ಡಿ. ಶಶಿಕಲಾ
ವಿದುಷಿ ಡಾ. ಡಿ. ಶಶಿಕಲಾ ಅವರು ಸಂಗೀತಲೋಕದ ಲಯಗಾನ ಪ್ರವೀಣೆಯಾಗಿ ಹೆಸರಾಗಿದ್ದಾರೆ.
ಸಂಗೀತದ ವಿವಿಧ ಪ್ರಕಾರಗಳಲ್ಲಿ 'ರಾಗ-ತಾನ-ಪಲ್ಲವಿ' ಎಂಬುದು ಅತ್ಯಂತ ಕ್ಲಿಷ್ಟವಾದ ಮತ್ತು ಉನ್ನತ ಮಟ್ಟದ ಪ್ರಕಾರವಾಗಿದ್ದು ಗಾಯಕನ ನಿಜವಾದ ಪಾಂಡಿತ್ಯ ಮತ್ತು ಪ್ರತಿಭೆಯು ಇದರಿಂದ ತಿಳಿದು ಬರುತ್ತದೆ. ಇಂತಹ ಪಲ್ಲವಿ ಗಾಯನದ ಜೊತೆಗೆ "ಅಷ್ಟೋತ್ತರ ಶತತಾಳದ" ಪ್ರವೀಣೆಯಾಗಿ ಮೂಡಿ ಬಂದಂತಹ ಶಶಿಕಲಾ ಅವರು 1951 ರ ಅಕ್ಟೋಬರ್ 20ರಂದು ಡಿ. ವೆಂಕಟರಾಮರಾವ್ ಮತ್ತು ಬಿ. ಆರ್. ರುಕ್ಮಿಣಮ್ಮ ದಂಪತಿಯ ಸುಪುತ್ರಿಯಾಗಿ ಜನಿಸಿದರು.
ಬಾಲಪ್ರತಿಭೆಯಾದ ಶಶಿಕಲಾ ಅವರಿಗೆ ಸಂಗೀತವು ಮುತ್ತಾತನವರಾದ ವೀಣಾ ವಿದ್ವಾನ್ ವೀಣೆ ಗೋಪಾಲರಾಯರ ಆಶೀರ್ವಾದವೆನ್ನಬಹುದು. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ಭಜಗೋವಿಂದಂ ಶ್ಲೋಕವನ್ನು ಹಾಗೂ ವಾತಾಪಿ ಗಣಪತಿಂ ಮುಂತಾದ ಕೃತಿಗಳನ್ನು ಸಂಗತಿಗಳೊಡನೆ ಹಾಡುತ್ತಿದ್ದುದು ಅತ್ಯಾಶ್ಚರ್ಯವಾಗಿತ್ತು. ಈ ಪ್ರತಿಭೆಯನ್ನು ಗುರುತಿಸಿದ ಪೋಷಕರು ಸಂಗೀತ ಅಭ್ಯಾಸಕ್ಕಾಗಿ ವ್ಯವಸ್ಥೆ ಮಾಡಿದರು. ಹೀಗೆ ಶಶಿಕಲಾ ಅವರ ಬಾಲ್ಯ ಸಂಗೀತ ಶಿಕ್ಷಣವು ವಿದ್ವಾನ್ ಬಿ. ವಿಶ್ವನಾಥ್ ಮತ್ತು ಮಹಾವಿದ್ವಾನ್ ಸಿ.ಪಿ. ರಂಗಸ್ವಾಮಿ ಅಯ್ಯಂಗಾರ್ ಅವರಲ್ಲಿ ನಡೆಯಿತು.
ಶಶಿಕಲಾ ಅವರು ಮುಂದಿನ ಹದಿನಾರು ವರ್ಷಗಳ ಕಾಲ ಕಾಂಚಿಪುರಂ ನಾಯನಾ ಪಿಳ್ಳೆಯವರ ಪರಂಪರೆಗೆ ಸೇರಿದ ಪಲ್ಲವಿ ಆರ್. ಚಂದ್ರಸಿಂಗ್ ಅವರ ಬಳಿ ಸಂಗೀತ ಸಾಧನೆ ನಡೆಸಿದರು. ನಂತರದ ಎಂಟು ವರ್ಷಗಳ ಕಾಲ ಟೈಗರ್ ವರದಾಚಾರ್ಯರ ಶಿಷ್ಯರಾದ ವಿದ್ವಾನ್ ವಿಂಜಮುರಿ ಎಮ್. ರಾಜಗೋಪಾಲ್ ಅಯ್ಯಂಗಾರ್ ಅವರ ಬಳಿ ಅಭ್ಯಸಿಸಿ ಸಂಗೀತದಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಅಷ್ಟೋತ್ತರ ಶತತಾಳ ಪ್ರವೀಣೆಯಾಗಿ ಬೇರೆ ಬೇರೆ ಕ್ಲಿಷ್ಟ ತಾಳಗಳಲ್ಲಿ ಪಲ್ಲವಿ ಗಾಯನವನ್ನು ಸರಾಗವಾಗಿ ಹಾಡುವುದು ಡಾ. ಶಶಿಕಲಾ ಅವರ ವಿಶೇಷತೆಯಾಗಿದೆ.
