ಸುಮಾ ರಮೇಶ್
ನಮ್ಮ ಡಾ. ಸುಮಾ ರಮೇಶ್ ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಛಾಯಾಗ್ರಹಣ, ಶಿಕ್ಷಣ ಹೀಗೆ ಬಹುಮುಖಿ ಸಾಧಕಿ.
ನವೆಂಬರ್ 11, ಸುಮಾ ಅವರ ಜನ್ಮದಿನ. ಇವರು ಹುಟ್ಟಿದ್ದು ಮೈಸೂರಿನಲ್ಲಿ. ಗಮಕ ಕಲೆಯ ಪ್ರರ್ವರ್ತಕರಲ್ಲಿ ಒಬ್ಬರಾದ ಕೃಷ್ಣಗಿರಿ ಕೃಷ್ಣರಾಯರು ಇವರ ತಾತ. ತಂದೆ ಕೃಷ್ಣಗಿರಿ ಶ್ರೀನಿವಾಸ ರಾವ್. ತಾಯಿ ತಾರಾ ಎಸ್. ರಾವ್. ನೃತ್ಯದಲ್ಲಿ ವಿದ್ವತ್, ವಿಜ್ಞಾನದಲ್ಲಿ ಪದವಿ, ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಇವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ತಮ್ಮ "ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಸ್ಥಿತ್ಯಂತರದ ಸ್ವರೂಪ" ಮಹಾಪ್ರಬಂಧಕ್ಕೆ ಡಾಕ್ಟೊರೇಟ್ ಗಳಿಸಿದ್ದಾರೆ.
ಸುಮಾ ಅವರು ಕನ್ನಡ ಉಪನ್ಯಾಸಕಿ ಹಾಗೂ ಶಾಲೆಯಲ್ಲಿ ಶಿಕ್ಷಕಿಯಾಗಿ ಸುಮಾರು ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯವಾಗಿ ಸಂಗೀತ, ನೃತ್ಯ ಕಲಿತಿದ್ದಾರೆ. ಈಗಾಗಲೇ ಹೇಳಿದ ಹಾಗೆ, ನೃತ್ಯದಲ್ಲಿ ವಿದ್ವತ್ ಸಾಧನೆ ಮಾಡಿದ್ದು ಅನೇಕ ಕಾರ್ಯಕ್ರಮ ನೀಡಿದ್ದಾರೆ. 'ಲಾಸ್ಯ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ' ಮುಖಾಂತರ ಸುಮಾರು 25 ವರ್ಷಗಳಷ್ಟು ಕಾಲ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ.
ಸುಮಾ ಅವರಿಗೆ ಗಮಕ, ಸಂಗೀತ, ನೃತ್ಯಗಳು ತವರು ಮನೆಯಿಂದ ಒಲಿದು ಬಂದ ಸಂಸ್ಕಾರ. ತಂದೆಯವರ ನಿರಂತರ ಪ್ರೋತ್ಸಾಹ ಹಾಗೂ ಸಾಹಿತ್ಯದ ಓದಿನ ಬಗ್ಗೆ ಅವರು ಮೂಡಿಸಿದ ಆಸಕ್ತಿ ಇವರಲ್ಲಿ ಅಪಾರವಾಗಿ ನೆಲೆಗೊಂಡಿದೆ. ಮಲೆಯಾಳಂನ ಎರಡು ವ್ಯಕ್ತಿತ್ವ ವಿಕಸನ ಕಥಾ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ ಅನುಭವ ಇವರಿಗಿದೆ. ಸುಮಾರು ಆರು ನೂರಕ್ಕೂ ಹೆಚ್ಚು ಕಿರು ಕವನಗಳನ್ನು ರಚಿಸಿದ್ದಾರೆ. ಇವರ ಅನೇಕ ಕವನಗಳು ಪ್ರಸಿದ್ಧ ನಿಯತಕಾಲಿಕಗಳಲ್ಲಿ ಹಾಗೂ ಕವನ ಸಂಕಲನಗಳಲ್ಲಿ ಪ್ರಕಟಗೊಂಡಿವೆ.
ಇವರ ಹಲವು ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ಹಲವು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧ ಮಂಡನೆ ಮಾಡಿದ್ದಾರೆ. ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಬ್ಬನ್ ಪಾರ್ಕಿನಲ್ಲಿ ನಡೆದ 'ಬೆಂಗ್ಳೂರಾಗು ಬೇಂದ್ರೆ' ಕಾರ್ಯಕ್ರಮದ ಆರೂ ಸಂಚಿಕೆಗಳ ನಿರೂಪಣೆ ಮಾಡಿದ್ದು ಇವರ ವಿಶೇಷ ಅನುಭವಗಳಲ್ಲಿ ಸೇರಿವೆ.
ಸುಮಾ ಅವರು ಅನೇಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೃತ್ಯ ಹಾಗೂ ನಿರೂಪಣೆಯನ್ನು ನಡೆಸಿಕೊಟ್ಟಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜು, ಕ್ರಿಸ್ತು ಜಯಂತಿ ಕಾಲೇಜು ಮುಂತಾದ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಂಸ್ಕೃತಿಕ ಉತ್ಸವಕ್ಕೆ ನೃತ್ಯ ಹಾಗೂ ನಾಟಕ ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
ಸುಮಾ ಅವರಲ್ಲಿ ಛಾಯಾಗ್ರಹಣದಂತಹ ಹವ್ಯಾಸವೂ ಇದೆ.
ಸುಮಾ ಅವರದ್ದು ಆತ್ಮಸಂತೋಷದಿಂದ, ಕಲಾತ್ಮಕವಾಗಿ ಮತ್ತು ಕ್ರಿಯಾಶೀಲವಾಗಿ ಬದುಕನ್ನು ಕಾಣುವ ಮನಸ್ಸು. ಇತರರ ಕೆಲಸವನ್ನು ಮೆಚ್ಚಿ ನಿರಂತರ ಪ್ರೋತ್ಸಾಹಿಸುವ ಔದಾರ್ಯತೆಯೂ ಅವರ ವಿಶಿಷ್ಟ ಗುಣ.
ಆತ್ಮೀಯರೂ, ಪ್ರತಿಭಾವಂತರು, ನಿರಂತರ ನನ್ನ ಬರವಣಿಗೆಗೆ ಪ್ರೋತ್ಸಾಹಿಗಳೂ ಆದ ಸುಮಾ ರಮೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Suma Ramesh 🌷🌷🌷

ಕಾಮೆಂಟ್‌ಗಳು