ಪಂಡಿತ್ ರಾಮ್ ನಾರಾಯಣ್
ನಿಂತ ಸುಶ್ರಾವ್ಯ ಸಾರಂಗಿ ನಿನಾದ
ಪಂಡಿತ್ ರಾಮ್ ನಾರಾಯಣ್ ನಮನ
🌷🙏🌷
ಮಹಾನ್ ಸಂಗೀತಗಾರರಾದ ಪಂಡಿತ್ ರಾಮ್ ನಾರಾಯಣ್ ಅವರು ಸಾರಂಗಿ ವಾದನಕ್ಕೆ ಅಂತತರಾಷ್ಟ್ರೀಯ ಖ್ಯಾತಿ ತಂದವರು. ಈ ಮಹಾನುಭಾವರು ತಮ್ಮ 97ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದ್ದಾರೆ.
ರಾಮ್ ನಾರಾಯಣ್ 1927ರ ಡಿಸೆಂಬರ್ 25 ರಂದು ಉತ್ತರಪ್ರದೇಶದ ಉದಯಪುರದ ಬಳಿಯ ಅಂಬರ್ ಗ್ರಾಮದಲ್ಲಿ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲೇ ಸಾರಂಗಿ ನುಡಿಸಲು ಕಲಿತರು. ಮಹಾನ್ ಸಾರಂಗಿ ವಾದಕರು ಮತ್ತು ಗಾಯಕರ ಅಡಿಯಲ್ಲಿ ಅಧ್ಯಯನ ಮಾಡಿದ ಅವರು ಹದಿಹರೆಯದಲ್ಲಿ ಸಂಗೀತ ಶಿಕ್ಷಕರಾಗಿ ಮತ್ತು ಪ್ರವಾಸಿ ಸಂಗೀತಗಾರರಾಗಿ ಕೆಲಸ ಮಾಡಿದರು.
ರಾಮ್ ನಾರಾಯಣ್ 1944 ರಲ್ಲಿ ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಗಾಯಕರಿಗೆ ಸಹವಾದಕರಾಗಿ ನೇಮಕಗೊಂಡರು. 1947 ರಲ್ಲಿ ಭಾರತದ ವಿಭಜನೆಯ ನಂತರ ದೆಹಲಿಗೆ ಸ್ಥಳಾಂತರಗೊಂಡರು. ಪುನಃ ಸಹಾಯಕ ಪೋಷಕ ಪಾತ್ರ ನಿರ್ವಹಣೆ ಅವರಲ್ಲಿ ಅತೃಪ್ತಿ ಮೂಡಿಸಿತ್ತು. ಹೀಗಾಗಿ ಸಿನಿಮಾ ಕ್ಷೇತ್ರದಲ್ಲಿ ಬದುಕನ್ನರಸಿ 1949 ರಲ್ಲಿ ಮುಂಬೈಗೆ ಬಂದರು. 1950ರಲ್ಲಿ ಬ್ರಿಟಿಷ್ HMV ಸಂಸ್ಥೆಗಾಗಿ ಮೂರು ಏಕವ್ಯಕ್ತಿ 78 rpm ಗ್ರಾಮಫೋನ್ ಧ್ವನಿಮುದ್ರಣಗಳನ್ನು ಮತ್ತು 1951 ರಲ್ಲಿ ಮುಂಬೈನಲ್ಲಿ ಹತ್ತು ಇಂಚಿನ ಆರಂಭಿಕ LP ಆಲ್ಬಂ ಅನ್ನು ಧ್ವನಿಮುದ್ರಣ ಮಾಡಿದರು. ಆದರೆ ಆಗ ಆ ಆಲ್ಬಮ್‌ಗೆ ಬೇಡಿಕೆ ಬರಲಿಲ್ಲ.
