ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾಲಿಂಗಮ್


 ಟಿ. ಅರ್. ಮಹಾಲಿಂಗಮ್


ಟಿ. ಅರ್. ಮಹಾಲಿಂಗಮ್ ಕರ್ನಾಟಕ ಸಂಗೀತಪ್ರಪಂಚದಲ್ಲಿ ನವಪರಂಪರೆಯನ್ನು ಸ್ಥಾಪಿಸಿದ ಕಲಾವಿದರು. ಅತ್ಯಂತ ಸರಳ ವಾದ್ಯವಾದ ಕೊಳಲನ್ನು ತಮ್ಮ ಅದ್ವಿತೀಯ ವಾದನಕೌಶಲದಿಂದ ಪರಮ ಸಂಕೀರ್ಣ ವಾದ್ಯದ ಅಂತಸ್ತಿಗೆ ಏರಿಸಿದ ಯುಗಪುರುಷರು. ಇಂದು ಈ ಮಹಾನ್ ಸಂಗೀತಗಾರನ ಸಂಸ್ಮರಣೆ ದಿನ.

ಮಹಾಲಿಂಗಮ್ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಿಡಮರುದೂರು ಗ್ರಾಮದಲ್ಲಿ 1926ರ ನವೆಂಬರ್ 6ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯರ್. ಜನ, ಬಾಲಕ ಮಹಾಲಿಂಗಮ್ ಅನ್ನು ಮಾಲಿ ಎಂದು ಕರೆಯುತ್ತಿದ್ದರು.‍

ತಿರುವಿಡಮರುದೂರು ನಾಗಸ್ವರಕ್ಕೆ ಪ್ರಸಿದ್ಧವಾದ ಗ್ರಾಮ. ಆ ದಿನಗಳ ಸಂಪ್ರದಾಯಾನುಸಾರ ಎಳೆಯ ಮಾಲಿಯನ್ನು ಪ್ರಾಥಮಿಕ ಶಿಕ್ಷಣ ಮತ್ತು ಹಾಡುಗಾರಿಕೆ ಕಲಿಯಲು ಸೇರಿಸಲಾಯಿತು. ಆದರೆ ಯಾವುದೇ ತೆರನಾದ ದಿಗ್ಬಂಧನಕ್ಕೆ ಒಳಪಡದ ಈ ಎಳೆ ಜೀವ ಶಾಲೆಗೆ ಶರಣು ಹೊಡೆಯಿತು. ಗಾಯನಕ್ಕೆ ಮಂಗಳ ಹಾಡಿತು. ಸಂಪ್ರದಾಯದ ಸಂಕೋಲೆ ಇದನ್ನು ಬಂಧಿಸಲಾರದಾಗಿತ್ತು. ಈ ಚೇತನ ಅವ್ಯಕ್ತವಾದ ಬೇರಾವುದೋ ಅನುಭವಕ್ಕಾಗಿ ಸದಾ ತುಡಿಯುತ್ತಿತ್ತು.

ತುಂಬುಸಂಸಾರ. ಹಿರಿಯ ಮಕ್ಕಳು ಸಂಗೀತದ ಸರಳೆ ಕೂಗುವುದು, ಗಮಕ ಕಲಿಯುವುದು ಮತ್ತು ಸಾಹಿತ್ಯ ಉರುಹೊಡೆಯುವುದು ಮಾಲಿಯ ಕಿವಿಗಳ ಮೇಲೆ ಅಯಾಚಿತವಾಗಿ ಬೀಳುತ್ತಿದ್ದುವು. ಯಾರೊ ಊದುತ್ತಿದ್ದ ಕೊಳಲು ಈ ಅಣುಗನನ್ನು ಆಕರ್ಷಿಸಿತು. ಇವನೂ ಅದನ್ನು ಎತ್ತಿಕೊಂಡು ಗಾಳಿ ಊದಿದ- ಅದರಿಂದ ಜೀವನಾದ ಹೊಮ್ಮಿತು. ಹೀಗೆ ಮಹಾಲಿಂಗಮ್ ಕೊಳಲನ್ನು ತಮ್ಮ ಕಲಾ ಮಾಧ್ಯಮವಾಗಿ ಆಯ್ದದ್ದು ಐದರ ಎಳೆ ಹರೆಯದಲ್ಲಿ. ಇಲ್ಲಿಂದ ಮುಂದಕ್ಕೆ ಇವರ ಸಂಗೀತ ವ್ಯಕ್ತಿತ್ವವನ್ನು ರೂಪಿಸಿದ ಪ್ರಭಾವಗಳೆಂದರೆ ಕೇಳ್ಮೆ, ಶಾಸ್ತ್ರಗ್ರಂಥಗಳ ಅಧ್ಯಯನ ಮತ್ತು ತಂದೆಯ ಕಟ್ಟು ನಿಟ್ಟು ನಿರ್ದೇಶನ.

