ಎಲ್.ವಿ. ಶಾರದಾ
ಎಲ್.ವಿ. ಶಾರದಾ
ಎಲ್.ವಿ. ಶಾರದಾ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಮನೋಜ್ಞವಾಗಿ ಬೆಳಗಿದ್ದ ಮಹಾನ್ ಕಲಾವಿದೆ. ಎಲ್.ವಿ. ಶಾರದಾ ಅವರು 2019 ವರ್ಷದ ಮಾರ್ಚ್ 21 ರಂದು ಈ ಲೋಕವನ್ನಗಲಿದರು.
ಎಲ್.ವಿ. ಶಾರದಾ ಅರು ಜನಿಸಿದ್ದು 1941ರಲ್ಲಿ. ಅವರ ತಂದೆ ಎಲ್.ಎಸ್.ವೆಂಕಾಜಿರಾಯರು ರಾಜ್ಯರಾಜಕಾರಣದಲ್ಲಿ ಹೆಸರಾಗಿದ್ದರು.
ಶಾರದಾ ಅಂದರೆ ವಂಶವೃಕ್ಷ, ಫಣಿಯಮ್ಮ ಮತ್ತು ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಅವರು ತೋರಿದ ಶ್ರೇಷ್ಠ ಅಭಿನಯಗಳು ಕಣ್ಮುಂದೆ ಬಂದು ನಿಲ್ಲುತ್ತವೆ.
ಮೊದಲ ಚಿತ್ರ ‘ವಂಶವೃಕ್ಷ’ದಲ್ಲಿನ ಅಪ್ರತಿಮ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠನಟಿ ಪ್ರಶಸ್ತಿ ಸಾಧನೆ ಮಾಡಿದ್ದ ಶಾರದಾ, ಪ್ರೇಮಾಕಾರಂತರ ನಿರ್ದೇಶನದ 'ಫಣಿಯಮ್ಮ' ಚಿತ್ರದ ಅಭಿನಯದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.
ಸಿದ್ದಲಿಂಗಯ್ಯ ನಿರ್ದೇಶನದ ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಬೂತಯ್ಯನ ಸೊಸೆಯಾಗಿ, ಅಯ್ಯುವಿನ ಪತ್ನಿಯಾಗಿ, ಮಾಧೇವಿಯ ಗೆಳತಿಯಾಗಿ ಮತ್ತು ಒಳ್ಳೆಯತನಕ್ಕೆ ಅಸಹಾಯಕತೆಯಿಂದ ಮರುಗುವ ಆಕೆಯ ಅಭಿನಯ ಕೂಡಾ ಮರೆಯಲಾಗದ್ದು. ವಾತ್ಸಲ್ಯಪಥ ಚಿತ್ರದ ಅಭಿನಯಕ್ಕಾಗಿ ಸಹಾ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಂದಿತ್ತು. ಆದಿ ಶಂಕರಾಚಾರ್ಯ, ಮಧ್ವಾಚಾರ್ಯ, ನಕ್ಕಳಾ ರಾಜಕುಮಾರಿ, ಒಂದು ಪ್ರೇಮದ ಕಥೆ ಸೇರಿದಂತೆ ಇನ್ನಿತರ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದ ಶಾರದಾ ಅವರು ವ್ಯಾಪಾರಿ ಚಲನಚಿತ್ರಗಳಿಗೆ ಹೆಚ್ಚು ಒಲವು ತೋರದೆ, ಕಲಾತ್ಮಕ ಸಿನಿಮಾ ಲೋಕಕ್ಕೆ ತಮ್ಮನ್ನು ಹೆಚ್ಚು ಮೀಸಲಾಗಿಸಿಕೊಂಡಿದ್ದರು.
ಮುಂದೆ ಶಾರದಾ ಅವರು ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರು ಕೆರೆಗಳ ಬಗ್ಗೆ ಅವರು ತಯಾರಿಸಿದ ಕೆರೆ ಹಾಡು ವಿಶೇಷ ಮನ್ನಣೆಗೆ ಪಾತ್ರವಾಗಿತ್ತು. ಮೈಸೂರು ವೀಣೆ ಕುರಿತ ಸಾಕ್ಷ್ಯಚಿತ್ರವೂ ಸೇರಿದಂತೆ ದೂರದರ್ಶನಕ್ಕಾಗಿ ಅವರು ಹಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದರು. ತಿರುವನಂತಪುರದಲ್ಲಿ ಒಮ್ಮೆ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರು ಜ್ಯೂರಿ ಸದಸ್ಯೆಯಾಗಿ ಸಹಾ ಕಾರ್ಯ ನಿರ್ವಹಿಸಿದ್ದರು.
ಹಿಂದೆ ಎಷ್ಟೆಷ್ಟೋ ಭವ್ಯ ಕೆಲಸ ಮಾಡಿದ್ದವರು, ಎಂದೋ ವಯಸ್ಸು, ಕಾಯಿಲೆ ಇತ್ಯಾದಿಗಳ ಹೆಸರಿನಲ್ಲಿ ನಿಧನರಾದರು ಎಂದು ಓದುವಾಗ ಎಷ್ಟೊಂದು ಭವ್ಯ ಹೆಸರುಗಳನ್ನು ಈ ಲೋಕ ಮರೆತುಬಿಟ್ಟಿರುತ್ತದೆ ಎನಿಸುತ್ತದೆ. ಎಲ್ಲವನ್ನೂ ಈ ಲೋಕ ಮರೆಸಿಬಿಡುತ್ತದೆ. ನಾವು ಶಾಶ್ವತವಲ್ಲ ಎಂಬ ಸತ್ಯ ಅರಿವಾಗುವುದು ಮಾತ್ರಾ ನಮಗೆ ಕಷ್ಟವೇನೋ.
ಏನು ಹೇಳೋದು. ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತುಕೊಂಡರೆ ಸಾಕು. ಅದೇ ಬಹುಶಃ ಅಳಿದು ಹೋದ ಮಹತ್ವದ ಜೀವಗಳಿಗೆ ಮತ್ತು ಅಂತಹ ಜೀವಗಳನ್ನು ಕಂಡ ಈ ಲೋಕಕ್ಕೆ ನಾವು ಸಲ್ಲಿಸಬಹುದಾದ ಗೌರವ.
On Remembrance Day of great actress L. V. Sharada
ಕಾಮೆಂಟ್‌ಗಳು