ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಾ ಗುರುದತ್

ಪದ್ಮಾ ಗುರುದತ್‌

ವಿದುಷಿ ಪದ್ಮಾ ಗುರುದತ್ ಸಂಗೀತಗಾರ್ತಿಯಾಗಿ ಮತ್ತು ಸಂಗೀತಜ್ಞೆಯಾಗಿ ಹೆಸರಾಗಿದ್ದಾರೆ

ಪದ್ಮಾ  ಅವರು 1951ರ ನವೆಂಬರ್ 1ರಂದು ಜನಿಸಿದರು. ‌ ತಂದೆ ಪ್ರೊ. ಆರ್‌. ಶ್ರೀನಿವಾಸರಾವ್‌ ಅವರು ವಿಜಯ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದರು. ತಾಯಿ ಸರಸ್ವತಿರಾವ್‌. ಪದ್ಮಾ ಅವರು ಬಿ. ಎ.  ಆನರ್ಸ್, ಸಂಗೀತದಲ್ಲಿ ವಿದ್ವತ್ ಪದವಿ ಮತ್ತು ಎಂ.ಎ. ಪದವಿಗಳನ್ನು ಸಾಧಿಸಿದರು.

ಪದ್ಮಾ ಅವರು ವಿದ್ವಾನ್‌. ಎಚ್‌.ವಿ. ವೆಂಕಟರಾಮಯ್ಯ ಮತ್ತು ವಿದ್ವಾನ್‌. ವಿ. ಪುಟ್ಟಸ್ವಾಮಯ್ಯನವರ ಬಳಿ ಪ್ರಾರಂಭಿಕ ಸಂಗೀತ ಕಲಿಕೆ ನಡೆಸಿದರು.   ನಂತರ ವಿದ್ವಾನ್‌ ಟಿ.ಕೆ. ರಂಗಾಚಾರ್ಯರ ಬಳಿ ಸಾಧನೆ ಮಾಡಿದರು.  ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಗಳಿಸಿ ಅವಧಾನ ಪಲ್ಲವಿಯ ಸೂಕ್ಷ್ಮತೆಗಳ ತಿಳಿವು ಮತ್ತು ಮಾರ್ಗದರ್ಶನವನ್ನು  ವಿದ್ವಾನ್‌ ಬೆಂ.ಕೆ. ವೆಂಕಟರಾಮ್‌ ಬಳಿ ಪಡೆದರು.  ಕಛೇರಿಯ ಸೂಕ್ಷ್ಮತೆ ಹಾಗೂ ಸಾಹಿತ್ಯ ಉಚ್ಚಾರ ಮಾರ್ಗದರ್ಶನವನ್ನು  ವಿದುಷಿ ದ್ವಾರಕಿ ಕೃಷ್ಣಸ್ವಾಮಿಯವರಿಂದ ಗಳಿಸಿದರು. ಕುಂತೀ-ಕರ್ಣ ಗಮಕ ಗೀತ ರೂಪಕದ ಕಲಿಕೆಯನ್ನು ಗುರು ಬಿ.ಎಸ್‌.ಎಸ್‌. ಕೌಶಿಕ್‌ ಅವರಲ್ಲಿ ಪೂರೈಸಿದರು. 

ಪದ್ಮಾ ಗುರುದತ್ ಅವರು ಅಂದಿನ ದಿನಗಳಲ್ಲೇ ಪುರಂದರದಾಸರ ಕೃತಿಗಳನ್ನು ಹಾಡಿ, ವಿದುಷಿ. ಎಂ.ಎಲ್‌. ವಸಂತಕುಮಾರಿ ಅವರು ಸ್ಥಾಪಿಸಿದ್ದ ಲಲಿತಾಂಗಿ ಸ್ಮಾರಕ ಪ್ರಶಸ್ತಿಯಾಗಿ ತಂಬೂರ ಬಹುಮಾನ ಗೆದ್ದರು.

ಪದ್ಮಾ ಗುರುದತ್ ಅವರು  ಗಾಯಕಿಯಾಗಿ ರಾಜ್ಯ ಹಾಗೂ ನೆರೆ ನಾಡಿನ ಸಂಗೀತೋತ್ಸವಗಳಲ್ಲಿ, ಸಂಗೀತ ಸಮ್ಮೇಳನ, ಸಂಘ ಸಂಸ್ಥೆಗಳಲ್ಲಿ ಗಾಯನ ಕಛೇರಿ ನೀಡುತ್ತ ಬಂದಿದ್ದಾರೆ. (ಆಕಾಶವಾಣಿ) ಪ್ರಸಾರ ಭಾರತಿ ಹಾಗೂ ದೂರದರ್ಶನ (ಡಿ. ಡಿ) ಕೇಂದ್ರಗಳಲ್ಲಿ  ಅವರಿಗೆ 'ಎ' ದರ್ಜೆಯ ಮಾನ್ಯತೆ ಸಂದಿದೆ.

