ಅಂಬರೀಷ್
ಅಂಬಿ ಅಗಲಿದ ದಿನ
ಕನ್ನಡ ಚಿತ್ರರಂಗದಲ್ಲಿ ಪ್ರೀತಿ ವಾತ್ಸಲ್ಯಗಳಿಗೆ ಹೆಸರಾಗಿದ್ದ ನಮ್ಮ ನೆಚ್ಚಿನ 'ಅಂಬಿ' ಅಂಬರೀಶ್ ಅಗಲಿ ಇಂದಿಗೆ 3 ವರ್ಷ ಆಯ್ತು.
2018ರಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದ ಅಂಬರೀಶ್ ಚಿತ್ರರಂಗದಲ್ಲೇ ತಮ್ಮ 46 ವರ್ಷಗಳನ್ನು ತುಂಬಿದವರು. ಅವರು ಹುಟ್ಟಿದ್ದು 1952ರಲ್ಲಿ. ನಾಗರಹಾವು ಚಿತ್ರದಲ್ಲಿ ಜಲೀಲನಾಗಿ ಬಂದ ಈ ಹುಡುಗನ ಚಹರೆಗೂ, ಮುಂದೆ ಮಹಾರಾಜನ ಮೈಕಟ್ಟನ್ನು ಬೆಳೆಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ಅಂಬಿಗೂ ಅಜಗಜಾಂತರವಿದೆ. ಒಂದು ರೀತಿಯಲ್ಲಿ ಅದು ಅಂದಿನ ಮಳವಳ್ಳಿ ಅಮರನಾಥ ಹುಚ್ಚೇಗೌಡನಿಗೂ ಮುಂದೆ ಜನಪ್ರತಿನಿದಿ, ಜನಪ್ರಿಯ ನಟರಾದ ಅಂಬರೀಶ್ ಅವರಿಗೂ ಇದ್ದ ಅಗಾಧತೆಯ ಪ್ರತೀಕವೂ ಹೌದು.
ಅಂಬರೀಶ್ ಅಂದಿನ ದಿನದ ಸಿನಿಮಾಗಳ ತುಂಟ ಹುಡುಗನಾಗಿ, ಖಳನಾಗಿ, ನಾಯಕನಾಗಿ, ಮುಂದೆ ರಾಜಕಾರಣಿಯಾಗಿ, ಸಚಿವರಾಗಿ ಸವೆಸಿದ ಹಾದಿಯಲ್ಲಿ ನಮಗೆ ಅಪ್ಯಾಯಮಾನವಾಗಿ ಕಾಣುವುದು ಆತ ಪುಟ್ಟಣ್ಣನವರ ಚಿತ್ರಗಳಲ್ಲಿ ಕಂಡು ಬಂದ ನಾಗರಹಾವಿನ ಜಲೀಲ, ಶುಭಮಂಗಳದ ಮೂಕ, ರಂಗನಾಯಕಿಯ ಸಹೃದಯಿ, ಮಸಣದ ಹೂವಿನ ಗುಣವಂತನಾಗಿ ಅಭಿನಯಿಸಿದ ಪಾತ್ರಗಳಲ್ಲಿ. ಅಂಬರೀಶ್ ಶಕ್ತಿಯ ಅಗಾಧತೆ ಗೋಚರವಾಗುವುದೇ ಅಲ್ಲಿ. ಪುಟ್ಟಣ್ಣನವರಂತೆ ಅವರನ್ನು ವೈವಿಧ್ಯಪೂರ್ಣವಾಗಿ ಅರ್ಥಪೂರ್ಣವಾಗಿ ಬಳಸಿಕೊಂಡವರು ಕಡಿಮೆ. ಒಬ್ಬ ಖಳನಾಗಿ, ನಾಯಕನಟನಾಗಿ ಆತ ಹಲವಾರು ಯಥಾವತ್ತಾದ ಪಾತ್ರಗಳಲ್ಲಿ ಅಭಿನಯಿಸಿದರೂ ‘ಅಂತ’, ‘ಚಕ್ರವ್ಯೂಹ’, ‘ನ್ಯೂ ಡೆಲ್ಲಿ ಎಕ್ಸ್ ಪ್ರೆಸ್’, ‘ಏಳು ಸುತ್ತಿನ ಕೋಟೆ’, ‘ಹೃದಯ ಹಾಡಿತು’, ‘ದಿಗ್ಗಜರು’, ‘ಹಬ್ಬ’ ಮುಂತಾದ ಚಿತ್ರಗಳ ಮೂಲಕ ನೆನಪಿನಲ್ಲಿ ಸ್ಥಿರವಾಗುಳಿದಿದ್ದಾರೆ.
ಅಂಬರೀಶ್ ಅವರಿಗೆ ಅಂದಿನ ಪ್ರಸಿದ್ಧ ನಟೀಮಣಿಯರು ಮಾತ್ರವೇ ಒಲುಮೆಗೀಡಾಗಿರಲಿಲ್ಲ. ಆತ ಕನ್ನಡ ಚಿತ್ರ ನಿರ್ಮಾಪಕರ ಸದಾಕಾಲದ ಪ್ರಥಮ ಆಯ್ಕೆಯಾಗಿದ್ದರು. ಶೂಟಿಂಗ್ ಸಮಯಕ್ಕೆ ನಿಧಾನಕ್ಕೆ ಬರುವುದು ಮುಂತಾದ ಅಶಿಸ್ತಿನ ವಿಚಾರಗಳಲ್ಲಿ ಅಷ್ಟೊಂದು ಸುದ್ಧಿಯಾಗಿದ್ದರೂ ಅವರಂತೆ ಕಡಿಮೆ ಖರ್ಚು ಮಾಡಿಸಿ ಹಾಕಿದ ಬಂಡವಾಳ ಮತ್ತು ಲಾಭವನ್ನು ತಂದುಕೊಟ್ಟ ನಟ ಕನ್ನಡ ಚಿತ್ರರಂಗದಲ್ಲಿ ಅಪರೂಪ. ಸ್ನೇಹದ ವಿಚಾರದಲ್ಲಿ ಕೂಡಾ ಆತ ಎತ್ತಿದ ಕೈ. ರಾಜ್ ಕುಟುಂಬಕ್ಕೆ ಆತ ಹತ್ತಿರದಲ್ಲಿದ್ದು ಸ್ನೇಹದಿಂದ ಇದ್ದವರು. ಅವರ ಕುಚ್ಚುಕು ಗೆಳೆಯ ಎಂದೇ ಪ್ರಸಿದ್ಧರಾದ ವಿಷ್ಣುವರ್ಧನ್ ಜೊತೆ ಅವರ ಸ್ನೇಹವಂತೂ ಅಜರಾಮರ. ಸಹಾಯಹಸ್ತ ನೀಡುವುದರಲ್ಲಿ ಎಂದೆಂದೂ ಮುಂದಾದ ಅಂಬರೀಶ್ ಚಿತ್ರರಂಗದ ‘ಕರ್ಣ’ ಎಂದು ಕೂಡಾ ಹೆಸರಾದವರು. ತನ್ನ ಮಿತಿ ಪರಿಮಿತಿಗಳನ್ನು ಚೆನ್ನಾಗಿ ಅರಿತಿದ್ದ ಆತ, ಇತರ ಕಲಾವಿದರ ಬಗ್ಗೆ ಹೊಂದಿದ್ದ ಗೌರವ ಕೂಡಾ ಮನನೀಯವಾದುದು. ಇದಕ್ಕೊಂದು ಉದಾಹರಣೆಯೆಂದರೆ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು, ಅಂಬರೀಶ್ ಬಳಿ ಬಂದು, ‘ಬಂಧನ’ ಚಿತ್ರದ ಸ್ಕ್ರಿಪ್ಟ್ ತೋರಿ ಆ ಚಿತ್ರದಲ್ಲಿ ನಟಿಸುವಂತೆ ಕೇಳಿದಾಗ, ಈ ಸಹೃದಯ ಅಂಬಿ ಹೇಳಿದ್ದು, “ಬಾಬು, ಇಷ್ಟು ಚೆನ್ನಾಗಿ ಕಥೆ ಮಾಡಿದ್ದೀಯ ಇದಕ್ಕೆ ಒಬ್ಬ ಸುಂದರ ಹೀರೋ ಬೇಕು, ವಿಷ್ಣುವರ್ಧನ್ ಇದಕ್ಕೆ ತಕ್ಕವ” ಎಂದು. ಆ ಚಿತ್ರ ಗಳಿಸಿದ ಯಶಸ್ಸು, ಅದು ವಿಷ್ಣು ಮತ್ತು ಬಾಬು ಅವರಿಗೆ ತಂದ ಹೆಸರು ಈಗ ಇತಿಹಾಸ. ಹಲವಾರು ಹೊಸ ನಿರ್ಮಾಪಕ ಮತ್ತು ನಿರ್ದೇಶಕರು ಬಂದಾಗ ಅವರ ಚಿತ್ರಗಳಲ್ಲಿ ಅಭಿನಯಿಸಿ ಆ ಮೂಲಕ ಅಂಬರೀಶ್, ಹೊಸ ಪ್ರತಿಭೆಗಳು ಮತ್ತು ಉತ್ಸಾಹಿಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ವಿಶಾಲ ಹೃದಯಿ.
ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾದ ರಾಜ್ ಮತ್ತು ವಿಷ್ಣು ರಾಜಕೀಯದ ಬಗ್ಗೆ ನಿರಾಸಕ್ತಿ ತಾಳಿದರು. ಪ್ರಸಿದ್ಧ ಸಿನಿಮಾ ನಟರು ಚಿತ್ರರಂಗಕ್ಕೆ ಬರುವುದರಲ್ಲಿ ಸಮಾಜದಲ್ಲೂ ಒಂದು ಆತ್ಮೀಯ ಸ್ವಾಗತ ಮನೋಭಾವನೆಯಿದೆ. ಅವರುಗಳು ಹಣ ಮಾಡುವ ಮನೋಭಾವವಿಲ್ಲದೆ ಸೇವೆ ಮಾಡುವ ಸದಾಚಾರ ಮನೋಭಾವ ಹೊಂದಿರುತ್ತಾರೆ ಎಂಬ ಭಾವ ಸಮಾಜದಲ್ಲಿದೆ. ಸಾಮಾನ್ಯವಾಗಿ ಇಂದು ರಾಜಕಾರಣಕ್ಕೆ ಇಳಿದಿರುವ ಸಿನಿಮಾ ಮಂದಿ ರಾಜಕೀಯವನ್ನು ತಮ್ಮ ಮುಂದುವರೆದ ಜನಪ್ರಿಯತೆಗೋ ಇಲ್ಲವೇ ಎರಡನೇ ವೃತ್ತಿಯನ್ನಾಗಿಯೋ, ತಮ್ಮ ಹೆಸರನ್ನು ಚಲಾವಣೆಯಲ್ಲಿಟ್ಟುಕೊಳ್ಳಲು ಅಲ್ಲಿಂದ ಇಲ್ಲಿಗೆ ಹಾರುವ ಹವ್ಯಾಸ ಮಾಡಿಕೊಂಡಿರುವ ಪ್ರವೃತ್ತಿಗಳೇ ಕಾಣುತ್ತಿವೆ ಎಂಬುದು ಒಂದು ವಿಪರ್ಯಾಸ. ಆದರೆ ಅಂಬರೀಶ್ ವಿಚಾರವೇ ಬೇರೆ. ಜನಾನುರಾಗಿಯಾದ ಅಂಬರೀಶ್ ರಾಜಕಾರಣಕ್ಕೆ ಬಂದು ಎರಡು ಮೂರು ಅವಧಿಗಳಲ್ಲಿ ಜಯಗಳಿಸಿ ಒಮ್ಮೆ ಮಂತ್ರಿಯೂ ಆಗಿ, ಪಡೆದಿದ್ದ ಮಂತ್ರಿ ಪದವಿಯನ್ನೂ ಕಾವೇರಿ ಟ್ರಿಬ್ಯುನಲ್ನಲ್ಲಿ ಕರ್ನಾಟಕಕ್ಕೆ ವ್ಯತಿರಿಕ್ತ ತೀರ್ಮಾನ ಬಂದ ಸಂದರ್ಭದಲ್ಲಿ ತ್ಯಜಿಸಿದರು. ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಪೂರ್ಣವಾಗಿ ಅಧಿಕಾರ ಹೊಂದಿದ್ದ ಸಮಯದಲ್ಲಿ ಕೆಲಕಾಲ ಅವರು ಕರ್ನಾಟಕ ಸರ್ಕಾರದದಲ್ಲಿ ಸಚಿವ ಸ್ಥಾನ ನಿರ್ವಹಿಸಿದ್ದರು.
