ಬಿ. ವಸು
ಬಿ. ವಸು
ಬಿ. ವಸು ಕನ್ನಡದ ಮನೋಜ್ಞ ಯುವ ಪ್ರತಿಭೆ. ಈ ಹುಡುಗಿಯ ಕಾವ್ಯ ಮತ್ತು ಕನ್ನಡ ಪದಲಾಲಿತ್ಯ ಮನಸೂರೆಗೊಳ್ಳುವಂತದ್ದು. ಈ ಪುಟ್ಟ ಹುಡುಗಿಯಲ್ಲಿ ಅದೆಂತಹ ಮಧುರ ಕನ್ನಡ ನಲಿಯುತ್ತಿದೆ ಎಂಬುದೊಂದು ವಿಸ್ಮಯ.
ಡಿಸೆಂಬರ್ 15 ವಸು ಅವರ ಹುಟ್ಟುಹಬ್ಬ. ಇವರು ಹುಟ್ಟಿದ್ದು ತಮಿಳುನಾಡಿನ ಪಳನಿಯಲ್ಲಿ. ಬೆಳೆದದ್ದು ಮೈಸೂರು ಜಿಲ್ಲೆಯ, ಹೆಚ್ ಡಿ ಕೋಟೆ ತಾಲ್ಲೂಕಿನ, ಪುಟ್ಟ ಹಳ್ಳಿ "ಕನಕನಹಳ್ಳಿ ತಿಟ್ಟು" ಎಂಬಲ್ಲಿ. ತಂದೆ ಉದಯಕುಮಾರ್. ತಾಯಿ ಮೀನಾಕ್ಷಿ. ಪ್ರಾಥಮಿಕ ವ್ಯಾಸಂಗವನ್ನು ಕನಕನಹಳ್ಳಿಯ ಸಮೀಪದ ಹಳ್ಳಿ ಎನ್ ಬೇಗೂರಿನಲ್ಲಿ ಮತ್ತು ಪ್ರೌಢಶಾಲೆ ವ್ಯಾಸಂಗವನ್ನು ಕೆಂಚನಹಳ್ಳಿಯಲ್ಲಿ ನಡೆಸಿದರು. ಪದವಿಪೂರ್ವ ಶಿಕ್ಷಣವನ್ನು ಹೆಚ್ ಡಿ ಕೋಟೆಯ ಗರ್ಲ್ಸ್ ಕಾಲೇಜಿನಲ್ಲಿ ನಡೆಸಿ, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೆ ಮನೆ ಹಿರಿಯರ ಇಚ್ಛೆಯಂತೆ ಮದುವೆಯಾಯಿತು.
ಸಂಸಾರದಲ್ಲಿ ತೊಡಗಿಕೊಂಡು ಬರಹ ಮತ್ತು ಓದಿನ ವ್ಯಾಮೋಹ ಕಳೆದುಕೊಂಡಿದ್ದ ವಸು ಅವರಿಗೆ ಫೇಸ್ಬುಕ್ ಜಾಲತಾಣದಲ್ಲಿನ ಕಥಾ ಅರಮನೆ ಮತ್ತು ಕಥಾಗುಚ್ಛ ಗುಂಪುಗಳನ್ನು ಕಂಡು ಮತ್ತೆ ಬರಹದಲ್ಲಿ ಆಸಕ್ತಿ ಮೂಡಿತು.
ಕಥಾಗುಚ್ಛದಿಂದ ಬಿಡುಗಡೆಯಾದ "ಹಸಿರು ಗಾಜಿನ ಬಳೆಗಳೇ" ಕೃತಿಯಲ್ಲಿ ಇವರ ಎರಡು ಕವಿತೆಗಳು ಪ್ರಕಟಗೊಂಡಿವೆ. ಪ್ರತಿಲಿಪಿಯಲ್ಲಿನ ಇವರ ಬರಹಗಳು ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ. ಪ್ರತಿಲಿಪಿಯ ನೀಳ್ಗಥಾ ಸ್ಲರ್ಧೆಯಲ್ಲಿ "ತಟಿದಂಗನೆ" ಎನ್ನುವ ಆತ್ಮಕಥನ ಬಹುಮಾನ ಗಳಿಸಿತು. "ಕಣ್ಣ ಬೀದಿಯಲಿ ಹನಿದೇರು" ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023 ರ ಕವನ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆಯಿತು. 2023-2024 ನೇ ಸಾಲಿನ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಪ್ಪತಗಿರಿ ನ್ಯೂಸ್ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಲೇಖನ ಸ್ಪರ್ಧೆಯಲ್ಲಿ "ಓ ಸೋಲೆ ಥ್ಯಾಂಕ್ಯೂ" ವಿಷಯದ ಕುರಿತು ಬರೆದ ಇವರ ಲೇಖನ ಮೊದಲ ಬಹುಮಾನವನ್ನು ಗಳಿಸಿದೆ. ನಾಡಿನ ಪ್ರಮುಖ ನಿಯತಕಾಲಿಕಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟಗೊಂಡಿವೆ. ಫೇಸ್ಬುಕ್ ಮತ್ತು ಪ್ರತಿಲಿಪಿ ಜಾಲತಾಣಗಳಲ್ಲಿ ಇವರ ಕವಿತೆಗಳು ಮತ್ತು ಬರಹಗಳು ನಿರಂತರ ನಮ್ಮ ಮನಸೂರೆಗೊಳ್ಳುತ್ತಿವೆ.
