ವಿಮಲಾ ರಂಗಾಚಾರ್
ವಿಮಲಾ ರಂಗಾಚಾರ್ ಇನ್ನಿಲ್ಲ
ನಾಡಿನ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಲೋಕದ ಮಹನೀಯೆ, ಕಲಾಪೋಷಕಿ, ರಂಗಭೂಮಿ ಕಲಾವಿದೆ, ಸಂಘಟನಾ ಚತುರೆ ವಿಮಲಾ ರಂಗಾಚಾರ್ ನಿಧನರಾಗಿದ್ದಾರೆ. ಅವರು ಬೆಂಗಳೂರಿನ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಅವಿಭಾಜ್ಯ ಅಂಗವಾಗಿ ಬೆಳಗುತ್ತಿದ್ದವರು.
ವಿಮಲಾ ರಂಗಾಚಾರ್ ಅವರು 1929ರ ಜುಲೈ 19ರಂದು ಜನಿಸಿದರು. ಅವರು ವೆಂಕಟರಂಗಯ್ಯಂಗಾರ್ ಅವರ ಮರಿಮಗಳಾಗಿ ಹಾಗೂ ರಾಮಾನುಜ ಅಯ್ಯಂಗಾರ್ ಮತ್ತು ಅಮ್ಮಣ್ಣಿ ಅಯ್ಯಂಗಾರ್ ಅವರ ಮಗಳಾಗಿ ಒಂದು ಸುಸಂಸ್ಕೃತ - ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದರು. ಬಾಲ್ಯದಲ್ಲಿ ಕೆಲಕಾಲ ಸಂಗೀತ (ವೀಣೆ) ಅಭ್ಯಾಸವನ್ನೂ ಮಾಡಿದ ಅವರು ಕಲಾವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಲ್ಲದೆ ಇಂಗ್ಲಿಷ್‍ನಲ್ಲಿ ಉನ್ನತ ಅಂಕಗಳಿಸಿ ಬಹುಮಾನವನ್ನೂ ಗಳಿಸಿದವರು. ಅವರು ನಿರಂತರ ಓದಿನಿಂದ ಬಾಲ್ಯದಿಂದ ಸಾಹಿತ್ಯದ ಒಲವು ಬೆಳೆಸಿಕೊಂಡವರು. ಹಿರಿಯರಾದ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ವೆಂಕಟಾಚಲಂ (ವೆಂಕ) ಅವರಿಂದ ಪ್ರೇರಿತರಾದ ವಿಮಲಾ ರಂಗಾಚಾರ್ ಲಲಿತಕಲೆ ಮತ್ತು ಕರಕುಶಲ ಕಲೆಗಳ ಮೂಲಕ ನಿರಂತರ ಸೇವೆಸಲ್ಲಿಸಿದವರು.
ವಿಮಲಾ ರಂಗಾಚಾರ್ ಅವರು ಬೆಂಗಳೂರಿನಲ್ಲಿ 'ಬಾಲಭವನ' ವನ್ನು ಸ್ಥಾಪಿಸಿ, ಮಕ್ಕಳ ಸರ್ವತೋಮುಖ ಬೆಳವಣಿಗಾಗಿ ಒಂದು ತಾಣವನ್ನೇ ಸೃಷ್ಟಿಸಿದರು. ಅಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿಯೇ "ವಿಜಯರಂಗ" ಎಂಬ ವೇದಿಕೆಯನ್ನೂ ಮಾಡಿ ಚಿಣ್ಣರ ಪ್ರತಿಭಾ ವಿಕಸನಕ್ಕೆ ದಾರಿ ಮಾಡಿಕೊಟ್ಟರು. ಕರಕುಶಲ ಕಲಾವಿದರುಗಳ ನಿರ್ಮಿತಿಯ ಪ್ರದರ್ಶನ, ಮಾರಾಟಕ್ಕಾಗಿ ಅವರು ಪ್ರಾರಂಭಿಸಿದ "ಕಾವೇರಿ" ಇಂದು ಪ್ರತಿಷ್ಠಿತ ಮಳಿಗೆಯಾಗಿ ಬೆಳೆದಿದೆ. ಅವರು ತಮ್ಮ ಪತಿ ಡಾ. ರಂಗಾಚಾರ್ ಅವರೊಂದಿಗೆ ಮೊದಲಿನಿಂದಲೂ ರಂಗಭೂಮಿಯಲ್ಲಿ ತೊಡಗಿಕೊಂಡವರು. ಹೀಗಾಗಿ ಅವರು ಬಾನುಲಿ ಮತ್ತು ರಂಗಭೂವಿಗಳೆರಡರಲ್ಲೂ ಯಶಸ್ವಿಯಾಗಿ ಅಭಿನಯಿಸಿ, ನಗರದ ಸುಪರಿಚಿತ 'ಎ.ಡಿ.ಎ. ರಂಗಮಂದಿರ' ದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ವಿಮಲಾ ಅವರು ರವೀಂದ್ರ ಕಲಾಕ್ಷೇತ್ರದ ಸ್ಥಾಪನೆಗಾಗಿ ನಿಯೋಜಿತ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಕೆನರಾ ಬ್ಯಾಂಕಿನ ನಿರ್ದೇಶಕರಾಗಿ ನಾಮಕರಣಗೊಂಡಾಗ ಕರಕುಶಲ ಕಲಾವಿದರಿಗಾಗಿ ವಿಶೇಷ ಸವಲತ್ತುಗಳು ದೊರಕುವಂಥ ವ್ಯವಸ್ಥೆ ಮಾಡಿದರು. ಅಲ್ಲದೆ ಉದ್ಯೋಗಸ್ಥ ಮಹಿಳೆಯರಿಗಾಗಿ "ಎಂ.ಈ.ಡಬ್ಲ್ಯು.ಎಸ್" ಸ್ಥಾಪಿಸಿ ನೆರವಾದರು. ಇವೆಲ್ಲಕ್ಕೂ ಕಳಶಪ್ರಾಯವಾಗಿ ಸೇವಾ ಸದನದ ಅಧ್ಯಕ್ಷರಾಗಿ, ಅನಾಥ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದುದು ಮಹತ್ವದ ಕೆಲಸವಾಗಿದೆ.
