ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಹಲ್ಯಾ ಬಲ್ಲಾಳ್



 ಅಹಲ್ಯಾ ಬಲ್ಲಾಳ್


ಅಹಲ್ಯಾ ಬಲ್ಲಾಳ್ ಕನ್ನಡ ರಂಗಭೂಮಿಯ ಅಪರೂಪದ ಕಲಾವಿದೆಯರಲ್ಲೊಬ್ಬರು. ಅವರು ಭರತನಾಟ್ಯ ಕಲಾವಿದೆ, ಲೇಖಕಿ,  ಅನುವಾದಕಿ, ಹಲವು ಭಾಷೆಗಳಲ್ಲಿನ ಜಾಹೀರಾತು, ಟಿವಿ ಧಾರಾವಾಹಿಗಳು ಮತ್ತು ಹೆಸರಾಂತ ಹಿಂದಿಯ ವೆಬ್ ಸರಣಿಯಲ್ಲಿ ಅಭಿನಯಿಸಿರುವ ಕಲಾವಿದೆ, ಸಮಾಜ ಸೇವಕಿ, ಶಿಕ್ಷಕಿ ಹೀಗೆ ಬಹುಮುಖಿ. 

ಅಹಲ್ಯಾ ಅವರು ಜನಿಸಿದ್ದು ಡಿಸೆಂಬರ್ 1ರಂದು.  ತಂದೆ ಪಿ. ಎನ್. ವೆಂಕಟ್‍ರಾವ್. ತಾಯಿ ಜಾನಕಿ. ಚಲನಚಿತ್ರ ನಿರ್ದೇಶಕರಾದ ಪಿ. ಎನ್. ರಾಮಚಂದ್ರ ಅವರು ಅಹಲ್ಯಾ ಅವರ ಕಿರಿಯ ಸಹೋದರ.

ಅಹಲ್ಯಾ ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಿದ್ದಾಗ  ಅವರ  ಗಮನವೆಲ್ಲ ಭರತನಾಟ್ಯದತ್ತ ಇತ್ತು. ನೃತ್ಯ ಕಲಿಸುತ್ತಿದ್ದ ಗುರು ಮಿನಲ್ ಅಕ್ಕ ಮದುವೆಯಾಗಿ ಉಡುಪಿಯಿಂದ ಹೊರಟುಹೋದರೆಂಬ ಕಾರಣಕ್ಕೆ ಬೆಂಗಳೂರಿಗೆ ಭರತನಾಟ್ಯವನ್ನು ಮುಂದುವರೆಸಲು ಬಂದರು.  ಗುರು ವಸಂತಲಕ್ಷ್ಮಿಯವರ ಮಾರ್ಗದರ್ಶನದಲ್ಲಿ ಅವರ ರಂಗಪ್ರವೇಶವಾಯಿತು. ಕರ್ನಾಟಕ ಸರ್ಕಾರದ ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರು. ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಶಿಷ್ಯವೇತನ ದೊರೆಯಿತು. ಮುಂದೆ ಮದುವೆಯಾಗಿ ಮುಂಬಯಿಗೆ ಬಂದ ನಂತರ ಅಹಲ್ಯಾ ಅವರು ಕೆಲ ಕಾಲ ಗುರು ಇಂದೂ ರಾಮನ್ ಅವರಲ್ಲಿ ನೃತ್ಯಾಭ್ಯಾಸ ಮುಂದುವರೆಸಿದರು.  ಪ್ರಸಿದ್ಧ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಆವರಣದಲ್ಲಿ ಅಭಿನಯ ಸರಸ್ವತಿ ಕಲಾನಿಧಿ  ನಾರಾಯಣನ್ ಅವರ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ಭರತನಾಟ್ಯದ ವಿದ್ವತ್ ಪರೀಕ್ಷೆಯೂ ಆಗಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರು. ಕನ್ನಡ ಸಾಹಿತ್ಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.  