ಮಹಾಲಿಂಗಮ್ ಅವರ ಪ್ರಥಮ ಸಾರ್ವಜನಿಕ ಸಂಗೀತ ಕಛೇರಿ ಮದ್ರಾಸಿನ ತ್ಯಾಗರಾಜೋತ್ಸವದಲ್ಲಿ ಏರ್ಪಟ್ಟಿತ್ತು. ಆಗ ವಯಸ್ಸು ಕೇವಲ ಏಳು ವರ್ಷ. ಆ ಸಭೆಯಲ್ಲಿ ಹಾಜರಿದ್ದ ಹಿರಿಯ ಸಂಗೀತ ವಿದ್ವಾಂಸರೊಬ್ಬರು ಈ ಬಾಲಕನ ಅಸಾಧಾರಣ ಪ್ರತಿಭೆಗೆ ಮನಸೋತು ಈತನಿಗೆ ಶಾಲು ಹೊದಿಸಿ ಆಶೀರ್ವದಿಸಿದರು.

ಅಂದಿನ ವೇಣುವಾದನ ಕ್ರಮವೆಂದರೆ ತಗ್ಗುಶ್ರುತಿ. ಸಹಜವಾಗಿಯೇ ಈ ವಾದ್ಯ ಇತರ ನಾಜೂಕು ವಾದ್ಯಗಳಾದ ವೀಣೆ, ಪಿಟೀಲು, ನಾಗಸ್ವರ ಮುಂತಾದವುಗಳ ಜೊತೆ ಹೋಲಿಸಿದಾಗ ಯಾವ ಸ್ಥಾನವನ್ನೂ ಪಡೆದಿರಲಿಲ್ಲ. ಇಂಥ ಸಮಯದಲ್ಲಿ ಮಹಾಲಿಂಗಮ್ ವೇಣುವಾದನದಲ್ಲಿ ಒಂದು ಕ್ರಾಂತಿಯನ್ನೇ ಸಾಧಿಸಿದರು. 4 ರಿಂದ 5.5 ಮನೆವರೆಗಿನ ತಾರಶ್ರುತಿಯ ಕೊಳಲನ್ನು ಅವರು ತಮ್ಮ ಮಾಧ್ಯಮವಾಗಿ ಆಯ್ದರು.
ಅವರು ಕೊಳಲೆತ್ತಿ ಕೇವಲ ಶ್ರುತಿ ಹಿಡಿದರೆ ಸಾಕು ರಸಿಕರಲ್ಲಿ ಆನಂದೋತ್ಸಾಹ ತುಳುಕುತ್ತಿತ್ತು. ಅದರ ಶ್ರುತಿಶುದ್ಧತೆಯಿಂದ, ಗಾತ್ರದಿಂದ ಅಖಂಡತೆಯಿಂದ ಮತ್ತು ನಾದಮಾಧುರ್ಯದಿಂದ, ಸಾಹಿತ್ಯ ನುಡಿಸುವಾಗ ರಸಿಕರು ಪದಪುಂಜಗಳನ್ನು ವಿದ್ಯುಕ್ತವಾಗಿ ಬೇರ್ಪಡಿಸಿಕೊಂಡು ಸಂಗೀತರಸದ ಜೊತೆಗೆ ಸಾಹಿತ್ಯ ಸೌಂದರ್ಯವನ್ನೂ ಸವಿಯಬಹುದಾಗಿತ್ತು. ಯಾವುದೇ ರಾಗ ಆಯ್ದುಕೊಂಡರೂ ಅದರ ಆಂತರಿಕ ಸೌಂದರ್ಯ, ರಾಚನಿಕ ಭವ್ಯತೆ ಮತ್ತು ಕೇಳಿ ಅರಿಯದ ಅದರ ಒಂದು ಮುಖವನ್ನು ಪ್ರದರ್ಶಿಸುತ್ತಿದ್ದುದು ಅವರ ಹಿರಿಮೆ.