ವಿಮಲಾ ರಂಗಾಚಾರ್ ಅವರು ಬಿ.ವಿ.ಕೆ.ಶಾಸ್ತ್ರಿ ಮತ್ತು ಇ.ಆರ್.ಸೇತೂರಾಂ ಅವರ ಆಹ್ವಾನದ ಮೇರೆಗೆ ಕರ್ನಾಟಕ ಗಾನಕಲಾ ಪರಿಷತ್ತು ಪ್ರವೇಶ ಮಾಡಿ, ಅದರ ಅಧ್ಯಕ್ಷರಾಗಿ, ರಾಜ್ಯದ ಸಂಗೀತ ವಿದ್ವಾಂಸರ ಏಳಿಗೆಗಾಗಿ ಶ್ರಮಿಸಿದರು. ಬೆಂಗಳೂರಲ್ಲದೆ ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳಲ್ಲೂ ಸಂಗೀತ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ, "ಯುವಜನ ವಿಭಾಗ"ದ ಮೂಲಕ ಯುವ ಕಲಾವಿದರಿಗೆ ತುಂಬು ಪ್ರೋತ್ಸಾಹ ನೀಡಿದರು. ಸರ್ಕಾರ, ಅಕಾಡೆಮಿ ಮುಂತಾದ ಮೂಲಗಳಿಂದ ಹೆಚ್ಚಿನ ನೆರವು ಪರಿಷತ್ತಿಗೆ ದೊರಕುವಂತೆ ಪ್ರಭಾವ ಬೀರಿದರು. ಎಂ.ಇ.ಎಸ್. ಕಾಲೇಜಿನ "ಕಲಾವೇದಿ" ಯಲ್ಲೂ ನಿಯತವಾಗಿ ಸಂಗೀತ-ನೃತ್ಯ ಕಚೇರಿ ಉತ್ಸವಗಳನ್ನು ಏರ್ಪಡಿಸುತ್ತಾ ಕಲಾವೇದಿಯನ್ನು ನಗರದ ಒಂದು ಪ್ರಮುಖ ಸಾಂಸ್ಕೃತಿಕ ಸಭೆಯಾಗಿ ಬೆಳೆಸಿದ್ದರು. ಪ್ರೊ.ಎಂ.ಪಿ.ಎಲ್. ಶಾಸ್ತ್ರಿ ಅವರ ಅಪೇಕ್ಷೆಯ ಮೇರೆಗೆ ಎಂ.ಇ.ಎಸ್. ಕಾಲೇಜಿನ ಸಂಸ್ಥಾಪಕ ಸದಸ್ಯೆಯಾಗಿ, ಮುಂದೆ ಅದರ ಅಧ್ಯಕ್ಷೆಯಾಗಿ ಎಂ.ಇ.ಎಸ್. ಕಾಲೇಜನ್ನು ಬೆಂಗಳೂರಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಉಳಿಸಿ ಬೆಳೆಸಿದರು.
ವಿಮಲಾ ರಂಗಾಚಾರ್ ಅವರ ಬಹುಮುಖ ಸೇವೆಯನ್ನು ಮನ್ನಿಸಿ, ಸಹಜವಾಗಿ ಅನೇಕ ಗೌರವ-ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಅವುಗಳಲ್ಲಿ ಕೆಲವು ರಾಜ್ಯೋತ್ಸವ ಪ್ರಶಸ್ತಿ, ಕಮಲಾ ಸಮ್ಮಾನ್, ರಾಮನ್ಸ್ ಕಲಾ ಪ್ರತಿಷ್ಠಾನ ಪ್ರಶಸ್ತಿ, ಸಂಗೀತ ಕಲಾಭಿಜ್ಞೆ" ಮುಂತಾದವು ಸೇರಿವೆ.
ಡಾ. ವಿಮಲಾ ರಂಗಾಚಾರ್ ಅವರು 2025ರ ಫೆಬ್ರವರಿ 25ರಂದು ನಿಧನರಾದರು. ಅವರ ನಿಧನದಿಂದ ನಾಡು ಒಂದು ಮಹಾನ್ ಚೇತನವನ್ನು ಕಳೆದುಕೊಂಡಿದೆ.
Respects to departed soul Vimala Rangachar 🌷🙏🌷
ಕಾಮೆಂಟ್‌ಗಳು