ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೃಂದಾ ಆಚಾರ್ಯ

ವಿದುಷಿ ವೃಂದಾ ಆಚಾರ್ಯ

ವಿದುಷಿ ವೃಂದಾ ಆಚಾರ್ಯ  ಸಂಗೀತ ಕಲಾವಿದೆ, ಸಂಗೀತ ಶಾಸ್ತ್ರಜ್ಞೆ, ಸಂಗೀತ ಗುರು, ಉಪನ್ಯಾಸಕಿ, ಬಹುಮುಖಿ ಪ್ರತಿಭೆಯಾಗಿ ಹೆಸರಾಗಿದ್ದವರು. ಇಂದು ವೃಂದಾ ಅವರ ಸಂಸ್ಮರಣೆ ದಿನ. 

ಬೆಂಗಳೂರಿನವರಾದ ವೃಂದಾ ಆಚಾರ್ಯ ಅವರು ಬಾಲಪ್ರತಿಭೆಯಾಗಿ ಶಾಲಾ ದಿನಗಳಲ್ಲೇ ಗಾನಕೋಗಿಲೆ ಎಂದು ಎಲ್ಲರಿಂದ‍ ಮೆಚ್ಚುಗೆ ಗಳಿಸಿದ್ದವರು.  ವಿದುಷಿ ಶೈಲಾ ಸುಬ್ರಮಣ್ಯಂ ಅವರಿಂದ ಮೊದಲು ಸಂಗೀತಾಭ್ಯಾಸ ಪಡೆದ ಇವರು ಮುಂದೆ ವಿದುಷಿ ನೀಲಾ ರಾಮಗೋಪಾಲ್ ಅವರಲ್ಲಿ ಪ್ರಬುದ್ಧ ಕಲಾವಿದೆಯಾಗಿ ಬೆಳೆದರು.  ಮೃದಂಗ ವಿದ್ವಾಂಸರಾಗಿ ಖ್ಯಾತರಾದ ಪತಿ ಅರ್ಜುನ್ ಕುಮಾರ್  ಅವರ ಮಾರ್ಗದರ್ಶನವೂ ವೃಂದಾ ಅವರ ಸಂಗೀತ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯಾಗಿತ್ತು.

ಶೈಕ್ಷಣಿಕವಾಗಿಯೂ ದೊಡ್ಡ ಸಾಧನೆ ಮಾಡಿದ ವೃಂದಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಕಾಂ. ನಲ್ಲಿ ಪ್ರಥಮ ರ್‍ಯಾಂಕ್ ಸಾಧನೆಯನ್ನು ಚಿನ್ನದ ಪದಕದೊಂದಿಗೆ ಗಳಿಸಿದ್ದರು.  ಆರ್ಥಿಕ, ವಾಣಿಜ್ಯ ವಿಚಾರಗಳಲ್ಲಿ ಅಪಾರ ಸೇವೆ ನೀಡಿದ್ದ ಇವರು ಜೈನ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತದಲ್ಲಿ ಎಂ. ಎ. ಪದವಿ ಗಳಿಸಿದ್ದ ವೃಂದಾ ಅವರು ಮುಂದೆ ಸಂಗೀತಲೋಕದಲ್ಲಿ ತಮ್ಮನ್ನು ಪೂರ್ಣವಾಗಿ ಬೆಸೆದುಕೊಂಡಿದ್ದರು.

ವೃಂದಾ ಅವರು ಸುಶ್ರಾವ್ಯ, ಶಾಸ್ತ್ರೀಯಬದ್ಧ ಸಂಗೀತ ಕಚೇರಿಗಳಿಗೆ ಹೆಸರಾದಂತೆಯೇ, ಸಂಗೀತ ಪ್ರಾತ್ಯಕ್ಷಿಕೆಗಳಿಗೆ, ಉಪನ್ಯಾಸಗಳಿಗೆ, ಕಾರ್ಯಾಗಾರಗಳಿಗೆ ಪ್ರಸಿದ್ಧರಾಗಿದ್ದರು. ದೇಶ ವಿದೇಶಗಳಲ್ಲಿ ಅವರಿಂದ ಸಂಗೀತ ಕಲಿಯುತ್ತಿದ್ದ ಅಪಾರ ವಿದ್ಯಾರ್ಥಿವೃಂದವಿತ್ತು.  ತಮ್ಮ ಪತಿ ವಿದ್ವಾನ್ ಅರ್ಜುನ್ ಕುಮಾರ್ ಅವರೊಂದಿಗೆ 'ಅನುಭೂತಿ' ಎಂಬ ಸಂಗೀತ ಪ್ರಧಾನ ಸಂಸ್ಥೆ ನಡೆಸುತ್ತಿದ್ದರು.

ಅಷ್ಟೊಂದು ಪ್ರತಿಭಾನ್ವಿತರಾಗಿದ್ದ ವೃಂದಾ ಅವರು 2024 ವರ್ಷದ ಅಕ್ಟೋಬರ್ 7ರಂದು ಇನ್ನೂ 44ನೇ ವಯಸ್ಸಿನಲ್ಲಿ ಕ್ಯಾನ್ಸರ್ ಕಾರಣದಿಂದ ನಿಧನರಾದದ್ದು ಸಂಗೀತ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟ.  ವೃಂದಾ ಆಚಾರ್ಯ ದಿವ್ಯ ಚೇತನಕ್ಕೆ ನಮನ 🌷🙏🌷

On Rememberance Day of Vidushi Vrinda Acharya 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