ರಶ್ಮಿ ಎಸ್
ರಶ್ಮಿ ಎಸ್
ರಶ್ಮಿ ಎಸ್ ಹೆಸರಾಂತ ಪತ್ರಕರ್ತೆ, ಬರಹಗಾರ್ತಿ ಮತ್ತು ವಾಗ್ಮಿ.
ಸೆಪ್ಟೆಂಬರ್ 4, ರಶ್ಮಿ ಅವರ ಹುಟ್ಟು ಹಬ್ಬ. ಇವರು ಹುಟ್ಟಿ ಬೆಳೆದ ಊರು ಬೀದರ್. ಬಹುಭಾಷಾ ಸಂಸ್ಕೃತಿಯ ನೆಲೆಬೀಡಾದ ಬೀದರ್ ವಾತಾವರಣ, ಇವರಲ್ಲಿ ಬಹುಭಾಷಾ ಮತ್ತು ಬಹು ಸಂಸ್ಕೃತಿಗಳ ಕುರಿತು ಆಪ್ತತೆ ಮೂಡಿಸಿದವು. ಅಪ್ಪ, ಅಮ್ಮ, ಅಣ್ಣ, ಅಕ್ಕಪಕ್ಕದ ಕನ್ನಡಿಗರ ಜೊತೆಯಲ್ಲಿ ಮಾತ್ರವಲ್ಲದೆ, ಪಕ್ಕದಲ್ಲಿದ್ದ ಪಠಾಣರು ಮತ್ತಿತರ ಜನಾಂಗದವರೊಂದಿಗೂ ಒಂದಾಗಿ ಅವರುಗಳಾಡುತ್ತಿದ್ದ ಭಾಷೆಯಲ್ಲೂ ಸುಲಲಿತ ಸಾಮರ್ಥ್ಯ ಗಳಿಸಿದರು. ಪ್ರತಿಭಾಶಾಲಿನಿಯಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
'ಪ್ರಜಾವಾಣಿ' ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ವೃತ್ತಿ ಜೀವನ ಆರಂಭಿಸಿದ ರಶ್ಮಿ, ಆ ಪತ್ರಿಕೆಯ ಬೆಂಗಳೂರು, ಕಲ್ಬುರ್ಗಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ, ಹುಬ್ಬಳ್ಳಿಯ ನ್ಯೂಸ್ ಬ್ಯೂರೋದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿ, ಪುನಃ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಬಳಗದ ಪತ್ರಿಕೆಗಳಲ್ಲಿ ಮೆಟ್ರೊ, ಭೂಮಿಕಾ, ಕ್ಷೇಮ-ಕುಶಲ, ಆರೋಗ್ಯ, ಶಿಕ್ಷಣದಂತಹ ಪುರವಣಿಗೆಗಳನ್ನು ವೈಶಿಷ್ಟ್ಯ ಪೂರ್ಣವಾಗಿ ಮುನ್ನೆಡೆಸಿದ ಹಿರಿಮೆ ರಶ್ಮಿ ಅವರದು. ಇವರು ಪ್ರಜಾವಾಣಿಯ ಶಾಲಾ ಶಿಕ್ಷಣದ 'ಸಹಪಾಠಿ' ಪರಿಕಲ್ಪನೆಯ ಕಾರ್ಯಾನುಷ್ಠಾನದಲ್ಲಿಯೂ ಪಾತ್ರವಹಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ
ಸಹಕಾರಿಯಾಗಬಲ್ಲ “ಯೋಗ, ಸ್ಪೂರ್ತಿ ಮತ್ತು ಸಮಗ್ರ ದೃಷ್ಟಿ (Holistic)” ಉಳ್ಳ ಇವರ ನುಡಿಚಿತ್ರಣಗಳು ಗಳಿಸಿದ ಮೆಚ್ಚುಗೆಗಳು ಅಪಾರ. ಇವರ 'ಮಿದುಮಾತು' ಅಂಕಣ ಮುದದಿಂದ ಮೀಟಿದ ಓದುಗರ ಹೃದಯಗಳ ವ್ಯಾಪ್ತಿ ಅಪರಿಮಿತ. ಹಬ್ಬ-ಹರಿದಿನ, ಪರಂಪರೆ, ಸಾಮಾಜಿಕ ವಾತಾವರಣ; ಕಷ್ಟ ಕಾರ್ಪಣ್ಯಗಳ ಜೀವನದ ನಡುವೆಯೂ ಜನರನ್ನು ದಾರಿತೋರಿ ನಡೆಸುವ ಮಿಂಚು ದೀಪಗಳು, ಹೀಗೆ ಇವರ ಬರಹದ ವ್ಯಾಪ್ತಿಗೆ ನಿಲುಕದಿರುವ ವಿಚಾರಗಳೇ ಇಲ್ಲ.
