ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ಯಾಮಲಾ ಪ್ರಕಾಶ್

ಶ್ಯಾಮಲಾ ಪ್ರಕಾಶ್ 

ವಿದುಷಿ ಶ್ಯಾಮಲಾ ಪ್ರಕಾಶ್ ಅವರು ಗಮಕ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಹೆಸರಾಗಿದ್ದಾರೆ.

ಡಿಸೆಂಬರ್ 1, ಶ್ಯಾಮಲಾ ಪ್ರಕಾಶ್ ಅವರ ಜನ್ಮದಿನ.  ಅವರು ಜನಿಸಿದ್ದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ. ತಂದೆ ಜಿ. ಕೆ. ಮಂಜುನಾಥ್.  ತಾಯಿ ಸೀತಾಲಕ್ಷ್ಮಿ.  ಶ್ಯಾಮಲಾ ಅವರ ಅಜ್ಜ ಕೃಷ್ಣಪ್ಪ ಅವರು ಗಾಯನ ಮತ್ತು ಅಭಿನಯ ಕಲಾವಿದರಾಗಿ ಹೆಸರಾಗಿ ಗುಬ್ಬಿ ಕಂಪೆನಿಯಲ್ಲಿದ್ದವರು. ಹೀಗೆ ಕಲಾವಿದರ ಮನೆತನದಿಂದ ಬಂದ ಶ್ಯಾಮಲಾ ಅವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಮೂಡಿತು. ಎಂ. ಆರ್. ರಾಮಮೂರ್ತಿ ಅವರಲ್ಲಿ ಸಂಗೀತ ಕಲಿಕೆ ಆರಂಭಿಸಿದ ಶ್ಯಾಮಲಾ ಅವರು ಮುಂದೆ ಸುಕನ್ಯಾ ಪ್ರಭಾಕರ್‌, ಟಿ.ಆರ್. ಬಾಲಾಮಣಿ‌, ಪಲ್ಲವಿ ವಿಜಯನಾಥನ್‌ ಮುಂತಾದವರಿಂದ  ಉನ್ನತ ಸಂಗೀತ ಅಭ್ಯಾಸವನ್ನು ನಡೆಸಿದರು. ಶ್ರೇಷ್ಠ ಶ್ರೇಣಿಯ ಸಾಧನೆಗಳಲ್ಲಿ ಸಂಸ್ಕೃತದಲ್ಲಿ  ʻಕಾವ್ಯಸಾಹಿತ್ಯ ಪದವಿ' ಅಲ್ಲದೆ ʻಕಾಜಾಣ ಪಾರೀಣʼ ಪದವಿಯನ್ನೂ ಗಳಿಸಿದ್ದಾರೆ.  'ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತ ಸಾಹಚರ್ಯ' ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದ್ದಾರೆ.  ಇದು ಕೃತಿಯಾಗಿಯೂ ಪ್ರಕಟಗೊಂಡಿದೆ.

ಶ್ಯಾಮಲಾ ಪ್ರಕಾಶ್ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಅತಿಥಿ  ಪ್ರಾಧ್ಯಾಪಕರಾಗಿ ಹಳಗನ್ನಡ ಬೋಧಿಸುತ್ತಿದ್ದಾರೆ. 

ಶ್ಯಾಮಲಾ ಪ್ರಕಾಶ್ ಅನೇಕ ಕನ್ನಡ ಹಾಗೂ ತುಳು ಭಾಷೆಯ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ಸಂಗೀತ ಮತ್ತು ಗಮಕ ಕಲಾವಿದೆಯಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಆಸಕ್ತರಿಗೆ ಕಲಿಸುತ್ತಲೂ ಬಂದಿದ್ದಾರೆ. 

ಶ್ಯಾಮಲಾ ಅವರು ಮುಂಬಯಿ-ಕರ್ನಾಟಕ ಸಂಘದ ’ಸ್ನೇಹ ಸಂಬಂಧ’ ಎಂಬ ಮಾಸಿಕ ಪತ್ರಿಕೆಯಲ್ಲಿ ʻನಾದೋಪಾಸನʼ ಶೀರ್ಷಿಕೆಯಲ್ಲಿ ದೇಶದ ಶ್ರೇಷ್ಠ ಸಂಗೀತ ಶಾಸ್ತ್ರಜ್ಞರ ಬಗ್ಗೆ ಹಾಗೂ ಸಂಗೀತ ಕ್ಷೇತ್ರದ ಕುರಿತಾಗಿ  ಅಂಕಣಗಳನ್ನು ಮೂಡಿಸುತ್ತ ಬಂದಿದ್ದಾರೆ. ಈ ಅಂಕಣ ಬರಹಗಳ ಸಂಗ್ರಹ ʻನಾದೋಪಾಸನʼ ಎಂಬ ಕೃತಿಯಾಗಿಯೂ ಪ್ರಕಟಗೊಂಡಿದೆ. ‘ಮಾತಿನೊಳಗಣ ಧಾತು' ಎಂಬ ಇವರ ಕೃತಿ ದಾಸಸಾಹಿತ್ಯ ಪರಂಪರೆ ಮತ್ತು ಸಂಗೀತಚಿತ್ರಣಗಳನ್ನು ಕುರಿತದ್ದಾಗಿದೆ.

ಸಾಧಕರಾದ ಡಾ. ಶ್ಯಾಮಲಾ ಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Shyamala Prakash Mumbai 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