ಪಿ. ಆರ್. ಜಯಲಕ್ಷಮ್ಮ
ಪಿ. ಆರ್. ಜಯಲಕ್ಷಮ್ಮ
ಪಿ. ಆರ್. ಜಯಲಕ್ಷಮ್ಮ ಅವರು ಮಹಾನ್ ಸಮಾಜ ಸೇವಕಿ ಮತ್ತು ಬರಹಗಾರ್ತಿ. ಇವರು ಮಹಾನ್ ಪತ್ರಿಕೋದ್ಯಮಿ 'ತಾಯಿನಾಡು' ಪತ್ರಿಕೆಯ ಪಿ. ಆರ್. ರಾಮಯ್ಯನವರ ಪತ್ನಿ. ಅರ್ಥ ಶಾಸ್ತ್ರಜ್ಞರಾದ ಪಿ. ಆರ್. ಬ್ರಹ್ಮಾನಂದ, ವಿಜ್ಞಾನಿ ಪಿ. ಆರ್. ವಿಶ್ವನಾಥ್ ಮತ್ತು ಕಲಾವಿದೆ - ಪ್ರಾಧ್ಯಾಪಕಿ ರಾಮೇಶ್ವರಿ ವರ್ಮಾ ಇವರ ಮಕ್ಕಳು.
ಪಿ. ಆರ್. ಜಯಲಕ್ಷಮ್ಮ ಅವರು 1908 ನವೆಂಬರ್ 18 ರಂದು ಹಾಸನದಲ್ಲಿ ಜನಿಸಿದರು. ಕಾವ್ಯಗಾಯನ ಸ್ತೋತ್ರಮಂಜರಿ - ಸಂಪಾದನೆ, ಬದರೀಯಾತ್ರೆ (ಪ್ರವಾಸ ಸಾಹಿತ್ಯ), ಮೂಢನಂಬಿಕೆಗಳು ಇವರ ಕೃತಿಗಳು.
ನಿರ್ಗತಿಕ ಹೆಣ್ಣುಮಕ್ಕಳಿಗೆಂದು ಪ್ರಾರಂಭಿಸಿದ ಅಬಲಾಶ್ರಮ, ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಡೆಸುತ್ತಿದ್ದ ಗೋಕುಲಂ ಗಾರ್ಡನ್ ಶಾಲೆ, ಅಶಕ್ತ ಪೋಷಕ ಸಭಾ ಇವು ಕೆಲವೊಂದು ಜಯಲಕ್ಷಮ್ಮನವರು ಕಟ್ಟಿದ ಸಂಘ-ಸಂಸ್ಥೆಗಳು. ಅವರು ಎಷ್ಟೋ ಬಾರಿ ಈ ಸಂಸ್ಥೆಗಳಿಗೆ ತಮ್ಮ ಸ್ವಂತ ಸಂಪತ್ತನ್ನು ವಿನಿಯೋಗಿಸಿ ಮನೆಯವರ ವಿರೋಧವನ್ನು ಕಟ್ಟಿಕೊಂಡದ್ದೂ ಇತ್ತು. ಅಲ್ಲಿನ ಮಕ್ಕಳು, ಹೆಣ್ಣುಮಕ್ಕಳು ಅವರಿಗೆ ತಮ್ಮ ಸ್ವಂತದವರೆಂಬ ಭಾವನೆಯಿತ್ತು. ಅವರು ಬಡವ ಬಲ್ಲಿದರೆಂಬ ಬೇಧವಿಲ್ಲದೇ ಎಲ್ಲರನ್ನೂ ಪ್ರೀತಿಸಿದರು. ಅವರು ಎಲ್ಲರಿಗೂ ಆಪ್ತ 'ಅಕ್ಕಮ್ಮ' ಎನಿಸಿದ್ದರು
ರಾಮಯ್ಯನವರು ರಾಜಕೀಯದಲ್ಲಿ ಕ್ರಿಯಾಶೀಲರಾಗಿದ್ದಾಗ ಜಯಲಕ್ಷಮ್ಮನವರು ತಾವಿದ್ದ ಬಸವನಗುಡಿ ಪ್ರದೇಶದ ಕೊಳೆಗೇರಿಯಲ್ಲಿ ಅಲ್ಲಿನ ಮಕ್ಕಳಿಗೆಂದು ಶಾಲೆಯೊಂದು ಪ್ರಾರಂಭಿಸಿದರು. ತಮ್ಮ ನಿರಂತರ ಭೇಟಿ, ಮತ್ತು ಸಂಪರ್ಕಗಳಿಂದ ಜನರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕಳುಹುವಂತೆ ಮಾಡುವುದರಲ್ಲಿ ಜಯಶೀಲರಾದರು. ನಂತರ ಈ ಶಾಲೆಯಲ್ಲಿ ಮಕ್ಕಳು ಕ್ರಮೇಣ ಮುಂದುವರಿದು ಪ್ರಾಥಮಿಕ ವಿದ್ಯಾಭ್ಯಾಸದಿಂದ ಮೇಲಿನ ಹಂತಕ್ಕೆ ಮುಂದುವರಿಯಲೂ ವ್ಯವಸ್ಥೆ ಮಾಡಲಾಯಿತು.
ಜಯಲಕ್ಷಮ್ಮ ಅವರಿಗೆ ಕರ್ನಾಟಕ ಸರ್ಕಾರದಿಂದ ‘ಸಮಾಜ ಸೇವಾ ಪ್ರಶಸ್ತಿ', ಕರ್ನಾಟಕ ಸರ್ಕಾರ ಮಕ್ಕಳ ಮಹಿಳಾ ಕ್ಷೇಮಾಭಿವೃದ್ದಿವತಿಯಿಂದ ರಾಜ್ಯ ಪ್ರಶಸ್ತಿ, ಬಸವನಗುಡಿ ಅಬಲಾಶ್ರಮದಿಂದ ಬಂಗಾರದ ಪದಕಗಳು ಸಂದವು. ಬೆಂಗಳೂರು ನಗರದ ಕಾರ್ಪೊರೇಟರ್, ಬೆಂಗಳೂರು ನಗರದ ಉಪಮೇಯರ್, ಅಖಿಲ ಕರ್ನಾಟಕ ಮಕ್ಕಳ ಕೂಟದ ಉಪಾಧ್ಯಕ್ಷಿಣಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯಲ್ಲಿ ಅಧ್ಯಕ್ಷೆಯಾಗಿದ್ದು ಎಲ್ಲ ಗೌರವ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.
ಜಯಲಕ್ಷಮ್ಮನವರು 1991ರ ಏಪ್ರಿಲ್ 20 ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮನ🌷🙏🌷
On the birth anniversary of Great Social worker P. R. Jayalakshsmma 🌷🙏🌷
ಕಾಮೆಂಟ್‌ಗಳು