ಮಹಾಲಿಂಗಮ್ ಸಂಗೀತ ಪ್ರಪಂಚದಲ್ಲಿ ಅದ್ವಿತೀಯ ಯುಗಪುರುಷರಾಗಿ ರಾರಾಜಿಸುತ್ತಿದ್ದಾಗಲೇ ವ್ಯಕ್ತಿ ಮಟ್ಟದಲ್ಲಿ ತೀವ್ರ ಏಕಾಂಗಿತ್ವದಿಂದ ನವೆಯುತ್ತಿದ್ದರು: "ತಮ್ಮ ಯಾವ ಕಚೇರಿಯಲ್ಲಿಯೂ ಪರಿಪೂರ್ಣತೆ ಇರುವುದು ಸಾಧ್ಯವಾಗಿಲ್ಲ, ತಮ್ಮಲ್ಲಿ ಪುಂಖಾನುಪುಂಖವಾಗಿ ಪ್ರವಹಿಸುವ ಸಮಸ್ತ ಭಾವನೆಗಳಿಗೂ ಅಭಿವ್ಯಕ್ತಿ ಕೊಡಲಾಗಿದಿರುವುದು ತಮ್ಮ ಮಹಾವೈಫಲ್ಯ. ಆದ್ದರಿಂದ ತಾವು ಸಾಮಾನ್ಯರಲ್ಲಿ ಕೇವಲ ಸಾಮಾನ್ಯ ವ್ಯಕ್ತಿ" ಎನ್ನುತ್ತಿದ್ದರು. ಜಗತ್ತೆಲ್ಲ ಇವರನ್ನು ಜೀನಿಯಸ್ ಎಂದು ಕೊಂಡಾಡುತ್ತಿದ್ದಾಗ ಇವರು ಮಾತ್ರ ಮುಗ್ಧ ಮಗುವಿನಂತೆ ತಾವು ಏನೂ ಅಲ್ಲ ಎಂದೇ ಸಾಧಿಸುತ್ತಿದ್ದರು.

ತತ್ತ್ವಶಾಸ್ತ್ರ, ಅನುಭಾವ ಮುಂತಾದ ಅಮೂರ್ತ ವಿಚಾರ ಚಿಂತನೆ ಗ್ರಂಥ ವಾಚನ, ಸ್ನೇಹಿತರೊಡನೆ ಸಂವಾದ, ಕ್ರಿಕೆಟ್ ಕ್ರೀಡಾವಿಮರ್ಶೆ ಮುಂತಾದವು ಮಾಲಿಯವರ ಪ್ರಿಯಹವ್ಯಾಸಗಳಾಗಿದ್ದವು. ಇವರ ಖಾಸಗಿ ಪಿಟೀಲುವಾದನ ಆಲಿಸಿರುವ ಅನೇಕ ಪರಿಣತರು ಇವರು ಪಿಟೀಲಿನಲ್ಲಿಯೂ ಒಬ್ಬ ಜೀನಿಯಸ್ ಆಗಿದ್ದರು ಎನ್ನುತ್ತಾರೆ. "ಬದುಕಿನಲ್ಲಿ ನಾನು ಎಲ್ಲವನ್ನೂ ಅವನ ವಶಕ್ಕೆ ಒಪ್ಪಿಸಿ ಬಿಟ್ಟಿದ್ದೇನೆ" ಎಂಬುದು ಮಹಾಲಿಂಗಮ್ ಅವರ ನಿಲುವಾಗಿತ್ತು.

