ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಮಾತಾ ರಮಾನಂದ


ಶ್ರೀಮಾತಾ ರಮಾನಂದ


ವಿದುಷಿ ಶ್ರೀಮಾತಾ ರಮಾನಂದ ಅವರು ಹೆಸರಾಂತ ಸಂಗೀತಗಾರ್ತಿಯಾಗಿದ್ದಾರೆ.  

ಸೆಪ್ಟೆಂಬರ್ 24, ಶ್ರೀಮಾತಾ ಅವರ ಜನ್ಮದಿನ.  ಬೆಂಗಳೂರಿನಲ್ಲಿರುವ ಇವರು  ಸಂಗೀತ ಕುಟುಂಬದಿಂದ ಬಂದವರು. ತಾಯಿ ವಿದುಷಿ  ಗೀತಾ ರಮಾನಂದ ಅವರು ಉನ್ನತ ದರ್ಜೆಯ ಹೆಸರಾಂತ ವೀಣಾ ಕಲಾವಿದರು.  ಸಹೋದರ ವಿದ್ವಾನ್ ಅದಮ್ಯ ರಮಾನಂದ್ 'ಎ' ಗ್ರೇಡ್ ಮೃದಂಗಂ ಕಲಾವಿದರು.  ತಂದೆ ಪಿ ರಮಾನಂದ್ ಸಂಗೀತದ ಅಭಿಜ್ಞರು.

ಶ್ರೀಮಾತಾ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹಾನ್ ಸಂಗೀತ ಕಲಾವಿದೆ ಡಾ.  ಎಂ. ಎಸ್. ಶೀಲಾ ಅವರಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲದಿಂದ ತರಬೇತಿ ಪಡೆಯುತ್ತಿರುವ ಸೌಭಾಗ್ಯವಂತೆ. ಆಕಾಶವಾಣಿಯ 'ಎ' ಶ್ರೇಣಿಯ ಕಲಾವಿದರಾಗಿರುವ ಶ್ರೀಮಾತಾ ಅವರು ಸಂಗೀತದಲ್ಲಿ ವಿದ್ವತ್ ಸಾಧನೆಯ ಜೊತೆಗೆ ಎಂ. ಎ (ಸಂಗೀತ) ಸಾಧನೆಯನ್ನೂ ಮಾಡಿದ್ದಾರೆ.  ಇದಲ್ಲದೆ ಸಂಗೀತಲೋಕದ ದಿಗ್ಗಜರಾದ ಸಂಗೀತಕಲಾನಿಧಿ ಆರ್ ಕೆ ಶ್ರೀಕಂಠನ್, ಸಂಗೀತಕಲಾನಿಧಿ ನೇದನೂರಿ ಕೃಷ್ಣಮೂರ್ತಿ, ಸಂಗೀತಕಲಾನಿಧಿ ಉಮಯಾಳಪುರಂ ಕೆ ಶಿವರಾಮನ್, ಮಲ್ಲಾಡಿ ಸೂರಿಬಾಬು, ಚಿತ್ರವೀಣಾ ರವಿಕಿರಣ್, ಆರ್ ಎ ರಮಾಮಣಿ, ಎಸ್ ಶಂಕರ್, ಡಿ ಬಾಲಕೃಷ್ಣ ಮುಂತಾದವರ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತ ಬಂದಿದ್ದು ನಿರಂತರವಾಗಿ ತಮ್ಮ ಸಂಗೀತಜ್ಞಾನ ಲೋಕವನ್ನು ವಿಸ್ತರಿಸಿಕೊಳ್ಳುತ್ತ  ಬಂದಿದ್ದಾರೆ.  ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ರ್‍ಯಾಂಕ್ ಗಳಿಕೆಯ  ಸಾಧನೆಗಳಿಂದಲೇ ಹೆಸರಾದ ಶ್ರೀಮಾತಾ ಅವರು  ಎಂ. ಎ (ಸಂಗೀತ), ಎಂ. ಎ (ಇಂಗ್ಲಿಷ್) ಮತ್ತು ಎಂ.ಫಿಲ್ (ಇಂಗ್ಲಿಷ್), ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಗಳಿಸಿರುವ ಮಹತ್ಸಾಧಕಿಯೂ ಆಗಿದ್ದಾರೆ. 