ಡಿಜಿಟಲ್ ಮೀಡಿಯಾ ಸಾಧ್ಯತೆಗಳನ್ನು ಯಶಸ್ವಿಯಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಬಳಸಿಕೊಂಡ ರಶ್ಮಿ ಅವರ ಸಾಮರ್ಥ್ಯ ಗಮನಾರ್ಹವಾದದ್ದು. ಉತ್ತರ ಕರ್ನಾಟಕ
ಭಾಗದ ಸಂಕಟ, ಸಂಭ್ರಮ, ಜೀವನಶೈಲಿಯನ್ನು ಡಿಜಿಟಲ್ ಅಂಕಣದಲ್ಲಿ ದಾಖಲಿಸಿದ ಇವರ ನೇತೃತ್ವದ "ಮಿಸಳ್ ಹಾಪ್ಚಾ" ಎಂಬ ವಿಡಿಯೋ ಅಂಕಣ, 118 ವಾರಗಳಷ್ಟು ಸುದೀರ್ಘ ವ್ಯಾಪ್ತಿಯದಾಗಿ, ಕನ್ನಡ ನಾಡಿನ ಎಲ್ಲರ ಹೃದಯಗಳನ್ನು ಸಂವೇದಿಸಿದ ರೀತಿ ವಿಶಿಷ್ಟವಾದದ್ದು. ಈ ಸರಣಿಗಳು ಇಂದೂ ಯೂಟ್ಯೂಬ್ನಲ್ಲಿ ದೊರಕುವಂತಿದ್ದು ಕನ್ನಡ ನಾಡಿನ ಆಂತರ್ಯದ ಬದುಕನ್ನು ಅಧ್ಯಯನ ಮಾಡಬಯಸುವವರಿಗೆ ಅಮೂಲ್ಯ ಸಿರಿಕಣಜದಂತಿವೆ. ಈ ಸಂದರ್ಭದಲ್ಲಿ ಅವರು ಕೌದಿ ಹೊಲೆಯುವವರು, ಕಸ ಆಯುವವರು, ಕಲ್ಲು ಕಟೆಯುವವರು, ಹಂಚಿಬೊಟ್ಟು ಹಾಕುವವರು, ಬೊಂಬೆ ಮಾಡಿ ಮಾರುವವರು ಹೀಗೆ ಎಲ್ಲ ರೀತಿಯ ತಳಸಮುದಾಯದ ಜನರನ್ನೂ ಸೇರಿ ಬಗೆ ಬಗೆಯ ಜನರ ಬಳಿ ಹೋಗಿ ಕೆಲಸ ಮಾಡಿದ್ದ ರೀತಿ ವಿಸ್ಮಯದ ಮೆಚ್ಚುಗೆ ಹುಟ್ಟಿಸುವಂತದ್ದು.
ರಶ್ಮಿ ಅವರ ಭಾಷೆಯ ಬಳಕೆಯ ಸೌಂದರ್ಯ ಬಗೆ ಬಗೆಯ ತೆರನಾದದ್ದು. ಒಂದೆಡೆ ಅವರು ತಮ್ಮ ಹಿರಿಯರಿಂದ ಕಲಿತ "ಕಮ್ ಬೋಲ್, ಮೀಠಾ ಬೋಲ್, ಧೀಮಾ ಬೋಲ್" ಎಂಬ ಮಾತು ನೆನಪಿಸಿಕೊಳ್ಳುತ್ತಾರೆ. ಅಂತೆಯೇ ಅವರು ಕಡಿಮೆ, ಸವಿ ಮತ್ತು ಮೆದುಹಿತವಾಗಿ ಅಭಿವ್ಯಕ್ತಿಸುವವರು. ಬೇಂದ್ರೆ, ಕಣವಿ ಅಂತಹ ಕನ್ನಡದ ಕಾವ್ಯ ಸೊಬಗಿನ ಪರಿ; ಗಾಲಿಬ್, ಸಾಹಿರ್ ಭೂಪಾಲಿ, ಗುಲ್ಜಾರ್, ಅಮೃತಾ ಪ್ರೀತಮ್ ಹಾಗೂ ನನ್ನಂತಹವನಿಗೆ ಹೆಸರು ಕೂಡ ಉಚ್ಚರಿಸಲಾಗಾದ ಎಷ್ಟೆಷ್ಟೋ ಕವಿಗಳ ಕವಿತೆ-ಶಾಯರಿಗಳು, ರಶ್ಮಿ ಅವರ ರಮ್ಯ ಕನ್ನಡದಲ್ಲಿ ಅನುಸಂದಾನಗೊಳ್ಳುವುದನ್ನು ಓದುವುದೇ ಸುಂದರ ಅನುಭವ. ಅಂತರಜಾಲದಲ್ಲಿ ಕಾಣಸಿಗುವ ಅವರ ಸಂದರ್ಶನಗಳನ್ನು ಕೇಳುವಾಗಲೂ ಇದೇ ಅನುಭವವಾಗುತ್ತದೆ. ರಶ್ಮಿ ಅವರು ಬಹುಭಾಷೆಗಳಲ್ಲಿ ಬೆಳೆದ ವಾತಾವರಣ ಇದಕ್ಕೆ ಒಂದು ಕಾರಣ ಇರಬಹುದಾದರೂ, ಅಪಾರ ಓದು, ನೈಜ ಕಾವ್ಯಸಂಗೀತಾನುಭವದ ಪ್ರೀತಿ ಮಾತ್ರವೇ ಇಂಥ ಅಭಿವ್ಯಕ್ತಿ ಸಾಮರ್ಥ್ಯ ನಿರ್ಮಿಸಬಲ್ಲದು ಎಂಬುದು ಸರ್ವವೇದ್ಯ. ಎಲ್ಲರಲ್ಲೂ ಕಲಿಯುವುದು ಅವರ ಮತ್ತೊಂದು ದೊಡ್ಡ ಗುಣ. ಒಂದು ಸಂದರ್ಶನದಲ್ಲಿ ತಮ್ಮ ಇಬ್ಬರು ಮಕ್ಕಳಾದ ಭೂಮಿ ಮತ್ತು ಆರ್ನಿ ಬಗ್ಗೆ ಹೇಳುತ್ತ "ನನಗೆ ಭೂಮಿ ಅಮ್ಮ, ಆರ್ನಿ ಗುರು" ಎನ್ನುತ್ತಾರೆ.
ರಶ್ಮಿ ಅವರ ಕಾವ್ಯದ ಒಂದು ತುಣುಕು ಹೀಗೆ ಇದೆ:
ಒಮ್ಮೆ... ಒಮ್ಮೆ ಮಾತ್ರ
ಒಮ್ಮೆ... ಒಮ್ಮೆ ಮಾತ್ರ ಮತ್ತ ನನ್ನ ಮಡಿಲೊಳಗ ತಲಿ ಇಟ್ಟು ಮಲಗು. ಹಂಗ... ಇಪ್ಪತ್ತು ವರ್ಷಗಳ ಹಿಂದ ನಿನ್ನ ತಲಿಯೊಳಗ ಕೈ ಆಡಸ್ಕೊಂತ, ನಿನ್ನ ಕಣ್ಣಾಗ ಕಣ್ಣಿಟ್ಟು ನೋಡಿದ್ದೆ. ಆ ಕಣ್ಣಾಗ ನಾನ ಕಾಣ್ತಿದ್ದೆ. ನಾನೇ ಕಾಣ್ತಿದ್ದೆ.
ಈಗೀಗ ನಾ ಎಲ್ಲೀ ಕಾಣಒಲ್ಲೆ. ಹಂಗಾಗಿ ಒಮ್ಮೆ, ಮತ್ತೊಮ್ಮೆ ನಿನ್ನ ತಲಿಮ್ಯಾಲೆ ಕೈ ಆಡಿಸಬೇಕಾಗೇದ. ಹಂಗ ಆಡಸ್ಕೊಂತ, ನನ್ನ ಉಗುರಿಗೊಂದು ಚಮತ್ಕಾರಿಕ ಶಕ್ತಿ ಬರಲಿ. ಅದು ನಿನಗ ನೋವಾಗದ ಹಂಗ ನಿನ್ನ ತಲಿ ಸೀಳಲಿ.
ಒಮ್ಮೆ ಇಣುಕಿ ನೋಡಬೇಕಾಗೇದ. ಅದ್ಯಾವ ತಂತಿ ನನ್ನ ಹೆಸರಿದ್ದ ತಂತಿ ಮ್ಯಾಲೆ ಕುಂತು ಶಾರ್ಟ್ ಸರ್ಕಿಟ್ ಮಾಡೇದ ಅಂತ.
ಒಂದು ಕಾಲದಾಗ ಪ್ರೀತಿ ಸ್ಫುರಿಸುತ್ತಿದ್ದ ಕಣಗಳೀಗ ಯಾಕ ಮಂಡ ಆಗ್ಯಾವ? ಎಲ್ಲಿ ಮಾಸಲಾಗ್ಯಾವ. ಅದ್ಯಾಕ ನಾ ಕಾಣದಹಂಗ ಆಗಿದ್ದೇನು?