ಅಹಲ್ಯಾ ಅವರು ಮದುವೆಯಾಗಿ ಮುಂಬೈನಲ್ಲಿ ಬಂದು ಸೇರಿದ ಬಲ್ಲಾಳ್  ಕುಟುಂಬ ನಾಟಕರಂಗದಲ್ಲಿ ಪ್ರಸಿದ್ಧ ಹೆಸರು.  ಬೆಂಗಳೂರಿನಿಂದ ಬಂದ ರಂಗತಂಡಗಳ ನಿರ್ದೇಶಕ ನಟರಿಗೆ ಇವರ ಮನೆಯಲ್ಲಿ ಸತ್ಕಾರ ನಡೆಯುತ್ತಿದ್ದವು. ಸುತ್ತಮುತ್ತ ಅದೇ ವಾತಾವರಣ. ಹೀಗಾಗಿ ಸಹಜವಾಗಿಯೇ ಅಹಲ್ಯಾ ಅವರು ನಾಟಕಗಳಲ್ಲಿ ಪಾತ್ರ ವಹಿಸುವುದಕ್ಕೆ ಮೊದಲುಗೊಂಡಿತು. ಮೊದ ಮೊದಲು ಮನೆಯವರೇ ಮಾಡಿಸುತ್ತಿದ್ದ ನಾಟಕಗಳಲ್ಲಿ ಭಾಗವಹಿಸಿದರು.
ಜೊತೆಗೆ ಬಾನುಲಿ ಕಾರ್ಯಕ್ರಮಗಳಲ್ಲಿ ಧ್ವನಿ ನೀಡಲು ಇವರಿಗೆ ಅವಕಾಶಗಳು ಅರಸಿ ಬಂದವು. 

ಈ ಮಧ್ಯೆ ಅಹಲ್ಯಾ ಬಲ್ಲಾಳ್ ಅವರು ಜಾಹೀರಾತು ಪ್ರಪಂಚದಲ್ಲಿ ದುಡಿಯತೊಡಗಿದರು. ಬಿಡುವು ಮಾಡಿಕೊಂಡು ಮಕ್ಕಳ ನಾಟಕಗಳನ್ನು ಮಾಡಿಸಿದರು. ಅವಕಾಶ ಸಿಕ್ಕಾಗ ಬೇರೆ ತಂಡಗಳಲ್ಲಿ ಅಭಿನಯಿಸಿದರು. ಕರ್ನಾಟಕ ಸಂಘ ನಡೆಸುವ ಕುವೆಂಪು ಏಕಾಂಕ ನಾಟಕ ಸ್ಪರ್ಧೆಯಲ್ಲಿ ಕೆಲವೊಮ್ಮೆ ನಟಿಯಾಗಿ, ಪ್ರೇಕ್ಷಕಿಯಾಗಿ ಹಾಗೂ ತೀರ್ಪುಗಾರ್ತಿಯಾಗಿ ಭಾಗವಹಿಸಿದರು.

ಪದ್ಮಶ್ರೀ ದುಂಢೀರಾಜ್, ಸಹ್ಯಾದ್ರಿಯ ಸ್ವಾಭಿಮಾನ, ತರುಣ ದುರ್ದಂಡ ಮುದುಕ ಮಾರ್ತಾಂಡ, ನಮ್ಮ ನಮ್ಮಲ್ಲಿ, ಬಾಕಿ ಇತಿಹಾಸ, ಬೆಂದಕಾಳೂರು, ಪುಷ್ಪರಾಣಿ, ಮಂಥರಾ, ಎಲ್ಲಮ್ಮ, ಅಂಬೆ, ಕುವೆಂಪು ಕಂಡ ಮಂಥರೆ, ಮಾಯಾವಿ ಸರೋವರ, ಚೌಕಟ್ಟಿನಾಚೆಯ ಚಿತ್ರಗಳು ಮುಂತಾದವು ಅಹಲ್ಯಾ ಬಲ್ಲಾಳ್ ಅವರು ಅಭಿನಯಿಸಿರುವ ನಾಟಕಗಳಲ್ಲಿ ಸೇರಿವೆ.