ಬೆಂಗಳೂರಿನಲ್ಲಿ ವಾಸವಿರುವ ವಸು ಅವರು ಮನೆ ಮತ್ತು ಮಕ್ಕಳ ನಿರ್ವಹಣೆಯ ನಡುವೆ ವ್ಯಾಸಂಗ ಮತ್ತು ಬರವಣಿಗೆಯಲ್ಲಿ ತಮ್ಮನ್ನು ಆಪ್ತವಾಗಿರಿಸಿಕೊಂಡಿದ್ದಾರೆ.
ಸುಲಲಿತ ಹಾಸ್ಯ ಪ್ರಜ್ಞೆ, ಪ್ರೇಮ ಭಾವ ಮತ್ತು ಉತ್ತಮ ಭಾಷಾ ಬಳಕೆಗಳು ಇವರ ಬರವಣಿಗೆಗಳು ಗಮನ ಸೆಳೆಯುತ್ತಿರುವುದರ ಜೊತೆಗೆ ಎಲ್ಲರನ್ನೂ ಆಪ್ತವಾಗಿ ಗೌರವಿಸಿ ಸ್ನೇಹಭಾವದಲ್ಲಿ ಕಾಣುವ ಇವರ ಸ್ವಭಾವವೂ ಮೆಚ್ಚುಗೆ ಹುಟ್ಟಿಸುವಂತದ್ದು.
ಚಿಕ್ಕ ವಯಸ್ಸಿನಲ್ಲೇ ಸಂಸಾರದ ದೊಡ್ಡ ದೋಣಿಯ ಹುಟ್ಟುಹಾಕುತ್ತಿರುವ ಈ ಪುಟಾಣಿ ಹುಡುಗಿಯ ಪ್ರತಿಭೆ ವಿಸ್ಮಯಯುತವೆನ್ನುವಂತೆ ಮನಸೆಳೆಯುತ್ತಿರುತ್ತವೆ. ಇತ್ತೀಚೆಗೆ ಈ ಹುಡುಗಿ ಬರೆದಿರುವ ಈ ಕವಿತೆ ಇದಕ್ಕೊಂದು ಉದಾಹರಣೆ:
ಬೇಡ ಬೇಡೆನ್ನುವ 'ಬೇಕುಗಳು'
ಸಿಗಬೇಡ ನೀನು ಈ ಕಡು
ಶಿಶಿರದ ದಾರಿಗಳಲಿ ಎದುರಾಗಬೇಡ
ತಿರುವುಗಳಲಿ ಕಾಣಿಸಬೇಡ ಬೇಡ ಸಂದುಗೊಂದಿನಲಿ ಕೆಣಕಬೇಡ ಬೇಡ
ಮೂಳೆಗಳ ಹಿಮವ ಕರಗಿಸಬೇಡ
ಬೇಡ ನೀನು ಬೇಡ
ಬರೆಯಬೇಡ ಬೆರಳುಗಳ ಗೀರಬೇಡ
ಬೆಂಕಿ ಕಡ್ಡಿ ಹೊತ್ತಿಸಬೇಡ
ಭಗ್ಗನೆ ಬಣವೆಯ ಕದಡಬೇಡ
ಕೆದಕಬೇಡ ಕರಣಗಳ ಕೊಲ್ಲಬೇಡ
ಚರಣಗಳ ನಿಲ್ಲಿಸಬೇಡ
ಹಾಡಬೇಡ ಕಾದ ಕಾಡಿನಲ್ಲಿ
ಉಸಿರ ಹಾಸಬೇಡ
ಮುಡಿಸಬೇಡ ಮೋಹ ಮಲ್ಲಿಗೆಯ ಎದೆಗೆ
ಬೇಡ ಬೇಡ ಸಿಗಬೇಡ ಧುತ್ತನೆ
ಬೇಡ ಸಿಗಬೇಡ ಸಿಕ್ಕು ಸಿಕ್ಕಾಗಬೇಡ
ಕಾಣಿಸಬೇಡ ತಿರುವು ಆಳ ಕೊರಕಲು
ಕಣಿವೆಗಳಿಗೆ ಕರೆದೊಯ್ಯಬೇಡ
ದಿಬ್ಬ ಹತ್ತಿಸಬೇಡ ಇಳಿಸಬೇಡ
ಭಾರವ ಕಳೆಯಬೇಡ
ಖಾಲಿ ಮಾಡಿಸಬೇಡ ಬೇಡ
ಬೇಡ ಅಂದದ್ದೆಲ್ಲ ನಿಜ ಆಗಿಸಬೇಡ
----
ಆತ್ಮೀಯ ಪ್ರತಿಭಾನ್ವಿತೆ ಸಹೃದಯಿ ವಸು ಅವರಿಗೆ ಹುಟ್ಟುಬ್ಬದ ಹಾರ್ದಿಕ ಶುಭಹಾರೈಕೆಗಳು.
ಕಾಮೆಂಟ್‌ಗಳು