ಮುಂಬೈ ಚಲನಚಿತ್ರೋದ್ಯಮವು ರಾಮ್ ನಾರಾಯಣ್ ಅವರಿಗೆ ಒಂದು ನೆಲೆ ಒದಗಿಸಿತು. ಮುಂದಿನ 15 ವರ್ಷಗಳ ಕಾಲ ಅವರು ಅದಾಲತ್, ಗಂಗಾ ಜಮ್ನಾ, ಹಮ್ದರ್ದ್, ಕಾಶ್ಮೀರ್ ಕಿ ಕಲಿ, ಮಧುಮತಿ, ಮಿಲನ್ ಸೇರಿದಂತೆ ಹಲವು ಚಲನಚಿತ್ರಗಳಿಗೆ ಸಂಗೀತ ನುಡಿಸಿದರು ಮತ್ತು ಸಂಗೀತ ಸಂಯೋಜಿಸಿದರು. ಮುಘಲ್-ಎ-ಆಜಮ್ ಮತ್ತು ನೂರ್ ಜೆಹಾನ್ ಇವರಿಗೆ ಕೀರ್ತಿ ತಂದಿತು. 1972 ರ ಪಕೀಜಾ ಚಲನಚಿತ್ರದ "ಚಲ್ತೇ ಚಲ್ತೆ" ಗೀತೆಗಾಗಿ, ಸಂಯೋಜಕ ಗುಲಾಮ್ ಮೊಹಮ್ಮದ್ ಬಯಸಿದ ಪರಿಣಾಮಕ್ಕಾಗಿ ರಾಮ್ ನಾರಾಯಣ್ 21 ಟೇಕ್‌ಗಳನ್ನು ನೀಡಿದರು. ಚಲನಚಿತ್ರ ಸಂಗೀತ ನಿರ್ದೇಶಕ ಓ. ಪಿ. ನಯ್ಯರ್ ಅವರಿಗೆ ಸದಾ ಅಪೇಕ್ಷಿತ ಆಯ್ಕೆಯಾಗಿದ್ದರು.
ನಾರಾಯಣ್ 1956 ರಲ್ಲಿ ಪ್ರಧಾನ ಸಂಗೀತ ಕಛೇರಿ ಕಲಾವಿದರಾದರು. ಭಾರತದ ಪ್ರಮುಖ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿದರು. ಸಿತಾರ್ ವಾದಕ ರವಿಶಂಕರ್ ಪಾಶ್ಚಿಮಾತ್ಯ ದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ನೀಡಿದ ನಂತರ, ನಾರಾಯಣ್ ಅವರ ಮಾದರಿಯನ್ನು ಅನುಸರಿಸಿದರು. ಅವರು ಅನೇಕ ಏಕವ್ಯಕ್ತಿ ಆಲ್ಬಂಗಳನ್ನು ಧ್ವನಿಮುದ್ರಿಸಿದರು. 1950 ರ ದಶಕದಲ್ಲಿ ರವಿಶಂಕರ್ ಅವರೊಂದಿಗೆ ಪ್ರವಾಸ ಮಾಡಿದ್ದ ತಬಲಾ ವಾದಕರಾದ ತಮ್ಮ ಹಿರಿಯ ಸಹೋದರ ಚತುರ್ ಲಾಲ್ ಅವರೊಂದಿಗೆ 1964 ರಲ್ಲಿ ಅಮೆರಿಕಾ ಮತ್ತು ಯುರೋಪ್ಗೆ ತಮ್ಮ ಮೊದಲ ಅಂತರರಾಷ್ಟ್ರೀಯ ಪ್ರವಾಸವನ್ನು ಮಾಡಿದರು. ನಾರಾಯಣ್ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಕಲಿಸಿದರು ಮತ್ತು ಆಗಾಗ್ಗೆ ಭಾರತದ ಹೊರಗೆ 2000 ರ ದಶಕದಲ್ಲಿ ಅನೇಕನಪ್ರದರ್ಶನ ನೀಡಿದರು.
ರಾಮ್ ನಾರಾಯಣ್ ಅವರು 2005 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ಪಡೆದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಅವರನ್ನರಸಿ ಬಂದವು.
ಪಂಡಿತ್ ರಾಮ್ ನಾರಾಯಣ್ ಅವರು 2024ರ ನವೆಂಬರ್ 9ರಂದು ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು.
Respects to departed Great Musician, known name for Sarangi instrument Pandit Ram Narayan 🌷🙏🌷
ಕಾಮೆಂಟ್‌ಗಳು