"ಎಲ್ಲಕ್ಕಿಂತ ಮೊದಲು ನಾನು ನಾಟಕದ ಪ್ರೇಕ್ಷಕಿ" ಎನ್ನುವ ಅಹಲ್ಯಾ ಬಲ್ಲಾಳ್ ಅವರಿಗೆ ರಸಗ್ರಹಣದತ್ತ ಅಪಾರ ಒಲವು . ನೀನಾಸಂ ಸಾಂಸ್ಕೃತಿಕ ಶಿಬಿರ, ಅಕಾಡೆಮಿಯವರ ರಂಗಭೂಮಿ ರಸಗ್ರಹಣ ಕಮ್ಮಟ, ಮುಂಬೈ ಪೃಥ್ವಿ ಥಿಯೇಟರಿನ ನಾಟಕೋತ್ಸವದಲ್ಲಿ ಆರ್ಷಿಯಾ ಸತ್ತರ್ ನಡೆಸಿಕೊಟ್ಟ ಅಲ್ಪಾವಧಿಯ ಕಮ್ಮಟ; ಸಂಜನಾ ಕಪೂರ್ ಮತ್ತು ಸಮೀರಾ ಐಯಂಗಾರ್ ಜಂಟಿಯಾಗಿ ನಡೆಸುವ ‘ಜುನೂನ್’ ಕಾರ್ಯಕ್ರಮದ ಮುಂಬೈ ಲೋಕಲ್ಲಿನಲ್ಲಿ ಹಲವಾರು ಕಲಾವಿದರ ಅನುಭವಗಳನ್ನು ಕೇಳುವ ಅವಕಾಶ, ನಿರ್ದೇಶಕ ಸುನೀಲ್ ಶಾನಭಾಗ್- ಸಪನ್ ಸರನ್ ಇವರ ತಮಾಷಾ ಥಿಯೇಟರಿನವರು ಶಾಂತಾ ಗೋಖಲೆಯವರ ನೇತೃತ್ವದಲ್ಲಿ ನಡೆಸಿಕೊಟ್ಟ ಆರು ತಿಂಗಳ ಥಿಯೇಟರ್ ಅಪ್ರೀಸಿಯೇಷನ್ ಪ್ರೋಗ್ರಾಮ್ ಹೀಗೆ ಅವರದ್ದು ವಿಶಾಲ ವ್ಯಾಪ್ತಿಯ ರಸಗ್ರಹಣ ಪ್ರೀತಿ. ಈ ಕುರಿತಾದ ಅವರ ಬರಹಗಳು ಉದಯವಾಣಿ, ಅವಧಿ, ಪ್ರಜಾವಾಣಿಯ  ದೀಪಾವಳಿ ವಿಶೇಷಾಂಕ  ಮುಂತಾದೆಡೆ ಮೂಡಿಬಂದಿವೆ. ಬಹು ಭಾಷಾ ಸಂಸ್ಕೃತಿಗಳ ಮುಂಬೈನಲ್ಲಿ ಅವರ ಕಲಾಹೃದಯ ಕನ್ನಡ, ತುಳು ಅಲ್ಲದೆ, ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ; ಜೊತೆಗೆ ಬಂಗಾಳಿ, ತಮಿಳು, ಮಲಯಾಳೀ ಮೊದಲಾದ ಭಾಷೆಯ ಪ್ರಯೋಗಗಳು; ಅಂತರರಾಷ್ಟ್ರೀಯ ವಲಯದ ವಿಭಿನ್ನ ಅನೇಕಾನೇಕ ಪ್ರಯೋಗಗಳು ಹೀಗೆ ಎಲ್ಲವನ್ನೂ ಗ್ರಹಿಸುತ್ತ ಸಾಗಿದೆ. 

ಪಾಷಾ ಅವರ ‘ನಕ್ಕಳಾ ರಾಜಕುಮಾರಿ’ ಅಹಲ್ಯಾ ಬಲ್ಲಾಳ್ ಅವರು ಮಾಡಿಸಿದ ಮಕ್ಕಳ ನಾಟಕಗಳಲ್ಲಿ ಮೊದಲಿನದು.
ಅವರೇ ಇಂಗ್ಲಿಷಿನಿಂದ ಅನುವಾದಿಸಿದ ‘ಯಾರು ಶ್ರೇಷ್ಠರು’ , ವೈದೇಹಿಯವರ ‘ಸೂರ್ಯ ಬಂದ’ ಮತ್ತು ‘ಹಕ್ಕಿ ಹಾಡು’, ಎ. ಎಸ್. ಮೂರ್ತಿ ಅವರ 'ಗುಮ್ಮ' ಹೀಗೆ ಇನ್ನೂ ಅನೇಕವಿವೆ.  ಮಕ್ಕಳ ನಾಟಕವಷ್ಟೇ ಅಲ್ಲದೆ 'ಮಾಯಾವೀ ಸರೋವರ'ದಂತಹ ಅದ್ಭುತ ನಾಟಕ ನಿರ್ದೇಶನವನ್ನೂ ಮಾಡಿ ಎಲ್ಲರ ಮನಗೆದ್ದಿದ್ದಾರೆ. 

