ಸುಮಾ ಸತೀಶ್
ಸುಮಾ ಸತೀಶ್ ಪ್ರತಿಭಾನ್ವಿತ ಬರಹಗಾರ್ತಿ, ರಂಗ ಕಲಾವಿದೆ, ನಿರೂಪಕಿ ಮತ್ತು ಕ್ರಿಯಾಶೀಲ ಸಂಘಟನಾ ಕಾರ್ಯಕರ್ತರು.
ಅಕ್ಟೋಬರ್ 12, ಸುಮಾ ಅವರ ಜನ್ಮದಿನ. ಅವರು ಜನಿಸಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಚಿಕ್ಕಮಾಲೂರು ಗ್ರಾಮದಲ್ಲಿ. ತಂದೆ ಶಂಕರ್. ತಾಯಿ ನಾಗಲಕ್ಷ್ಮಿ. ಸುಮಾ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸುಮಾ ಅವರಿಗೆ ಬಾಲ್ಯದಿಂದಲೂ ತಂದೆಯವರಿಂದ ಸಾಹಿತ್ಯಾಸಕ್ತಿಗೆ ಪ್ರೋತ್ಸಾಹ ಸಂದಿತು. ಚಂದಮಾಮ, ಬಾಲಮಿತ್ರ, ಬೊಂಬೆಮನೆ ಓದಿಕೊಂಡೇ ಕಲ್ಪನೆಗಳನ್ನು ಗರಿಗೆದರಿಸಿಕೊಂಡರು. ಹಲವಾರು ಪತ್ರಿಕೆಗಳಲ್ಲಿ ಇವರ ಕವಿತೆಗಳು ಮತ್ತು ಬಹುಮುಖಿ ಬರಹಗಳು ಮೂಡಿಬಂದಿವೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ತಾಪತ್ರದ ಸಂಪಾದಕಿಯಾಗಿದ್ದಾರೆ.
ಸುಮಾ ಅವರ ಪ್ರಕಟಿತ ಕೃತಿಗಳಲ್ಲಿ ‘ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು', 'ಅವನಿ' ಕವನ ಸಂಕಲನ, ‘ವಚನ ಸಿರಿ' ಆಧುನಿಕ ವಚನಗಳು, 'ಹಾದಿಯಲ್ಲಿನ ಮುಳ್ಳುಗಳು' ವೈಚಾರಿಕ ಲೇಖನ ಸಂಕಲನ, 'ಬಳಗ ಬಳ್ಳಿಯ ಸುತ್ತ' ಸಂಪಾದಿತ ಕೃತಿ, 'ಶೂನ್ಯದಿಂದ ಸಿಂಹಾಸನದವರೆಗೆ' ವ್ಯಕ್ತಿ ಚಿತ್ರಣಗಳಿವೆ. ‘ಭಾವಯಾನ' ಸಂಪಾದಿತ ಕೃತಿ, 'ಮನನ -ಮಂಥನ' ವಿಮರ್ಶಾ ಬರೆಹಗಳು, 'ವಚನ ವಿಹಾರ' ಆಧುನಿಕ ವಚನಗಳು, ಕರ್ನಾಟಕದ ಅನನ್ಯ ಸಾಧಕಿಯರು - ಭಾಗ -6 ‘ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ' ಕೃತಿಗಳು ಮುಂತಾದ ವೈವಿಧ್ಯಗಳಿವೆ.
ಸುಮಾ ಸತೀಶ್ ಅವರು ಪ್ರಸ್ತುತ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿದ್ದಾರೆ. ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಲೇಖಕಿ ಪತ್ರಿಕೆಯ ಸಹ ಸಂಪಾದಕಿಯಾಗಿದ್ದಾರೆ. ‘ನಿಮ್ಮ ವೈಶ್ಯವಾರ್ತೆ' ಪತ್ರಿಕೆಯ ಉಪ ಸಂಪಾದಕಿಯಾಗಿದ್ದಾರೆ. ಕಿರುನಾಟಕ, ಏಕಪಾತ್ರಾಭಿನಯಗಳಲ್ಲಿ ಇವರಿಗೆ ಅಪಾರ ಆಸಕ್ತಿ. ರಚನೆ, ನಿರ್ದೇಶನ ಹಾಗೂ ಅಭಿನಯ ಎಲ್ಲಕ್ಕೂ ಇವರು ಮುಂದು. ಇವರ ಹಲವು ಕಿರುನಾಟಕಗಳ ಪ್ರದರ್ಶನಕ್ಕೆ ಬಹುಮಾನ ದೊರೆತಿದೆ. ವೈಶ್ಯ ಲಗ್ನಂ ಲಾಂಛನದಲ್ಲಿ ಸಾಮಾಜಿಕ ಸಮಸ್ಯೆಗಳು ಮತ್ತು ಅದರ ನಿವಾರಣೆಗಾಗಿ ಹಲವು ಕಿರುಚಿತ್ರಗಳಿಗೆ ಕಥೆ- ಚಿತ್ರಕಥೆ ಬರೆದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನೇಕ ಕಿರು ಹಾಸ್ಯ ವೀಡಿಯೋಗಳ ಚಿತ್ರಣ ಮಾಡಿ ತಮ್ಮದೇ YouTube Channel ಮಾಡಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತ ಬಂದಿದ್ದಾರೆ.
ಸುಮಾ ಸತೀಶ್ ಅವರಿಗೆ ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನಿಂದ ಮಿರ್ಚಿ ಮಸಾಲೆ ಮತ್ತು ಇತರ ನಗೆ ನಾಟಕಗಳು ಕೃತಿಗೆ ದತ್ತಿನಿಧಿ ಪ್ರಶಸ್ತಿ, 'ಹಾದಿಯಲ್ಲಿನ ಮುಳ್ಳುಗಳು' ವೈಚಾರಿಕ ಲೇಖನ ಸಂಕಲನಕ್ಕೆ ಡಾ. ಹೇಮಾವತಿ ಸೊನೊಳ್ಳಿ ರಾಜ್ಯಮಟ್ಟದ ದತ್ತಿ ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ಪ್ರಶಸ್ತಿ ಅಲ್ಲದೆ ಅನೇಕ ಸಂಘ ಸಂಸ್ಥೆಗಳ ವೇದಿಕೆಗಳಲ್ಲಿ ಬಹುಮಾನ ಗೌರವಗಳು ಸಂದಿವೆ. 2023 ರ ಮಾರ್ಚ್ ತಿಂಗಳ ಗೃಹ ಶೋಭಾ ಮಾಸಿಕ ಪತ್ರಿಕೆಯ ಮಹಿಳಾ ವಿಶೇಷ ಸಂಚಿಕೆಯಲ್ಲಿ ಇವರ ವ್ಯಕ್ತಿ ಪರಿಚಯ ಪ್ರಕಟಗೊಂಡಿದೆ.
ಸುಮಾ ಸತೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Suma Satish 🌷🌷🌷
ಕಾಮೆಂಟ್‌ಗಳು