವಾಗಿದೆ.  ವಿದ್ಯಾರ್ಥಿಗಳಿಂದ ಕನ್ನಡದ ಪ್ರಮುಖ ಕವಿ/ ಬರಹಗಾರರ ಬರಹಗಳನ್ನು ಓದಿಸಿ, ಅವರ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ಓದಲು "ವಿಚಾರ ಸಂಕಿರಣ" ವನ್ನು ಏರ್ಪಡಿಸಿ, ಈ ಮೂಲಕ ಓದುವುದನ್ನು ಹಬ್ಬವಾಗಿಸುವ ವ್ಯವಸ್ಥೆ ಮಾಡಿದ್ದಾರೆ (ಉದಾಹರಣೆಗೆ 'ಕುವೆಂಪು-ಬೇಂದ್ರೆ ಓದಿನ ಹಬ್ಬ' ಇತ್ಯಾದಿ).  ಕಾಲೇಜಿನ ಸಾಂಸ್ಕೃತಿಕ ವೇದಿಕೆ, ಗಾಂಧಿ-ಅಂಬೇಡ್ಕರ್-ವಿವೇಕಾನಂದ ಅಧ್ಯಯನ ಕೇಂದ್ರಗಳ ಹಾಗೂ 'ಕನ್ನಡ ಸಂಘ'ದ ಸಂಚಾಲಕಿಯಾಗಿ ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿ - ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ನಾಡಿನ ಹಿರಿಯ ಕವಿ, ಕಲಾವಿದರು, ಚಿಂತಕರನ್ನು ಕರೆಸಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಾಗೂ ನಾಟಕಗಳ ಪ್ರದರ್ಶನವನ್ನು ಆಯೋಜಿಸುತ್ತಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.  ವಿದ್ಯಾರ್ಥಿಗಳ ವಾಟ್ಸಾಪ್  ಗುಂಪುಗಳ ಮೂಲಕ  "ದಿನಕ್ಕೊಂದು ಕಲಿಕೆ" ಹೆಸರಿನಲ್ಲಿ ಕನ್ನಡ ಭಾಷೆ, ನಾಡು, ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು, ತರಗತಿಗಳಲ್ಲಿ ಮುನ್ನೆಲೆಗೆ ಬರುವ ಪದಗಳು, ಕೆಲವು ಸಂಗತಿಗಳು, ನುಡಿಗಟ್ಟುಗಳ ವಿಶ್ಲೇಷಣೆ ಹೀಗೆ ಪ್ರತಿ ದಿನವೂ ಹಂಚಿಕೊಳ್ಳಲಾಗುತ್ತದೆ. ಕನ್ನಡ ನಾಡು ನುಡಿಯ ಬಗೆಗೆ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ದೇಶವಿದೇಶಗಳಲ್ಲಿರುವ ನಾಡಿನ ಹಿರಿಕಿರಿಯ 72 ಜನ ಪ್ರಜ್ಞಾವಂತರ ವಿಚಾರಗಳನ್ನು ಕಲೆಹಾಕಿ ನಾಗರೇಖಾ ಗಾಂವಕರ ಅವರೊಂದಿಗೆ ಸಂಪಾದಿಸಿದ ಪುಸ್ತಕ: "ಕನ್ನಡ ಪ್ರಜ್ಞೆಯ ಸುತ್ತಮುತ್ತ: ನಾಡು-ನುಡಿ ಚಿಂತನೆ". ಪ್ರತಿ ಸೆಮಿಸ್ಟರಿಗೊಮ್ಮೆ ಕನ್ನಡ ವಿಭಾಗದಿಂದ ಕಾರ್ಯಕ್ರಮವಿರುತ್ತದೆ. ವರ್ಷಕ್ಕೊಮ್ಮೆ ಪುಸ್ತಕ ಪ್ರದರ್ಶನ ಇರುತ್ತದೆ.

ಗೀತಾ ಅವರು ಮುಂಬೈನ 'ಗೊರೆಗಾಂ ಕನ್ನಡ ಸಂಘ' ಏರ್ಪಡಿಸಿದ್ದ 'ಕನ್ನಡ ರಾಮಾಯಣಗಳ ಪರಂಪರೆ'  ವಿಚಾರ ಸಂಕಿರಣದಲ್ಲಿ ಮಾಸ್ತಿಯವರ 'ಶ್ರೀ ರಾಮ ಪಟ್ಟಾಭಿಷೇಕ' ಕೃತಿ ಕುರಿತ ವಿಶ್ಲೇಷಣೆಯೂ ಸೇರಿದಂತೆ, ಅನೇಕ ಸಾಹಿತ್ಯ ಕಾರ್ಯಕ್ರಮಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳ ಮಂಡನೆ ಮಾಡಿದ್ದಾರೆ. ಚಿತ್ರದುರ್ಗ, ಮೈಸೂರು, ಹಾವೇರಿ ಸಾಹಿತ್ಯ ಸಮ್ಮೇಳನ, ಮೈಸೂರಿನ ದಸರಾ ಕವಿಗೋಷ್ಠಿ, ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ, ಅನೇಕ ಕವಿಗೋಷ್ಠಿಗಳಲ್ಲಿ ಸ್ವರಚಿತ ಕವಿತಾ ವಾಚನ ಮಾಡಿದ್ದಾರೆ. 

ಗೀತಾ ಅವರಿಗೆ 1996 ರಲ್ಲಿ ಮತ್ತು 1997 ರಲ್ಲಿ 'ಸಂಚಯ' ಕಾವ್ಯ ಬಹುಮಾನ, 1997ರ 'ಸಂಕ್ರಮಣ' ಕಾವ್ಯ ಬಹುಮಾನ.
2004ರ ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ಬಹುಮಾನ, 
2008ರಲ್ಲಿ 'ಉತ್ತರವಿರದ ಪ್ರಶ್ನೆಗಳು' ಕವನ ಸಂಕಲನಕ್ಕೆ ಮಂಡ್ಯದ ಯುವ ಬರಹಗಾರರ ಬಳಗ  ನೀಡುವ ಬಿಎಂಶ್ರೀ  ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.

ಕನ್ನಡದ ನಿಷ್ಠಾವಂತ ಶಿಕ್ಷಕಿ, ಪರಿಚಾರಕಿ, ಚಿಂತಕಿ, ಬರಹಗಾರ್ತಿ, ಸರಳ ಸಹೃದಯಿ, ಆತ್ಮೀಯರಾದ ಗೀತಾ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.

ಕೃತಜ್ಞತೆ: Savitha Chandrashekar

Happy birthday Dr. Geetha DC 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