ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೇಘನಾ

ಮೇಘನಾ

ನಮ್ಮೆಲ್ಲರ ಅಕ್ಕರೆಯ ಹುಡುಗಿ ಮೇಘನಾ ಅಪರಿಮಿತ ಉತ್ಸಾಹವುಳ್ಳ ಬಹುಮುಖಿ ಪ್ರತಿಭೆ.

ಫೆಬ್ರುವರಿ 24, ಮೇಘನಾ ಹುಟ್ಟು ಹಬ್ಬ.  ಆಕೆ  ಹುಟ್ಟಿ ಬೆಳೆದದ್ದು ಹುಬ್ಬಳ್ಳಿಯಲ್ಲಿ.  ಅಮ್ಮನ ಅಪಾರ ಓದು, ಅಪ್ಪನ ಸಾಂಸ್ಕೃತಿಕ ಆಸಕ್ತಿ ಈಕೆಯನ್ನು ಬಾಲ್ಯದಲ್ಲೇ ಪ್ರಭಾವಿಸಿತು.

ಮೇಘನಾಳಲ್ಲಿ ಬಾಲ್ಯದಿಂದ ಮೂಡಿ ಮುಂದೆ ಅರಳಿ ನಿಂತಿರುವ ಪ್ರತಿಭೆಯನ್ನು ಆಕೆಯ ತಂದೆ ಚಿದಂಬರ ಕಾನೇಟ್ಕರ್ ಹೀಗೆ ಗುರುತಿಸಿದ್ದಾರೆ: 

"ಮೇಘನಾ ಮಗುವಿದ್ದಾಗಿನಿಂದಲೂ ಬಹಳ ಕುತೂಹಲ ಸ್ವಭಾವದವಳು. ಯಾವ ವಿಷಯವೇ ಇರಲಿ ಸುಲಭವಾಗಿ ಒಪ್ಪಿಕೊಳ್ಳುವ ಜಾಯಮಾನ ಅವಳದ್ದಾಗಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪ್ರತಿವರ್ಷವೂ ಆಟ-ಪಾಠ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಒಂದಿಲ್ಲೊಂದು ಪಾರಿತೋಷಕ ಇಲ್ಲವೇ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಿದ್ದಳು. ಅದನ್ನು ಕಂಡಾಗ ನಮಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.  ಬೆಳೆಯುವ ಸಿರಿಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಮಾಧ್ಯಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣಕ್ಕೆ ಬಂದಾಗ, ಅವಳಲ್ಲಿ ಸಾಹಿತ್ಯಾಸಕ್ತಿ ಬೆಳೆಯಲು ಪ್ರಾರಂಭವಾಯಿತು. ಆ ಸಮಯದಲ್ಲೆ ಅವಳು, ಹಲವಾರು ಚುಟುಕು ಕವನಗಳನ್ನು ಹಾಗೂ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದಳು.  ಕಾರಣಾಂತರಗಳಿಂದ ಇತ್ತೀಚಿನ ಕೆಲವು ವರ್ಷಗಳಿಂದ ನಿಂತು ಹೋಗಿದ್ದ ಅವಳ ಬರವಣಿಗೆ ಈಗ 'ಕಾಡುವ ಹುಡುಗ' ಎಂಬ ಕಲ್ಪನೆಯ ಪ್ರತಿರೂಪದ ಬರಹವು ಕವನದ ರೂಪದಲ್ಲಿ ಪ್ರತಿ ಲಿಪಿತಂತ್ರಾಂಶದಲ್ಲಿ ಕಂಡು, ನನ್ನ ಕಣ್ಣನ್ನು ನಾನೇ ನಂಬಲು ಆಗಲಿಲ್ಲ.  ಹದಿಹರೆಯದ ಹುಡುಗ-ಹುಡುಗಿಯರಲ್ಲಿ ಸಾಮಾನ್ಯವಾಗಿ ಕಾಣುವ ಎಲ್ಲ ಲಕ್ಷಣಗಳು ಮನಸ್ಸಿಗೆ ಮುದ ನೀಡುವಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕುಮಾರಿ ಮೇಘನಾ ನನ್ನ ಮಗಳೆಂಬ ಹೆಮ್ಮೆ ಒಂದೆಡೆಯಾದರೆ, ಅವಳ ಈ ಪ್ರಬುದ್ಧವಾದ ಬರವಣಿಗೆಯ ಶೈಲಿ ಕಂಡು ನಾನು ಬೆರಗಾದೆ."

ಮೇಘನಾಳ ತಂದೆ ಚಿದಂಬರ ಕಾನೇಟ್ಕರ ಅವರು ಹೇಳಿರುವಂತೆ, ಆಕೆಯ ಆಪ್ತರಿಗೆಲ್ಲರಿಗೂ ಆಕೆಯ ಪ್ರತಿಭೆ ಒಂದು ಬೆರಗು.  ಓದಿನಲ್ಲಿ ಆಕೆ ಬಿ.ಕಾಮ್, ಎಲ್.ಎಲ್.ಬಿ ಹಾಗೂ ಟ್ಯಾಕ್ಸೇಷನ್ ವಿಷಯಗಳಲ್ಲಿ ವಿಶೇಷ ಶೈಕ್ಷಣಿಕ ಸಾಧನೆಗಳನ್ನು ಮಾಡಿದ್ದಾರೆ.  

