ಎಂ. ಎಸ್. ರಾಮಯ್ಯ
ಎಂ. ಎಸ್. ರಾಮಯ್ಯ
ಎಂ. ಎಸ್. ರಾಮಯ್ಯ ವಿದ್ಯಾಸಂಸ್ಥೆಗಳನ್ನು ಕಟ್ಟಿದವರಾಗಿ, ಉದ್ಯಮಿಯಾಗಿ, ಪತ್ರಿಕೋದ್ಯಮಿಯಾಗಿ ಹೆಸರಾಗಿದ್ದಾರೆ.
ಎಂ. ಎಸ್. ರಾಮಯ್ಯ 1922ರ ಏಪ್ರಿಲ್ 20ರಂದು ಮಧುಗಿರಿಯಲ್ಲಿ ಜನಿಸಿದರು. ತಂದೆ ಸಂಪಂಗಪ್ಪ. ತಾಯಿ ನರಸಮ್ಮ. ಪ್ರಾಥಮಿಕ ಶಿಕ್ಷಣವನ್ನು ಮತ್ತಿಕೆರೆಯಲ್ಲಿ ಮುಗಿಸಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಹೊರವಲಯಕ್ಕೆ ಬಂದರು. ಹಣದ ಅಭಾವದಿಂದಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ, ಶಾಲೆಯನ್ನು ಬಿಟ್ಟು ವ್ಯವಸಾಯ ಮಾಡಲು ಮುಂದಾದರು. ಎರಡು ವರ್ಷಗಳ ಕಾಲ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಿದರು. ಇದರ ನಂತರ ಗುತ್ತಿಗೆದಾರನಾಗಿ, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬೆಂಗಳೂರಿನ ಮಿಲಿಟರಿ ಶಿಬಿರಗಳಿಗೆ ಇಟ್ಟಿಗೆಗಳನ್ನು ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿದರು.
ರಾಮಯ್ಯ 1962ರಲ್ಲಿ ಗೋಕುಲ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಎಂ. ಎಸ್. ರಾಮಯ್ಯ ವಿದ್ಯಾ ಸಂಸ್ಥೆಗಳಿಗೆ ಪ್ರಾರಂಭ ನೀಡಿದರು. ಮುಂದೆ ಅನೇಕ ಶಾಖೆಗಳನ್ನು ವ್ಯಾಪಿಸಿಕೊಂಡು ಎಂ. ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆಗಿ ಬೃಹತ್ ರೂಪ ತಳೆದಿದೆ. 1979ರಲ್ಲಿ, ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಸ್ಥಾಪನೆಗೊಂಡಿತು. ನ್ಯಾಯಶಾಸ್ತ್ರ, ವಿವಿಧ ಆಡಳಿತ ವ್ಯವಸ್ಥೆಗಳ ಬೋಧನೆಗಳ ವ್ಯವಸ್ಥೆಯೂ ಸೇರಿ ಅನೇಕ ತೆರನಾಗಿ ಬೆಳೆಯುತ್ತಲೇ ಸಾಗಿದೆ.
ರಾಮಯ್ಯನವರು ಹಲವು ರೀತಿಯ ಕೈಗಾರಿಕಗಳ ಬೆಳವಣಿಗೆಗೆ ಸೂತ್ರಧಾರರಾಗಿದ್ದು, ಕ್ವಾಎರ್ನೆರ್ ಜಾನ್ ಬ್ರೌನ್ ಪ್ರೈವೆಟ್ ಲಿಮಿಟೆಡ್, ಎಮ್.ಎಸ್.ಆರ್.ಅಂಡ್ ಸನ್ಸ್ ಇನ್ವೆಷ್ಟ್ಮೆಂಟ್ಸ್ ಪ್ರೈವೆಟ್ ಲಿಮಿಟೆಡ್,
ಇಂಡೊ ಮಲೇಷಿಯನ್ ಟೆಕ್ನೋಪಾಲಿಸ್ ಪ್ರೈವೆಟ್ ಲಿಮಿಟೆಡ್, ಎಂ.ಎಸ್.ರಾಮಯ್ಯ ಇನ್ವೆಸ್ಟ್‍ಮೆಂಟ್ಸ್ ಅಂಡ್ ಪ್ರಾಪರ್ಟಿ ಪ್ರೈವೆಟ್ ಲಿಮಿಟೆಡ್ ಮುಂತಾದ ಸಂಸ್ಥೆಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.
ಎಂ. ಎಸ್. ರಾಮಯ್ಯ 1956ರಲ್ಲಿ ‘ತಾಯ್ನಾಡು’ ದಿನಪತ್ರಿಕೆಯನ್ನು ಆರಂಭಿಸಿದರು. ಮುಂದೆ 'ಗೋಕುಲ’ ಎಂಬ ವಾರಪತ್ರಿಕೆ, ‘ಕೈಲಾಸ’ ಎಂಬ ಮಾಸಿಕ ಆರಂಭಗೊಂಡವು.
ಎಂ. ಎಸ್. ರಾಮಯ್ಯ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಗಳಿಗೆ ಬೆಂಬಲವಾಗಿದೆ. ರಾಮಯ್ಯನವರು 1990 ರಲ್ಲಿ ಕೈವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸತ್ಕಾರಕೂಟ ಸಮಿತಿಯ ಅಧ್ಯಕ್ಷರಾಗಿ ನಡೆಸಿದ ವ್ಯವಸ್ಥೆಗಳು ಹೆಸರಾಗಿದ್ದವು. ಕೈವಾರದಲ್ಲಿ ಅವರ ಧಾರ್ಮಿಕ ಸಂಸ್ಥೆಗಳ ಪೋಷಣಾ ಕಾರ್ಯಗಳೂ ಹೆಸರಾಗಿವೆ.
ಎಂ. ಎಸ್. ರಾಮಯ್ಯನವರಿಗೆ ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಎಂ. ಎಸ್. ರಾಮಯ್ಯನವರು 1997ರ ಡಿಸೆಂಬರ್ 25ರಂದು ನಿಧನರಾದರು.
On the birth anniversary of educationist and Industrialist Dr. M. S. Ramaiah
ಕಾಮೆಂಟ್‌ಗಳು