ಶಶಿಕಲಾ ಅವರು 1969 ವರ್ಷ ಬೆಂಗಳೂರು ಗಾಯನ ಸಮಾಜದಲ್ಲಿ ನಡೆದ ಪಲ್ಲವಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ತಂಬೂರಿಯನ್ನು ಪಡೆದರು. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನವನ್ನು ಗಳಿಸಿ, ಸಂಗೀತ ವಿದ್ವನ್‍ಮಣಿಗಳಾದ ಡಿ. ಕೆ. ಪಟ್ಟಮ್ಮಾಳ್, ಎಮ್. ಎಸ್. ಸುಬ್ಬುಲಕ್ಷ್ಮಿ, ಶೆಮ್ಮಂಗುಡಿ ಆರ್. ಶ್ರೀನಿವಾಸ ಅಯ್ಯರ್ ಅಂತಹ ಮಹಾನ್ ಕಲಾವಿದರ ಮೆಚ್ಚುಗೆಗೆ ಪಾತ್ರರಾದರು.
ಆಕಾಶವಾಣಿ, ದೂರದರ್ಶನ ಕಲಾವಿದೆಯಾದ ಶಶಿಕಲಾ ಅವರು 2000ದ ವರ್ಷದಲ್ಲಿ ಭಕ್ತಿಸ್ತುತಿ ಎಂಬ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಬೆಂಗಳೂರು, ಉಡುಪಿ ಮುಂತಾದ ಪ್ರಮುಖ ಸ್ಥಳದ ಪ್ರಮುಖ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕಛೇರಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡುತ್ತ ಬಂದರು. ಅನೇಕ ಶಿಷ್ಯರಿಗೆ ತಮ್ಮ ವಿದ್ಯೆಯನ್ನು ನಿಷ್ಕಲ್ಮಶವಾಗಿ ಧಾರೆಯೆರೆಯುತ್ತಲೂ ಬಂದಿದ್ದು ಡಾ. ಎಸ್. ಸಿ. ಶರ್ಮಾ ಅವರಿಗೆ ಡಿ.ಲಿಟ್ ಮಹಾಪ್ರಬಂಧಕ್ಕಾಗಿ ಮಾರ್ಗದರ್ಶನವನ್ನೂ ನೀಡಿದ್ದಾರೆ.
ಶಶಿಕಲಾ ಅವರಿಗೆ ಲಯಗಾನ ಪ್ರವೀಣೆ, ಗಾನಕೋಗಿಲೆ, ಅತ್ಯುತ್ತಮ ಶಿಕ್ಷಕಿ, ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ಗಾನಕಲಾ ಪ್ರವೀಣೆ, ಗಾನಲಯ ವಿದ್ಯಾಭಾರತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲಾತಪಸ್ವಿ, ನಾದ ಚಿಂತಾಮಣಿ, ಕೆಂಪೇಗೌಡ ಪ್ರಶಸ್ತಿ, ಗಾನಚಂದ್ರಿಕೆ, ಕಲಾಜ್ಯೋತಿ, ಶ್ರೀರಾಮ ಲಲಿತಕಲಾ ಮಂದಿರದ ಲಲಿತ ಕಲಾಸುಮ, ತರಂಗ ಗಾನ ಕಲಾರತ್ನ, ಕನ್ನಡ ಸೇವಾರತ್ನ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಇವರಿಗೆ 2023ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಲೇಖನ ಕೃಪೆ: ಅಮೃತೇಶ್, ಶ್ರೀ ವಾಣಿ ಸಂಗೀತ ಫೌಂಡೇಷನ್
Musician Dr. D. Shashikala
ಕಾಮೆಂಟ್‌ಗಳು