ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೊಬಗಿನ ಸೆರೆಮನೆ


ಸೊಬಗಿನಾ ಸೆರೆಮನೆಯಾಗಿಹೆ ನೀನು
ಚೆಲುವೇ.....ಸರಸತಿಯೇ....
ಅದರಲಿ ಸಿಲುಕಿದಾ ಸೆರೆಯಾಳಾನು
ನನ್ನೆದೆಯಾರತಿಯೇ...... 

ನಿನ್ನೆಳೆ ಮೊಗದಲಿ ನಸುನಗೆಯಾಗಿರೆ ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ ಹೂವಾಗಿರುವುದು ನನಗಿನ್ನೊಂದಾಸೆ...... 

ತಾವರೆ ಬಣ್ಣದ ನಿನ್ನಾ ಹಣೆಯಲಿ ಕುಂಕುಮವಾಗಿರಲೆನಗಾಸೆ
ಬಳ್ಳಿಯಲೇಳಿಪ ನಿನ್ನಾ ಕೈಯ್ಯಲಿ ಹೊಂಬಳೆಯಾಗಿರಲೆನಗಾಸೆ
ಪದ್ಮವ ಮುಸುಕಿದ ರೇಸಿಮೆಯಂತಿಹ ಸೀರೆಯ ನಿರಿಯಾಗಿರುವಾಸೆ
ಮನವನು ಸೆಳೆಯುವ ನಿನ್ನಯ ನಡುವಿಗೆ ಕಟಿಬಂಧನವಾಗಿರುವಾಸೆ....

ನಿನ್ನಾ ಕೈಯ್ಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ
ನಿನ್ನೊಳು ನಾನು ನನ್ನೊಳು ನೀನು ಪ್ರೇಮದಿ ಲಯವಾಗುವುದಾಸೆ
ಚೆಲುವೆ...ಸರಳೆ...ಮುದ್ದಿನ ಹೆಣ್ಣೆ ನಿನ್ನವನಾನಾಗಿರುವಾಸೆ
ಇನ್ನೇನುಸುರಲಿ ಕಾಮನ ಕನ್ನೇ ನನಗಿನ್ನೇನೇನೋ ಆಸೆ........

ಸಾಹಿತ್ಯ: ಕುವೆಂಪು


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