ಶ್ರೀಮಾತಾ ರಮಾನಂದ ಅವರು ಕಳೆದ ಎರಡು  ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಮತ್ತು ಸಂಗೀತ ಗುರುವಾಗಿ ಹೆಸರಾಗಿದ್ದಾರೆ.  ನಾಡಿನಾದ್ಯಂತ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರ ಸಂಗೀತ ಕಚೇರಿಗಳು ಶೋಭಿಸಿವೆ. ಇವರು ವಿಷಯಾಧಾರಿತ ಕಛೇರಿಗಳು, ರಾಗ-ತಾನ-ಪಲ್ಲವಿಗಳು, ಪ್ರಬಂಧಗಳ ಮಂಡನೆ ಮತ್ತು ಸಂಗೀತಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳಿಗೂ ಹೆಸರಾಗಿದ್ದಾರೆ. ಇವುಗಳಲ್ಲಿ ‘ದಾಸ ಸಾಹಿತ್ಯದ ಕಣ್ಮರೆಯಾಗುತ್ತಿರುವ ರೂಪಗಳು: ಸುಳಾದಿಗಳು ಮತ್ತು ಮುಂಡಿಗೆ’, 'ಮೈಸೂರು ವಾಗ್ಗೇಯಕಾರರ ತಿಲ್ಲಾನಗಳು’, 'ನಡೆ ಪಲ್ಲವಿ', 'ಮುತ್ತುಸ್ವಾಮಿ ದೀಕ್ಷಿತರ ರಚನೆಗಳು', 'ದೇವಿ ಕೃತಿಗಳು',  'ಕನಕದಾಸರ ರಚನೆಗಳು' ಮುಂತಾದ ವೈವಿಧ್ಯಗಳಿವೆ.  ಇವರ ಸಂಗೀತ ಕಚೇರಿಗಳು ಈಟಿವಿ  ವಾಹಿನಿ,  ಆಕಾಶವಾಣಿ, ಅಮೃತವರ್ಷಿಣಿ fm ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ. ತಮ್ಮ ಗುರುಗಳೊಂದಿಗೆ ಡಿಡಿ-ಚಂದನ, ಶಂಕರ ಟಿವಿ, ಎಸ್‌ವಿಬಿಸಿ ಅಲ್ಲದೆ  ವಿವಿಧ ವಿಶಿಷ್ಟ  ವೇದಿಕೆಗಳು ಮತ್ತು ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ತಮ್ಮ ತಾಯಿ ವಿದುಷಿ ಗೀತಾ ರಮಾನಂದ  ಅವರ ಉಪನ್ಯಾಸ ಪ್ರಾತ್ಯಕ್ಷಿಕೆಗಳಿಗೂ ಧ್ವನಿ ಬೆಂಬಲ ನೀಡಿದ್ದಾರೆ. ಮಹಾನ್  ಮೃದಂಗ ವಿದ್ವಾಂಸರಾದ ಪದ್ಮವಿಭೂಷಣ ಸಂಗೀತಕಲಾನಿಧಿ ಉಮಯಳ್ಪುರಂ ಶ್ರೀ ಕೆ ಶಿವರಾಮನ್ ಅವರ ಧ್ವನಿಸುರುಳಿ  ‘ಮೃದಂಗ ಚಿಂತಾಮಣಿ’ ಬಿಡುಗಡೆಯಾದ ಸಂದರ್ಭದಲ್ಲಿ, ಅವರೊಂದಿಗೆ ಕಾರ್ಯಕ್ರಮ ನೀಡಿದ ಐವರು ಯುವ ಕಲಾವಿದರಲ್ಲಿ ಒಬ್ಬರಾಗಿದ್ದ ಹೆಗ್ಗಳಿಕೆಯೂ ಶ್ರೀಮಾತಾ ಅವರದ್ದಾಗಿದೆ. 

ಶ್ರೀಮಾತಾ ಅವರು ರಾಜ್ಯ ಮಟ್ಟದ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2008-2017 ಅವಧಿಯಲ್ಲಿ ಇವರು ಸಾಧನಾ ಸಂಗೀತ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬೆಂಗಳೂರಿನ ನಾದ್ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಮನೆಯ ಸಂಸ್ಥೆಯಾದ 'ಸ್ವರವೀಣಾಲಯ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ’ಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇವರು ‘ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌’ನಲ್ಲಿ ಪ್ರೋಗ್ರಾಂ ಅಸೋಸಿಯೇಟ್ ಆಗಿಯೂ ಮಹತ್ವದ ಕೆಲಸ ಮಾಡಿದ್ದರು.   ಅಲ್ಲಿನ ವಿವಿಧ ಕಲಾ ಪ್ರಕಾರಗಳಲ್ಲಿನ ಯೋಜನೆಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ರೇಡಿಯೊ ಮಾಧ್ಯಮವನ್ನು ಬಳಸಿಕೊಂಡು ಮಕ್ಕಳಲ್ಲಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸುವ ‘ಹಾಡು ಹಕ್ಕಿ’ ಕಾರ್ಯಯೋಜನೆ ನಿರ್ವಹಿಸಿದ್ದರು.  ಇವರು ಕಲಾ ಶಿಕ್ಷಣದಲ್ಲಿನ ಯೋಜನೆಗಳು ಮತ್ತು ಕಾರ್ಯಾಗಾರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.  ‘ಹಾಡು ಹಕ್ಕಿ ಹಬ್ಬ’, ‘ಕಲಿ-ಕಲಿಸು’, ‘ಕಲಾಕ್ರೀಡೆ’, ‘ಸ್ವಾನುಭವ ಬೆಂಗಳೂರು’, ‘ಸಂಪ್ರದಾಯ 09’ ಮುಂತಾದ ಹಲವಾರು ಯೋಜನೆಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ. ಇವರು ಕರ್ನಾಟಕ ಗಾನಕಲಾಪರಿಷತ್ತಿನ ಯುವ ಘಟಕದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಶ್ರೀಮಾತಾ ಅವರ ಸಂಗೀತದ ಕುರಿತಾದ ಲೇಖನಗಳು ನಾಡಿನ ಪ್ರಸದ್ಧ ನಿಯತಕಾಲಿಕೆಗಳು ಮತ್ತು ಅಂತರಜಾಲ ತಾಣಗಳಲ್ಲಿ ಪ್ರಕಟಗೊಳ್ಳುತ್ತಿವೆ.

ಸಂಗೀತ ಲೋಕದ ಸಾಧಕಿ ಶ್ರೀಮಾತಾ ರಮಾನಂದ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Srimatha Ramanand 🌷🙏🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