ಸತ್ಯಕಾಮ ಶರ್ಮಾ
ಇಂದು ಆತ್ಮೀಯರೂ, ಬರಹಗಾರರೂ ಆದ ಸತ್ಯಕಾಮ ಶರ್ಮಾ ಅವರ ಜನ್ಮದಿನ.
ಸತ್ಯಕಾಮ ಶರ್ಮಾ ಅವರು ಮೂಲತಃ ಕಾಸರಗೋಡಿನವರು. ಅವರ ವಿದ್ವತ್ ಪೂರ್ಣ ಇಂಗ್ಲಿಷ್ ಮತ್ತು ಕನ್ನಡ ಬರಹಗಳನ್ನು ಅನೇಕ ಪತ್ರಿಕೆಗಳಲ್ಲಿ ಬ್ಲಾಗ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕಂಡಿದ್ದೇನೆ. ಸಂಸ್ಕೃತದಲ್ಲೂ ಅವರಿಗೆ ಪಾಂಡಿತ್ಯವಿದೆ.
ಸೃಜನಶೀಲತೆಯೇ ಬುದ್ಧಿಮತ್ತೆಯ ಉತ್ತುಂಗ ಎಂದು ಬಲವಾಗಿ ನಂಬುವ ಸತ್ಯಕಾಮ ಶರ್ಮಾ ಅವರದದ್ದು ಮುಕ್ತ ಮನಸ್ಸು. ಎಲ್ಲವನೂ ಒಳಗೊಳ್ಳುವ, ಯಾವುದಕ್ಕೂ ಕಟ್ಟು ಬೀಳದ ಚಿಂತಕ ಮತ್ತು ಬರಹಗಾರರಾದ ಇವರ ಕವಿತೆಗಳು , ಬಿಡಿ ಲೇಖನಗಳು, ಕಥೆಗಳು, ಲಲಿತ ಪ್ರಬಂಧಗಳು Times of India, The Hindu ಸೇರಿದಂತೆ ನಾಡಿನ ಮುಂಚೂಣಿಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಜಗತ್ತನ್ನು ತಾಜಾ ಶಿಶುವಿನ ಮಾದರಿಯ ಬೆರಗಿನಲ್ಲಿ ಸದಾ ನೋಡಬೇಕು ಎಂಬ ಸದಾಶಯವುಳ್ಳ ಅವರಿಗೆ ಇಷ್ಟವಾಗದ ಸಂಗತಿಗಳು : ಅಹಂಕಾರ ಮತ್ತು ಅವಸರ.
ಇತ್ತೀಚೆಗೆ ಸತ್ಯಕಾಮ ಶರ್ಮಾ ಅವರು ಅನುವಾದಿಸಿರುವ, ಡಾ ರಂಜನ್ ಪೇಜಾವರ್ ಅವರ 'ದ ಹೆವೆನ್ ಆಸ್ ಐ ಸಾ' ಕಾದಂಬರಿ 'ಸ್ವರ್ಗ ನಾ ಕಂಡಂತೆ' ಶೀರ್ಷಿಕೆಯಡಿ ಪ್ರಕಟಗೊಂಡು ಓದುಗರು ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದೆ.
ಸತ್ಯಕಾಮ ಶರ್ಮಾ ಅವರು ತಮ್ಮ ಬರಹದ ಕುರಿತು ತಾವೇ ಹೇಳುವ ಈ ಮಾತು ನನಗೆ ತುಂಬಾ ಇಷ್ಟವಾದದ್ದು "I write therefore I am. It is no holds barred. World is the page I crawl on. At the end of the day I want the readers to wonder 'what is in store for us next?' If in the due course I succeed in discovering myself, I would feel gratified.”
ಸತ್ಯಕಾಮ ಶರ್ಮಾ ಅವರು ಬಹಳ ವರ್ಷಗಳಿಂದ ನನ್ನ ಬರಹಗಳನ್ನು ಗಮನಿಸುತ್ತ ಬಂದಿರುವುದು ನನ್ನ ಸೌಭಾಗ್ಯಗಳಲ್ಲೊಂದು. ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಹಾರೈಕೆಗಳು.
ಕಾಮೆಂಟ್‌ಗಳು