ಅಂಬರೀಶರ ಅರವತ್ತನೆ ಹುಟ್ಟು ಹಬ್ಬ ಮತ್ತು ನಲವತ್ತು ವರ್ಷದ ಚಿತ್ರರಂಗದ ಸಾಧನೆಯ ಸಂದರ್ಭದಲ್ಲಿ ಇಡೀ ಚಿತ್ರರಂಗವೇ ಒಂದುಗೂಡಿ ಅವರ ಸಾಧನೆಯನ್ನು ಕೊಂಡಾಡಿದ್ದು, ಹಲವಾರು ದ್ವಂದ್ವಗಳಿಂದ ಬೆಂದು ಬಳಲಿದ್ದ ಚಿತ್ರರಂಗಕ್ಕೆ ಒಂದಷ್ಟು ನಲಿವಿನ ವಾತಾವರಣವನ್ನು ತಂದುಕೊಟ್ಟ ಘಟನೆ ಎನಿಸಿತ್ತು.
ಪಿಟೀಲು ಚೌಡಯ್ಯನವರ ಮೊಮ್ಮಗನಾದ ಅಂಬರೀಶ್ ಸಾಂಸ್ಕೃತಿಕ ವಲಯದಲ್ಲಿ ಅವರ ಅಭಿನಯದ ಹೊರತಾಗಿ ಇತರೆ ವಿಷಯಗಳಲ್ಲಿ ಕಂಡದ್ದು ಕಡಿಮೆ. ಹೀಗಿದ್ದಾಗ್ಯೂ ಅವರು ಜನಸಾಮಾನ್ಯರ ಜೊತೆ ನಗೆಮೊಗದಿಂದ ಬೆರೆತು ಒಂದಷ್ಟು ಪರೋಪಕಾರ ಗುಣ, ಸ್ನೇಹಭಾವಗಳಿಂದ ಸಾರ್ವಜನಿಕ ವಲಯಗಳಲ್ಲಿ ಆತ್ಮೀಯ ಭಾಗವಾಗಿದ್ದರು.
ಕೊನೆಯ ವರ್ಷಗಳಲ್ಲಿ ಅಂಬರೀಶ್ ಹಲವು ಬಾರಿ ಅನಾರೋಗ್ಯಕ್ಕೆ ಒಳಗಾಗಿ ವಿದೇಶದಲ್ಲೂ ಚಿಕಿತ್ಸೆ ಪಡೆದು ಬಂದಿದ್ದರು. ಹೀಗಿದ್ದರೂ ಚಿತ್ರರಂಗದಲ್ಲಿ ಏನೇ ರಂಪಗಳಾದರೂ ತಾವಿದ್ದ ಮನೆಯಲ್ಲಿ ಹೀಗಾಗಬಾರದು ಎಂದು ಕಾಳಜಿಯಿಂದ ಎಲ್ಲರನ್ನೂ ಒಂದೆಡೆ ಸೇರಿಸುವ ದೊಡ್ಡ ಹೃದಯ ಅವರ ದೊಡ್ಡ ದೇಹದಲ್ಲಿತ್ತು.
ಹೀಗೆ ಹಲವು ನೆಲೆಗಳಲ್ಲಿ ಕಲೆ ಮತ್ತು ಜನಸಮುದಾಯದ ಆತ್ಮೀಯ ಪ್ರತಿನಿಧಿಯಾಗಿದ್ದ ಅಂಬರೀಶ್ ಇಲ್ಲದಿರುವುದು ಕನ್ನಡ ಚಿತ್ರರಂಗವನ್ನಂತೂ ಹಲವು ನೆಲೆಗಳಲ್ಲಿ ಬಡವಾಗಿಸಿತ ಎಂಬುದು ಚಿತ್ರರಂಗದ ಬಗ್ಗೆ ಚಿಂತಿಸುವವರೆಲ್ಲರ ಅಂತರಂಗದ ಆತ್ಮೀಯ ಅಳಲು.
On the day our Ambarish left this world
ಕಾಮೆಂಟ್‌ಗಳು