ಯೌವನೋತ್ತರ ದಿನಗಳಲ್ಲಿ ಮಹಾಲಿಂಗಮ್ ಸಂಗೀತದಿಂದ ದೂರವಾದರೋ ಎನ್ನುವ ಭಾವನೆ ರಸಿಕರಲ್ಲಿ ಮೂಡುವಂತೆ ಸನ್ನಿವೇಶಗಳು ಮರುಕಳಿಸುತ್ತಿದ್ದುವು. ಕಾರ್ಯಕ್ರಮಗಳನ್ನು ಕೊನೆಗಳಿಗೆಯಲ್ಲಿ ರದ್ದು ಗೊಳಿಸುವುದು, ತಡವಾಗಿ ಬಂದು ವೇದಿಕೆಯ ಮೇಲೆ ಹೊಸ ಪ್ರಯೋಗಗಳನ್ನು ಎತ್ತಿಕೊಳ್ಳುವುದು, ಸಾಹಿತ್ಯವನ್ನು ಮರೆತು ಕೇವಲ ರಾಗಭಾವದ ಮೇಲೆ ಪುಂಗಿ ಊದುವುದು ಇತ್ಯಾದಿ. ಇವು ಅಹಂಕಾರದ ಪ್ರಕಟಿತ ರೂಪಗಳಲ್ಲ. ಬದಲು ಒಬ್ಬ ಮಹಾಕಲಾವಿದನ ನೆಲೆಗಾಣದ ಅಲೆತದ ಲಕ್ಷಣಗಳು ಎಂಬುದು ರಸಿಕರಿಗೆ ಚೆನ್ನಾಗಿ ತಿಳಿಯುತ್ತಿತ್ತು. ಹೀಗಾಗಿ ಮಾಲಿ ಏನು ಮಾಡಿದ್ದರೂ ಅವನ್ನು ಜನ ತಾಳ್ಮೆಯಿಂದ ಸಹಿಸುತ್ತಿದ್ದರು. ಅವರಿಗೆ ಲಹರಿ (ಮೂಡ್) ಎಂದು ಬಂದೀತು, ಬಂದಾಗ ಎಂಥ ದೈವಿಕ ನಾದ ಹೊಮ್ಮೀತು, ಆಗ ತಮಗೆ ಎಂಥ ಕೃತಾರ್ಥಭಾವ ಲಭಿಸೀತು ಎಂದು ಜನ ವಿಶ್ವಾಸದಿಂದ ಕಾಯುತ್ತಿದ್ದರು. ಮಾಲಿ ಕೊಳಲೆತ್ತಿದಾಗ - ಅವರ ತೀರ ಕೊನೆಯ ದಿನಗಳಲ್ಲೂ ಆಗ ಅವರು ಕೈ ಮೂಳೆ ಮುರಿತದ ನೋವಿನಿಂದ ನರಳುತ್ತಿದ್ದರೂ - ಈ ವಿಶ್ವಾಸ ಹುಸಿ ಆಗಲಿಲ್ಲ. 1985ರ ದಸರಾ ಸಂಗೀತೋತ್ಸವದ ಸಂದರ್ಭದಲ್ಲಿ ಮೈಸೂರು ಅರಮನೆಯ ದರ್ಬಾರ್ ಸಭಾಂಗಣದಲ್ಲಿ ನೀಡಿದ ಕಚೇರಿಯೇ ಕೊನೆಯ ಪೂರ್ಣಾವಧಿ ಬೈಠಕ್.

ದೇಶವಿದೇಶಗಳಲ್ಲಿ ಮಹಾಲಿಂಗಮ್ ಖ್ಯಾತನಾಮರು. ಇವರಿಗೆ ಬಂದ ಪ್ರಶಸ್ತಿ ಪುರಸ್ಕಾರಗಳು ಅವೆಷ್ಟೋ. 1986ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಅಯಾಚಿತವಾಗಿ ಬಂದಾಗ, ಈ ಹಿಂದೆ ಇತರ ಹಲವು ಪ್ರಶಸ್ತಿಗಳನ್ನು ತಿರಸ್ಕರಿಸಿದಂತೆ, ಅದನ್ನೂ ನಿರಾಕರಿಸಿದರು.

ಪ್ರಪಂಚದ ಸಾರ್ವಕಾಲಿಕ ಮಹಾಕಲಾವಿದರಾದ ಮಹಾಲಿಂಗಮ್ 1986ರ ಮೇ 31ರಂದು ಆಕಸ್ಮಿಕ ಹೃದಯಾಘಾತದಿಂದ ಮದ್ರಾಸಿನಲ್ಲಿ ನಿಧನರಾದರು.

On Remembrance Day of greatest flute master Mali, T. R. Mahalingam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