ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂ ಶಿ ವೀಣಾ


ಸಂ ಶಿ ವೀಣಾ

ನಮ್ಮ ಕನ್ನಡತಿ ಸಂ. ಶಿ. ವೀಣಾ ಅವರ ಬರಹಗಳೆಲ್ಲ ಹೊಸತನ ತುಂಬಿಕೊಂಡತಹವು.  

ಡಿಸೆಂಬರ್ 12 ವೀಣಾ ಅವರ ಹುಟ್ಟುಹಬ್ಬ.  ಮೈಸೂರು ಅವರು ಹುಟ್ಟಿ, ಓದಿ, ಬೆಳೆದ

ಊರು.  ಇಂಜಿನಿಯರಿಂಗ್ ಓದಿ, ಪ್ರಸಿದ್ಧ ಐಟಿ ಕಂಪನಿಯಲ್ಲಿ ಹಿರಿಯ ತಂತ್ರಜ್ಞರಾಗಿರುವ ಇವರು ಕುಟುಂಬದೊಂದಿಗೆ ಬೆಂಗಳೂರಿನ ನಿವಾಸಿ.

ಸಂ.‍ಶಿ. ವೀಣಾ ಅವರ ಬರಹಗಳನ್ನು ಓದಿದಾಗ ಅವರಿಗಿರುವ ವಿಶಾಲ ವ್ಯಾಪ್ತಿಯ ಸಾಹಿತ್ಯ,‍ ಸಂಗೀತ, ಸಿನಿಮಾ, ಕ್ರೀಡೆ, ಸಂಸ್ಕೃತಿಗಳ ಹೊಳಹು ಎದ್ದು ಕಾಣುತ್ತದೆ. ಕೊಳಲು ವಾದನದಲ್ಲೂ ಅವರಿಗೆ ಪರಿಣತಿ ಇದೆ.

ವೀಣಾ ಅವರ ಬರವಣಿಗೆಯಲ್ಲಿನ ಸರಳತೆ, ಸೂಕ್ಷ್ಮತೆ, ಬದುಕಿನ ಯಾವುದನ್ನೂ ಬಿಡದೆ ದಾಖಲಿಸುವ ರೀತಿ ಉಲ್ಲಸಿತವಾದದ್ದು.  ಮನೆ, ಮಕ್ಕಳು, ಮನಸ್ಸುಗಳು, ಬೆಳೆದ ವಾತಾವರಣ, ಸಂಬಂಧಗಳು, ಮಾರುಕಟ್ಟೆ, ಸಮಾರಂಭಗಳು, ವಿಭಿನ್ನ ಮನಃಸ್ಥಿತಿಗಳು, ಹೊಂದಾಣಿಕೆಗಳು, ಪ್ರಾಪಂಚಿಕ ಸುದ್ದಿಗಳು, ಸೋಷಿಯಲ್‍ ಮೀಡಿಯಾ ವಿಶಿಷ್ಟತೆಗಳು, ವಿಭಿನ್ನ ನಿಲುವುಗಳು, ತಮಗೆ ಅರ್ಥವಾಗದ್ದು, ತಾವು ಅರ್ಥ ಮಾಡಿಕೊಂಡ ರೀತಿ ಇವೆಲ್ಲವನ್ನೂ ಬರಹರೂಪದಲ್ಲಿರಿಸುವ ವೀಣಾ ಅವರ ಬರಹದ ವ್ಯಾಪ್ತಿ ಸಾಮಾನ್ಯ ಜೀವನಕ್ಕೆ ಸಂಬಂಧಪಟ್ಟವೇ ಆದರೂ ಹೀಗೆ ಎಲ್ಲವೂ ಒಂದೆಡೆಯಲ್ಲಿ ಒಬ್ಬರೇ ವ್ಯಕ್ತಿಯಿಂದ ಅಭಿವ್ಯಕ್ತಿ ಪಡೆಯವುದು ಊಹಿಸಲೂ ನಿಲುಕದಂತಹವು.  ಅವರ ಬರಹಗಳಲ್ಲಿ ಎದ್ದು ಕಾಣುವ ಗುಣವೆಂದರೆ abundance of common sense or common wisdom.  ಸಾಮಾನ್ಯವಾಗಿ ವಿವಾದಾತ್ಮಕ ನಿಲುವುಗಳನ್ನು ತಾಳದ ವೀಣಾ ಕೆಲವೊಮ್ಮೆ ಯಾವುದೇ ಹಿಂಜರಿಕೆಯಿಲ್ಲದೆ ಕೆಲವು ಆತ್ಮೀಯ ವಲಯದ ಹೆಸರುಗಳನ್ನೇ ಹಾಕಿ ಅವರು ಹೀಗೆ ಯಾಕೆ ಮಾಡಿದರು ಎಂದು ಮುಚ್ಚು ಮರೆ ಇಲ್ಲದೆ ಬರೆದರೂ, ಅಲ್ಲಿ ಟೀಕೆ ಕಾಠಿಣ್ಯಗಳಿಲ್ಲದೆ ಅದರ ಬಗ್ಗೆ ಆಯಾ ವ್ಯಕ್ತಿಗಳ ಅಭಿಪ್ರಾಯ ತಿಳಿಸಲು ಆಹ್ವಾನ ನೀಡುವಂತೆ ಬರೆದಿರುತ್ತಾರೆ.

ಕತೆ, ಕಾದಂಬರಿ, ಪ್ರಬಂಧ, ಅಂಕಣ ಹೀಗೆ ಯಾವುದೇ ಟ್ಯಾಗ್ ಇಲ್ಲದೆ ಬರೆಯುವ ಸಂ. ಶಿ. ವೀಣಾ ಅಂತಹವರ ಬರವಣಿಗೆಗಳಿಗೆ ತನ್ನದೇ ಆದ ವಿಶಿಷ್ಟ ಮಹತ್ವವಿದೆ.  ಯಾವುದೇ ಪತ್ರಿಕೆ, ಪುಸ್ತಕ ಇವೆಲ್ಲವುಗಳನ್ನೂ ಮೀರಿದ ಇಂತಹ ಬರಹಗಳು ಸೋಷಿಯಲ್ ಮೀಡಿಯಾಗಿರುವ ವಿಶಿಷ್ಟ ಸಾಧ್ಯತೆ.  ಬದುಕಲ್ಲಿ ಏನನ್ನೊ ಅರಸುವುದಕ್ಕಿಂತ ನಮ್ಮ ಬದುಕನ್ನೇ ನಮ್ಮ ಮನದ ಕನ್ನಡಿಯಲ್ಲಿ ಹೀಗೆ ಕಂಡುಕೊಳ್ಳುವುದು ಅತ್ಯಂತ ಉಪಯುಕ್ತ. 

ಆತ್ಮೀಯರಾದ ಸಂ. ಶಿ. ವೀಣಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Veena Shivanna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