ತೌರ ಸುಖದೊಳಗೆನ್ನ
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೆ ನಾನು ಇಲ್ಲೇ
ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು
ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
Ratnamala Prakash 🙏🌷🙏
Photo Credits: Arjun Kamath
ಕಾಮೆಂಟ್‌ಗಳು