ಚೆಲುವಾಂಬೆ
ಚೆಲುವಾಂಬೆ ಎಂಬ ಕವಯಿತ್ರಿಯು ಸು. 1725 ರಲ್ಲಿದ್ದವಳು. ಈಕೆ ಮೈಸೂರು ದೊರೆಯದ ದೊಡ್ಡ ಕೃಷ್ಣರಾಜನ ಮಹಿಷಿ. ದೊಡ್ಡ ಕೃಷ್ಣರಾಜನು ಕ್ರಿ. ಶ. 1713 - 1731 ರವರೆಗೆ ಆಳಿದ ದೊರೆ. ಚೆಲುವಾಂಬೆಯು ಮೈಸೂರಿನ ದಳವಾಯಿಯಾಗಿದ್ದ ದೊಡ್ಡೇಂದ್ರನ ಪುತ್ರ ಕಳಿಲೆ ಕಾಂತರಾಜನ ಪುತ್ರಿ. ವಿದ್ಯಾವತಿಯಾದ ಈಕೆಯು ತನ್ನ ಪತಿಯ ಆಶಯದಂತೆ *ವರನಂದೀ ಕಲ್ಯಾಣ* ಎಂಬ ಕಾವ್ಯವನ್ನು ರಚಿಸಿದ್ದಾಳೆ. ಈ ಗ್ರಂಥವು ತಿರುಪತಿ ವೇಂಕಟರಮಣದೇವರ ಅಂಕಿತದಲ್ಲಿ ಲಿಖಿತವಾಗಿದೆ. ಈ ಕಾವ್ಯವನ್ನು ಚೆಲುವಾಂಬೆಯು ಸಾಂಗತ್ಯದಲ್ಲಿ ಬರೆದಿದ್ದಾಳೆ. ಇದರಲ್ಲಿ ಒಟ್ಟು 881 ಪದ್ಯಗಳಿವೆ. ಇದರ ಕಥೆಯು ಡಿಳ್ಳಿ ಬಾದಶಾಹನ ಮಗಳಾದ ವರನಂದಿಗೂ ಮೇಲುಕೋಟೆ ಚೆಲುವರಾಯಸ್ವಾಮಿಗೂ ನಡೆದ ವಿವಾಹದ ವರ್ಣನೆಯನ್ನು ಒಳಗೊಂಡಿದೆ. ಈ ಕಾವ್ಯದಲ್ಲಿ ಸಾಕ್ಷಾತ್ ಸತ್ಯಭಾಮೆಯೇ ವರನಂದಿಯಾಗಿ ಹುಟ್ಟಿದಂತೆ ವರ್ಣಿತವಾಗಿದೆ. ವರನಂದಿಯನ್ನು ವರ್ಣಿಸಿದ ಪದ್ಯವೊಂದನ್ನು ಕೆಳಗೆ ನೀಡಲಾಗಿದೆ :
*ವರನಂದಿಯ ಸೌಂದರ್ಯ*ನೋಡುವ ನೈದಿಲುಗಳೊ ಕಂಗಳೊ ಮಾ l
ತಾಡುವ ಮುಕುರವೊ ಮೊಗವೋ l
ಪಾಡುತಿರುವ ಪೊಂಬಣ್ಣದ ಶಂಖವೊ l
ಗಾಡಿಕಾತಿಯ ನುಣ್ಗೊರಲೋll
ನಡೆವೆಳಮಿಂಚೊ ಪೊಂಜೆಳೆಮಯ್ಯೊ ಬಿಡದುಸಿ |
ಮೊಗದಾವರೆಗಂಪ ಕೊಳಲೆಂದು ಬಂದು ಸಂ |
ಸುಗಿದು ಪೆಱಗೆ ನಿಂದ ತುಂಬಿವಿಂಡೆಂಬಂತೆ |
ಬಗೆಗೆ ಬಂದುದು ಮುಡಿಯವಳ ll
ಕವಯಿತ್ರಿ ರಾಣಿ ಚೆಲುವಾಂಬೆಯು ವರನಂದೀ ಕಲ್ಯಾಣ ಮಾತ್ರವಲ್ಲದೆ ವೇಂಕಟಾಚಲಮಾಹಾತ್ಮ್ಯಲಾಲಿಪದ (203 ಲಾಲಿಪದಗಳಿವೆ) , ಅಲರ್ಮೇಲುಮಂಗೆ ಲಾಲಿಪದ(35 ಲಾಲಿಪದಗಳಿವೆ), ತುಲಾಕಾವೇರೀ ಮಾಹಾತ್ಮ್ಯ ಟೀಕೆ - ಎಂಬ ಸಾಹಿತ್ಯಗಳನ್ನೂ ರಚಿಸಿದ್ದಾಳೆ. ತುಲಾಕಾವೇರೀ ಮಾಹಾತ್ಮ್ಯ ಟೀಕೆಯು ಆಗ್ನೇಯಪುರಾಣೋಕ್ತವಾದ ತುಲಾಕಾವೇರೀ ಮಾಹಾತ್ಮ್ಯಕ್ಕೆ ಬರೆದ ಗದ್ಯರೂಪವಾದ ಕನ್ನಡ ವ್ಯಾಖ್ಯಾನ. ಇದರಲ್ಲಿ 30 ಅಧ್ಯಾಯಗಳಿವೆ. ಈ ಟೀಕಾ ಗ್ರಂಥಕ್ಕೆ ಚೆಲುವಾಂಬಿಕಾವಾಣೀವಿಲಾಸ ಎಂಬ ಹೆಸರೂ ಇದೆ.
ಲಾಲಿ ಪದಗಳನ್ನು ಸಂಗೀತಶಾಸ್ತ್ರವು ದೇಶೀಯಾದ ವಿಪ್ರಕೀರ್ಣಗಳ ಗುಂಪಿಗೆ ಸೇರಿದ ಪ್ರಬೇಧವೆಂದು ಹೇಳಿ ಲಕ್ಷಿಸಿವೆ. ಇಂತಹ ಪ್ರಬಂಧಗಳು ಪ್ರಾಚೀನಪ್ರಸಿದ್ಧವಾದವು.
(ಸಂಗ್ರಹ : ಆರ್. ನರಸಿಂಹಾಚಾರ್ಯರ "ಕರ್ನಾಟಕ ಕವಿಚರಿತೆ ಭಾಗ-3 - ಪುಸ್ತಕದಿಂದ)
ಕೃಪೆ: Rohini Subbarathnam 🌷🙏🌷
ಕಾಮೆಂಟ್‌ಗಳು