ಕುಣಿದ ಕಾಳಿಯ ಶಿರದಿ
ಕುಣಿದ ಕಾಳಿಯ ಶಿರದಿ ನಂದನಂದನು
ಕಿರುಗೆಜ್ಜೆ ಕಾಲಂದಿಗೆ ಕಟೆಯ
ವರದಾಮದ ಪೊಂಗಂಟೆರವದ
ಕರಕಂಕಣ ಮುದ್ರಿಕೆ ಹಾರಪದಕಾ -
ಭರಣ ಝಣ ಝಣ ಝಣ ಝಣ ಝಣ ಝಣ ಝಣ ಝಣಕೆನ್ನಲು (1)
ವಿಗಡಾಹಿ ಫಣದಲ್ಲಿ ನಿಂದು ಕ
ರಗಳೊಲವಿಲಿ ಅಭಿನವ ತೋರುತಲಿ
ನಗೆಮೊಗದಮೃತ ರುಚಿಗಳ ಬೀರಿ ತೋ-
ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಥೈ ಥೈಯೆಂದು (2)
ಪದುಮಜಭವರು ಹನುಮ ಮೂರು ಜತ್ತಾ
ಳ್ಮುದದಿಂ ದಂಡಿಗೆ ತಾಳ್ಗತಿ ನುಡಿಸೆ
ಪದುಮನಾಭ ಪ್ರಸನ್ನವೆಂಕಟ ಕೃಷ್ಣ ತ -
ಕುಂದ ಕುಂತ ಗಡ ವಗಧಾಂ ಕಿಡಿ ಕಿಡಿಧಾಯೆಂದು (3)
ಸಾಹಿತ್ಯ: ಪ್ರಸನ್ನವೇಂಕಟದಾಸರು
_________________
ಪ್ರಾಚೀನದ ಪ್ರಬಂಧಗಳ ರೀತಿಯಲ್ಲಿ ಹರಿದಾಸರು ಅದೆಷ್ಟೋ ಪದಗಳನ್ನು ರಚಿಸಿದ್ದಾರೆ. ಅದರಲ್ಲೊಂದು ಪ್ರಬಂಧವನ್ನು ಹೋಲುವ ಲಕ್ಷಣಗಳನ್ನು ಹೊಲುವ ಮೇಲಿನ ರಚನೆಯು ಪ್ರಸನ್ನವೇಂಕಟದಾಸರ ರಚನೆಯಾಗಿದೆ.
ಈ ರಚನೆಯು ವೈಕುಂಠದ, ಆನಂದ, ಕಾಂತಾರ, ಸಮರ, ವಾಂಛಿತ ಹಾಗೆಯೇ ವಿಶಾಲ ಎಂಬ ಆರು ವಿಧಗಳನ್ನು ಉಳ್ಳ ಪ್ರಬಂಧವಾದ ನಿಃಸಾರು ತಾಳದ ಹಾಗೂ ಪ್ರಬಂಧದ ವಿಧಗಳಲ್ಲಿ ಒಂದಾದ ಸಮರವೆಂಬ ಪ್ರಬಂಧ ರೀತಿಯಲ್ಲಿ ರಚಿತವಾಗಿದೆ. ಸಮರವೆಂಬ ನಿಃಸಾರು ಪ್ರಬೇಧದ ತಾಳವು ಹಂಸಲೀಲತಾಲ. ನಿಃಸಾರು ಮತ್ತು ಹಂಸಲೀಲದ ತಾಳದ ಲಕ್ಷಣವು ಒಂದು ಲಘು ಮತ್ತು ಒಂದು ಲಘುವಿರಾಮ. (ll'=ತಕತಕಿಟ ಎಂಬ ಲಯದಲ್ಲಿ ಬರುವಂತಹುದು). ಇದು ವೀರರಸದಲ್ಲಿ ರಚಿತವಾಗಿರುತ್ತದೆ.
ಕೃಪೆ: ರೋಹಿಣಿ ಸುಬ್ಬುರತ್ನಂ Rohini Subbarathnam
ಕಾಮೆಂಟ್ಗಳು