ಮೇಘನಾಗೆ ಶಿಕ್ಷಣ ಕ್ಷೇತ್ರ ಇಷ್ಟವಾಗಿತ್ತು.  ತಾನು ಓದುವ ದಿನಗಳಿಂದ ಟ್ಯೂಷನ್ ಮಾಡುತ್ತಾ ತಾನೂ ಬೆಳೆದ ಈಕೆ ಕೆಲವು ಕಾಲ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿ ನಂತರ ಅಕೌಂಟ್ಸ್ ಮತ್ತು ಆಡಿಟ್ ಕ್ಷೇತ್ರಕ್ಕೆ ಬಂದರು.

ಸಾಹಿತ್ಯದ ಓದಿನಲ್ಲಿ ಅಪಾರ ಆಸಕ್ತಿ ಉಳ್ಳ ಮೇಘನಾ ಅವರ ಬರಹಗಳು ವಿದ್ಯುನ್ಮಾನ ಕ್ಷೇತ್ರ ಮಾಧ್ಯಮದಲ್ಲಿ, ನಿಯತಕಾಲಿಕಗಳಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಮೂಡುತ್ತಿವೆ.  ಕವಿತೆ, ಕಥೆ, ಪ್ರಬಂಧ, ಲೋಕದೃಷ್ಟಿ, ವಿಜ್ಞಾನ, ತಂತ್ರಜ್ಞಾನ, ಮನೋ ವಿಜ್ಞಾನ ಹೀಗೆ ಎಲ್ಲ ನಿಟ್ಟಿನಲ್ಲಿ ಆಕೆ ಬರೆಯುತ್ತಿದ್ದಾರೆ.  ಹೀಗೆ ಅವರು ಬರೆದು ವಿವಿಧ ಮಾಧ್ಯಮಗಳಲ್ಲಿ ಮೂಡಿರುವ ಬರಹಗಳ ಸಂಖ್ಯೆ 500ನ್ನು ಮೀರಿದ್ದು.‍ 'ಕಾಡುವ ಹುಡುಗ' ಎಂಬ ಕವಿತಾ ಸಂಕಲನವನ್ನು ಪ್ರಕಟಿಸಿದ್ದಾರೆ. ಮುಂದೆ ಅವರ 'ಲೈಫ್‍ನಲ್ಲೊಂದು ಯೂ ಟರ್ನ್' ಕಥಾಸಂಕಲನ ಪ್ರಕಟವಾಗಿದೆ.

ಕಾರ್ಯಕ್ರಮ ನಿರೂಪಣೆ ಮೇಘನಾ ಅವರ ಮತ್ತೊಂದು ಸಾಧನೆಯ ಕ್ಷೇತ್ರ.  ಇದು ಕೂಡಾ ಅವರಿಗೆ ಶಾಲಾ ದಿನಗಳಿಂದ ಸಿದ್ಧಿಸಿದ್ದು, ಕಳೆದ ಹಲವಾರು ವರ್ಷಗಳಲ್ಲಿ ಅವರು ಅನೇಕ ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತ ಬಂದಿದ್ದಾರೆ. ಇವರ ಕನ್ನಡ‍ ಭಾಷಾ ಬಳಕೆಯ ಸುಸ್ಪಷ್ಟತೆಯನ್ನು ಅನೇಕ ಹಿರಿಯರು ಮೆಚ್ಚಿದ್ದಾರೆ.  ಮೇಘನಾ ಅನೇಕ ವೇದಿಕೆಗಳಲ್ಲಿ ವಿಷಯಾಧಾರಿತ ಪ್ರಬಂಧ ಮಂಡನೆಯನ್ನೂ ಮಾಡಿದ್ದಾರೆ. 

ಮೇಘನಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮಾಡಿದ್ದಾರೆ.  ಜೊತೆಗೆ ನೂರೆಂಟು ಆಸಕ್ತಿಗಳ ಬಗೆ ಬಗೆಯ ಕನಸುಗಳೂ ಆಕೆಯಲ್ಲಿವೆ.  ರೋಟರಿ ಸಂಸ್ಥೆ ಅವರಿಗೆ 'ಸಾಹಿತ್ಯ ರತ್ನ' ಪ್ರಶಸ್ತಿ ಕೊಟ್ಟು ಮತ್ತಷ್ಟು ಸಾಧಿಸಲು ಹುರಿದುಂಬಿಸಿದೆ.

ಅಕ್ಕರೆಯ ಪ್ರತಿಭೆ ಮೆಘನಾಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆ.

Happy birthday Meghana Kanetkar🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