ಪದ್ಮಾ ಗುರುದತ್ ಅವರು  ಕೇಂದ್ರ ಸರ್ಕಾರದ 'ಎಚ್‌.ಆರ್‌.ಡಿ' ಯ ಫೆಲೋಶಿಪ್‌ ಪಡೆದು 'ಕರ್ನಾಟಕದ ಸಂಗೀತ ವಾಗ್ಗೇಯಕಾರ'ರ ಅಪರೂಪದ ಹಾಗೂ ಅಪ್ರಕಟಿತ ರಚನೆಗಳ ದಾಖಲಾತಿಯಡಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ದಿವಂಗತ ವೀಣಾ ವೆಂಕಟಸುಬ್ಬಯ್ಯ ಮತ್ತು ಕೊಳಲು ವಾದಕರಾದ ಎಚ್‌. ನರಸಿಂಗರಾವ್‌ ಜನ್ಮ ಶತಮಾನೋತ್ಸವ, ವೀಣಾ ಪದ್ಮನಾಭಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಅವರವರ ರಚನೆಗಳ ಕುರಿತಾದ ವಿಶೇಷ ಗಾಯನ ಕಾರ್ಯಕ್ರಮಗಳನ್ನು ನಡೆಸಿದ್ದರು. ಕರ್ನಾಟಕ ಸಂಗೀತದ ವಿಶಿಷ್ಠ ವಿದ್ವತ್ಪೂರ್ಣ ಭಾಗವಾದ ಅವಧಾನ ಪಲ್ಲವಿಯ ಬಗ್ಗೆ ಗುರು ವೆಂಕಟರಾಮರ ಬಳಿ ವಿಶೇಷವಾಗಿ ಅಭ್ಯಸಿಸಿದ್ದ ಪದ್ಮಾ ಅವರು, ದೂರದರ್ಶನ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ, ಗಾಯನ ಕಛೇರಿಗಳಲ್ಲಿ ಹಾಗೂ ವಿವಿಧ ವಾಹಿನಿಗಳಲ್ಲಿ ಪ್ರತ್ಯೇಕವಾಗಿ ಅನೇಕ ಪ್ರಸ್ತುತಿಗಳನ್ನು ನೀಡಿದ್ದಾರೆ.

ಪದ್ಮಾ ಗುರುದತ್ ಅವರು ಮಕ್ಕಳಿಗಾಗಿ ಆಡುವ-ಹಾಡುವ, ರಾವಣ-ಹನುಮಾನ್‌ (ಏಕಪಾತ್ರಾಭಿನಯ), ಸುಸ್ವರಾನಂದ ಮತ್ತು ಶ್ವಾನ ಗಾಯನ ಮುಂತಾದ ಕಿರುನಾಟಕಗಳನ್ನು ಬರೆದು ಪ್ರಸ್ತುತಿ ಪಡೆಸಿದ್ದಾರೆ.

ಪದ್ಮಾ ಗುರುದತ್ ಅವರು ಗಿರಿಜಾ ಕಲ್ಯಾಣ, ಕವಿ ಕಂಡ ಕೃಷ್ಣ, ಶ್ರೀಶಂಕರ ಗುರುವರಂ, ಜಗತ್ರಯಪಾವನಿ, ಧನ್ವಂತರೀ ನಮನ, ಲೋಕನೀತಿ, ಋತುವೈಭವ, ಪುರಂದರ ನಮನ ಮುಂತಾದ ಸಂಗೀತ ರೂಪಕಗಳ ನಿರ್ದೇಶನ ಮಾಡಿದ್ದಾರೆ.  ಗುರು ಬಿ.ಎಸ್‌.ಎಸ್‌. ಕೌಶಿಕರ ಜನ್ಮ ಶತಮಾನೋತ್ಸವದಲ್ಲಿ ಕುಂತೀ-ಕರ್ಣ ಗಮಕ ಗೀತ ರೂಪಕವನ್ನು ಕಾಣಿಕೆಯಾಗಿ ಪ್ರದರ್ಶಿಸಿದ್ದಾರೆ. ಇದಲ್ಲದೆ ಇಸ್ಕಾನ್‌ ಮತ್ತು ಭಾರತೀಯ ವಿದ್ಯಾ ಭವನ್‌ ಆಯೋಗದಲ್ಲಿ ನಡೆದ 'ಮಹಾಕಾವ್ಯ ಸಮ್ಮೇಳನ'ದಲ್ಲಿ, ಮತ್ತು ನಗರದ ಹಲವೆಡೆ ಕುಂತೀ-ಕರ್ಣ ಗಮಕ ಗೀತ ರೂಪಕವನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.

ಪದ್ಮಾ ಗುರುದತ್ ಅವರು 'ಆಕಾಶವಾಣಿ: ಅಮೃತಗುರುಕುಲ'ದಲ್ಲಿ ಸಂಗೀತ ಪಾಠ ನಡೆಸಿಕೊಟ್ಟಿದ್ದಾರೆ.  ವಿಶೇಷ ಸಂಗೀತ ಕಾರ್ಯಕ್ರಮಗಳಿಗೆ ನುಡಿ ಬರಹ ನೀಡಿದ್ದಾರೆ.

ಪದ್ಮಾ ಗುರುದತ್ ಅವರಿಗೆ ಕರ್ನಾಟಕ ಕಲಾಪ್ರಶಸ್ತಿ,  ಕಲಾರಾಧನಶ್ರೀ, ಸಂಗೀತಲಕ್ಷ್ಮೀ ನಿಧಿ, ಶಾಸ್ತ್ರಕೌಸ್ತುಭ, ಸ್ವರಭೂಷಿಣಿ, ಕಲಾಸರಸ್ವತೀ, ಅಭಿನವ ಶಾರದೆ ಮೊದಲಾದ ಅನೇಕ ಗೌರವಗಳು ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಸಂದಿವೆ.

ಪೂಜ್ಯ ಹಿರಿಯ ಸಾಧಕರಾದ ಪದ್ಮಾ ಗುರುದತ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. 

ಮಾಹಿತಿ ಸಹಕಾರ ಕೃಪೆ: Sayilakshmi S Iyer 🌷🙏🌷

Happy birthday to Great musician and musicologist Vidushi.  Padma Gurudutt 🌷🙏🌷




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