ಅಹಲ್ಯಾ ಬಲ್ಲಾಳ್ ಅನೇಕ ಜಾಹಿರಾತುಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ, ಹೆಸರಾಂತ ಹಿಂದಿಯ ವೆಬ್ ಸರಣಿಯಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯದೊಲವಿನ ಇವರು ವೈದೇಹಿಯವರ ಕೆಲವು ಕವನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.  ಅನೇಕ ಜೀವಗಳಿಗೆ ಆಪ್ತ ಸಮಾಲೋಚಕಿಯಾಗಿ ಸಹಾ ನೆರವು ನೀಡುತ್ತಿದ್ದಾರೆ. ಸಮಾಜ ಸೇವಕಿಯಾಗಿ ಅನೇಕ ರೀತಿಯಲ್ಲಿ ನೊಂದವರಿಗೆ ಸಹಾಯ ಹಸ್ತ, ಮಾರ್ಗದರ್ಶನ ನೀಡಿದ್ದಾರೆ. 

ಅಹಲ್ಯಾ ಬಲ್ಲಾಳ್ ಅವರು ಮುಂಬೈ ಕನ್ನಡ ಕಲಾ ಕೇಂದ್ರ  ನೀಡುವ ‘ಸುವರ್ಣಶ್ರೀ’ ಪ್ರಶಸ್ತಿ, ಚಾರ್ಕೋಪ್ ಕನ್ನಡಿಗರ ಬಳಗದವರು ನೀಡಿದ ಪ್ರಶಸ್ತಿ,   ಮಾತುಂಗಾ ಕರ್ನಾಟಕ ಸಂಘದಿಂದ ಎರಡು ಬಾರಿ 'ಭಾರತಿ ಕೊಡ್ಲೀಕೆರೆ ಪ್ರಶಸ್ತಿ’, ‘ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ’ಯಲ್ಲಿ ಮೂರು ಬಾರಿ ಅತ್ತ್ಯುತ್ತಮ ನಟಿ ಪ್ರಶಸ್ತಿ ಮೊದಲಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಅಖಿಲ ಭಾರತ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರರಾಗುವ ಗೌರವವೂ ಅವರಿಗೆ ಸಂದಿದೆ. 

ವೈದೇಹಿಯವರ ಸಾಲುಗಳು ಹೇಳುವಂತೆ
“ಕದಳೀ ಸಸಿಗಳ ನಾಲ್ಕು ಸಾಕಿಕೊಂಡಿದ್ದೇನೆ
ಮನೆಯ ಹಿಂದಿನ ಹಿತ್ತಿಲಲ್ಲಿ
ನಿನ್ನ ನೆನಪಿಗೆ ನನ್ನ ಯಥಾನುಶಕ್ತಿ" ಎನ್ನುತ್ತಾರೆ ಈ ನಮ್ಮ ಕನ್ನಡದ ಹೆಮ್ಮೆಯ ಸಾಧಕಿ ಅಹಲ್ಯಾ ಬಲ್ಲಾಳ್.‍

ಅವರ ಫೇಸ್ಬುಕ್ ಗೋಡೆಯ ಮೇಲೆ ನೋಡಿದ ಈ ವಾಕ್ಯ ಅವರ ಬಗ್ಗೆ ಹೇಳದೆ ಉಳಿದಿರುವ ಮತ್ತು ನನಗೆ ಗೊತ್ತಿಲ್ಲದ ಬಹಳಷ್ಟನ್ನು ಹೇಳುತ್ತದೆ ಎಂದುಕೊಂಡಿದ್ದೇನೆ:

We are all here on earth to help others; what on earth the others are here for I don't know - W. H. Auden

ಆತ್ಮೀಯರಾದ ಅಹಲ್ಯಾ ಅವರಿಗೆ ಹುಟ್ಟುಹ್ಬದ ಶುಭಹಾರೈಕೆಗಳು.  ನೀವು ನಮಗೆ ಸ್ಪೂರ್ತಿ. 

Ahalya Ballal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