ಅದ್ಹೆಂಗ ನನ್ನ ಬಗ್ಗೆ ಒಲವು, ಕಾರುಣ್ಯ ಎರಡೂ ಮಾಯವಾಗಿ ಕಾಠಿಣ್ಯ ನೆಲೆಸುವುದು ಸಾಧ್ಯವಾಯ್ತು. ಒಮ್ಮೆ ಇಣುಕಬೇಕಿದೆ ನಿನ್ನ ಮಿದುಳಿನಲ್ಲಿ.
ಸ್ವಚ್ಛ ಭಾರತ ಅಭಿಯಾನದಂತೆ ತಲೆಯಲ್ಲಿರುವ ಅನುಮಾನಗಳನ್ನು ಅಳಸಿಹಾಕಬೇಕು. ಜಗಳಗಳಲ್ಲಿ ಆದ ಅಪಮಾನಗಳನ್ನು ಮರೆಯುವಂತಾಗಬೇಕು. ಉಳಿದೆಲ್ಲವೂ ಮರೆತು ಇಪ್ಪತ್ತು ವರ್ಷಗಳ ಹಿಂದಿನ ಮಿದುಳಿನ ಕೋಶಗಳನ್ನೇ ಜಾಗೃತಗೊಳಿಸಬೇಕು.
ಅದ್ಯಾವಾಗ ಈ ಕೋಶಗಳು ಕಣ್ಮರೆಯಾದವೋ ಗೊತ್ತಿಲ್ಲ. ನನ್ನ ಅಭಿಮಾನ ದುರಹಂಕಾರವಾಗಿ ಬದಲಾಯಿತು. ನನ್ನ ಪ್ರೀತಿ ಹಟವಾಗಿ ಬದಲಾಯ್ತು. ನನ್ನ ಅಸ್ಥೆ, ಅತಿಕಾಳಜಿ, ಉಸಿರುಗಟ್ಟಿಸುವಂತಾಯಿತು. ನಾನು ಇಪ್ಪತ್ತು ವರ್ಷಗಳ ಹಿಂದೆ ಅದೆಷ್ಟು ಪ್ರೀತಿಸುತ್ತಿದ್ದೆನೊ, ಈಗಲೂ ಅಷ್ಟೆ ಪ್ರೀತಿಸ್ತೀನಿ.
ನನ್ನ ತಲೀನೂ ಸೀಳಿ ಒಮ್ಮೆ ನೋಡಬೇಕಾಗೇದ.. ಇವು ಯಾವ ತಂತಿ, ತಂತುಗಳದಾವ.. ಹಂಗ ಬದಲಾಗದಂಗೇ ಅದಾವ.. ಹಿಂಗ ಇಬ್ರ ತಲಿ ಸೀಳಾಕ ಆಗದೇ, ಹೃದಯ ಚೂರು ಮಾಡ್ಕೊಂಡು ಕುಂತೇವಿ..
ಆದರ ಒಮ್ಮೆ... ಒಮ್ಮೆ ಮಾತ್ರ...
......
ರಶ್ಮಿ ಅವರ ಪ್ರಕಟಿತ ಕೃತಿಗಳಲ್ಲಿ ಅಂತರಾಳ (ಕವನ ಸಂಕಲನ), ಅಂಕುರ (ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ ಅನುವಾದ), ಮಿದುಮಾತು, ಮಾತು ಕತಿಯಾದಾಗ, ಈ ಪಿಕ್ ಯಾರ ಕ್ಲಿಕ್ (ಅನುವಾದ, ಬಹುರೂಪಿಗೆ), ಬಿಸಿಲಿನ ಅದೆಷ್ಟೋ ತುಣುಕುಗಳು (ಅಮೃತಾ ಪ್ರೀತಂ ಕವಿತೆಗಳು) ಸೇರಿವೆ. ಅವರು ಮಾಡಿದ ಬರಹ ಮತ್ತು ನಿರೂಪಿಸಿದ ಸರಣಿಗಳೇ ಬಹಳಷ್ಟು ಕೃತಿಗಳಾಗುವಷ್ಟಿದೆ.
ಸರಳ ಸಹೃದಯಿ, ಸಮಾಜಮುಖಿ, ಸಾಧಕಿ ಆತ್ಮೀಯ ರಶ್ಮಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ. 🌷🙏🌷
Happy birthday to household name in Journalism Rashmi S 🌷🌷🌷
ಕಾಮೆಂಟ್‌ಗಳು